ಗುರುವಾರ , ಆಗಸ್ಟ್ 6, 2020
27 °C

ಯಲಹಂಕಕ್ಕೆ ಮತ್ತೊಂದು ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕಕ್ಕೆ ಮತ್ತೊಂದು ಗರಿ

ರೈಲು ಬಂತು ಬಸ್ಸು ಹೋಯ್ತು ಡುಂ ಡುಂ ಡುಂ ಅಂತ, ನಗರ ಸಾರಿಗೆ ಬಸ್ಸುಗಳ ಭವಿಷ್ಯಕ್ಕೆ ಮೆಟ್ರೊ ರೈಲು ಮಾರಕ ಎಂಬರ್ಥದಲ್ಲಿ ಮಾತನಾಡುತ್ತಿದ್ದ ಮಂದಿಗೆ ಸೆಡ್ಡು ಹೊಡೆದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ- ಬಿಎಂಟಿಸಿ- ವಿನೂತನ ಯೋಜನೆಗಳನ್ನು, ಅತ್ಯಾಧುನಿಕ ಬಸ್ಸುಗಳನ್ನು ಗ್ರಾಹಕರ ಮುಂದಿಡುತ್ತಾ ಕಬಂಧಬಾಹುಗಳನ್ನು ವಿಸ್ತರಿಸುತ್ತಲೇ ಇದೆ.ಸವಾಲು, ಸಮಸ್ಯೆಗಳನ್ನೇ ಸಾಧನೆಯ ಹಾದಿಗೆ ಸೋಪಾನಗಳಾಗಿಸಿಕೊಳ್ಳುವ ಕಲೆಯನ್ನು ಸಂಸ್ಥೆ ಕರಗತ ಮಾಡಿಕೊಂಡಿದೆಯೆನ್ನಿ. ಬಿಎಂಟಿಸಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸುತ್ತಿರುವ ಪ್ರಗತಿ ಇದಕ್ಕೆ ಸಾಕ್ಷಿ. ಒಂದೊಂದೂ ಮಹತ್ವಾಕಾಂಕ್ಷಿ ಯೋಜನೆಗಳು ತಮ್ಮ ಗ್ರಾಹಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿವೆ. ಅದೇ ಹಳೆಯ ನೀಲಿ-ಬಿಳಿ ಬಸ್ಸುಗಳ ಚಕ್ರಗಳಿಗೆ ಮೈಯೊಡ್ಡಿ ಬೋರು ಹೊಡೆಸಿಕೊಂಡ ನಗರ ಮತ್ತು ನಗರದ ಹೊರವಲಯದ ರಸ್ತೆಗಳಿಗೆ ಈಗ ಅತ್ಯಾಧುನಿಕ, ವಿನೂತನ ಮಾದರಿಯ ಬಸ್ಸುಗಳನ್ನು ಬರಮಾಡಿಕೊಂಡು ಸಂಭ್ರಮಿಸುತ್ತಿವೆ. ಸೂರೇ ಇಲ್ಲದ ಬಸ್ಸು ನಿಲ್ದಾಣಗಳಿಗೆ ಆಧುನಿಕ ನಿಲ್ದಾಣಗಳಿಗೆ ಬಡ್ತಿ ಪಡೆಯುವ ಸೌಭಾಗ್ಯ...ಹೀಗೆ, ಒಂದಾದ ಮೇಲೊಂದರಂತೆ ಬಳಕೆದಾರಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಬಿಎಂಟಿಸಿ ಇದೀಗ ಯಲಹಂಕದಲ್ಲಿ ಉತ್ತಮ ಸೌಲಭ್ಯವುಳ್ಳ ಬಸ್ ನಿಲ್ದಾಣ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿಗೆ ಇಂದು (ಶುಕ್ರವಾರ) ಚಾಲನೆ ದೊರಕಲಿದೆ. ಇದೇ ವೇಳೆ ಅಲ್ಲೇ ಸಮೀಪದ ಸಾದೇನಹಳ್ಳಿ ಹಾಗೂ ನಾಗದಾಸನಹಳ್ಳಿಯಲ್ಲಿ ನೂತನ ಬಸ್ ಘಟಕ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ಮಾಡಲಾಗುವುದು.`ಯಲಹಂಕದಲ್ಲಿ ಸುಸಜ್ಜಿತವಾದ ಮಾದರಿ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ದೊಡ್ಡಬಳ್ಳಾಪುರ ದೇವನಹಳ್ಳಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವ ಸಂಸ್ಥೆಯ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲಿದೆ. ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಬಸ್ ನಿಲ್ದಾಣ ಯಲಹಂಕ ಹೋಬಳಿಯ ಮಾದರಿ ಬಸ್ ನಿಲ್ದಾಣವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಅಲ್ಲಿ ಇದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಎಕರೆ ಜಮೀನನ್ನು ಎರಡು ಕೋಟಿ ರೂಪಾಯಿಗೆ ಖರೀದಿಸಲಾಯಿತು. (ಪ್ರಸಕ್ತ ಶಾಲೆಗೆ ಪ್ರತ್ಯೇಕ ಸೂರು, ಮೈದಾನ ಒದಗಿಸಿಕೊಡಲಾಗಿದೆ). ನಿರೀಕ್ಷಿತ ಬಸ್‌ನಿಲ್ದಾಣದ ಪಕ್ಕದಲ್ಲಿಯೇ ರೈಲು ನಿಲ್ದಾಣವೂ ಇರುವುದರಿಂದ ಯಲಹಂಕ ವಲಯ ಹಾಗೂ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳುಳ್ಳ ಬಸ್‌ನಿಲ್ದಾಣ ಒದಗಿಸಿದಂತಾಗುತ್ತದೆ~ ಎಂದು ವಿವರಿಸುತ್ತಾರೆ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ. ಆರ್. ಶ್ರೀನಿವಾಸ್.ಒಂದು ಸೂರು, ಸೌಕರ್ಯ ಹಲವು

ಒಂದೇ ಸೂರಿನಡಿ ಎಲ್ಲಾ ಸೌಕರ್ಯಗಳೂ ಲಭ್ಯವಿರುವ ಬಹೂಪಯೋಗಿ ಬಸ್ ನಿಲ್ದಾಣವಿದು. 60 ಸಾವಿರ ಚದರ ಅಡಿಗೂ ಹೆಚ್ಚು ವಿಸ್ತೀರ್ಣದಲ್ಲಿ ತಲೆಯೆತ್ತಲಿದೆ. ಮೂರು ಬಸ್ `ಬೇ~ಗಳು, ಪಾಸ್ ಕೌಂಟರ್, ಲಿಫ್ಟ್, ಎಸ್ಕಲೇಟರ್ ಮತ್ತಿತರ ಆಧುನಿಕ ಗೆಟಪ್ಪುಗಳಲ್ಲದೆ ಮಳೆ ನೀರು ಸಂಗ್ರಹಣೆಯೂ ಒಳಗೊಂಡಿದೆ.ಪ್ರಸ್ತುತ ಇಲ್ಲಿ ಯಲಹಂಕ ಮೂಲಕ ದೇವನಹಳ್ಳಿ ಬಾಗಲೂರು ಕಡೆಗೆ 180 ಅನುಸೂಚಿ (ಶೆಡ್ಯೂಲ್)ಯಂತೆ 1481 ಬಸ್ ಸುತ್ತುವಳಿ (ಟ್ರಿಪ್)ಗಳು ಚಾಲ್ತಿಯಲ್ಲಿವೆ. ಯಲಹಂಕ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಾರಣ ಈ ಹೊಸ ನಿಲ್ದಾಣ ಬಸ್ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕರವಾಗಲಿದೆ.ಸಾರಿಗೆ ಸಚಿವ ಆರ್.ಅಶೋಕ್ ಬೆಳಿಗ್ಗೆ10ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಮೇಯರ್ ಡಿ.ವೆಂಕಟೇಶಮೂರ್ತಿ, ಶಾಸಕರಾದ ಎಂ.ಕೃಷ್ಣಪ್ಪ, ಪುಟ್ಟಣ್ಣ, ರಾಮಚಂದ್ರ ಗೌಡ, ದಯಾನಂದ, ಸಾರಿಗೆ ಇಲಾಖೆ ಕಾರ್ಯದರ್ಶಿ ಪಿ.ಬಿ. ರಾಮಮೂರ್ತಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆ: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ. ಆರ್. ಶ್ರೀನಿವಾಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.