ಭಾನುವಾರ, ಅಕ್ಟೋಬರ್ 20, 2019
21 °C

ಯಶಸ್ವಿ ಮಹಿಳೆಯ ಸ್ವಾವಲಂಬನೆಯ ಜಪ...

Published:
Updated:
ಯಶಸ್ವಿ ಮಹಿಳೆಯ ಸ್ವಾವಲಂಬನೆಯ ಜಪ...

ಬಳ್ಳಾರಿ: ಮದುವೆಯ ನಂತರ ಮಹಿಳೆಯರು ಮನೆಗೆಲಸ ಮಾಡಿ ಕೊಂಡು, ಮಕ್ಕಳನ್ನು ನೋಡಿಕೊಂಡು ಇರುವುದೇ  ಹೆಚ್ಚು. ಪ್ರತಿಯೊಂದು ಬೇಕು- ಬೇಡಗಳಿಗೂ ಪತಿಯೆದುರು ಕೈಚಾಚುವವರೇ ಅಧಿಕ.ಸ್ವಾವಲಂಬನೆಗಾಗಿ ತುಡಿಯುವ ಮಹಿಳೆಯರ ಸಂಖ್ಯೆಯೂ ಕಡಿಮೆ. ಸ್ವಾವಲಂಬನೆ ಪ್ರತಿಯೊಬ್ಬರ ಆಸೆಯಾಗಿದ್ದರೂ, ಪರಿಸ್ಥಿತಿ ಅದಕ್ಕೆ ಅವಕಾಶ ನೀಡದೇ ಇರುವ ಪ್ರಸಂಗಗಳೇ ಸಮಾಜದಲ್ಲಿ ಕಂಡು ಬರುತ್ತವೆ.

ಅಲ್ಲೊಬ್ಬರು, ಇಲ್ಲೊಬ್ಬರು ತಮಗೆ ಗೊತ್ತಿರುವ ಕೌಶಲವನ್ನೇ ಬಂಡವಾಳ ಆಗಿಸಿಕೊಂಡು, ಮನೆಯವರ ಮನ ಒಲಿಸಿ ಸ್ವಾವಲಂಬನೆಯತ್ತ ಸಾಗಿ, ಕುಟುಂಬಕ್ಕೆ ಅಷ್ಟಿಷ್ಟು ಆಸರೆಯಾದ ಹಾಗೂ ಕೆಲವೊಮ್ಮೆ ಇಡೀ ಕುಟುಂಬಕ್ಕೇ ಆಧಾರವಾದ ಉದಾಹರಣೆಗಳೂ ದೊರೆಯುತ್ತವೆ.ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿಯ ಕಪಗಲ್ ರಸ್ತೆಯಲ್ಲಿರುವ ಆಕುಲು ಚಲಮಯ್ಯ ಬೀದಿಯಲ್ಲಿ `ಅದಿತಿ ಡಿಸೈನರ್ಸ್~ ಹೆಸರಿನ ಸಂಸ್ಥೆ ನಡೆಸುತ್ತಿರುವ ಮಹಿಳೆ ಯೊಬ್ಬರು ಸ್ವಾವಲಂಬನೆಯ ದೃಷ್ಟಿ ಯಿಂದ ಇತರರಿಗೂ ಮಾದರಿ ಆಗಿದ್ದಾರೆ.ಮುಖ್ಯವಾಗಿ ಎಂಬ್ರಾಯಿಡರಿ, ಕಸೂತಿ, ಬಟ್ಟೆಗಳ ಡಿಸೈನ್ ಕೆಲಸ ಮಾಡುತ್ತಿರುವ ಅವರು 20 ಜನರಿಗೆ (ಇವರಲ್ಲಿ  ಅನೇಕರು ಯುವತಿಯರು) ಕೆಲಸವನ್ನೂ ನೀಡಿ ಅವರ ಜೀವನಕ್ಕೂ ಆಧಾರವಾಗಿದ್ದಾರೆ.ಆಂಧ್ರದ ಅನಂತಪುರ ಮೂಲದ ವಿಜಯಾ ರಮೇಶ್ ಅವರೇ ಅಂತಹ ಯಶಸ್ವಿ ಮಹಿಳೆ. ಇವರು ಓದಿದ್ದು ಬಿ.ಎಸ್‌ಸಿ ಪದವಿ. ಮದುವೆಯಾಗಿದ್ದು ಬಳ್ಳಾರಿಯ ಇಂಡಿಯನ್ ಬ್ಯಾಂಕ್ ಉದ್ಯೋಗಿ ರಮೇಶ್ ಅವರನ್ನು.ಮದುವೆಯಾದ ಕೆಲವು ವರ್ಷಗಳ ನಂತರ ತಾನೂ ಯಾಕೆ ಸ್ವಯಂ ಉದ್ಯೋಗ ಆರಂಭಿಸಬಾರದು? ಎಂಬ ಆಲೋಚನೆ ಮೂಡಿದ್ದೇ ತಡ, ತಮಗೆ ಗೊತ್ತಿದ್ದ ಎಂಬ್ರಾಯಿಡರಿ ಕಲೆಯನ್ನೇ ಬಂಡವಾಳ ಆಗಿಸಿಕೊಂಡು ಸಣ್ಣ ಪ್ರಮಾಣದ ಸ್ವಯಂ ಉದ್ಯೋಗ ಆರಂಭಿಸಿ, ಇದೀಗ ದೊಡ್ಡಮಟ್ಟದ ಉದ್ಯಮದ ಒಡತಿಯಾಗಿದ್ದಾರೆ.ಸಿದ್ಧ ಉಡುಪುಗಳ ತಯಾರಿಕೆಗೆ ಪ್ರಸಿದ್ಧವಾಗಿರುವ ಬಳ್ಳಾರಿಯಲ್ಲಿ ಅಂತಹ ಉಡುಪುಗಳಿಗೆ ಎಂಬ್ರಾಯಿಡರಿ ಮೂಲಕ ಅಗತ್ಯವಾಗಿರುವ ಡಿಸೈನ್ ಅಳವಡಿಸಿ ಸ್ವಾವಲಂಬಿಯಾಗಿ ರೂಪು ಗೊಂಡಿರುವ ವಿಜಯಾ ಉದ್ಯೋಗವೇ ದೊರೆಯುತ್ತಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಯುವ ಜನತೆಗೆ ಮಾದರಿಯಾಗಿದ್ದಾರೆ.1991ರಲ್ಲಿ ಮದುವೆಯಾಗಿ ಬಳ್ಳಾರಿಗೆ ಬಂದ ಇವರು ಸ್ವಯಂ ಉದ್ಯೋಗದತ್ತ ಆಸಕ್ತರಾಗಿ 1995ರಲ್ಲಿ ತಮ್ಮ ಅತ್ತೆಯವರಿಂದ ಸ್ಫೂರ್ತಿ ಪಡೆದು, ಅವರು ನೆಚ್ಚಿ ಕೊಂಡಿದ್ದ ಎಂಬ್ರಾಯಿಡರಿ ಕಲೆಯನ್ನೇ ಮುಂದುವರಿಸಿಕೊಂಡು 16 ವರ್ಷಗಳ ಅವಧಿಯಲ್ಲಿ ಹೊಸಹೊಸ ತಂತ್ರಜ್ಞಾನ ಅಳವಡಿಸಿ ಕೊಂಡು, ವಿನೂತನ ಡಿಸೈನ್ ರೂಪಿಸಿ, ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ತ್ವರಿತ ಸೇವೆಯನ್ನೂ ನೀಡುತ್ತ ಇದೀಗ ಬಿಡುವಿಲ್ಲದ ಕೆಲಸದ ಒಡತಿಯಾಗಿ ಆರ್ಥಿಕವಾಗಿಯೂ ಸಬಲರಾಗಿದ್ದಾರೆ.ಹಳೆಯ ಸೀರೆಗೆ ಮೆರುಗು: ವಿಶೇಷ ವಾಗಿ ಮಹಿಳೆಯರು ಭಾವನಾತ್ಮಕ ವಾದ ನಂಟು ಹೊಂದಿರುವ ಮದುವೆ ಸೀರೆಗೆ ಹೊಸ ಮೆರುಗು ನೀಡುವ ಇವರು, ಅಂತಹ ವಿಶೇಷ ಮದುವೆ ರೇಷ್ಮೆ ಸೀರೆಗೆ ವಿಶಿಷ್ಟವಾದ ಡಿಸೈನ್‌ಗಳಿರುವ ಚಿತ್ತಾರಗಳನ್ನು ಅಳವಡಿಸುತ್ತಾರೆ.ಮದುವೆ ಸೀರೆ ಹಳೆಯದಾದರೂ ಅದಕ್ಕೆ ಹೊಸ ರೂಪ ನೀಡಿ, ಅದರೊಂದಿಗಿನ ನಂಟನ್ನು ಮತ್ತಷ್ಟು ಸದೃಢಗೊಳಿಸುವ ಇವರ ಕೆಲಸ ಅನೇಕ ಮಹಿಳೆಯರಿಗೂ ಇಷ್ಟವಾಗಿ ಬೇಡಿಕೆಯೂ ಹೆಚ್ಚಿದೆ. ಇಷ್ಟಲ್ಲದೆ, ಸ್ಕಾರ್ಫ್, ಸಿದ್ಧ ಉಡುಪುಗಳ ಡಿಸೈನ್, ದೇವರ ಚಿತ್ರವಿರುವ ಬಾಗಿಲು ಪರದೆ, ಫ್ರೇಮ್‌ಗಳಲ್ಲಿ ಹಾಕಿ ಇಡುವ ದೇವರ ಚಿತ್ರಗಳನ್ನು ಕಂಪ್ಯೂಟರ್ ಸಹಾಯ ದೊಂದಿಗೆ ರೂಪಿಸಿ, ಅತ್ಯಾಧುನಿಕ ಯಂತ್ರಗಳ ಸಹಕಾರ ದೊಂದಿಗೆ ದಾರದೊಂದಿಗೆ ಸಿದ್ಧಪಡಿಸಿ ಆರ್ಥಿಕ ವಾಗಿ ಸಬಲರಾಗಿದ್ದಾರೆ.ಅನಕ್ಷರಸ್ಥ ಯುವತಿಯರಿಗೂ ಈ ಕೌಶಲವನ್ನು ರೂಢಿಸಿ, ಸ್ವಯಂ ಉದ್ಯೋಗ ಕಂಡುಕೊಳ್ಳಲು ನೆರವಾಗಿ ರುವ ವಿಜಯಾ ಅವರು, ಸದ್ಯ ತಮ್ಮ ಸಂಸ್ಥೆಯಿಂದ ನಿತ್ಯವೂ ಸಾವಿರಾರು ರೂಪಾಯಿಯ ವಹಿವಾಟು ನಡೆಸುತ್ತಾರೆ.ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದು, ಜರ್ಮನಿ, ಜಪಾನ್‌ನ ಅತ್ಯಾಧುನಿಕ ಯಂತ್ರ ಖರೀದಿಸಿ ಏಕಕಾಲಕ್ಕೆ ಹತ್ತಾರು ಬಟ್ಟೆಗಳಿಗೆ ಚಿತ್ತಾರ ನೀಡಿ ಮೆರುಗು ನೀಡು ತ್ತಿದ್ದಾರೆ. ಕಾಲಕಾಲಕ್ಕೆ ಸಾಲ ಮರು ಪಾವತಿ ಮಾಡುತ್ತ ಯಶಸ್ವಿ ಉದ್ಯಮಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.ವೃತ್ತಿಕೌಶಲ ತರಬೇತಿ: ಸ್ವಯಂ ಉದ್ಯೋಗ ಕಂಡು ಕೊಳ್ಳಲು ಅಗತ್ಯ ಆಗಿರುವ ವೃತ್ತಿ ಕೌಶಲ ಕುರಿತ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಾರ್ಗದರ್ಶನ ನೀಡುವ ಇವರು, ಪ್ರತಿ ವರ್ಷವೂ ನೂರಾರು ಯುವತಿಯರು ಸ್ವಾವಲಂಬಿ ಉದ್ಯೋಗಿಗಳಾಗಲು ನೆರವಾಗುತ್ತಿದ್ದಾರೆ.ಸೂಕ್ತ ಉದ್ಯೋಗಕ್ಕೆ ತೊಡಗಿ, ಸ್ವಂತ ಕಾಲಮೇಲೆ ನಿಲ್ಲುವಂತೆ ಹದಿ ಹರೆಯದ ಯುವಕ/ ಯುವತಿ ಯರಿಗೆ ಪಾಲಕರು ಸಲಹೆ ನೀಡುವುದು ಸಹಜ. ಮಾತು ಕೇಳದ ಮಕ್ಕಳ ಮೇಲೆ ಕೋಪಿಸಿಕೊಳ್ಳುವುದೂ ಸಹಜ. ಯಾವುದಕ್ಕೂ ಬೇಡವಾದ ವರು ಎಂದೇ ಮನೆಯವರ ಕೋಪಕ್ಕೆ ಕಾರಣ ರಾದ ಅದೆಷ್ಟೋ ಯುವಕ/ ಯುವತಿ ಯರು ವಿಜಯಾ ಅವರ ಬಳಿ ತರಬೇತಿ ಪಡೆದು ಸ್ವಯಂ ಉದ್ಯೋಗ ಆರಂಭಿಸಿ ಸಂಪಾದನೆಯಲ್ಲಿ ತೊಡಗಿದ್ದಾರೆ.`ಮಹಿಳೆಯರಿಗೆ ಪತಿಯ ಬೆಂಬಲವೂ ಅತ್ಯಗತ್ಯ. ಆ ವಿಷಯದಲ್ಲಿ ನಾನಂತೂ ಅದೃಷ್ಟವಂತೆ. ಪತಿ ರಮೇಶ್ ಸೂಕ್ತ ಪ್ರೋತ್ಸಾಹ ನೀಡಿದ್ದೇ ಇಷ್ಟೆಲ್ಲ ಸಾಧನೆಗೆ ಕಾರಣವಾಗಿದೆ~ ಎಂದು ಹೇಳುವ ಇವರು, ಮನೆಯವರ ಮನವೊಲಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಒರೆಗೆ ಹಚ್ಚುವ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂದು ಹೆಮ್ಮೆಯಿಂದ ಹೇಳುತ್ತಾರೆ.ನಿರಾಶೆ ಬೇಡ: `ಕೆಲಸ ಅಂಥದ್ದೇ ಇರಬೇಕು, ಇಂಥದ್ದೇ ಇರಬೇಕು ಎಂದು ಕೈಚೆಲ್ಲಿ ಕುಳಿತುಕೊಳ್ಳದೆ, ಆಸಕ್ತ ಕ್ಷೇತ್ರದಲ್ಲೇ ತೊಡಗಿಕೊಳ್ಳುವುದು ಸೂಕ್ತ. ಎಲ್ಲ ಮಹಿಳೆಯರೂ ಇದನ್ನು ಅನುಸರಿಸಿ ಆರ್ಥಿಕವಾಗಿ ಸಬಲರಾದರೆ ಮಕ್ಕಳ ಶಿಕ್ಷಣ, ಆರೋಗ್ಯ, ಸ್ವಂತದ ಮನೆ ಮತ್ತಿತರ ಕನಸುಗಳು ನನಸಾಗುತ್ತವೆ~ ಎಂದು ವಿಜಯಾ ರಮೇಶ್ ಅವರು  ಮಾರ್ಮಿಕವಾಗಿ ಹೇಳುತ್ತಾರೆ.

Post Comments (+)