ಯಲ್ಲಾಪುರ: ಗ್ರಾಮದೇವಿಯರ ಜಾತ್ರೆಗೆ ಚಾಲನೆ

7

ಯಲ್ಲಾಪುರ: ಗ್ರಾಮದೇವಿಯರ ಜಾತ್ರೆಗೆ ಚಾಲನೆ

Published:
Updated:

ಯಲ್ಲಾಪುರ (ಉ.ಕ.ಜಿಲ್ಲೆ): ಕಾಳಮ್ಮ, ದುರ್ಗಮ್ಮ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಬುಧವಾರ ಅಪಾರ ಜನಸ್ತೋಮದ ನಡುವೆ ಆರಂಭಗೊಂಡಿತು.`ಮಾರಿಕಾಂಬಾ ಮಾತಾ ಕೀ ಜೈ, ಕಾಳಮ್ಮ ದೇವಿ ಕೀ ಜೈ,  ದುರ್ಗಮ್ಮ ದೇವಿ ಕೀ ಜೈ....~ ಎಂಬ ಭಕ್ತರ ಉದ್ಘೋಷದೊಡನೆ ಯಲ್ಲಮ್ಮ ದೇವಿಯನ್ನು ತಲೆಯ ಮೇಲೆ ಹೊತ್ತ ದೇವದಾಸಿಯರ ಆವೇಶಭರಿತ ನರ್ತನ , ಡೊಳ್ಳು ಕುಣಿತ, ಚಂಡೆ ವಾದನ, ಪಂಚವಾದ್ಯ, ಸುಹಾಸಿನಿಯರ ಪೂರ್ಣಕುಂಭ ಮೆರವಣಿಗೆ ಮುಂತಾದವು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದವು.ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವ 9 ದಿನಗಳವರೆಗೆ ನಡೆಯಲಿದೆ. ದೇವಿಯರ ಅಣ್ಣನೆಂದು ಹೇಳಲಾದ ರಾಮಾಪುರದ ಶಳದೇವರ ಕಟ್ಟೆಗೆ ಆಯಗಾರರು ಪೂಜೆ ಸಲ್ಲಿಸಿ, ರಣ (ವೀಳ್ಯ)ವನ್ನು ನೀಡಿ ಒಪ್ಪಿಗೆ ಪಡೆಯಲಾಯಿತು. ನಂತರ ಪತಾಕೆ, ಢೋಲುಗಳ ಸಮೇತ ಗ್ರಾಮದೇವಿ ದೇವಸ್ಥಾನಕ್ಕೆ ಆಗಮಿಸಿದ ಮೇಲೆ ಭಕ್ತರು ದೇವಿಯರನ್ನು ತಲೆಯ ಮೇಲೆ ಹೊತ್ತು ಜಾತ್ರಾ ಗದ್ದುಗೆಗೆ ತೆರಳಿದರು.ಮದ್ಯಾಹ್ನ 3.30ಕ್ಕೆ ಆರಂಭವಾದ ದೇವಿಯರ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ  ಸರ್ವಾಲಂಕಾರ ಭೂಷಿತರಾಗಿದ್ದ ದೇವಿಯರ ಪ್ರತಿಮೆ ತಲೆ ಮೇಲೆ ಹೊತ್ತು ಕೃತಾರ್ಥರಾದರು. ಸಂಜೆ 5 ಗಂಟೆ ಸುಮಾರಿಗೆ ಗ್ರಾಮದೇವಿ ದೇವಸ್ಥಾನದಿಂದ ಒಂದು ಕಿ.ಮೀ. ದೂರದ ದೇವಿ ಮೈದಾನದಲ್ಲಿರುವ ಜಾತ್ರಾ ಗದ್ದುಗೆಗೆ ದೇವಿಯರು ಬಂದ ನಂತರ ಪ್ರತಿಷ್ಠಾಪನೆ ನಡೆಯಿತು. ನಂತರ ಸುಹಾಸಿನಿಯರಿಂದ ಉಡಿ ತುಂಬುವ ಕಾರ್ಯ ನಡೆಯಿತು.ಉಡುಪಿಯ ಮಹಿಳೆಯರನ್ನೊಳಗೊಂಡ ಚಂಡೆ ವಾದನ, ಕೇರಳದ ಸಿಂಗಾರಿ ವಾದ್ಯ, ಪಂಚವಾದ್ಯ, ಅಂಕೋಲಾದ ಝಾಂಜ್ ಮೇಳ, ವಾದ್ಯಮೇಳ ಮುಂತಾದವು ಮೆರಣಿಗೆಯುದ್ದಕ್ಕೂ ಭಕ್ತರನ್ನು ಆಕರ್ಷಿಸಿದವು.

ಅಪಾರ ಸಂಖ್ಯೆಯಲ್ಲಿ ಜನರು ಜಾತಿ-ಮತ ಭೇದವಿಲ್ಲದೇ ಜಾತ್ರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಿಯರು ಮುಂಡಗೋಡ ರಸ್ತೆಯಲ್ಲಿರುವ ವಿಸರ್ಜನಾ ಗದ್ದುಗೆಗೆ ತೆರಳುವ ಮೂಲಕ ಈ ಜಾತ್ರಾ ಮಹೋತ್ಸವ ಇದೇ 23ರಂದು ಸಂಪನ್ನಗೊಳ್ಳಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry