ಯಶಸ್ವಿ ಶಸ್ತ್ರಚಿಕಿತ್ಸೆ: ನಗರದ ವೈದ್ಯರ ಸಾಧನೆ.

7

ಯಶಸ್ವಿ ಶಸ್ತ್ರಚಿಕಿತ್ಸೆ: ನಗರದ ವೈದ್ಯರ ಸಾಧನೆ.

Published:
Updated:

ದಾವಣಗೆರೆ: ಅಪಘಾತವೊಂದರಲ್ಲಿ ಗಾಯಗೊಂಡು ಚಪ್ಪೆ ಭಾಗಕ್ಕೆ ಹಾನಿ ಉಂಟಾಗಿದ್ದ ವ್ಯಕ್ತಿಯೊಬ್ಬರಿಗೆ ನಗರದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.ನಗರದ ಪ್ರಾಂಜಲಿ ಬೋನ್ ಅಂಡ್ ಜಾಯಿಂಟ್ ಕೇರ್‌ನ ಡಾ.ಬಿನಯ್ ಕುಮಾರ್ ಸಿಂಗ್ ಮತ್ತು ತಂಡ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು, ಇದೀಗ ರೋಗಿ ಚೇತರಿಸಿಕೊಳ್ಳುತಿದ್ದಾರೆ.ವಿವರ: ದಾವಣಗೆರೆ ಬಂಬೂ ಬಜಾರ್ ನಿವಾಸಿ ಹುಲಿಕುಂಟಪ್ಪ ಈಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು, ಕಾಲು ಆಡಿಸಲು ಆಗದಂತಹ ಸ್ಥಿತಿಗೆ ತಲುಪಿದ್ದರು. ಎಕ್ಸ್‌ರೇ ಮತ್ತು ಸಿ-ಟಿ ಸ್ಕ್ಯಾನ್ ಪರೀಕ್ಷೆಯಲ್ಲಿ ಅವರ ಬಲಭಾಗದ ಚಪ್ಪೆ (ಫಿಮೊರೆಲ್ ಹೆಡ್)ಗೆ ಧಕ್ಕೆ ಉಂಟಾಗಿರುವುದು ದೃಢಪಟ್ಟಿತು. ಮೊದಲು ಪರೀಕ್ಷಿಸಿದ ವೈದ್ಯರು ರೋಗಿಯನ್ನು ಬೆಂಗಳೂರು ಇಲ್ಲವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಆದರೆ, ರೋಗಿಯ ಸಂಬಂಧಿಗಳು ಡಾ.ಬಿನಯ್‌ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದರು.ಜ. 26ರಂದು ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಸುಮಾರು 5 ಗಂಟೆ ಕಾಲ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಚೂರಾಗಿದ್ದ ಫಿಮೊರೆಲ್‌ಹೆಡ್ ಅನ್ನು ತೆಗೆದು ಕೃತಕವಾದ ಬೈಪೋಲಾರ್ ಹೆಮಿಆರ್ಥೋಪ್ಲಾಸ್ಟಿಯನ್ನು ಅಳವಡಿಸಲಾಯಿತು. ನಂತರ ಬೋನ್ ಕ್ರಾಫ್ಟ್ ಅನ್ನು ಪುನರ್‌ರಚನೆಗೊಳಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.ಶಸ್ತ್ರಚಿಕಿತ್ಸೆಯ ಮೂರು ವಾರಗಳ ನಂತರ ಚೇತರಿಸಿಕೊಂಡ ರೋಗಿ ಹುಲಿಕುಂಟಪ್ಪ ಈಗ ಕಾಲನ್ನು ಮಡಚುವುದು ಸೇರಿದಂತೆ ನಿಧಾನವಾಗಿ ನಡೆಯಲು ಯತ್ನಿಸುತ್ತಿದ್ದಾರೆ. ಇಡೀ ದೇಹದ ಭಾರವು ಕಾಲಿಗೆ ಈ ಚಪ್ಪೆಯ ಕೀಲಿನ ಮುಖಾಂತರವೇ ವರ್ಗಾವಣೆಯಾಗುವುದರಿಂದ ಈ ಶಸ್ತ್ರಚಿಕಿತ್ಸೆ ಮಾಡುವುದು ಕ್ಲಿಷ್ಟಕರ. ಬೆಂಗಳೂರಿನಲ್ಲಿ ಇದೇ ಚಿಕಿತ್ಸೆಗೆ ಸುಮಾರು ರೂ 2ಲಕ್ಷ ವೆಚ್ಚವಾಗುತ್ತಿದ್ದು, ಇದನ್ನು ನಗರದಲ್ಲೇ ಸುಮಾರು ರೂ 36 ಸಾವಿರ ವೆಚ್ಚದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಸಹಾಯ ಮಾಡಿದ್ದಾರೆ.ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಡಾ.ಬಿನಯ್‌ಕುಮಾರ್ ಅವರೊಂದಿಗೆ ಡಾ.ಕೃಷ್ಣ, ಡಾ.ಲಕ್ಷ್ಮಣ, ಡಾ.ಷರ್ಬಾಸ್, ಡಾ.ಶ್ರುತಿ, ಸಹಾಯಕರಾದ ಶಶಿ, ದಿವ್ಯಾ, ಸನ್ನಿತಾ, ರಮೇಶ ಮತ್ತು ರುದ್ರಪ್ಪ ತಂಡದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry