ಯಶಸ್ಸಿಗೆ ಕಾರಣರಾದ ವಿಕೆಟ್ ಕೀಪರ್‌ಗಳು

7

ಯಶಸ್ಸಿಗೆ ಕಾರಣರಾದ ವಿಕೆಟ್ ಕೀಪರ್‌ಗಳು

Published:
Updated:

ಬೆಂಗಳೂರು: ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಬಗ್ಗೆಯೇ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಮಾತು. ಆದರೆ ವಿಕೆಟ್ ಕೀಪರ್ ಜವಾಬ್ದಾರಿಯು ಇವರಿಬ್ಬರಿಗಿಂತ ದೊಡ್ಡದು ಎನ್ನುವ ಕಡೆಗೆ ಗಮನ ನೀಡುವುದೇ ಕಡಿಮೆ.ಪ್ರಭಾವಿ ವಿಕೆಟ್ ಕೀಪರ್ ಇದ್ದರೆ ಬ್ಯಾಟ್ಸ್‌ಮನ್‌ಗಳ ಮೇಲೆ ಭಾರಿ ಒತ್ತಡ ಇರುತ್ತದೆ. ವಿಕೆಟ್ ಹಿಂದೆ ಕೈಗವಸು ತೊಟ್ಟುಕೊಂಡು ನಿಲ್ಲುವ ಕ್ರಿಕೆಟಿಗನ ಚಾಕಚಕ್ಯತೆಯ ಬಲದಿಂದಲೇ ಪಂದ್ಯಗಳ ಸ್ವರೂಪ ಬದಲಾಗಿದ್ದೂ ಇದೆ. ಆದ್ದರಿಂದ ವಿಕೆಟ್ ಕೀಪರ್ ಎನ್ನುವ ಸ್ಥಾನವು ಕ್ರಿಕೆಟ್‌ನಲ್ಲಿ ಅತ್ಯಂತ ಮಹತ್ವದ್ದೆನಿಸುತ್ತದೆ.ವಿಶ್ವಕಪ್ ಕ್ರಿಕೆಟ್‌ನಲ್ಲಿ ಅನೇಕ ವಿಕೆಟ್ ಕೀಪರ್‌ಗಳು ಪ್ರಭಾವಿ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ತಮ್ಮ ತಂಡದ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನೂ ನಿಭಾಯಿಸಿದ್ದಾರೆ. ಅಂಥ ಕೆಲವು ವಿವರಗಳು ಇಲ್ಲಿವೆ.* ವಿಶ್ವಕಪ್ ಕ್ರಿಕೆಟ್‌ನಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ವಿಕೆಟ್ ಕೀಪರ್ ರೂಪದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ವಿವಿಧ ತಂಡಗಳ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಹಾದಿ ಹಿಡಿಯುವಂತೆ ಮಾಡಿದ್ದು 52 ಬಾರಿ. ಇವರು 45 ಕ್ಯಾಚ್ ಪಡೆಯುವ ಮೂಲಕ ವಿಶಿಷ್ಟ ಸಾಧನೆಯ ಶ್ರೇಯಕ್ಕೆ ಪಾತ್ರರಾಗಿದ್ದಾರೆ.ಅಷ್ಟೇ ಅಲ್ಲ ಏಳು ಸ್ಟಂಪಿಂಗ್ ಮಾಡುವ ಮೂಲಕ ಚುರುಕು ತೋರಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಕೂಡ ಈ ನಿಟ್ಟಿನಲ್ಲಿ ಯಶಸ್ವಿ ವಿಕೆಟ್ ಕೀಪರ್ ಎನಿಸಿದ್ದಾರೆ. ಅವರು 26 ಕ್ಯಾಚ್ ಪಡೆದಿದ್ದರೆ, ಆರು ಸ್ಟಂಪಿಂಗ್ ಮಾಡಿದ್ದಾರೆ. ದಕ್ಷಿಣ ಅಫ್ರಿಕಾದ ಮಾರ್ಕ್ ಬೌಷರ್ 31 ಕ್ಯಾಚ್ ಪಡೆದಿದ್ದರೂ, ಸ್ಟಂಪಿಂಗ್‌ನಲ್ಲಿ ಯಶಸ್ವಿ ಎನಿಸಿಲ್ಲ. ಪಾಕಿಸ್ತಾನ ಮೊಯಿನ್ ಖಾನ್ ಕೂಡ ಮೂವತ್ತು ಬಾರಿ (23 ಕ್ಯಾಚ್, 7 ಸ್ಟಂಪಿಂಗ್) ಬ್ಯಾಟ್ಸ್‌ಮನ್‌ಗಳ ನಿರ್ಗಮನಕ್ಕೆ ಕಾರಣರಾಗಿದ್ದಾರೆ.* ಗಿಲ್‌ಕ್ರಿಸ್ಟ್ ಹಾಗೂ ಮೊಯಿನ್ ಖಾನ್ ಅವರು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಪಟ್ಟಿಯಲ್ಲಿ ಜೊತೆಯಾಗಿ ನಿಂತಿದ್ದಾರೆ. ಇಬ್ಬರೂ ತಲಾ ಏಳು ಸ್ಟಂಪಿಂಗ್ ಮಾಡಿದ್ದು ವಿಶೇಷ. ಭಾರತ ಕಿರಣ್ ಮೋರೆ ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರು ತಲಾ ಆರು ಬಾರಿ ಸ್ಟಂಪಿಂಗ್ ಮಾಡಿದ್ದು ಗಮನ ಸೆಳೆಯುವ ಅಂಶ.* ಒಂದೇ ಪಂದ್ಯದಲ್ಲಿ ಆರು ವಿಕೆಟ್‌ಗಳ ಪತನಕ್ಕೆ ಕಾರಣರಾಗಿ ದಾಖಲೆ ಶ್ರೇಯ ಹೊಂದಿರುವುದು ಗಿಲ್‌ಕ್ರಿಸ್ಟ್. 27ನೇ ಫೆಬ್ರುವರಿ 2003ರಲ್ಲಿ ನಡೆದಿದ್ದ ಪಂದ್ಯದಲ್ಲಿ ನಮೀಬಿಯಾ ಎದುರು ಆರು ಕ್ಯಾಚ್ ಪಡೆದು ಮಿಂಚಿದ್ದರು. ಭಾರತದ ಸಯ್ಯದ್ ಕಿರ್ಮಾನಿ ಅವರು 11ನೇ ಜೂನ್ 1983ರಲ್ಲಿ ಜಿಂಬಾಬ್ವೆ ವಿರುದ್ಧ ಲೆಸೆಸ್ಟರ್‌ನಲ್ಲಿ ಐದು ಕ್ಯಾಚ್ ಪಡೆದಿದ್ದರು. ವಿಂಡೀಸ್‌ನ ಜಿಮ್ಮಿ ಆ್ಯಡಮ್ಸ್, ಪಾಕಿಸ್ತಾನದ ರಶೀದ್ ಲತೀಫ್, ಭಾರತದ ನಯನ್ ಮೋಂಗಿಯಾ, ಹಾಗೂ ವಿಂಡೀಸ್‌ನ ರಿಡ್ಲಿ ಜೇಕಬ್ಸ್ ಅವರೂ ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪತನಕ್ಕೆ ಕಾರಣರಾದ ಶ್ರೇಯ ಹೊಂದಿದ್ದಾರೆ.* ವಿಕೆಟ್ ಕೀಪರ್ ಹೊರತಾಗಿ ಕ್ಷೇತ್ರರಕ್ಷಕರಾಗಿದ್ದುಕೊಂಡು ಅಧಿಕ ಕ್ಯಾಚ್ ಪಡೆದಿದ್ದು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್. ವಿಶ್ವಕಪ್‌ನಲ್ಲಿ ಇಪ್ಪತ್ತು ಕ್ಯಾಚ್ ಪಡೆದ ಏಕಮಾತ್ರ ಕ್ಷೇತ್ರರಕ್ಷಕ. ಶ್ರೀಲಂಕಾದ ಸನತ್ ಜಯಸೂರ್ಯ (18), ನ್ಯೂಜಿಲೆಂಡ್‌ನ ಕ್ರಿಸ್ ಕೇರ್ನ್ಸ್ (16), ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ (16) ಹಾಗೂ ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ (16) ಅವರು ಹದಿನೈದಕ್ಕೂ ಹೆಚ್ಚು ಕ್ಯಾಚ್ ಪಡೆದಿದ್ದಾರೆ.* ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಶ್ವಕಪ್ ದಾಖಲೆ ಹೊಂದಿರುವುದು ಭಾರತದ ಮೊಹಮ್ಮದ್ ಕೈಫ್. ಜೋಹಾನ್ಸ್‌ಬರ್ಗ್‌ನಲ್ಲಿ 10ನೇ ಮಾರ್ಚ್ 2003ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೈಫ್ ನಾಲ್ಕು ಕ್ಯಾಚ್ ಪಡೆದಿದ್ದು ಇತಿಹಾಸದ ಪುಟದಲ್ಲಿ ಅಚ್ಚಾಗಿದೆ. ಕ್ಷೇತ್ರ ರಕ್ಷಕರು ವಿಶ್ವಕಪ್ ಪಂದ್ಯಗಳಲ್ಲಿ ಮೂರು ಕ್ಯಾಚ್ ಪಡೆದಿದ್ದು 21 ಬಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry