ಯಾದಗಿರಿ: ಒಂದೆಡೆ ಬರ; ಇನ್ನೊಂದೆಡೆ ನೆರೆ

7

ಯಾದಗಿರಿ: ಒಂದೆಡೆ ಬರ; ಇನ್ನೊಂದೆಡೆ ನೆರೆ

Published:
Updated:
ಯಾದಗಿರಿ: ಒಂದೆಡೆ ಬರ; ಇನ್ನೊಂದೆಡೆ ನೆರೆ

ಯಾದಗಿರಿ:  ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದ ಸುರಪುರ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ಭರ್ಜರಿ ನೀರು ಹರಿಯುತ್ತಿದೆ. ಆದರೆ  ಯಾದಗಿರಿ ತಾಲ್ಲೂಕು ಹಾಗೂ ಗುರುಮಠಕಲ್ ವ್ಯಾಪ್ತಿಯಲ್ಲಿ ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಇಲ್ಲಿ ಒಂದೆಡೆ ನದಿ ಭರಪೂರ ಹರಿಯುತ್ತಿದ್ದರೆ, ಇನ್ನೊಂದೆಡೆ ನೀರಿಲ್ಲದೆ ರೈತರು ಆತಂಕದಲ್ಲಿದ್ದಾರೆ.ಮಹಾರಾಷ್ಟ್ರದಲ್ಲಿ ಒಳ್ಳೆಯ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಅದೇ ರೀತಿ ಭೀಮಾ ನದಿಗೂ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಸದ್ಯಕ್ಕೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗುತ್ತಿದೆ.ಭೀಮಾ ನದಿಯಲ್ಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಯಾದಗಿರಿಯ ಬಳಿ ಭೀಮಾ ಬ್ಯಾರೇಜ್‌ನಿಂದ ನೀರು ಬಿಡಲಾಗುತ್ತಿದೆ.ಪಕ್ಕದಲ್ಲಿ ಬರದ ಛಾಯೆ:

ಜಿಲ್ಲೆಯ ಒಂದು ಭಾಗದಲ್ಲಿ ಪ್ರವಾಹ ಆತಂಕ ಎದುರಾಗುತ್ತಿದ್ದರೆ, ಇನ್ನೊಂದೆಡೆ ಬರದ ಭೀತಿ ಉಂಟಾಗಿದೆ. ಯಾದಗಿರಿ ತಾಲ್ಲೂಕು ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ನದಿಗಳು ಇಲ್ಲದೇ ಇರುವುದರಿಂದ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.ಯಾದಗಿರಿ ತಾಲ್ಲೂಕಿನ ಬಹುತೇಕ ರೈತರು ನೀರಾವರಿಗಾಗಿ ಕೆರೆಗಳನ್ನೇ ಅವಲಂಬಿಸಿದ್ದು, ಇದುವರೆಗೆ ಕೆರೆ ಹಾಗೂ ಹಳ್ಳಗಳು ತುಂಬಿಲ್ಲ. ಸಾಕಷ್ಟು ಪ್ರಮಾಣದ ಮಳೆ ಆಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಜಿಲ್ಲೆಯಲ್ಲಿ ವಾಡಿಕೆಗಿಂತ 108 ಮಿ.ಮೀ. ಕಡಿಮೆ ಮಳೆಯಾಗಿದೆ. ಕಳೆದ 15 ದಿನಗಳಿಂದ ಜಿಟಿಜಿಟಿ ಮಳೆ ಬರುತ್ತಿದ್ದು, ಇದರಿಂದ ಕೆರೆ, ಹಳ್ಳಗಳು ತುಂಬುವುದು ಸಾಧ್ಯವಾಗಿಲ್ಲ. ನಗರದಲ್ಲಿರುವ ದೊಡ್ಡ ಕೆರೆ ಹಾಗೂ ಸಣ್ಣ ಕೆರೆಗಳಲ್ಲೂ ನೀರಿನ ಸಂಗ್ರಹವಾಗಿಲ್ಲ.ಸದ್ಯಕ್ಕೆ ಸುರಿಯುತ್ತಿರುವ ಮಳೆಯಿಂದ ಬೆಳೆಗಳಿಗೆ ನೀರು ಸಿಗುತ್ತಿದೆ. ಆದರೆ ಮಳೆ ನಿಂತ ಮೇಲೆ ಎಲ್ಲಿಂದ ನೀರು ಹರಿಸಬೇಕು ಎನ್ನುವ ಚಿಂತೆ ಗುರುಮಠಕಲ್‌ನ ರೈತರದ್ದು.`ಈಗೇನೋ ಮಳಿ ಆಗಾಕತ್ತೈತಿ. ಇನ್ನೊಂದ 10 ದಿನಾ ಮಳಿ ಬಿದ್ದೀತು. ಆದ್ರ ಇನ್ನೂ ಕೆರಿ, ಹಳ್ಳ ತುಂಬಿಲ್ಲ. ಹೊಲದಾಗ ಬೆಳದ ಬೆಳಿಗೆ ಈಗ ನೀರ ಸಾಕಾಗತೈತಿ. ಮಳಿ ನಿಂತ ಮ್ಯಾಲ ಎಲ್ಲಿಂದ ನೀರ ಕೊಡಬೇಕು ಅನ್ನೋದ ದೊಡ್ಡ ಚಿಂತಿ ಆಗೇತಿ. ನಮ್ಮ ಕಡೆ ಹೊಳಿನೂ ಹರದಿಲ್ಲ. ಕೆರಿ, ಹಳ್ಳ ತುಂಬಿದ್ರ ಮಾತ್ರ ನಮಗ ವರ್ಷ ಪೂರ್ತಿ ನೀರ ಸಿಗತೈತ್ರಿ' ಎನ್ನುತ್ತಾರೆ ಹಳಿಗೇರಾದ ರೈತರ ದೇವಿಂದ್ರಪ್ಪ.ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ರೈತರು ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಎರಡೂ ಬೆಳೆಗಳಿಗೆ ನೀರು ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ ಯಾದಗಿರಿ ತಾಲ್ಲೂಕಿನ ರೈತರು ಮಾತ್ರ `ಒಂದು ಬೆಳೆ ಬಂದರೂ ಸಾಕು' ಎನ್ನುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry