ಯಶವಂತಪುರ- ಕಾರವಾರ ರೈಲಿಗೆ ಅದ್ದೂರಿ ಸ್ವಾಗತ

7

ಯಶವಂತಪುರ- ಕಾರವಾರ ರೈಲಿಗೆ ಅದ್ದೂರಿ ಸ್ವಾಗತ

Published:
Updated:

ಬ್ರಹ್ಮಾವರ: ಬಾರ್ಕೂರು ರೈಲು ನಿಲ್ದಾಣದಲ್ಲಿ ಯಶವಂತಪುರ ಕಾರವಾರ ರೈಲು ಪ್ರಥಮ ಬಾರಿ ಗುರುವಾರ ನಿಲ್ದಾಣಕ್ಕೆ ಆಗಮಿಸಿದಾಗ ಬಾರ್ಕೂರು, ಬ್ರಹ್ಮಾವರ ಮತ್ತು ಆಸುಪಾಸಿನ 300ಕ್ಕೂ ಹೆಚ್ಚು ಗ್ರಾಮಸ್ಥರು ಆರತಿ ಬೆಳಗಿ ಸ್ವಾಗತಿಸಿ ಸಂಭ್ರಮಿಸಿದರು.ರೈಲು ನಿಲ್ದಾಣವನ್ನು ಗ್ರಾಮಸ್ಥರು ಬಾಳೆದಿಂಡು, ಹೂವಿನಿಂದ ವಿಶೇಷವಾಗಿ ಅಲಂಕಾರಮಾಡಿದ್ದರು. ರೈಲು ನಿಲುಗಡೆಯಾಗುತ್ತಿದ್ದಂತೆ ಆರತಿ ಎತ್ತಿ ಮಾಡಿ ಸ್ವಾಗತಿಸಿದರು.ಉಡುಪಿ ತಾ.ಪಂ ಅಧ್ಯಕ್ಷೆ ಗೌರಿ ವಿ ಪೂಜಾರಿ, ಕೂಡ್ಲಿ ಸತ್ಯನಾರಾಯಣ ಉಡುಪ, ಹನೆಹಳ್ಳಿ ಗ್ರಾ.ಪಂ. ಸದಸ್ಯ ರಮಾನಂದ ಶೆಟ್ಟಿ, ರತ್ನಾಕರ ಶೆಟ್ಟಿ. ಗ್ರಾ.ಪಂ. ಸದಸ್ಯೆ ಶೈಲಾ, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಶೆಟ್ಟಿ, ಬಾರ್ಕೂರಿನ ಪ್ರಮುಖರಾದ ವೆಂಕಟರಮಣ ಭಂಡಾರ್‌ಕಾರ್, ಸೀತಾರಾಮ ಶೆಟ್ಟಿ, ವಾಸುದೇವ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಭಾರತಿ ಶೆಟ್ಟಿ, ಸತೀಷ್ ಕುಮಾರ್ ಶೆಟ್ಟಿ, ಶ್ರೀನಿವಾಸ ಶೆಟ್ಟಿಗಾರ್, ಬಿ.ಎಂ ಕೃಷ್ಣ ಪೂಜಾರಿ,ಬಾರ್ಕೂರು ಸುಧಾಕರ ರಾವ್, ರೋಟರಿ ಅಧ್ಯಕ್ಷ  ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.ನಿರಂತರ ಹೋರಾಟ: ಬಾರ್ಕೂರು ರೈಲು ನಿಲ್ದಾಣದಲ್ಲಿ ಮಡಗಾವ್ ಮಂಗಳೂರು ಪ್ಯಾಸೆಂಜರ್ ಮತ್ತು ಮತ್ಸ್ಯಗಂಧ ರೈಲಿಗೆ ಮಾತ್ರ ಈವರೆಗೆ ನಿಲುಗಡೆ ಕಲ್ಪಿಸಲಾಗಿತ್ತು. ನ.14 ರಂದು ಯಶವಂತಪುರ ಕಾರವಾರ ರೈಲು ಆರಂಭವಾದರೂ ಅದಕ್ಕೆ ಬಾರ್ಕೂರಿನಲ್ಲಿ ನಿಲುಗಡೆ ನೀಡಿರಲಿಲ್ಲ. ಅಲ್ಲಿಂದ ನಿರಂತರವಾಗಿ ರೈಲು ನಿಲುಗಡೆ ಬಗ್ಗೆ ಗ್ರಾಮಸ್ಥರು, ನಾಗರಿಕ ಸಮಿತಿ ಹೋರಾಟ ನಡೆಸುತ್ತಾ ಬಂದಿತ್ತು. ಅಲ್ಲದೇ ಕಳೆದ ವರ್ಷ ನ.24 ರಂದು ಬಾರ್ಕೂರು ಆಸುಪಾಸಿನ 23 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ 500ಕ್ಕೂ ಹೆಚ್ಚು ಜನರು ಕಾರವಾರ ಯಶವಂತಪುರ ಹಗಲು ರೈಲನ್ನು ತಡೆದು ನಿಲ್ಲಿಸಿ ಬಾರ್ಕೂರಿನಲ್ಲಿ ರೈಲು ನಿಲುಗಡೆಗೆ ಆಗ್ರಹಿಸಿದ್ದರು. ಈ ಭಾಗದ ಜನತೆಯ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.ಇದೀಗ ರೈಲು ನಿಲುಗಡೆಯಿಂದ ಬ್ರಹ್ಮಾವರ, ಸಾಲಿಗ್ರಾಮ, ಕೊಕ್ಕರ್ಣೆ, ಸಾಯಿಬ್ರಕಟ್ಟೆ, ಶಿರಿಯಾರ, ಮಂದಾರ್ತಿ, ಹೆಬ್ರಿ ಆಸುಪಾಸಿನಿಂದ ಪ್ರತಿನಿತ್ಯ ನೂರಕ್ಕೂ ಹೆಚ್ಚು ಪ್ರಯಾಣಿಕರು ಸುಬ್ರಹ್ಮಣ್ಯ, ಮಂಗಳೂರು ಬೆಂಗಳೂರಿಗೆ ಪ್ರಯಾಣ ಮಾಡುವವರಿಗೆ ಅನುಕೂಲವಾಗಿದೆ.ಶ್ಲಾಘನೆ: ಯಶವಂತಪುರ ಮಂಗಳೂರು ರಾತ್ರಿ ರೈಲನ್ನು  ಕಾರವಾರದವರೆಗೆ ವಿಸ್ತರಿಸಿ ಜನರಿಗೆ ಅನುಕೂಲವಾಗುವಂತೆ ಬಾರ್ಕೂರಿನಲ್ಲಿ ನಿಲುಗಡೆ ಮಾಡಿದ ಕುರಿತು ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಒಕ್ಕೂಟ  ಶ್ಲಾಘಿಸಿದೆ.ಅನೇಕ ಜನಪರ ಹೋರಾಟ ಮಾಡಿದ ವೇದಿಕೆಯೊಂದಿಗೆ ರೈಲು ನಿಲುಗಡೆಗೆ ವಿವಿಧ ಕಡೆಗಳಲ್ಲಿ ಮಾಡಿದ  ಹೋರಾಟದಲ್ಲಿ ಕೈಜೋಡಿಸಿದ ಸಂಘ ಸಂಸ್ಥೆಗಳಿಗೆ ಮತ್ತು ಕರಾವಳಿಯ ಜನರು ಎಂದೆಂದಿಗೂ ಮರೆಯಲಾಗದಂತೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸಿದ ಉಡುಪಿ ಚಿಕ್ಕಮಗಳೂರು ಸಂಸದ ಕೆ.ಜಯ ಪ್ರಕಾಶ ಹೆಗ್ಡೆ, ಕಾನೂನು ಹೋರಾಟಮಾಡಿದ ಶಂಕರ ಭಟ್ ಮತ್ತು ರೈಲ್ವೆ ಇಲಾಖೆಗೆ ಕೃತಜ್ಞತೆ ಸಮರ್ಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry