ಯಾದಗಿರಿ:ತಲೆ ಎತ್ತದ ಉದ್ಯಮ

7

ಯಾದಗಿರಿ:ತಲೆ ಎತ್ತದ ಉದ್ಯಮ

Published:
Updated:
ಯಾದಗಿರಿ:ತಲೆ ಎತ್ತದ ಉದ್ಯಮ

ಯಾದಗಿರಿ: ಕೃಷ್ಣಾ, ಭೀಮಾ ನದಿಗಳಿಂದಾಗಿ ಸಮೃದ್ಧಿ ಇದೆ. ದೇಶದ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೌಲಭ್ಯವೂ ಇಲ್ಲಿದೆ. ಅತ್ಯುತ್ತಮ ರಸ್ತೆ ಸಂಪರ್ಕವೂ ಲಭ್ಯವಾಗಿದೆ. ಸುಮಾರು 180 ಕಿ.ಮೀ. ದೂರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಮಾನವ ಸಂಪನ್ಮೂಲವೂ ಹೇರಳವಾಗಿದೆ. ಮೇಲಾಗಿ ಸಣ್ಣ ಕೈಗಾರಿಕೆಗಳ ಸಚಿವರ ತವರು ಜಿಲ್ಲೆಯೂ ಹೌದು. ಆದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗುತ್ತಿಲ್ಲ.ಕೈಗಾರಿಕೆಗಳಿಗೆ ಹೇಳಿ ಮಾಡಿಸಿದಂತಿರುವ ಯಾದಗಿರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಕಂಪೆನಿಗಳು ಸಿದ್ಧವಿದ್ದರೂ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿಂದೇಟು ಹಾಕುತ್ತಿವೆ. 2010 ರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾರತ ಫೋರ್ಜ್ ಲಿಮಿಟೆಡ್‌ನ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಹಾಗೂ 10 ಕಂಪೆನಿಗಳಿಂದ ಔಷಧಿ ತಯಾರಿಕೆ ಉದ್ಯಮಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.ಈ ಕೈಗಾರಿಕೆಗಳ ಸ್ಥಾಪನೆಗೆ ತಾಲ್ಲೂಕಿನ ಕಡೇಚೂರು ಬಳಿ ಸುಮಾರು 3300 ಎಕರೆ ಜಮೀನನ್ನು ಗುರುತಿಸಲಾಗಿದೆ. ಬೆಂಗಳೂರು, ಮತ್ತಿತರ ನಗರಗಳಲ್ಲಿ ಹೇಳಿದಷ್ಟು ಬೆಲೆ ನೀಡಿ, ಜಮೀನು ಖರೀದಿಸುವ ಸರ್ಕಾರ, ಇಲ್ಲಿನ ರೈತರಿಗೆ ಎಕರೆಗೆ ರೂ 8-10 ಲಕ್ಷ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಈ ಯೋಜನೆಗಳು ವಿಳಂಬವಾಗುತ್ತಿವೆ.ಸದ್ಯಕ್ಕೆ ಜಿಲ್ಲೆಯಲ್ಲಿ ಮೂರು ಕೈಗಾರಿಕೆ ವಸಾಹತುಗಳಿದ್ದು, 2,665 ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ. ಶಹಾಪುರ ತಾಲ್ಲೂಕಿನ ತುಮಕೂರಿನಲ್ಲಿ ಆರಂಭವಾಗಿರುವ `ಕೋರ್ ಗ್ರೀನ್~ ಸಕ್ಕರೆ ಕಾರ್ಖಾನೆ ಹೊರತುಪಡಿಸಿದರೆ, ರೈಸ್ ಮಿಲ್ ಹಾಗೂ ದಾಲ್ ಮಿಲ್‌ಗಳೇ ದೊಡ್ಡ ಕೈಗಾರಿಕಾ ಕೇಂದ್ರಗಳು ಎನ್ನಬಹುದು.ಆಹಾರ ಸಂಸ್ಕರಣೆಗೆ ಅವಕಾಶ:

ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಇರುವುದರಿಂದ ಈ ಮೊದಲು ಬತ್ತವನ್ನೇ ಅವಲಂಬಿಸಿದ್ದ ರೈತರು, ಇದೀಗ ಹತ್ತಿ ಬೆಳೆಯಲು ಆರಂಭಿಸಿದ್ದಾರೆ.ಈ ಮೊದಲು ಯಾದಗಿರಿಯಲ್ಲಿ ಹತ್ತಿ ಉದ್ಯಮ ಸಾಕಷ್ಟು ಉತ್ತುಂಗದಲ್ಲಿತ್ತು. 60ಕ್ಕೂ ಹೆಚ್ಚು ಜಿನ್ನಿಂಗ್ ಹಾಗೂ 4 ಪ್ರೆಸ್ಸಿಂಗ್ ಕಾರ್ಖಾನೆಗಳು ಇದ್ದವು. ಆದರೆ, ನೀರಾವರಿ ಸೌಲಭ್ಯದಿಂದಾಗಿ ರೈತರು ಬತ್ತ ಬೆಳೆಯಲು ಆರಂಭಿಸಿದರು. ಹೀಗಾಗಿ ಹತ್ತಿ ಉತ್ಪಾದನೆ ಕುಂಠಿತಗೊಂಡಿತು.  1980 ರ ನಂತರ ಈ ಮಿಲ್‌ಗಳು ಬಾಗಿಲು ಮುಚ್ಚತೊಡಗಿದವು. ಕೆಲವು ಫ್ಯಾಕ್ಟರಿಗಳು ಬೇರೆಡೆ ಸ್ಥಳಾಂತರಗೊಂಡವು.ಇದರ ಜೊತೆಗೆ ಜಿಲ್ಲೆಯಲ್ಲಿ ತೊಗರಿ, ಶೇಂಗಾ, ಹೆಸರು, ಜೋಳ ಹಾಗೂ ಶಹಾಪುರ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಇದರಿಂದ ಹತ್ತಿ ಹಾಗೂ ಆಹಾರ ಸಂಸ್ಕರಣೆ ಉದ್ಯಮಗಳಿಗೆ ವಿಪುಲ ಅವಕಾಶಗಳಿವೆ. ಖನಿಜ ಸಂಪತ್ತಿಗೂ ಇಲ್ಲಿ ಕೊರತೆ ಇಲ್ಲ.   ಮ್ಯಾಂಗನೀಜ್, ಲೈಮ್ ಸ್ಟೋನ್, ಬಾಕ್ಸೈಟ್ ಹಾಗೂ ಕಟ್ಟಡ ನಿರ್ಮಾಣದ ಕಲ್ಲುಗಳು ಜಿಲ್ಲೆಯಲ್ಲಿ ದೊರೆಯುತ್ತವೆ.ಜವಳಿ ಉದ್ಯಮಕ್ಕೆ ಚಿಂತನೆ: ಸಣ್ಣ ಕೈಗಾರಿಕೆ ಸಚಿವ ನರಸಿಂಹ ನಾಯಕ (ರಾಜುಗೌಡ), ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಸುರಪುರ, ಯಾದಗಿರಿಯಲ್ಲಿ ಜವಳಿ ಉದ್ಯಮ ಆರಂಭಿಸುವ ಚಿಂತನೆ ನಡೆಸಿರುವುದಾಗಿ ತಿಳಿಸುತ್ತಾರೆ.ಸುರಪುರ ಹಾಗೂ ಯಾದಗಿರಿಯಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಜವಳಿ ಉದ್ಯಮಗಳು ತಲೆ ಎತ್ತಲಿವೆ. ಅಲ್ಲದೇ ಸುರಪುರ ಭಾಗದಲ್ಲಿ ಒಂದೆರಡು ಸಿಮೆಂಟ್ ಕಾರ್ಖಾನೆಗಳು, ಕಡೇಚೂರಿನಲ್ಲಿ ಪೆಟ್ ಬಾಟಲ್ ತಯಾರಿಕೆ ಘಟಕ ಪ್ರಾರಂಭವಾಗುವ ಹಂತದಲ್ಲಿವೆ ಎಂದು ಹೇಳುತ್ತಾರೆ.ಇಚ್ಛಾಶಕ್ತಿಯ ಕೊರತೆ:ಇಡೀ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆ ಕೈಗಾರಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಕೈಗಾರಿಕೆಗಳಿಗೆ ಅಗತ್ಯವಾಗಿರುವ ನೀರು, ರಸ್ತೆ, ರೈಲು ಸಂಪರ್ಕ, ವಿಮಾನ ನಿಲ್ದಾಣ, ಕೆಲಸ ಮಾಡಲು ಜನ ಹೀಗೆ ಹತ್ತು ಹಲವು ಸೌಕರ್ಯಗಳಿವೆ. ಆದರೆ, ಇದನ್ನು ಬಳಕೆ ಮಾಡಿಕೊಳ್ಳುವ ಇಚ್ಛಾಶಕ್ತಿ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲ ಎನ್ನುವುದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಆವಂತಿ ಅವರ ಆರೋಪ.ಜವಳಿ, ಆಹಾರ ಸಂಸ್ಕರಣೆ, ವಿದ್ಯುತ್ ಸ್ಥಾವರ, ಗಾಳಿ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಬಹುತೇಕ ಕಚ್ಚಾವಸ್ತು ಇದೇ ಪ್ರದೇಶದಲ್ಲಿ ಲಭ್ಯವಾಗಿದ್ದು, ಇಲ್ಲಿನ ರೈತರಿಗೆ ಒಳ್ಳೆಯ ಬೆಲೆ, ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ. ಈ ಕುರಿತು ಹಲವಾರು ಬಾರಿ ಚರ್ಚಿಸಿದರೂ, ಪ್ರಯೋಜನ ಮಾತ್ರ ಆಗುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry