ಬುಧವಾರ, ಮೇ 12, 2021
18 °C

ಯಶಸ್ವಿನಿ: 1.10 ಲಕ್ಷ ಸದಸ್ಯರ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ರೈತರ ಆರೋಗ್ಯ ರಕ್ಷಣೆಗೆ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಯಶಸ್ವಿನಿ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಡಿ ಜಿಲ್ಲೆಯಲ್ಲಿ 1.10 ಲಕ್ಷ ಸದಸ್ಯರನ್ನು ಯೋಜನೆಯಡಿ ನೋಂದಾಯಿಸಲು ಗುರಿ ನೀಡಲಾಗಿದೆ. ನೋಂದಣಿ ಪ್ರಕ್ರಿಯೆ ಜು. 15ರಿಂದ ಆರಂಭಗೊಳ್ಳಲಿದೆ. ಈ ಹಿಂದೆಯೇ ಸದಸ್ಯತ್ವ ಪಡೆದಿರುವವರು ಆಗಸ್ಟ್ 31ರವರೆಗೆ ನವೀಕರಿಸಿಕೊಳ್ಳಲು ಅವಕಾಶವಿದೆ. ಹೊಸದಾಗಿ ಸದಸ್ಯತ್ವ ಪಡೆಯಲು ಅ. 15ರವರೆಗೂ ಕಾಲಾವಕಾಶವಿದೆ. ಸಹಕಾರ ಇಲಾಖೆ ಅಧಿಕಾರಿಗಳು ನಿಗದಿತ ಗುರಿ ಸಾಧಿಸಲು ವಿಶೇಷ ಆಸಕ್ತಿವಹಿಸಬೇಕು ಎಂದರು.ನವೀಕರಣ ವಂತಿಗೆಯಾಗಿ ಸದಸ್ಯರು ರೂ 210 ಪಾವತಿಸಬೇಕು. ಸದಸ್ಯತ್ವ ನವೀಕರಿಸಿದವರು ಯೋಜನೆಯಡಿ ಆ. 31ರವರೆಗೂ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಡಿ ನೋಂದಾಯಿತರಾಗುವ ಸದಸ್ಯರು ಆ. 1ರಿಂದ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹತೆ ಪಡೆಯುತ್ತಾರೆ ಎಂದರು.ಗ್ರಾಮೀಣ ಸಹಕಾರ ಸಂಘಗಳ ಸದಸ್ಯರು, ಹಾಲು ಉತ್ಪಾದಕರು, ತೋಟಗಾರಿಕೆ, ಸಂಸ್ಕರಣೆ, ಬೀಡಿ ಕಾರ್ಮಿಕರು, ನೇಕಾರರು, ಸ್ವಸಹಾಯ, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಸೇರಿದಂತೆ ಇತರೇ ಕೆಲವು ನಿಗದಿತ ವರ್ಗದವರು ಯಶಸ್ವಿನಿ ಆರೋಗ್ಯ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಹೇಳಿದರು.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಸಿ. ವನಜಾಕ್ಷಿ ಮಾತನಾಡಿ, 2012-13ನೇ ಸಾಲಿನಡಿ 90 ಸಾವಿರ ಸದಸ್ಯರನ್ನು ನೋಂದಾಯಿಸಲು ಗುರಿ ನೀಡಲಾಗಿತ್ತು.ಒಟ್ಟು 68,863 ಸದಸ್ಯರನ್ನು ನೋಂದಾಯಿಸಲಾಗಿದೆ. ಒಟ್ಟಾರೆ ಶೇ. 76.5ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.ಇದೇ ವೇಳೆ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆ ಸಮೂಹಕ್ಕೆ ಸೇರ್ಪಡೆಗೊಳ್ಳಲು ಕೊಳ್ಳೇಗಾಲದ ಜನನಿ ಆಸ್ಪತ್ರೆಗೆ ಸಭೆ ಅನುಮೋದಿಸಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ರಮೇಶ್‌ಬಾಬು, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಂಪತ್‌ಕುಮಾರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.