ಬುಧವಾರ, ಮಾರ್ಚ್ 3, 2021
19 °C
ಕವಿತೆ

ಯಶದ ಮೆಟ್ಟಿಲಾಚೆಗೆ

ಡಾ. ಎಲ್‌. ಹನುಮಂತಯ್ಯ Updated:

ಅಕ್ಷರ ಗಾತ್ರ : | |

ಯಶದ ಮೆಟ್ಟಿಲಾಚೆಗೆ

ಯಶದ ಎತ್ತರ ನೋಡಿ

ಅಚ್ಚರಿಯ ತತ್ತರದಿಂದಿರುವ ನಿನಗೆ

ತೆರೆಯ ಹಿಂದಿನ ತೊರೆಯ ಅನುಭವವಿದೆಯೆ

ನೆರೆಬಂದಂತೆ ತುಂಬಿ ಹರಿವಾಗ

ಕಣ್ಣತಳದಿಂದ ಉಕ್ಕಿದೆಳನೀರು ಬೆರೆತು

ರಭಸವೇ ಉಪ್ಪಾಗಿ ದಂಡೆಯಲ್ಲಿದ್ದದ್ದು ಗೊತ್ತೆ

ಹಸಿವು ಹೊದ್ದು ದಾಹ ನುಂಗಿ

ಬಿಕ್ಕಳಿಸಿದ ಬಿರುಸಿಗೆ ಪುಪ್ಪುಸಗಳು

ಮರುಗಿ ಬೆನ್ನು ಹೊಟ್ಟೆಯಾದದ್ದು ಗೊತ್ತೆ

ಜಗ ಮಲಗಿರಲು ಎದ್ದು

ನಕ್ಷತ್ರಗಳನೆ ಅಕ್ಷರಗಳಾಗಿ ಮಾಡಿ

ಜ್ಞಾನದಂಗಳಕೆ ನೋಟ ನೆಟ್ಟದ್ದು ಗೊತ್ತೆ

ಕಂಡವರಲ್ಲಿ ಕರುಣೆ ಬೇಡಿ

ತುಂಡು ದನಗಳ ಮಧ್ಯೆ ಉಂಡಾಡಿಯಾಗದೆ

ನನ್ನದೇ ಗೊಂತಿನ ಕಣ್ಣಿಗೆ ಕೊರಳಾದದ್ದು ಗೊತ್ತೆ

ಈರ್ಷ್ಯೆಯಿಂದೆರಗಿದ ಧೂರ್ತರಿಗೆ

ದೂರ್ವಾಸನಾಗದೆ ಸಾರ್ಥಕದ ಬೆನ್ನು ಹತ್ತಿ

ಕಾರ್ಮೋಡದ ಸುರಿ ಮಳೆಗೆ ತೆವಳಿ ಸರಿದದ್ದು ಗೊತ್ತೆ

ಅಷ್ಟೈಶ್ವರ್ಯದ ಆಶೆ

ಬಿತ್ತಿದಾಗಲೂ ಬಯಲ ಬರಡನೆ ಉತ್ತು

ಸಮೃದ್ಧಿ ಬೆಳೆ ಬೆಳೆದು ಬಾಗಿ ಬೀಗಿದ್ದು ಗೊತ್ತೆ

ಗೊತ್ತೆ ಗೆಳೆಯಾ

ನೆತ್ತರಿನ ತುಂತುರು ಉದುರಿದಾಗ

ಸಾವಧಾನದ ಬಟ್ಟೆಯಲಿ ಒರೆಸಿ ಒರಗಿದ್ದು ಗೊತ್ತೆ

ಮಲ್ಲಿಗೆಯ ಗಾಳಿ ಬೀಸಿದಾಗಲೂ

ಮತ್ತೇರದೆ ಮೆತ್ತಗೆ ಹಾರಗಳ ಕಟ್ಟಿ

ತುತ್ತು ನೀಡಿದ ಕೈಗಳಿಗೆ ಸುತ್ತಿ ಸುತ್ತು ಹಾಕಿದ್ದು ಗೊತ್ತೆ

ಮನದ ಮೂಲೆಯಲಿದ್ದ

ಸಿಟ್ಟು ಸೆಡವುಗಳ ದಟ್ಟಡವಿಗಟ್ಟಿ

ಬುದ್ಧಮೌನದ ಗೌನು ತೊಟ್ಟು ನಿಂತದ್ದು ಗೊತ್ತೆ

ಹೇಳು ಗೆಳೆಯಾ

ಬೆತ್ತಲೆ ನಿಲಿಸಿ ಬೆರಗನು ಹೊದಿಸಿ

ಚಳಿ ಸುತ್ತುವರಿದಾಗ ಒಳಗೊಳಗೆ ಬೆವರಿದ್ದು ಗೊತ್ತೆ

ಯಶಸ್ಸಿನ ಮೆಟ್ಟಿಲು

ಬಿದಿರ ನವಿರಲ್ಲ ಬೆದರು ಬೊಂಬೆಯಲ್ಲ

ಮುಳ್ಳು ಹಾಸಿಗೆ ಮೇಲೆ ಸವಿದ ಸುಖ ನಿದ್ರೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.