ಯಶಸ್ವಿ ಯೋಜನೆಗೆ ಸಿಕ್ಕ ಪ್ರತಿಫಲ

7

ಯಶಸ್ವಿ ಯೋಜನೆಗೆ ಸಿಕ್ಕ ಪ್ರತಿಫಲ

Published:
Updated:

ಅಧಿಕಾರಿಯೊಬ್ಬರ ಆಸಕ್ತಿ ಹಾಗೂ ಕಾರ್ಯ ಯೋಜನೆ ಫಲವಾಗಿ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ ಕಚ್ಚಾವಸ್ತು ಪ್ರತಿಫಲ ರೂಪದಲ್ಲಿ ದೊರೆತ ಯಶೋಗಾಥೆ ಇಲ್ಲಿದೆ.2002-03ನೇ ಸಾಲಿನಲ್ಲಿ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಿ.ಎ. ಕುಟಿನ್ಹೋ ಅವರು, ಅಭಿವೃದ್ಧಿಯ ಹಲವು ಯೋಜನೆ, ಯೋಚನೆ ರೂಪಿಸಿ ಎಂಪಿಎಂ ಅಭಿವೃದ್ಧಿಗೆ ಶ್ರಮಿಸಿದ್ದರು.

ಅವರ ಕನಸಿನ ಯೋಜನೆಯ ಭಾಗವಾಗಿ ರೂಪ ತಾಳಿದ್ದು, ಕಾರ್ಖಾನೆ ಸುತ್ತಮುತ್ತಲಿನ ಜಾಗವನ್ನು ಸಮರ್ಪಕ ಬಳಕೆ ಮಾಡಿಕೊಂಡು ಅಲ್ಲಿ ಕಚ್ಚಾ ವಸ್ತುಗಳಾದ ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸುವ ಕೆಲಸ.ಕಾಗದ ತಯಾರಿಕೆಗೆ ಬಳಕೆಯಾದ ನೀರು ಇಟಿಪಿ ವಿಭಾಗದ ಮೂಲಕ ಭದ್ರಾನದಿ ಸೇರುತ್ತಿತ್ತು. ಇದನ್ನು ಸರಿಯಾಗಿ ನಿರ್ವಹಿಸಿ ನೀರನ್ನು ಸದ್ಬಳಕೆ ಮಾಡಿದಲ್ಲಿ ಆವಶ್ಯವಿರುವ ಮರಗಳನ್ನು ಹೆಚ್ಚು ಖರ್ಚಿಲ್ಲದೇ ಬೆಳೆಸಬಹುದು ಎಂದು ಯೋಚಿಸಿದ ಕುಟಿನ್ಹೊ ಅದಕ್ಕಾಗಿ ಯೋಜನೆ ರೂಪಿಸಿದರು.ಕಾರ್ಖಾನೆ ಅರಣ್ಯ ವಿಭಾಗ, ಗುತ್ತಿಗೆ ಕಾರ್ಮಿಕರ ಸಹಕಾರ ಪಡೆದು, ಹೊರಬಿಟ್ಟ ನೀರು ಗಿಡ ಬೆಳೆಸುವುದಕ್ಕೆ ಪೂರಕ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿದ ನಂತರ ಅಕೇಶಿಯಾ ಹಾಗೂ ನೀಲಗಿರಿ ಪ್ಲಾಂಟೇಶನ್ ಕಾರ್ಯಕ್ಕೆ ಅವರೇ ಖುದ್ದು, ನಿಂತು ಚಾಲನೆ ನೀಡಿದರು.ಎಂಪಿಎಂ ಸುತ್ತಲೂ ಖಾಲಿ ಇರುವ ಜಾಗವನ್ನು ಗುರುತು ಮಾಡಿ, ಅಲ್ಲಿಗೆ ಇಟಿಪಿ ಪ್ಲಾಂಟ್‌ನಿಂದ ನೀರು ನೇರವಾಗಿ ಹರಿಯುವಂತೆ ಪೈಪುಗಳನ್ನು ಹಾಕಿ, ಕೆಲಸವಿಲ್ಲದೇ ಇದ್ದ ಗುತ್ತಿಗೆ ಕಾರ್ಮಿಕರಿಗೆ ವರ್ಷಪೂರ್ತಿ ನೌಕರಿ ನೀಡುವ ಭಾಗವಾಗಿ ಈ ಯೋಜನೆ 2003ರಲ್ಲಿ ಆರಂಭವಾಯಿತು.ಸುಮಾರು 20 ಎಕರೆ ಪ್ರದೇಶದಲ್ಲಿ ನಡೆದ ಈ ಚಟುವಟಿಕೆಯ ಯಶಸ್ಸಿನ ಫಲ ಇಂದು ಕಾರ್ಖಾನೆಗೆ ದೊರೆತಿದೆ. ಸುಮಾರು ಏಳು ವರ್ಷದಲ್ಲಿ ಅದ್ಭುತವಾಗಿ ಬೆಳೆದು ನಿಂತ ಅಕೇಶಿಯಾ ಹಾಗೂ ನೀಲಗಿರಿ ನೆಡುತೋಪು ಸದ್ಯಕ್ಕೆ ಒಂದಿಷ್ಟು ಕಚ್ಚಾ ವಸ್ತುವಾಗಿದೆ.ಮಳೆಗಾಲಕ್ಕೆ ಮುನ್ನ ಕಚ್ಚಾವಸ್ತು ಶೇಖರಣೆ ಮಾಡುವಲ್ಲಿ ವಿಫಲವಾದ ಕಾರ್ಖಾನೆ ಹೊರಗಿನಿಂದ ಮರವನ್ನು ತರಿಸುವ ಕೆಲಸಕ್ಕೆ ಮುಂದಾಗಿತ್ತು. ಆಗ ಕಣ್ಣಿಗೆ ಬಿದ್ದ ಈ ನೆಡುತೋಪುಗಳು ಸುಮಾರು 500ಕ್ಕೂ ಅಧಿಕ ಟನ್ ಉತ್ತಮ ಇಳುವರಿಯನ್ನು ಕಾರ್ಖಾನೆಗೆ ಕೊಡುಗೆ ನೀಡಿತು.ಇತ್ತೀಚಿಗೆ ಇದರ ಸದ್ಬಳಕೆ ಮಾಡಿಕೊಂಡು ಕಾಗದ ಉತ್ಪಾದಿಸಿರುವ ಕಾರ್ಖಾನೆ ಈ ಬಾರಿ ಸಹ ಇದೇ ಜಾಗದಲ್ಲಿ ಪ್ಲಾಂಟೇಶನ್ ಮಾಡುವ ಇರಾದೆಯನ್ನು ವ್ಯಕ್ತಮಾಡಿದೆ.ಹೊರ ಹೋಗುವ ನೀರನ್ನು ಸದ್ಬಳಕೆ ಮಾಡಿಕೊಂಡು ಪ್ಲಾಂಟೇಶನ್ ಜಾಗವನ್ನು ಹೆಚ್ಚು ಮಾಡುವ ಬೃಹತ್ ಯೋಜನೆಯನ್ನು ಅಂದು ಅಧಿಕಾರಿಯಾಗಿದ್ದ ಕುಟಿನ್ಹೋ ರೂಪಿಸಿದ್ದರು. ಇದು ಪೂರ್ಣವಾಗಿ ಸಾಕಾರವಾಗಿದ್ದರೆ ಕಾರ್ಖಾನೆ ಒಡೆತನದ ಖಾಲಿ ಜಾಗದಲ್ಲೂ, ಸಹ ಇದರ ವಿಸ್ತರಣೆ ನಡೆಯುತ್ತಿತ್ತು. ಅಷ್ಟರಲ್ಲಿ ಅವರು ವರ್ಗಾವಣೆಗೊಂಡ ಪರಿಣಾಮ ಈ ಯೋಜನೆಗೂ ಸಹ ತೆರೆಬಿತ್ತು.ಆದರೆ, ಈಗ ಪುನಃ ಇದರ ಕುರಿತಾದ ಚರ್ಚೆ ಕಾರ್ಖಾನೆ ಆವರಣದಲ್ಲಿ ಆರಂಭವಾಗಿದೆ. ಇದರ ವ್ಯಾಪ್ತಿಯನ್ನು ವಿಸ್ತಾರ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರೆ ಕಚ್ಚಾ ವಸ್ತುವಿನಲ್ಲಿ ಮತ್ತಷ್ಟು ಸ್ವಾವಲಂಬನೆ ಸಾಧಿಸಬಹುದು ಎನ್ನುತ್ತಾರೆ ಕಾರ್ಮಿಕ ಸಂಘದ ಅಧ್ಯಕ್ಷಎಸ್. ಚಂದ್ರಶೇಖರ್.ಒಟ್ಟಿನಲ್ಲಿ ಅಧಿಕಾರಿಯ ದೂರದೃಷ್ಟಿ ಯೋಜನೆಯ ಲಾಭವನ್ನು ಕಾರ್ಖಾನೆ ಸದ್ಯಕ್ಕೆ ಪಡೆದಿದೆ. ಇದನ್ನು ಮತ್ತಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ ಎಂಬುದು ಸಾರ್ವಜನಿಕರ ಆಶಯ.                                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry