ಶನಿವಾರ, ಡಿಸೆಂಬರ್ 7, 2019
24 °C

ಯಶಸ್ಸಿನ ಮೆಲುಕು; ಭವಿಷ್ಯದ ಕನಸು

Published:
Updated:
ಯಶಸ್ಸಿನ ಮೆಲುಕು; ಭವಿಷ್ಯದ ಕನಸು

ನೀವು ನಂಬುತ್ತೀರೊ ಇಲ್ಲವೋ ಗೊತ್ತಿಲ್ಲ...

ಬೆಂಗಳೂರಿಗರಿಗೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ಗಿಂತ ಈಜುವಿನ ಮೇಲೆ ಹೆಚ್ಚು ಮೋಹ. ಮಕ್ಕಳಲ್ಲಿ ಮಾತ್ರವಲ್ಲ; ಪೋಷಕರಲ್ಲಿ ಕೂಡ. ಮುಂಜಾನೆ ಐದು ಗಂಟೆಗೆ ತಮ್ಮ ಮಕ್ಕಳನ್ನು ಈಜು ಕೇಂದ್ರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಈಜುವಿನತ್ತ ಹೆಚ್ಚು ಗಮನ ಹರಿಸಲು ತಮ್ಮ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಶಿಬಿರಕ್ಕೆಂದು ಬೇರೆ ಬೇರೆ ಜಿಲ್ಲೆಗಳಿಂದಲೂ ಮಕ್ಕಳನ್ನು ಉದ್ಯಾನ ನಗರಿಗೆ ಕಳುಹಿಸಿ ಕೊಡುತ್ತಿದ್ದಾರೆ.

ಇವತ್ತು ಬೆಂಗಳೂರಿನಲ್ಲಿರುವಷ್ಟು ಸೌಲಭ್ಯ ಭಾರತದ ಮತ್ತೊಂದು ನಗರದಲ್ಲಿಲ್ಲ. ಹಾಗಾಗಿ ಈಜುಪಟುಗಳು ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿರುವ ಕೋಚಿಂಗ್ ಶೈಲಿಯನ್ನು ಮತ್ತೊಂದು ರಾಜ್ಯದಲ್ಲಿ ಕಾಣಲು ಅಸಾಧ್ಯ. ಅತ್ಯುತ್ತಮ ಆಡಳಿತ, ಅದಕ್ಕೆ ಪೂರಕವಾದ ವ್ಯವಸ್ಥೆ ಇಲ್ಲಿದೆ. ಹಾಗಾಗಿ ಸದಾ ಕರ್ನಾಟಕದ್ದೇ ಮೇಲುಗೈ. ಸೀನಿಯರ್ ಮಟ್ಟದಲ್ಲಿ ಎರಡು ದಶಕಗಳಿಂದ ರಾಜ್ಯದ್ದೇ ದರ್ಬಾರ್.

ಇಂತಹವೊಂದು ಯಶಸ್ಸಿನ ಅಲೆ ಎಬ್ಬಿಸಲು ಕಾರಣವಾಗಿರುವುದು ಬಸವನಗುಡಿ ಈಜು ಕೇಂದ್ರ (ಬಿಎಸಿ). ಒಲಿಂಪಿಯನ್‌ಗಳು, ಚಾಂಪಿಯನ್‌ಗಳನ್ನು ಸೃಷ್ಟಿಸಿದ ಬಿಎಸಿ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇದು ದೇಶದ ಪ್ರಸಿದ್ಧ ಈಜು ಕೇಂದ್ರ ಕೂಡ.

ಇಬ್ಬರು ಒಲಿಂಪಿಯನ್‌ಗಳು (ನಿಶಾ ಮಿಲೆಟ್ ಹಾಗೂ ರೆಹಾನ್ ಪೂಂಚಾ) ಹಾಗೂ 120ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಈಜುಪಟುಗಳನ್ನು ನೀಡಿದ ಖ್ಯಾತಿ ಈ ಕೇಂದ್ರದ್ದು. ಇಲ್ಲಿನ ಈಜುಪಟುಗಳು 2500ಕ್ಕೂ ಅಧಿಕ ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. 4 ಅರ್ಜುನ ಪ್ರಶಸ್ತಿ, 21 ಏಕಲವ್ಯ ಪ್ರಶಸ್ತಿ ಇಲ್ಲಿನ ಈಜುಪಟುಗಳಿಗೆ ಲಭಿಸಿದೆ. ವಿವಿಧ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಇದುವರೆಗೆ ಬಿಎಸಿಯ ನಾಲ್ಕು ಮಂದಿ `ಅತ್ಯುತ್ತಮ ಕ್ರೀಡಾಪಟು~ ಗೌರವ ಪಡೆದಿದ್ದಾರೆ.

ಬಿಎಸಿ ಜನಿಸ್ದ್ದಿದು 1986ರ ಡಿಸೆಂಬರ್ ಏಳರಂದು. ಈಜು ಕ್ರೀಡೆಯ ಮೇಲೆ ಆಸಕ್ತಿ ಹೊಂದ್ದ್ದಿದ ಸಮಾನ ಮನಸ್ಕರು ಸೇರಿ ಆರಂಭಿಸಿದ ಕೇಂದ್ರವಿದು. ಅದರಲ್ಲೂ ನೀಲಕಂಠರಾವ್ ಜಗದಾಳೆ ಅವರ ಕನಸಿನ ಕೂಸು ಬಿಎಸಿ. `ಬಸವನಗುಡಿ ಪ್ರದೇಶದಲ್ಲಿ ಆಗ ಈಜುಕೊಳ ಇರಲಿಲ್ಲ. ನಮಗೆ ಹಾಗೂ ನಮ್ಮ ಮಕ್ಕಳಿಗೆ ಈಜುವಿನ ಬಗ್ಗೆ ಆಸಕ್ತಿ ಇತ್ತು.

ಈ ಉದ್ದೇಶದಿಂದ ನಾವು ಬಿಎಸಿ ಆರಂಭಿಸಿದೆವು. ಆರಂಭದಲ್ಲಿ ಬಿಎಸಿ ಸ್ಥಾಪಿಸಿದ ಸದಸ್ಯರ ಮಕ್ಕಳೇ ಇಲ್ಲಿನ ಈಜುಪಟುಗಳು~ ಎನ್ನುತ್ತಾರೆ ಬಿಎಸಿ ಅಧ್ಯಕ್ಷರೂ ಆಗಿರುವ ಜಗದಾಳೆ.

ಹಾಗೇ, ಬಿಎಸಿ ಕಾರ್ಯದರ್ಶಿ ರಾಜಣ್ಣ, ಜಂಟಿ ಕಾರ್ಯದರ್ಶಿ ಜಯತೀರ್ಥ ರಾವ್, ರಾಷ್ಟ್ರೀಯ ಈಜು ಕೋಚ್ ಪ್ರದೀಪ್ ಕುಮಾರ್ ಇವರೆಲ್ಲಾ ಬಿಎಸಿಯ ಬೆನ್ನೆಲುಬು. ಶ್ರೀಧರ್, ಸುಂದರರಾಜ್ ಗುಪ್ತ, ಗುರುರಾಜ್ ರಾವ್, ಗೋವಿಂದರಾಜ್, ಅಶೋಕ್ ಕುಮಾರ್, ಜಗದೀಶ್ ಕುಮಾರ್ ಅವರ ಶ್ರಮವೂ ಇದರಲ್ಲಿದೆ.

ಬಳಿಕ 1991ರಲ್ಲಿ ಕಾರ್ಪೊರೇಷನ್‌ನಿಂದ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆಯಲಾಯಿತು. ಇದೀಗ ಬಿಎಸಿಯಲ್ಲಿ ದಿನನಿತ್ಯ 500 ಮಂದಿ ಸ್ಪರ್ಧಿಗಳು ತರಬೇತಿ ಪಡೆಯುತ್ತ್ದ್ದಿದಾರೆ. 600ಕ್ಕೂ ಅಧಿಕ ಮಂದಿ ವಾರಾಂತ್ಯದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆ. 12 ಶಾಲೆಗಳ ಮಕ್ಕಳು ಇಲ್ಲಿಗೆ ಬರುತ್ತಾರೆ. 17 ಮಂದಿ ಕೋಚ್‌ಗಳು ಇಲ್ಲಿದ್ದಾರೆ. ಸಾರ್ವಜನಿಕರಿಗೂ ಅವಕಾಶವಿದೆ.

ರಜತಮಹೋತ್ಸವ ಪ್ರಯುಕ್ತ ಬಿಎಸಿ ಈ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಈ ಈಜುಕೊಳವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸುವ ಯೋಜನೆಯೂ ಒಂದು.

`ನಮ್ಮ ಉದ್ದೇಶ ಮುಂದಿನ ಪೀಳಿಗೆಗೆ ಉತ್ತಮ ಸೌಲಭ್ಯ ಒದಗಿಸಬೇಕು. ಸುತ್ತಮುತ್ತಲಿನ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ಸ್ಪರ್ಧಿಗಳಿಗೆ ಅನುಕೂಲ ಮಾಡಿಕೊಡಬೇಕು. ಹಾಗಾಗಿ ಈಜುಕೊಳವನ್ನು ಮೇಲ್ದರ್ಜೆಗೇರಿಸಲು ಒಟ್ಟು ಆರೂವರೆ ಕೋಟಿ ಹಣದ ಅಗತ್ಯವಿದೆ. ಮೂರು ಕೋಟಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭರವಸೆ ನೀಡಿದೆ. ಇನ್ನುಳಿದ 3.5 ಕೋಟಿಯನ್ನು ಹೊಂದಿಸಬೇಕಾಗಿದೆ. ಇದನ್ನು ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್ ಹಾಗೂ ದಾನಿಗಳ ನೆರವಿನಿಂದ ಹೊಂದಿಸಲು ಪ್ರಯತ್ನಿಸುತ್ತೇವೆ~ ಎಂದು ಜಗದಾಳೆ ತಿಳಿಸುತ್ತಾರೆ.

ನೂತನವಾಗಿ 10 ಲೇನ್ ರೇಸಿಂಗ್ ಪೂಲ್ ನಿರ್ಮಿಸಲಿದ್ದಾರೆ. ಜೊತೆಗೆ ಟಚ್ ಪ್ಯಾಡ್, ಸ್ಕೋರ್ ಬೋರ್ಡ್, ಗ್ಯಾಲರಿ, ಮಾಧ್ಯಮ ಕೇಂದ್ರ, ಜಿಮ್‌ನ್ಯಾಷಿಯಂ, ಕಾನ್ಫೆರೆನ್ಸ್ ಹಾಲ್ ನಿರ್ಮಿಸುವುದು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

`ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳವಿಲ್ಲ. ಹಾಗಾಗಿ ಈ ಹೆಜ್ಜೆ ಇಡಲಾಗಿದೆ~ ಎನ್ನುತ್ತಾರೆ ಕೋಚ್ ಪ್ರದೀಪ್ ಕುಮಾರ್. ಬಿಎಸಿ ಮುಖ್ಯ ಕೋಚ್ ಕೂಡ ಆಗಿರುವ ಪ್ರದೀಪ್ ಈಗಾಗಲೇ ಇಲ್ಲಿ 24 ವರ್ಷ ಕಳೆದಿದ್ದಾರೆ. ಅವರು 1988ರಲ್ಲಿ ಈ ಕೇಂದ್ರ ಸೇರಿದ್ದರು.

`ಬಿಎಸಿ ಈಗ ವೃತ್ತಿಪರ ಕ್ಲಬ್ ಆಗಿ ಬೆಳೆದಿದೆ. ಉತ್ತಮ ಆಡಳಿತ, ಉತ್ತಮ ನಾಯಕತ್ವ ಈ ಯಶಸ್ಸಿಗೆ ಕಾರಣ. ಇಲ್ಲಿನ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಹಾಗೇ, ಸಂಸ್ಥೆಗಳು, ಶಾಲೆಗಳು, ಪೋಷಕರು ಇದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಹಾಗಾಗಿ ಈಜು ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಎಲ್ಲರ ಕರ್ತವ್ಯ~ ಎನ್ನುತ್ತಾರೆ ಪ್ರದೀಪ್.

`ನಾನು ಬಿಎಸಿಯೊಂದಿಗೆ ಬೆಳೆಯುತ್ತಿದ್ದೇನೆ. ರಾಷ್ಟ್ರೀಯ ತಂಡದ ಕೋಚ್ ಆಗಿ ಸೇವೆ ಸಲ್ಲಿಸಲು ಕಾರಣ ಬಿಎಸಿ~ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಬೆಳ್ಳಿ ಹಬ್ಬ ಸಂಭ್ರಮದ ಯೋಜನೆಗಳು

* ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಆಯೋಜನೆ

* ಜ.26ರಂದು ಕಂಠೀರವ ಕ್ರೀಡಾಂಗಣದಿಂದ ಬೇಟನ್ ರಿಲೇ

* ಸಾಧಕ ಹಾಲಿ ಹಾಗೂ ಮಾಜಿ ಈಜುಪಟುಗಳಿಗೆ ಸನ್ಮಾನ

* ಫೆಬ್ರುವರಿಯಲ್ಲಿ ಅಂತರ ಬಿಎಸಿ ಚಾಂಪಿಯನ್‌ಷಿಪ್

* ರಾಷ್ಟ್ರೀಯ ಕೋಚ್‌ಗಳ ಸಮ್ಮೇಳನ

* ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್ ಆಯೋಜನೆ

* ಅಂತರರಾಷ್ಟ್ರೀಯ ಈಜುಪಟುವನ್ನು ಆಹ್ವಾನಿಸುವುದು

* ಈಜುಕೊಳವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸುವುದು

* 2013ರ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣ

ಪ್ರತಿಕ್ರಿಯಿಸಿ (+)