ಬುಧವಾರ, ಅಕ್ಟೋಬರ್ 23, 2019
23 °C

ಯಳಮೇಲಿ ಐತಿಹಾಸಿಕ ಬಾವಿಗಳ ಅಧೋಗತಿ

Published:
Updated:
ಯಳಮೇಲಿ ಐತಿಹಾಸಿಕ ಬಾವಿಗಳ ಅಧೋಗತಿ

ಹಿಂದೊಮ್ಮೆ ಇಡೀ ಯಳಮೇಲಿ (ಈಗ ಆಲಮೇಲ) ಪಟ್ಟಣಕ್ಕೆ ಕುಡಿಯುವ ನೀರಿನ ಬವಣೆಯನ್ನು ಬಾವಿಗಳು ನೀಗಿಸುತ್ತಿದ್ದವು. ಈಗ ಅವೆಲ್ಲ ದಿಕ್ಕಿಲ್ಲದಂತಾಗಿವೆ. ಕಡಿಮೆಯಾದ ಅಂತರ್ಜಲ, ಮನೆಮನೆಗ ಹರಿಯುವ ಕೊಳವೆ ಬಾವಿ ನೀರಿನಿಂದಾಗಿ ಬಳಸುವವರಿಲ್ಲದೆ ಬಾವಿಗಳು ತಮ್ಮ ಗತವೈಭವವನ್ನು ಕಳೆದುಕೊಂಡು, ಕಸದ ತೊಟ್ಟಿಗಳಾಗಿವೆ.ಇಲ್ಲಿನ ಅಕ್ಕತಂಗಿಯರ ಬಾವಿ, ಮಸೂತಿ ಬಾವಿ, ಬಶೆಟ್ಟಿ ಬಾವಿ, 12 ಗಿರಕಿ ಬಾವಿ... ಹೀಗೆ ಸಾಲುಸಾಲು ಬಾವಿಗಳೇ ಇವೆ. ಇವೆಲ್ಲ ಜಲಮೂಲವೆಂಬ ನಂಬಿಕೆ ಇತ್ತು. ವರ್ಷಕ್ಕೊಮ್ಮೆ ಜನರು ಗಂಗೆ ಪೂಜೆ ಮಾಡಿ, ನೀರನ್ನು ಶುದ್ಧವಾಗಿಡಲು ಆದ್ಯತೆ ನೀಡುತ್ತಿದ್ದರು. ಅವುಗಳ ಪೈಕಿ ಕೆಲವು ಮುಚ್ಚಿ ಹೋಗಿದ್ದರೆ, ಇನ್ನು ಕೆಲವು ಒತ್ತುವರಿಯಾಗಿವೆ. ಬಾವಿಗಳ ಸೌಂದರ್ಯ, ವಿಶಾಲವಾಗಿ ಹರಡಿಕೊಂಡಿದ್ದ ಅವುಗಳ ಶುದ್ಧ ನೀರು ಕಣ್ಣಿಗೆ ಹಬ್ಬದ ವಾತಾವರಣ ಮೂಡಿಸುತ್ತಿದ್ದವು.ಅಕ್ಕತಂಗಿಯರ ಬಾವಿ ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಬಾವಿ ಕೆಳಗೆ ಕಮಾನುಗಳನ್ನು ನಿರ್ಮಿಸಿ ಅಲ್ಲಿ ಸಹಜ ಸೌಂದರ್ಯ ಕಾಪಾಡಲಾಗಿತ್ತು. ಮಸೂತಿ ಬಾವಿ ಕಥೆ ತೀರಾ ಭಿನ್ನ. ಹನ್ನೆರಡು ಗಿರಕಿ ಬಾವಿ ಮಾತ್ರ ಇನ್ನೂ ಜನಬಳಕೆಯಿಂದಾಗಿ ಅಸ್ತಿತ್ವದಲ್ಲಿದೆ.ಅಕ್ಕ-ತಂಗಿ ಬಾವಿ

ಅಲಮೇಲ ಪಟ್ಟಣಕ್ಕೆ ನೀರುಣಿಸುತ್ತಿದ್ದ ಅಕ್ಕತಂಗಿ ಬಾವಿ, ನೀರಿನ ತೊಂದರೆಯಿಂದ ಜನರು ಬಳಲುತ್ತಿದ್ದಾಗ ಪಂಚರು ಸಭೆ ನಡೆಸಿ ಬಾವಿ ಕಟ್ಟಿಸಲು ಮುಂದಾಗಿದ್ದರು ಎಂಬುದು ಇತಿಹಾಸದ ದಾಖಲೆ ತಿಳಿಸುತ್ತದೆ. 3 ವರ್ಷ ಕಾಲ ನೂರಾರು ಆಳುಗಳು ಶ್ರಮಿಸಿ ಬಾವಿ ನಿರ್ಮಿಸಿದರೆಂದೂ ಹೇಳುತ್ತದೆ.ಬೃಹತ್ ಬಾವಿಗೆ ನೀರು ಬಾರದಿದ್ದಾಗ ಅಕ್ಕತಂಗಿಯರಿಬ್ಬರೂ ಬಾವಿಯಲ್ಲಿ ಆಟವಾಡಿ ಅಲ್ಲಿಯೇ ಮಂಚದಲ್ಲಿ ಮಲಗಿದಾಗ ಬಾವಿಗೆ ನೀರು ತುಂಬಿಕೊಂಡಿತು ಎಂಬುದು ಪ್ರಚಲಿತದಲ್ಲಿರುವ ಕಥೆ. ಬಾವಿಗೆ ನಾಲ್ಕು ದಿಕ್ಕುಗಳಿಂದ ದ್ವಾರಗಳಿವೆ. ಒಳಗಡೆ ಸುತ್ತಲೂ ಕಮಾನುಗಳಿದ್ದು, ಈ ಬಾವಿ ನೋಡಲು ಆಕರ್ಷಕವಾಗಿದೆ. ಜನರು ನೀರಿನ ಬಳಕೆ ಮಾಡದ ಕಾರಣ ಬಾವಿ ತೀರಾ ದುಃಸ್ಥಿತಿಯಲ್ಲಿದೆ. ಕಸದ ತೊಟ್ಟಿಯಾಗಿ, ಪಾಚಿ ಬೆಳೆದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ.ಮಸೂತಿ ಬಾವಿ

ಮಸೀದಿಯ ಸಮೀಪ ಬಾವಿ ಇರುವುದರಿಂದ ಈ ಹೆಸರಿನಿಂದ ಕರೆಯಲಾಗುತ್ತಿದೆ. ಬಾವಿಯೊಳಗೆ ನೀರು ತುಂಬಿದರೂ ಬಳಸುತ್ತಿಲ್ಲ. ಹಿಂದ ಈ ಬಾವಿಯಿಂದಲೇ ಶ್ರೀರಾಮಲಿಂಗ ದೇವರ ಪೂಜೆ ಸಲ್ಲಿಸಲಾಗುತ್ತಿತ್ತು.ಬಾರಾ ಗಿರಕಿ ಬಾವಿ

ದೇಸಾಯಿ ವಾಡೆಯಲ್ಲಿರುವ ಬಾವಿಯನ್ನು 1955ರಲ್ಲಿ ಅಂದಿನ  ಜಿಲ್ಲಾಧಿಕಾರಿ ಎಚ್.ಟಿ. ಸಾಧ್ವಿ ಗ್ರಾಮಕ್ಕೆ ಸಮರ್ಪಿಸಿದ್ದಾರೆ ಎಂಬುದನ್ನು ದಾಖಲೆ ತಿಳಿಸುತ್ತದೆ. ಬಾವಿಗೆ ನೀರು ಸೇದಲು 12 ಗಿರಕಿಗಳಿವೆ. ಹೀಗಾಗಿ ಇದನ್ನು ಬಾರಾ (ಹನ್ನೆರಡು) ಗಿರಕಿ ಬಾವಿ ಎಂದೇ ರೂಢಿಯಲ್ಲಿ ಕರೆಯುವರು.ಪಟ್ಟಣ ಬಾವಿಗಳಿಗೆ ತಮ್ಮದೇಯಾದ ಇತಿಹಾಸವಿದೆ. ಶ್ರಮ, ಸಂಸ್ಕಾರ ಮತ್ತು ಸಂಪ್ರದಾಯಗಳೂ ಬಾವಿಗಳಿವೆ. ಬಾವಿ ನೀರಿನ ಬಳಕೆ ಕಡಿಮೆ ಆಗಿರಬಹುದು. ಆದರೆ ಅವುಗಳ ಸೌಂದರ್ಯವನ್ನು ಕಾಪಾಡಿ, ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದರೆ ಪ್ರವಾಸಿಗರನ್ನು ಆಕರ್ಷಿಸಲು ಸಹಾಯಕವಾಗುತ್ತದೆ.ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿದರೆ ಸುತ್ತಲಿನ ಹಳ್ಳಿಗಳ ಜನರಿಗೆ ವೀಕ್ಷಣೆಗೆ ಸಹಾಯಕವಾಗುವುದು. ಅದಕ್ಕಿಂತ ಮುಂಚೆ ಬಾವಿಯ ಹೂಳೆತ್ತುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಬಾವಿಯನ್ನು ಸ್ವಚ್ಛಗೊಳಿಸಿ, ನೀರಿನ ಬಳಕೆಗೆ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ನಾಲ್ಕಾರು ಜನರಿಗೆ ದುಡಿಮೆಯೂ ಆಗುವುದು ಎನ್ನುವುದು ಸಂಶೋಧಕ ಪ್ರೊ. ಸುರೇಶ ನಾರಾಯಣಕರ ಅವರ ಅನಿಸಿಕೆ.ಮಸೂತಿ ಬಾವಿ ಕಲುಷಿತವಾಗದಂತೆ ತಡೆಯುವುದು ತುರ್ತು ಅಗತ್ಯವಾಗಿದೆ. ಆಲಮೇಲದ ಬಾವಿಗಳ ರಕ್ಷಣೆಗೆ ಜನಪ್ರತಿನಿಧಿಗಳು ಆದ್ಯತೆ ನೀಡಿದರೆ ಅನುಕೂಲ ಎನ್ನುವುದು ಗ್ರಾಮದ ಹಿರಿಯರ ಒತ್ತಾಯ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)