ಗುರುವಾರ , ನವೆಂಬರ್ 21, 2019
20 °C

`ಯಶಸ್ಸಿಗಿಂತ ಪ್ರಯತ್ನ ಮುಖ್ಯ'

Published:
Updated:
`ಯಶಸ್ಸಿಗಿಂತ ಪ್ರಯತ್ನ ಮುಖ್ಯ'

ಗುಲ್ಬರ್ಗ: ಗುರಿ ಸಾಧಿಸುವಲ್ಲಿ ಯಶಸ್ಸಿಗಿಂತ ಪ್ರಯತ್ನ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪಲ್ಲವಿ ಆಕುರತಿ ಅಭಿಪ್ರಾಯಪಟ್ಟರು.ಅವರು ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಭಾರತ ರತ್ನ ಬಾಬುಸಾಹೇಬ ಡಾ.ಬಿ.ಆರ್. ಅಂಬೇಡ್ಕರ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಲು ಇಡಿ ತಮ್ಮ  ಜೀವನವನ್ನೇ ಮುಡಿಪಾಗಿ ಇಟ್ಟಾಗ ಮಾತ್ರ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ. ಗುರಿ ಇಲ್ಲದ ಜೀವನ ಕೆಲಸಕ್ಕೆ ಬಾರದು. ತಂದೆ ತಾಯಿ ಬಲವಂತಕ್ಕಾಗಿ ಓದದೇ ತಮ್ಮ ಹಿತಕ್ಕಾಗಿ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಹಸಿವಿನಿಂದ ಬಳಲುತ್ತಿರವವನಿಗೆ ಸಹಾಯ ಮಾಡುವಂತಹ ವಿದ್ಯೆಯೇ ನಿಜವಾದ ವಿದ್ಯೆಯಾಗಿದೆ. ಪ್ರತಿಯೊಬ್ಬರು ವಿದ್ಯೆಯನ್ನು ಕಲಿತು ದುರ್ಬಲರ ಏಳಿಗೆಗೆ ಪ್ರಯತ್ನ ಮಾಡಬೇಕು. ವಿಧೆಯಿಂದ ಕೆಲವು ಜನರಿಗೆ ಸಹಾಯವಾಗಬೇಕು ಹೊರತು, ಅದರಿಂದ ಅನಾಹುತವಾಗಬಾರದು ಎಂದು ಹೇಳಿದರು. ಮತ್ತೊಬ್ಬರ ಮೇಲೆ ಅವಲಂಬನೆ ಆಗದೆ, ಸ್ವಶಕ್ತಿ-ಸಾಮರ್ಥ್ಯದಿಂದ ಜೀವನದಲ್ಲಿ ಮುಂದೆ ಬರಬೇಕು. ದೈಹಿಕ ಶಿಕ್ಷಣದಿಂದ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದೈಹಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ),ಡಾ. ಎಸ್.ವಿ.ಹಲ್ಸೆ ಮಾತನಾಡಿ, ವಿಧ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕವಾಗಿದೆ ಎಂದು ಹೇಳಿದರು.ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು.ಧಾರವಾಡನ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರವಿಂದ ಎ. ಮೂಲಿಮನಿ, ಡಾ. ಗೀತಾಮಾಲಾ, ಡಾ. ಶಾಂತಾ ಅಷ್ಟಿಗೆ, ಡಾ. ಶಾರದಾದೇವಿ ಜಾಧವ, ಮೂರ್ತಿ ಶರಣಪ್ಪ, ಪ್ರೊ. ಕಲ್ಯಾಣರಾವ ಪಾಟೀಲ, ಡಾ. ಪರಶುರಾಮ ಬನ್ನಿಗಿಡದ, ಡಾ. ಸರ್ವೋದಯ ಎಸ್.ಎಸ್. ಮತ್ತಿತರರ ಇದ್ದರು.ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)