ಗುರುವಾರ , ಮೇ 26, 2022
28 °C

ಯಲಹಂಕ:ದಸರಾ ಪರಿಹಾರ ಬೋಧನಾ ವಿಶೇಷ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ನೇತೃತ್ವದ ಶೈಕ್ಷಣಿಕ ಸೇವಾ ಸಂಸ್ಥೆ ಕಿಸಾನ್ ಸಭಾ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ರಜೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ದಸರಾ ಪರಿಹಾರ ಬೋಧನಾ ವಿಶೇಷ  ಶಿಬಿರದ ತರಗತಿಗಳನ್ನು ಆಯೋಜಿಸುತ್ತಿದೆ.ಅ. 10ರಿಂದ 20ರವರೆಗೆ ಹತ್ತು ದಿನಗಳ ಕಾಲ ನಡೆಯುವ ಈ ಬೋಧನಾ ಶಿಬಿರದಲ್ಲಿ ಪರಿಣಿತ ಶಿಕ್ಷಕರಿಂದ ಮುಖ್ಯ ವಿಷಯಗಳಾದ ಆಂಗ್ಲ ಭಾಷೆ, ವಿಜ್ಞಾನ, ಗಣಿತ ಮತ್ತು ಸಾಮಾನ್ಯ ವಿಜ್ಞಾನ ವಿಷಯಗಳಿಗೆ ಉಚಿತ ಬೋಧನೆ      ನೀಡಲಾಗುತ್ತದೆ.ಬೆಂಗಳೂರಿನ ಬಿಎನ್‌ಇಎಸ್ ಸಂಸ್ಥೆಯ ಪ್ರೊ.ಕೆ.ಇ.ರಾಧಾಕೃಷ್ಣ ಅವರ `ಸಾ-ಮುದ್ರ ಪ್ರತಿಷ್ಠಾನ~ ವತಿಯಿಂದ ಪರಿಣಿತ ತಂಡದಿಂದ ವಿಶೇಷ  ಹೆಚ್ಚುವರಿ ತರಬೇತಿಯನ್ನು ಸಹ ನೀಡಲಾಗುತ್ತದೆ.ಸಮಾಜದ ವಿವಿಧ ಸ್ತರಗಳಿಂದ ಬರುವ, ಅನೇಕ ಕಾರಣಗಳಿಂದ ಕಲಿಕಾ ಪ್ರಗತಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಈ ಶಿಬಿರವು ಹೊಂದಿದೆ. ಅಲ್ಲದೆ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ, ಸಿದ್ಧತೆ ಮಾಡಿಕೊಳ್ಳುವ ವಿಧಾನ ಹಾಗೂ ಒತ್ತಡವನ್ನು ನಿಭಾಯಿಸುವ ಕೌಶಲ್ಯವನ್ನೂ ಶಿಬಿರ ಕಲ್ಪಿಸಲಿದೆ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ (ಬೀಚಗಾನಹಳ್ಳಿ ಕ್ರಾಸ್), ಗೌರಿಬಿದನೂರು, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಹಾಗೂ ಯಲಹಂಕ ತಾಲ್ಲೂಕು ಕೇಂದ್ರಗಳಲ್ಲಿರುವ ಪ್ರೌಢಶಾಲೆಗಳಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುವುದು.ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆಸುವ ಈ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ಸಂಬಂಧಪಟ್ಟ ಕಾರ್ಯಕ್ಷೇತ್ರದ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರೌಢಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಲಿದ್ದಾರೆ ಎಂದು ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಭಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9341024131, 080-23430491  ಸಂಪರ್ಕಿಸಬಹುದಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.