ಯಶೋದಮ್ಮನ ಯಶೋಗಾಥೆ

7

ಯಶೋದಮ್ಮನ ಯಶೋಗಾಥೆ

Published:
Updated:

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಇರಬೇಕು. ಈ ಮಾತಿನಂತೆ ನಡೆದವರ ಸಾಲಿಗೆ ಯಶೋದಮ್ಮ ಸೇರುತ್ತಾರೆ. 75ರ ಇಳಿವಯಸ್ಸು ಅವರ ಸಾಧನೆಗೆ ಅಡ್ಡಿಯಾಗಿಲ್ಲ. ಇಂದಿಗೂ ದಣಿವರಿಯದೇ ಕೃಷಿ ಕಾರ್ಯದಲ್ಲಿ ತೊಡಗಿ ಬದುಕು ರೂಪಿಸಿಕೊಂಡಿದ್ದಾರೆ.ಶಿವಮೊಗ್ಗದಿಂದ ಸವಳಂಗ ರಸ್ತೆಯಲ್ಲಿ 8 ಕಿಮಿ ದೂರದಲ್ಲಿದೆ ಅಬ್ಬಲಗೆರೆ ಗ್ರಾಮ. ಅಲ್ಲಿಂದ ಹನಸವಾಡಿ ರಸ್ತೆಯಲ್ಲಿ ಒಂದು ಫರ್ಲಾಂಗ್ ಹೋದರೆ ಹಸಿರುಹೊದ್ದ  `ಯಶಸ್ವಿ ಫಾರ್ಮ್~ ಎದುರಾಗುತ್ತದೆ. ಒಳಗೆ ಪ್ರವೇಶಿಸುತ್ತಿದ್ದಂತೆ ತಂಪು ಅನುಭವ. ನಾಯಿ ಕೂಗು ಕೇಳಿಸಿ ಅಲ್ಲಿಯೇ ನಿಂತರೆ `ಅದು ಏನೂ ಮಾಡಲ್ಲ ಬನ್ನಿ~  ಎಂದು ಸೀರೆಯ ಮೇಲೆ ಉದ್ದನೆಯ ಅಂಗಿ ಹಾಕಿದ ಅಜ್ಜಿ ಆತ್ಮೀಯವಾಗಿ ಕರೆದು ಕೂರಿಸುತ್ತಾರೆ.

 

`ಟೀ ತಗೊಳ್ತೀರಾ,  ಕಾಫೀನಾ~ ಎನ್ನುತ್ತಾರೆ. ಉಡುಪು ನೋಡಿ ಯಾರೋ ಕೆಲಸದವರಿರಬೇಕು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅವರೇ ತೋಟದ ಯಜಮಾನಿ ಯಶೋದಮ್ಮ.ಅವರು ಹೊನ್ನಾಳಿ ತಾಲ್ಲೂಕು ಚಿನ್ನಿಕಟ್ಟೆಯ ಕೃಷಿಕ ಪಟೇಲ್ ಈಶ್ವರಪ್ಪನವರ ಮಗಳು. ಓದಿದ್ದು ಒಂಬತ್ತನೇ ತರಗತಿ. ಮದುವೆಯಾಗಿದ್ದು ಸರ್ಕಾರಿ ಕೆಲಸದಲ್ಲಿದ್ದ ಮಲ್ಲಿಗೇನಹಳ್ಳಿಯ ಬಸವರಾಜರನ್ನು. ನೂರಾರು ಎಕರೆ ಭೂಮಿ ಒಡೆಯರ ಮನೆತನದಲ್ಲಿ ಹುಟ್ಟಿ ಬೆಳೆದ ಯಶೋದಮ್ಮಗೆ ಚಿಕ್ಕಂದಿನಿಂದ ಕೃಷಿಯಲ್ಲಿ ಆಸಕ್ತಿ. 17 ವರ್ಷದ ಹಿಂದೆ ಪತಿ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆನಿಂತರು.ಆಗ ಬಂದ ಹಣದಲ್ಲಿ ಅಬ್ಬಲಗೆರೆ ಪಕ್ಕ 8 ಎಕರೆ ಒಣಭೂಮಿ ಖರೀದಿಸಿದರು. ಬೋರ್‌ವೆಲ್ ಕೊರೆಸಿದರು. ನಾಲ್ಕು ಕಿಲೋ ಮೀಟರ್ ದೂರದ ತುಂಗಾನದಿಯಿಂದ ಪೈಪ್‌ಲೈನ್ ಮೂಲಕ ಭೂಮಿಗೆ ನೀರು ಹರಿಸಿದರು. ಕುಟುಂಬದಿಂದ ಹೆಚ್ಚು ನೆರವು ಸಿಗದಿದ್ದರೂ ಶ್ರಮ ವಹಿಸಿ ತಾವೇ ಸ್ವತಃ ಆಳುಗಳೊಂದಿಗೆ ಆಳಾಗಿ ದುಡಿದು ತೋಟ ಕಟ್ಟಿದರು.ಆರಂಭದಲ್ಲಿ ಅನೇಕ ಕಷ್ಟಗಳು ಎದುರಾದವು. ಕೂಲಿಗೆ ಜನ ಸಿಗುತ್ತಿರಲಿಲ್ಲ. ನೀರು ಸಾಕಾಗುತ್ತಿರಲಿಲ್ಲ. ಕೈಯಲ್ಲಿದ್ದ ಹಣ ಖಾಲಿಯಾದಾಗ ಬ್ಯಾಂಕಿನಿಂದ ಎರಡೂವರೆ ಲಕ್ಷ ಸಾಲ ಪಡೆದರು. ಕೃಷಿಯಲ್ಲಿ ಆಸಕ್ತಿ ಇದ್ದರೂ ಅನುಭವ ಇರಲಿಲ್ಲ. ಯಾರಾದರೂ ಏನನ್ನಾದರೂ ಹೇಳಿದರೆ ಅದನ್ನೇ ಮಾಡುವುದು. ಆಮೇಲೆ ಇನ್ನಾರೋ ಅದನ್ನೇಕೆ ಮಾಡಿದಿರಿ? ಎಂದರೆ ಬದಲಾಯಿಸುವುದು. ಹೀಗೆ ಸಾಗಿತ್ತು. ಕೃಷಿ ಪುಸ್ತಕ ಹಾಗೂ ಆಗ ನಡೆದ ಪಾಳೇಕರ್ ಕೃಷಿ ಪದ್ಧತಿಯ ತರಬೇತಿ ಉಪಯೋಗಕ್ಕೆ ಬಂತು ಎನ್ನುತ್ತಾರೆ ಯಶೋದಮ್ಮ.ಏಳು ಎಕರೆಯಲ್ಲಿ ಒಂದೆಡೆ ಅಡಿಕೆ, ಬಾಳೆ, ಕೋಕೊ ಮಿಶ್ರಬೆಳೆಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿದರು. ಇನ್ನೊಂದೆಡೆ ಅರ್ಧ ಎಕರೆಯನ್ನು ದನಗಳಿಗೆ ಮೇವು, ಅಜೋಲಾ ತೊಟ್ಟಿಗಳು, ಕಾಂಪೋಸ್ಟ್ ಎರೆಗೊಬ್ಬರ ಘಟಕಗಳು, ಜೀವಾಮೃತ ತಯಾರಿಕೆಗೆ ಮೀಸಲಿಟ್ಟರು. ಇನ್ನುಳಿದ ಅರ್ಧ ಎಕರೆ ತರಕಾರಿ ಹಾಗೂ ಹೂವು ಗಿಡಗಳಿಗೆ.

ಇವರಿಗೆ ಬೇರೆ ತೋಟಗಳನ್ನು ನೋಡುವ ಆಸಕ್ತಿ ಬಹಳ.ವಿವಿಧ ತೋಟ, ಕೃಷಿಮೇಳ ಹಾಗೂ ಪ್ರದರ್ಶನಗಳಲ್ಲಿ ಸಿಕ್ಕ ಬೀಜರಹಿತ ನಿಂಬೆ, ಜಾಯಿಕಾಯಿ, ಲವಂಗ, ಚಕ್ಕೆ, ಮೆಣಸು, ನಾಟಿ ಶುಂಠಿ, ಅರಿಶಿನದಂತಹ ಸಂಬಾರ ಬೆಳೆಗಳು, ಮಾವು, ಹಲಸು, ಕಿತ್ತಳೆ, ಮೂಸಂಬಿ, ಸಪೋಟದಂತಹ ಹಣ್ಣಿನ ಗಿಡಗಳು, ಒಂದೆಲಗ, ದೊಡ್ಡಪತ್ರೆ, ಲೋಳೆಸರದಂತಹ ಔಷಧಿ ಸಸ್ಯಗಳನ್ನು ತೊಟದಲ್ಲಿ ಅಲ್ಲಲ್ಲಿ ನೆಟ್ಟಿದ್ದಾರೆ.ಬೇಲಿಗೆ ನೂರಾರು ತೇಗ, ಮೆಂಜಿಯಂ, ಸುಬಾಬುಲ್, ಅಕೇಷಿಯಾ, ಗೊಬ್ಬರ ಗಿಡಗಳನ್ನು ಹಾಕಿ ಬೆಳೆಸಿದ್ದಾರೆ. ತೋಟದ ಮಧ್ಯಭಾಗದಲ್ಲಿ ಮಧ್ಯಾಹ್ನ ತಮಗೆ ವಿಶ್ರಮಿಸಲು ಹಾಗೂ ಮೂವರು ಕೆಲಸಗಾರ ಕುಟುಂಬದ ವಾಸ್ತವ್ಯಕ್ಕೆ ಪುಟ್ಟದೊಂದು ಮನೆ ಕಟ್ಟಿಸಿದ್ದಾರೆ.ಆರಂಭದ ಏಳೆಂಟು ವರ್ಷ ರಾಸಾಯನಿಕ ಕೃಷಿ ಅನುಸರಿಸಿದರು. ರೋಗ ತಡೆಗಟ್ಟಲು ಕ್ರಿಮಿನಾಶಕ ಬಳಸಿದರು. ಖರ್ಚು ಅಧಿಕವಾಯಿತು. ಆದಾಯ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ತೋಟ ಮಾರುವ ಯೋಚನೆಯಲ್ಲಿದ್ದರು. ಆಗ ಪಕ್ಕದ ತೊಟದ ಹನುಮಂತಪ್ಪ ಸಾವಯವ ಪದ್ಧತಿ ಅನುಸರಿಸಲು ಸಲಹೆ ನೀಡಿದರು.

 

ಅದರಂತೆ 2004ನೇ ಸಾಲಿನಿಂದ ಹಂತ ಹಂತವಾಗಿ ಸಾವಯವ ಪದ್ಧತಿ ಪ್ರಾರಂಭಿಸಿದರು. ಈಗ ಐದು ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸಿಲ್ಲ. ತೋಟವೆಲ್ಲ ಸಾವಯವಮಯ ಮಾಡಿದ್ದಾರೆ.ತೋಟದ ಬಳಕೆಗೆ ಪ್ರತಿ ವರ್ಷ ಐದು ಟನ್ ಕಾಂಪೋಸ್ಟ್ ಹಾಗೂ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಪ್ರತಿ ತಿಂಗಳು 7500 ಲೀಟರ್ ಜೀವಾಮೃತ ತಯಾರಿಸಿ ಗಿಡಕ್ಕೆ ಎರಡು ಲೀಟರ್‌ನಂತೆ ಕೊಡುತ್ತಾರೆ.ಸಾವಯವಕ್ಕೆ ಭೂಮಿ ಹೊಂದಿಕೊಳ್ಳಲು ಒಂದೆರಡು ವರ್ಷಗಳು ಬೇಕಾದವು. ನಂತರ ಖರ್ಚು ಕಡಿಮೆಯಾಗುತ್ತ ಆದಾಯ ಹೆಚ್ಚಾಗುತ್ತಾ ಹೋಯಿತು. ರಾಸಾಯನಿಕ ಕೃಷಿ ಮಾಡುವಾಗ ಎಕರೆಗೆ ಹಸಿ ಅಡಿಕೆ ಇಳುವರಿ 45-50 ಕ್ವಿಂಟಾಲ್ ಇದ್ದದ್ದು ಈಗ 70-75 ಕ್ವಿಂಟಾಲ್‌ಗೆ ಹೆಚ್ಚಿದೆ. ಅಡಿಕೆ ಸಸಿ ಮಾರಾಟದಿಂದಲೂ ಆದಾಯ ಬರುತ್ತಿದೆ.ಬಾಳೆ (ಪುಟ್ಟಬಾಳೆ) ಗೊನೆಯ ಗಾತ್ರ (25 ಕಿಲೊ), ಹಣ್ಣಿನ ಗಾತ್ರ ಹಾಗೂ ರುಚಿಯಿಂದ ಸಾವಯವ ಸಂಶೋಧನ ಸಂಸ್ಥೆಯ ಗಮನ ಸೆಳೆದಿದೆ. ಶಿವಮೊಗ್ಗದಲ್ಲಿ ನಡೆದ ಫಲಪುಷ್ಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರದರ್ಶನದಲ್ಲಿ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಪುಟ್ಟ ಕೈತೋಟದಲ್ಲಿ ಸೀಮೆಬದನೆ, ಅಜೋಲಾ ತೊಟ್ಟಿಗೆ ನೆರಳು ಮಾಡಿದ ಚಪ್ಪರದಲ್ಲಿ ಚಪ್ಪರದ ಅವರೆ, ಹಸಿಮೆಣಸು, ಬೀನ್ಸ್, ವಿವಿಧ ಸೊಪ್ಪುಗಳಿವೆ. ಇವಕ್ಕೆಲ್ಲ ಸಾವಯವ ಗೊಬ್ಬರ ಹಾಗೂ ಆರೋಗ್ಯ ವೃದ್ಧಿಗೆ ಜೀವಾಮೃತ ನೀಡುತ್ತಾರೆ. ಏಳೆಂಟು ವರ್ಷಗಳಿಂದ ಯಾವುದೇ ತರಕಾರಿ ಕೊಂಡಿಲ್ಲವಂತೆ. ತೋಟದ ಕೆಲಸಕ್ಕೆ ಬಂದವರಿಗೆ ತರಕಾರಿ ಉಚಿತ.ಸಾವಯವ ಕೃಷಿಗೆ ಮೂಲ ಆಧಾರವೇ ಸಗಣಿ ಗಂಜಲ. ಹಾಗಾಗಿ ತೋಟದ ಒಂದು ಭಾಗದಲ್ಲಿ ಆರು ನಾಟಿ ದನಗಳ ಕೊಟ್ಟಿಗೆ ಇದೆ. ಮೇವಿಗಾಗಿ ಹೈಬ್ರಿಡ್ ನೇಪಿಯರ್ ಮೇವು ಹಾಗೂ ಅಜೋಲಾ  ಬೆಳೆದಿದ್ದಾರೆ. ಮನೆಗೆ ಸಾಕಾಗುವಷ್ಟು ಹಾಲು ಸಿಗುತ್ತದೆ. ತೋಟದಲ್ಲಿ ಅಲ್ಲಲ್ಲಿ ಇಟ್ಟ ಜೇನಿನ ಪೆಟ್ಟಿಗೆಯಲ್ಲಿ ಜೇನು ತಯಾರಾಗುತ್ತದೆ. ಜೇನಿನ ಪರಾಗಸ್ಪರ್ಶದಿಂದ ಅಡಿಕೆ ಇಳುವರಿ ಹೆಚ್ಚಿದೆ.ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ನಾರಾಯಣಸ್ವಾಮಿ ಹಾಗೂ ಡಾ. ಗಣಪತಿ ಅವರಿಂದ ಆಗಾಗ ಮಾಹಿತಿ ಪಡೆದು ಅನುಸರಿಸುತ್ತಾರೆ. ನೌಕರಿ ಹಾಗೂ ಕೃಷಿ ಜೀವನವನ್ನು ತಾಳೆಹಾಕುತ್ತಾ `ನೌಕರಿ ಮಾಡೋರ ಬಾಳು ಅಂಗಡಿ ಅಕ್ಕಿ ಚೊಂಗಡಿ ಬ್ಯಾಳಿ ಇದ್ದಂಗ. ಬರೀ ಹೊಂದಾಣಿಕೆ ಜೀವನ. ಕೃಷಿಯಲ್ಲಿ ತೃಪ್ತಿ ಇದೆ, ಖರ್ಚು-ವೆಚ್ಚಗಳನ್ನು ಮೀರಿದ ಆದಾಯವೂ ಇದೆ~ ಎನ್ನುವಾಗ ಯಶೋದಮ್ಮ ಭಾವುಕರಾಗುತ್ತಾರೆ.ತಮ್ಮ ತೋಟಕ್ಕೆ ಬಂದವರನ್ನು ಉಪಚರಿಸುವ ಜೊತೆಗೆ ಬರಿಗೈಲಿ ಎಂದೂ ಕಳಿಸಿಲ್ಲ. ಹಣ್ಣು, ತರಕಾರಿ, ಸೊಪ್ಪು ಇತ್ಯಾದಿಗಳನ್ನು ಕೊಟ್ಟು ಮುಗುಳ್ನಗೆಯಿಂದ ಬೀಳ್ಕೊಡುತ್ತಾರೆ. ಅವರ ಸಂಪರ್ಕ ಸಂಖ್ಯೆ 87623 93752 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry