ಗುರುವಾರ , ಜೂನ್ 24, 2021
29 °C

ಯಾದಗಿರಿಗೆ ರೈಲು ಸೌಲಭ್ಯ: ಈಡೇರದ ಬೇಡಿಕೆ

ಚಿದಂಬರಪ್ರಸಾದ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿಗೆ ರೈಲು ಸೌಲಭ್ಯ: ಈಡೇರದ ಬೇಡಿಕೆ

ಯಾದಗಿರಿ: ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿ ಅತ್ಯಂತ ಪ್ರಮುಖ ರೈಲು ನಿಲ್ದಾಣ ಯಾದಗಿರಿ. ಕಳೆದ ಹಲವಾರು ವರ್ಷಗಳಿಂದ ರೈಲು ಸೌಲಭ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಡಗಳು ಕೇಳಿ ಬರುತ್ತಲೇ ಇದ್ದರೂ, ಬೇಡಿಕೆಗಳ ಈಡೇರಿಕೆ ಮಾತ್ರ ಆಗುತ್ತಿಲ್ಲ. ರೈಲ್ವೆ ಬಜೆಟ್ ಬಂದಾಗಲೊಮ್ಮೆ ಈ ಭಾಗದ ಜನರ ನಿರೀಕ್ಷೆಗಳು ಗರಿಗೆದರುತ್ತವೆಯಾದರೂ, ಅಷ್ಟೇ ವೇಗದಲ್ಲಿ ಹುಸಿಯಾಗಿ ಬಿಡುತ್ತಿವೆ.ಮುಂಬೈ, ಬೆಂಗಳೂರು, ದೆಹಲಿ, ಚೆನ್ನೈ, ಕೊಲ್ಹಾಪುರ, ಹೈದರಾಬಾದ್, ಸೇರಿದಂತೆ ದೇಶದ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಯಾದಗಿರಿಯ ಮೂಲಕ ಹಾದು ಹೋಗುತ್ತಿವೆ. ಆದರೆ ಬಹುತೇಕ ರೈಲುಗಳು ನಿಲುಗಡೆ ಆಗದೇ ಇರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಮಾರ್ಗದಲ್ಲಿ ಹೊಸ ರೈಲು ಸೇವೆ ಆರಂಭಿಸುವಂತೆ ಮಾಡಿರುವ ಒತ್ತಾಯಗಳು ಕಾರ್ಯರೂಪಕ್ಕೆ ಬರುತ್ತಲೇ ಇಲ್ಲ.ಜಿಲ್ಲೆಯಾಗಿ 3 ವರ್ಷ ಕಳೆಯುತ್ತ ಬಂದ್ದಿದ್ದರೂ, ಯಾದಗಿರಿಯ ರೈಲು ನಿಲ್ದಾಣದಲ್ಲಿ ಇನ್ನೂ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಆಗುತ್ತಿಲ್ಲ. ಪ್ರಮುಖವಾಗಿ ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಗೋರಖಪೂರ ಎಕ್ಸ್‌ಪ್ರೆಸ್, ಶಿರಡಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ರೈಲುಗಳ ನಿಲುಗಡೆ ಆಗಬೇಕಾಗಿದೆ.

ಕೆಲವೇ ಕೆಲವು ರೈಲುಗಳು ನಿಲುಗಡೆ ಆಗುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದ್ದು, ಇದರಿಂದ ರೈಲು ಪ್ರಯಾಣ ಮಾಡುವುದೇ ದುಸ್ತರವಾಗಿ ಪರಿಣಮಿಸುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ನಿಲುಗಡೆ ಆದಲ್ಲಿ, ಸಾಕಷ್ಟು ಆದಾಯವೂ ಬರಲಿದ್ದು, ಜೊತೆಗೆ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಟ್ಟಂತಾಗುತ್ತದೆ.ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಗುಲ್ಬರ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ಸೇವೆ ಪ್ರಾರಂಭ ಆಗಬೇಕಾಗಿದೆ. ರಾಯಚೂರು-ಹೈದರಾಬಾದ್ ಮಧ್ಯೆ ಪ್ಯಾಸೆಂಜರ್ ರೈಲು, ಗುಲ್ಬರ್ಗ-ರಾಯಚೂರು ಮಧ್ಯೆ ಇಂಟರ್‌ಸಿಟಿ ರೈಲು ಆರಂಭಿಸಬೇಕು. ಇದರಿಂದ ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಲು ಅನುಕೂಲ ಆಗಲಿದೆ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.

ದಟ್ಟಣೆ ಹೆಚ್ಚು: ಯಾದಗಿರಿಯಿಂದ ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರಿನಂತಹ ಮಹಾನಗರಗಳಿಗೆ ಜನರು ಗುಳೆ ಹೋಗುತ್ತಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇಲ್ಲದೇ ಇರುವುದರಿಂದ ಯಾದಗಿರಿ ತಾಲ್ಲೂಕಿನ ಬಹುದೊಡ್ಡ ಸಂಖ್ಯೆಯ ಕೂಲಿಕಾರರು, ಕೃಷಿಕರು ದೊಡ್ಡ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇಂತಹ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಇಂಟರ್ ಸಿಟಿ ಹಾಗೂ ಇತರ ರೈಲುಗಳ ನಿಲುಗಡೆ ಅತ್ಯವಶ್ಯಕವಾಗಿದೆ.ಆಲಮಟ್ಟಿ ಮಾರ್ಗಕ್ಕೆ ಭೂಸ್ವಾಧೀನ: ಯಾದಗಿರಿಯಿಂದ ಸುಲಭವಾಗಿ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಯಾದಗಿರಿ-ಆಲಮಟ್ಟಿ. ಈಗಾಗಲೇ ಈ ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಭೂಸ್ವಾಧೀನಕ್ಕೆ ಅನುದಾನ ಒದಗಿಸುವ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಮನೆ ಮಾಡಿದೆ.ಯಾದಗಿರಿ-ಆಲಮಟ್ಟಿ ರೈಲು ಮಾರ್ಗ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. ಈ ಹೊಸ ಮಾರ್ಗದಿಂದ ಹುಬ್ಬಳ್ಳಿ, ಬೆಳಗಾವಿಗೆ ಸುಲಭವಾಗಿ ಪ್ರಯಾಣ  ಬೆಳೆಸಲು ಅನಕೂಲವಾಗುತ್ತದೆ. ಯಾದಗಿರಿಯಿಂದ ಸುರಪುರ, ಹುಣಸಗಿ, ತಾಳಿಕೋಟಿ, ಮುದ್ದೇಬಿಹಾಳ ಮೂಲಕ ಆಲಮಟ್ಟಿ ಸೇರಲಿದ್ದು, ಈ ಭಾಗದ ಜನರು ಹುಬ್ಬಳ್ಳಿಗೆ ತೆರಳಲು ಅನುಕೂಲವಾಗಲಿದೆ ಎಂದು ಯಾದಗಿರಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಆವಂತಿ ಹೇಳುತ್ತಾರೆ.ಕಳೆದ ಬಜೆಟ್‌ನಲ್ಲಿ ಈ ಮಾರ್ಗದ ಸಮೀಕ್ಷೆಗೆ ಅನುದಾನ ಒದಗಿಸಲಾಗಿತ್ತು. ಅದರಂತೆ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡು ವರದಿಯನ್ನು ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಒಪ್ಪಿಗೆ ನೀಡಿ ಅನುದಾನ ಒದಗಿಸಬೇಕು ಎಂದು ಆವಂತಿ ಆಗ್ರಹಿಸುತ್ತಾರೆ.ಈ ಮಾರ್ಗ ಪ್ರಾರಂಭವಾದಲ್ಲಿ ರಾಯಚೂರು, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ಜನರು ಸುತ್ತಿ ಬಳಸಿ ಪ್ರಯಾಣಿಸುವುದು ತಪ್ಪುತ್ತದೆ. ಅಲ್ಲದೇ ಸಾಕಷ್ಟು ಸಮಯವೂ ಉಳಿತಾಯ ಆಗಲಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಮಧ್ಯೆ ರೈಲ್ವೆ ಸಂಪರ್ಕ ಒದಗಿಸಿದಂತಾಗಲಿದ್ದು, ವಾಣಿಜ್ಯ ವಹಿವಾಟಿಗೂ ಉತ್ತೇಜನ ಸಿಗಲಿದೆ ಎಂದು ಹೇಳುತ್ತಾರೆ.ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಲು ಇನ್ನೂ ಹೆಚ್ಚಿನ ರೈಲುಗಳನ್ನು ನಿಲ್ಲಿಸುವ ಅವಶ್ಯಕತೆಯಿದೆ. ಈ ಬಗ್ಗೆ ಅನೇಕ ಬಾರಿ ಗುಂತಕಲ್ ವಿಭಾಗದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ಬಾರಿಯ ರೈಲ್ವೆ ಮುಂಗಡ ಪತ್ರದಲ್ಲಿ ಈ ಭಾಗದ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಈಡೇರಲಿವೆ ಎಂಬುದನ್ನು ಕಾತರದಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ ಆವಂತಿ.ಯಾದಗಿರಿ ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯಿಂದ ನಡೆಸಿದ  ಹೋರಾಟದ ಫಲವಾಗಿ ಇತ್ತೀಚೆಗಷ್ಟೇ ಗರೀಬ್‌ರಥ ರೈಲು ನಿಲುಗಡೆ ಆಗುತ್ತಿದೆ. ಇದು ಹೋರಾಟಕ್ಕೆ ಸಂದ ಮೊದಲ ಜಯ. ಇನ್ನೂ ಹಲವಾರು ರೈಲುಗಳು ಇಲ್ಲಿ ನಿಲುಗಡೆ ಆಗಬೇಕು. ಹೈದರಾಬಾದ್‌ನಿಂದ ಕೊಲ್ಹಾಪುರಕ್ಕೆ ತೆರಳುತ್ತಿದ್ದ ರಾಯಲ್‌ಸೀಮಾ ಎಕ್ಸ್‌ಪ್ರೆಸ್ ರೈಲನ್ನು ಮೊದಲಿನ ವೇಳಾಪಟ್ಟಿಯಲ್ಲಿ ಸಂಚರಿಸುವಂತೆ ಮಾಡಬೇಕು. ಯಾದಗಿರಿ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸಬೇಕಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳೆಯರಿಗೆ ವಿಶ್ರಾಂತಿ ಗೃಹ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಹೋರಾಟ ಸಮಿತಿ ಸಂಚಾಲಕಿ ನಾಗರತ್ನಾ ಕುಪ್ಪಿ.ಯಾದಗಿರಿ-ಆಲಮಟ್ಟಿ ರೈಲ್ವೆ ಮಾರ್ಗಕ್ಕೆ ಈ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಬೇಕು. ಕೇವಲ 170 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ನಿರ್ಲಕ್ಷ್ಯ ಸಲ್ಲದು. ಯಾದಗಿರಿ ಜಿಲ್ಲೆಯ ನಾರಾಯಣಪೇಟ್ ರೋಡ ರೈಲ್ವೆ ನಿಲ್ದಾಣ ಎಂಬ ಹೆಸರನ್ನು ತೆಗೆದು, ಸೈದಾಪೂರ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕು. ಯಾದಗಿರಿಯಲ್ಲಿ ಎಲ್ಲ ರೈಲ್ವೆಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ರಾಯಲ್ ಸೀಮಾ ಎಕ್ಸ್‌ಪ್ರೆಸ್ ಮೊದಲಿನ ವೇಳಾಪಟ್ಟಿಯಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ಆಗ್ರಹಿಸುತ್ತಾರೆ.ಗುಲಬರ್ಗಾ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು. ಇರುವ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಜೋಡಿಸಬೇಕು. ಯಾದಗಿರಿ- ಹೈದರಾಬಾದ್ ರೈಲು ಸೇವೆ ಆರಂಭಿಸಬೇಕು. ವಾಡಿ-ಗದಗ ರೈಲ್ವೆ ಮಾರ್ಗ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

ಈ ಭಾಗದವರೇ ಆದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಈ ಜಿಲ್ಲೆಯ ಬಹುತೇಕ ಭಾಗವನ್ನು ಪ್ರತಿನಿಧಿಸುತ್ತಿರುವ ಸಂಸದ ಸಣ್ಣಫಕೀರಪ್ಪ,ಹಾಗೂ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಹೆಚ್ಚಿನ ರೈಲ್ವೆ ಸೌಲಭ್ಯಕ್ಕಾಗಿ ಒತ್ತಡ ತರಬೇಕಾಗಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳಿಗೆ, ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಬೇಕಾಗಿದೆ ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.ಮುಖ್ಯಾಂಶಗಳು


*ಯಾದಗಿರಿ-ಆಲಮಟ್ಟಿ ರೈಲು ಮಾರ್ಗ ಭೂಸ್ವಾಧೀನ.

*ಗುಲ್ಬರ್ಗ-ಬೆಂಗಳೂರು ಇಂಟರ್‌ಸಿಟಿ ರೈಲು.

*ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯ.

*ಎಲ್ಲ ರೈಲುಗಳ ನಿಲುಗಡೆ.

*ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರೈಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.