ಭಾನುವಾರ, ಮೇ 16, 2021
28 °C

ಯಾದಗಿರಿ: ಗಂಜ್ ಪ್ರಯಾಣಿಕರಿಗಿಲ್ಲ ಬಸ್

ಚಿದಂಬರಪ್ರಸಾದ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: “ಜಿಲ್ಲಾ ಆಗಿ ಎರಡ ವರ್ಷದ ಮ್ಯಾಲ ಆತ ನೋಡ್ರಿ. ಇನ್ನೂ ಮಟಾ ಈ ಊರಾಗ ಅಡ್ಡಾಡಾಕ ಬಸ್ ವ್ಯವಸ್ಥಾನ ಇಲ್ಲ. ಏನಿದ್ರು ಅಟೋದಾಗ ಹೋಗಬೇಕ್ರಿ. ಗಾಂಧಿ ಚೌಕಿಗೆ ಒಂದು ಬಸ್ ಬಿಡ್ತಾರ ನೋಡ್ರಿ. ಅದನ್ನು ಬಿಟ್ಟ ಮತ್ತೆಲ್ಲೂ ಸಿಟಿ ಬಸ್ ಇಲ್ದಂಗ ಆಗೇತಿ. ಗಂಜ್‌ಗೆ ಹೋಗಬೇಕಾದ್ರ ಪರಿಸ್ಥಿತಿ ಭಾಳ ಗಂಭೀರ ಐತ್ರಿ. ಅಟೋ ಸಲ್ವಾಗಿ ಕಾಯಬೇಕು.ಯಾಕಂದ್ರ ಅಲ್ಲಿಗೆ ಹೋಗಾಕ ಸಿಟಿ ಬಸ್ ಇಲ್ರಿ”ಜಿಲ್ಲಾ ಕೇಂದ್ರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಇಳಿದು, ಗಂಜ್ (ಎಪಿಎಂಸಿ)ಗೆ ಹೋಗಬೇಕಾದರೆ, ಅಟೋಗಳನ್ನು ಹುಡುಕುತ್ತ ನಿಲ್ಲುವ ಪ್ರತಿಯೊಬ್ಬರೂ ಹೇಳುವ ಮಾತಿದು. ಅದರಲ್ಲಿಯೂ ಹಳ್ಳಿಗಳಿಂದ ಬರುವ ರೈತರು, ಎಪಿಎಂಸಿಗೆ ಹೋಗಬೇಕಾದರೆ, ಅಟೋ ರಿಕ್ಷಾಗಳನ್ನೇ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.ಜಿಲ್ಲೆಯಾಗಿ ಎರಡು ವರ್ಷ ಪೂರ್ಣವಾಗಿದೆ. ನಗರದ ಗಾಂಧಿ ವೃತ್ತವನ್ನು ಹೊರತುಪಡಿಸಿ, ಬೇರೆ ಯಾವುದೇ ಸ್ಥಳಗಳಿಗೆ ಸಿಟಿ ಬಸ್ ಸೌಲಭ್ಯ ಇಲ್ಲದಾಗಿದೆ. ನಿತ್ಯವೂ ರೈಲು ಬರುವ ವೇಳೆಗೆ ಸರಿಯಾಗಿ ಬಸ್‌ನಿಲ್ದಾಣದಿಂದ ಹೊರಡುವ ಸಿಟಿ ಬಸ್, ರೈಲು ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ನೇರವಾಗಿ ಗಾಂಧಿ ವೃತ್ತಕ್ಕೆ ಹೋಗುತ್ತದೆ. ಅಲ್ಲಿಂದ ಮತ್ತೆ ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಬಸ್‌ನಿಲ್ದಾಣಕ್ಕೆ ಬರುತ್ತದೆ. ಇದೊಂದು ಸಿಟಿ ಬಸ್ ಬಿಟ್ಟರೇ, ಬೇರೆ ಯಾವುದೇ ಬಡಾವಣೆಗಳಿಗೆ ಬಸ್ ಸೌಲಭ್ಯವೇ ಇಲ್ಲದಾಗಿದೆ.ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಲೇಔಟ್‌ಗಳು ತಲೆ ಎತ್ತುತ್ತಿವೆ. ನಗರದ ಜಂಜಾಟದಿಂದ ದೂರವಿರಲು, ಜನರು ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಕೆಲವೆಡೆ ಮನೆ ಕಟ್ಟಿಕೊಂಡರೂ ಹೋಗಲು ಹಿಂದೇಟು ಹಾಕುವಂತಾಗಿದೆ. ಬಸ್ ಸೌಕರ್ಯ ಇಲ್ಲದೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.ನಗರದ ಹೊಸಳ್ಳಿಯ ರಸ್ತೆಯಲ್ಲಿ ಗೃಹ ಮಂಡಳಿಯಿಂದ ನಿರ್ಮಿಸಲಾದ ನೂರಾರು ಮನೆಗಳು ಸಿದ್ಧವಾಗಿದ್ದು, ಅರ್ಹರಿಗೆ ಹಂಚಿಕೆಯೂ ಆಗಿವೆ. ಆದರೆ ಇದುವರೆಗೆ ಬಹುತೇಕ ಮನೆಗಳು ಖಾಲಿಯಾಗಿಯೇ ಉಳಿದಿವೆ. ನಗರದ ಕೇಂದ್ರ ಸ್ಥಾನದಿಂದ ಸುಮಾರು ಮೂರ‌್ನಾಲ್ಕು ಕಿ.ಮೀ. ದೂರವಿರುವ ಈ ಮನೆಗಳಿಗೆ ಹೋಗಬೇಕಾದರೆ, ಹರಸಾಹಸವನ್ನೇ ಮಾಡಬೇಕಾದ ಸ್ಥಿತಿ ಇದೆ. ಎಲ್ಲೆಡೆಯೂ ಕೇವಲ ಅಟೋಗಳನ್ನೇ ಅವಲಂಬಿಸುವಂತಾಗಿದೆ.ನಗರದ ಪ್ರಮುಖ ಸ್ಥಳವಾದ ಗಂಜ್ ಪ್ರದೇಶದಲ್ಲಿ ಅನೇಕ ಮನೆಗಳು ನಿರ್ಮಾಣವಾಗಿದ್ದು, ಹಲವಾರು ಮಳಿಗೆಗಳು, ಆಸ್ಪತ್ರೆಗಳೆಲ್ಲವೂ ತಲೆ ಎತ್ತಿವೆ. ಎಪಿಎಂಸಿಗೆ ಬರುವ ರೈತರದ್ದು ಒಂದು ಕತೆಯಾದರೆ, ಗಂಜ್‌ನಲ್ಲಿರುವ ತಮ್ಮ ಸಂಬಂಧಿಗಳನ್ನು ಭೇಟಿ ಮಾಡಲು ಬರುವ ಜನರ ಪರದಾಟವೂ ಕಡಿವೆುಯಾಗುತ್ತಿಲ್ಲ. ರಾತ್ರಿ ವೇಳೆ ಗಂಜ್ ಪ್ರದೇಶಕ್ಕೆ ಬರಬೇಕಾದರೆ, ಅಟೋ ರಿಕ್ಷಾಗಳ ಚಾಲಕರು ಕೇಳಿದಷ್ಟು ಹಣ ನೀಡಬೇಕಾದ ಸ್ಥಿತಿ ಇದೆ.ಸಮೀಕ್ಷೆಯ ಭರವಸೆ: ಸದ್ಯಕ್ಕೆ ಕೇಂದ್ರ ಬಸ್‌ನಿಲ್ದಾಣದಿಂದ ಗಾಂಧಿ ವೃತ್ತಕ್ಕೆ ಸಿಟಿ ಬಸ್ ಸೌಲಭ್ಯವಿದೆ. ಆದರೆ, ಇದೇ ಬಸ್ ಅನ್ನು ಗಾಂಧಿ ವೃತ್ತದಿಂದ ಚಕ್ರಕಟ್ಟಾ, ಎಪಿಎಂಸಿ ಮೂಲಕ ಓಡಿಸುವಂತೆ ಹಲವಾರು ಬಾರಿ ಒತ್ತಾಯಗಳನ್ನು ಮಾಡಲಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ಭರವಸೆ ನೀಡಿದ್ದರು. ಆದರೆ ಸಮೀಕ್ಷೆ ಎಲ್ಲಿಗೆ ಬಂತು ಎಂಬುದು ಮಾತ್ರ ನಗರದ ಜನರಿಗೆ ತಿಳಿಯುತ್ತಿಲ್ಲ.ಕೇಂದ್ರ ಬಸ್‌ನಿಲ್ದಾಣದಿಂದ ಶಾಸ್ತ್ರಿ ವೃತ್ತ, ಬಸ್ ಡಿಪೋ, ಹೊಸಳ್ಳಿ ಕ್ರಾಸ್, ಎಪಿಎಂಸಿ, ಚಕ್ರಕಟ್ಟಾ ಮೂಲಕ ಗಾಂಧಿ ವೃತ್ತ ತಲುಪಬಹುದು. ಇದೇ ಬಸ್ ಅನ್ನು ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಬಸ್‌ನಿಲ್ದಾಣದವರೆಗೆ ಓಡಿಸಬೇಕು ಎಂದು ಲಕ್ಷ್ಮಿ ಗಣೇಶ ಯುವಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತಂಬಾಕೆ ಮನವಿ ಮಾಡುತ್ತಾರೆ.ಇದರಿಂದ ಹೊಸಳ್ಳಿ ಕ್ರಾಸ್, ಗಂಜ್, ಚಕ್ರಕಟ್ಟಾಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಅಲ್ಲದೇ ಅಟೋ ರಿಕ್ಷಾಗಳಿಗಾಗಿ ಕಾಯುತ್ತ ಕುಳಿತುಕೊಳ್ಳುವ ತೊಂದರೆಯೂ ತಪ್ಪುತ್ತದೆ. ಆದರೆ ಇದುವರೆಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಗರದ ಬೆಳೆವಣಿಗೆಗೆ ಅನುಗುಣವಾಗಿ ಬಸ್ ಸಂಚಾರವನ್ನು ಒದಗಿಸಬೇಕು ಎಂದು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.