ಯಳ್ಳೂರಿನಲ್ಲಿ ಸೀಮಾ ಮಹಾಮೇಳಾವ;ಗಡಿ ಸಮಸ್ಯೆ ಬಗೆಹರಿಸಲು ಆಗ್ರಹ

7

ಯಳ್ಳೂರಿನಲ್ಲಿ ಸೀಮಾ ಮಹಾಮೇಳಾವ;ಗಡಿ ಸಮಸ್ಯೆ ಬಗೆಹರಿಸಲು ಆಗ್ರಹ

Published:
Updated:

ಬೆಳಗಾವಿ: ಗಡಿ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು. ಸುಪ್ರೀಂ ಕೋರ್ಟ್‌ನಿಂದ ಇತ್ಯರ್ಥ ಆಗುವವರೆಗೆ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಗಡಿಯಲ್ಲಿರುವ 865 ಮರಾಠಿ ಭಾಷಿಕರ ಗ್ರಾಮಗಳನ್ನು ಮಹಾರಾಷ್ಟ್ರ ಸರ್ಕಾರ ದತ್ತು ತೆಗೆದುಕೊಳ್ಳಬೇಕು ಎಂಬ ನಿರ್ಣಯಗಳನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಭಾನುವಾರ ಯಳ್ಳೂರಿನಲ್ಲಿ ಆಯೋಜಿಸಿದ್ದ ಗಡಿ ಸಮಾವೇಶದಲ್ಲಿ (ಸೀಮಾ ಮೇಳಾವ) ತೆಗೆದುಕೊಳ್ಳಲಾಯಿತು.ಭಾಷಾ ಅಲ್ಪಸಂಖ್ಯಾತರ ಅಧಿಕಾರವನ್ನು ಸಂರಕ್ಷಿಸಬೇಕು. ಗಡಿಯಲ್ಲಿರುವ ರೈತರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಮರಾಠಿ ಭಾಷಿಕ ಯುವಕರು ಗಡಿ ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ರಾಜಕೀಯ ಪಕ್ಷಗಳನ್ನು ಸೇರದೇ, ಎಂಇಎಸ್‌ನಲ್ಲಿಯೇ ಮುಂದುವರಿಯಬೇಕು ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.ಕರ್ನಾಟಕದ ಆಡಳಿದಿಂದ ತಮ್ಮನ್ನು ಹೊರಗೆ ತರಬೇಕು. ಮರಾಠಿ ಭಾಷಿಕರ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.ಆ. 15 ರೊಳಗೆ ಮಹಾರಾಷ್ಟ್ರ ಸರ್ಕಾರ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ವಿಳಂಬ ಮಾಡಿದರೆ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಂಇಎಸ್ ನಾಯಕರು ಎಚ್ಚರಿಕೆ ನೀಡಿದರು.ಮಹಾರಾಷ್ಟ್ರದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದರಿಂದ ಯಾವುದೇ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರದ ಸಚಿವರು, ನಾಯಕರು ಸಮಾವೇಶದಿಂದ ದೂರ ಉಳಿದಿದ್ದರು ಎನ್ನಲಾಗಿದೆ.ಎಂಇಎಸ್ ಪ್ರಧಾನ ಕಾರ್ಯದರ್ಶಿ ವೈ.ಬಿ.ಚೌಗಲೆ ಮಾತನಾಡಿ, ಕರ್ನಾಟಕ ಸರ್ಕಾರ ಮರಾಠೀ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ.ಮರಾಠಿ ಭಾಷಿಕರನ್ನು ಕಡೆಗಣಿಸಿರುವ ಕರ್ನಾಟಕದಿಂದ ತಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.ಕಿರಣ ಠಾಕೂರ, ಮನೋಜ ಪಾವಶೆ, ಶಿವಸೇನಾದ ಕೊಲ್ಲಾಪುರ ಘಟಕದ ಧರ್ಮಾಜಿ ಸಾಯನೇಕರ, ಸಾವಂತವಾಡಿಯ ವಸಂತ ಕೇಸರಕರ್ ಮಾತನಾಡಿದರು.ಗುಂಪುಗಾರಿಕೆ


ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿರುವ ಗುಂಪುಗಾರಿಕೆಯಿಂದ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಸೇರಿದ್ದ ಮರಾಠಿ ಭಾಷಿಕರು, ಸಮಾವೇಶದ ಮಧ್ಯದಲ್ಲಿಯೇ ವಾಪಸ್ಸು ತೆರಳಿದರು. ಸಮಾವೇಶಕ್ಕೆ ನಾಯಕರ ಕೊರತೆಯೂ ಎದ್ದು ಕಾಣುತ್ತಿತ್ತು.ಯಳ್ಳೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಪರ್ವಿತಾ ಪಾಟೀಲ ಸಮಾವೇಶ ಉದ್ಘಾಟಿಸಿದರು.

ಮಾಜಿ ಮೇಯರ್ ಮಂದಾ ಬಾಳೇಕುಂದ್ರಿ, ವಿಜಯ ಮೋರೆ, ಶಿವಾಜಿ ಸುಂಠಕರ, ಮಾಜಿ ಶಾಸಕ ಬಿ.ಐ.ಪಾಟೀಲ, ಎನ್.ಜಿ.ಪಾಟೀಲ ಮತ್ತಿತರರು ವೇದಿಕೆಯಲ್ಲಿದ್ದರು.                      ಮೇಳಾವ ವಿರೋಧಿಸಿ ಬೈಕ್ ರ‌್ಯಾಲಿ
ಬೆಳಗಾವಿ: ಯಳ್ಳೂರಿನಲ್ಲಿ ಭಾನುವಾರ ಎಂ.ಇ.ಎಸ್ ಏರ್ಪಡಿಸಿದ್ದ ಸೀಮಾ ಮಹಾ ಮೇಳಾವ ವಿರೋಧಿಸಿ ಇಲ್ಲಿ ಬೈಕ್ ರ‌್ಯಾಲಿ ನಡೆಸಿ, ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ನವ ನಿರ್ಮಾಣ ಪಡೆ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ, ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಕೆಲವರು ಓಡಿದರು. ಕಾರ್ಯಕರ್ತರನ್ನು ಬೆನ್ನಟ್ಟಿ ಪೊಲೀಸರು ಬಂಧಿಸಿದರು.ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ಉದ್ವಿಗ್ನ ವಾತಾವರಣ ಉಂಟಾಗಿತ್ತು. ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಆಯಕಟ್ಟಿನ ಜಾಗೆಯಲ್ಲಿ ಹೆಚ್ಚಿನ ನಿಗಾ ವಹಿಸಿ, ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 
                                          ಕಲ್ಲು ತೂರಾಟ
ನಗರದ ನಾಗಶಾಂತಿ ಹಿರೋ ಹೊಂಡಾ ಶೋ ರೂಮ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಶೋ ರೂಮ್‌ನ ಗಾಜುಗಳು ಪುಡಿಯಾಗಿವೆ.

ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿಯೇ ಮಹಾರಾಷ್ಟ್ರ ರಾಜ್ಯದ ಬಸ್ಸೊಂದು ಪ್ರವೇಶಿಸಿತು.ಪೊಲೀಸರ ಸಮಯಪ್ರಜ್ಞೆಯಿಂದ ನಾಹುತ ತಪ್ಪಿತು. ಮದುವೆ ಸಮಾರಂಭಕ್ಕೆಂದು ಒಪ್ಪಂದದ ಮೇರೆಗೆ ಮಹಾರಾಷ್ಟ್ರದ ಚಂದಗಡದಿಂದ ಈ ಬಸ್ಸು ಬೆಳಗಾವಿಗೆ ಬಂದಿತ್ತು. ಪೊಲೀಸರು ಮಾರ್ಗ ಬದಲಾಯಿಸಿ ಬಸ್ಸು ಕಳುಹಿಸಿದರು.`ಮಹಾ ಮೇಳಾವ್‌ಗೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಕನ್ನಡಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಬಂಧಿತರಿಗೆ ಹನಿ ನೀರನ್ನು ಸಹ ಪೊಲೀಸರು ನೀಡಲಿಲ್ಲ~ ಎಂದು ಕರವೇ ಧಾರವಾಡ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ್ ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry