ಯಶಸ್ಸಿನ ಹಾದಿಯಲ್ಲಿ...

7

ಯಶಸ್ಸಿನ ಹಾದಿಯಲ್ಲಿ...

Published:
Updated:
ಯಶಸ್ಸಿನ ಹಾದಿಯಲ್ಲಿ...

`ಯುವ ಜನತೆ ಕನಸು ಕಾಣಬೇಕು. ಅದರಲ್ಲಿ ಗಟ್ಟಿಯಾಗಿ ನಂಬಿಕೆಯಿಡಬೇಕು~ ಎಂಬುದನ್ನು ಮಾಜಿ ರಾಷ್ಟ್ರಪತಿ  ಎ.ಪಿ.ಜೆ ಅಬ್ದುಲ್ ಕಲಾಂ ಅವರು ಯುವ ಸಮುದಾಯಕ್ಕೆ ಹೇಳಿಕೊಟ್ಟ ಕಿವಿ ಮಾತು. ಇವರ ಮಾತಿನ ಪ್ರೇರಣೆಯಿಂದ ನನಗೆ ಯಶಸ್ಸಿನ ಹಾದಿಯಲ್ಲಿ ಹೆಜ್ಜೆಹಾಕಲು ಸಾಧ್ಯವಾಗುತ್ತಿದೆ~ ಎನ್ನುವುದು ಮಂಜುನಾಥ್ ಅವರ ಸ್ಪಷ್ಟ ನುಡಿ.ಕಡುಬಡತನದಲ್ಲಿ ಬೆಳೆದ ಮಂಜುನಾಥ್ ಕ್ರೀಡೆಯ ಬಗೆಗೆ ಸಾಕಷ್ಟು ಆಸಕ್ತಿ ಬೆಳಸಿಕೊಂಡಿದ್ದಾರೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ಹಲವು ಚಿನ್ನದ ಪದಕಗಳನ್ನು ಜಯಿಸಿ ಭವಿಷ್ಯದ ಅಥ್ಲೀಟ್ ಎನಿಸಿದ್ದಾರೆ.ರಾಷ್ಟ್ರ ಮಟ್ಟದ ಸ್ಪರ್ಧಿಗೆ ಅಗತ್ಯವಿರುವ ತರಬೇತಿ ಪಡೆಯದಿದ್ದರೂ ಸ್ವ ಪ್ರಯತ್ನದಿಂದ ಉತ್ತಮ ಸಾಧನೆ ಮಾಡಿದ್ದಾರೆ. ಈ ಪರಿಣಾಮವಾಗಿಯೇ ಕ್ರೀಡಾ ಕೋಟಾದಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.ಕೆ.ಆರ್ ನಗರ ತಾಲ್ಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ದಿನನಿತ್ಯ ಕೂಲಿ ಕೆಲಸ ಮಾಡುತ್ತಾ ಪಾಂಡು ಮತ್ತು ಲಲಿತಮ್ಮನವರು ನಿತ್ಯದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಸಂಸಾರದ ಸಂಕಟದ ಜೊತೆಗೆ, ಮಗನಿಗೆ ಶಿಕ್ಷಣ ಕೊಡಿಸಿದರು. ಓದಿನಲ್ಲಿಯೂ ಆಸಕ್ತಿ ಹೊಂದಿರುವ ಮಂಜುನಾಥ್ ವೈಯಕ್ತಿಕ ಶ್ರಮದಿಂದ ನವೋದಯ ಪರೀಕ್ಷೆ ಪಾಸು ಮಾಡಿದರು.ಮಂಜುನಾಥ್ ಅವರಿಗೆ ಶಿಕ್ಷಣದ ಜೊತೆಗೆ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ. ಆರನೇ ತರಗತಿಯಲ್ಲಿದ್ದಾಗ ಓಟದ ಸ್ಪರ್ಧೆಯಲ್ಲಿ ಗೆಲುವು ಪಡೆದರು. ಇದರಿಂದ ಪ್ರೇರಿತಗೊಂಡು ಇದರಲ್ಲೇ ನಿರಂತರ ಆಭ್ಯಾಸ ಮಾಡಿದರು.

 

ಇದು ಅವರಿಗೆ ಭವಿಷ್ಯದ ಬುನಾದಿಗೆ ಒದಗಿಸಿ ಕೊಟ್ಟಿತು. ನಂತರ ಸ್ವ ಪರಿಶ್ರಮದಿಂದ ಮೆಟ್ರಿಕ್ ಹಂತದಲ್ಲಿ ಹದಿನೇಳು ವರ್ಷದೊಳಗಿವರ ಕ್ಲಷ್ಟರ್ ಮಟ್ಟದ 800 ಮೀ. ಓಟದ ಸ್ಪರ್ಧೆಯಲ್ಲಿ `ಚಿನ್ನ~ದ ಹುಡುಗ ಎನಿಸಿಕೊಂಡರು.ದ್ವಿತೀಯ ಪಿ.ಯು.ಸಿ. ಓದುವಾಗ ಕಾಸರಗೋಡುವಿನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿಯೂ ಚಿನ್ನದ ನಗೆ ಬೀರಿದರು. ಇದರಿಂದ ಪಂಜಾಬ್‌ನಲ್ಲಿ  ನಡೆದ ನವೋದಯ ರಾಷ್ಟ್ರಮಟ್ಟದ 1500 ಮೀಟರ್ ಸ್ಪರ್ಧೆಯಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡರು.ಆಗಲೇ ಆವರ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ನಂತರ ಪುಣೆಯಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿಯೂ ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡರು. ಗುಡ್ಡಗಾಡು ಓಟದಲ್ಲೂ ಯಶಸ್ಸು ಕಂಡಿರುವ ಅವರು ಪದವಿ ಓದುವಾಗ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾನಿಲಯ, ತಮಿಳುನಾಡು ಸೇರಿದಂತೆ ಇತರೆ ವಿವಿಧ ರಾಜ್ಯಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಮುಗಿಸಿದ ಮಂಜುನಾಥ್ ಸ್ನಾತಕೋತ್ತರ ಅಧ್ಯಯನಕ್ಕಾಗಿ, ಮಾನಸಗಂಗೋತ್ರಿಗೆ ಸೇರಿ ಅಲ್ಲಿಯೂ ಕ್ರೀಡೆಯ ತಮ್ಮ ಸಾಧನೆ ಮುಂದುವರಿಸಿದರು.ಈ ವೇಳೆಗೆ ಬಡತನದ ಕಾರಣದಿಂದ ಅವರ ಪ್ರದರ್ಶನ ಮಟ್ಟ ಸ್ಪಲ್ಪಇಳಿಮುಖವಾಯಿತು. ಆದರೂ ತಮ್ಮ ಪ್ರಯತ್ನವನ್ನು ಅವರು ಕೈ ಬಿಡಲಿಲ್ಲ. ಸ್ನಾತಕೋತ್ತರ ಪದವಿಗೆ ಬಂದ ಮೇಲೆ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ವಿಶ್ವವಿದ್ಯಾ ನಿಲಯಗಳ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.ಮನೆಯಲ್ಲಿನ ಬಡತನದ ಮಧ್ಯೆಯೂ ಬದುಕಿನಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಹಾಗೂ ತುಡಿತ ಹೊಂದಿರುವ ಮಂಜುನಾಥ್ ಅವರ ಛಲ ಮೆಚ್ಚುವಂತದ್ದು. ಅವರ ಸಾಧನೆಯ ಹಾದಿಯಲ್ಲಿನ ಸಂಕಷ್ಟಗಳನ್ನೆಲ್ಲಾ ಕಳೆದು, ಅವಕಾಶಗಳನ್ನು ಕೂಡಿಸಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಮಂಜುನಾಥ್ ಭವಿಷ್ಯದ ದಿನಗಳಲ್ಲಿ ಯಶಸ್ಸಿನ ಶಿಖರ ಮುಟ್ಟಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry