ಯಾದಗಿರಿ ನಗರಸಭೆ ಉಪಚುನಾವಣೆ: ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ

7

ಯಾದಗಿರಿ ನಗರಸಭೆ ಉಪಚುನಾವಣೆ: ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ

Published:
Updated:

ಯಾದಗಿರಿ: ನಗರಸಭೆಯ 18 ನೇ ವಾರ್ಡಿನ ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಮುಖಂಡರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಸಾಮಾನ್ಯವಾಗಿದೆ.ಇದೀಗ ನಾಮಪತ್ರ ಸಲ್ಲಿಕೆ, ಹಿಂತೆಗೆದುಕೊಳ್ಳುವ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚುನಾವಣೆಯ ವೇದಿಕೆ ಸಿದ್ಧಗೊಂಡಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಸೇರಿದಂತೆ ನಾಲ್ವರು ಕಣದಲ್ಲಿದ್ದು, ಮತದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.ನಗರಸಭೆಯ ಜೆಡಿಎಸ್ ಸದಸ್ಯ ಶಂಕರ ಸಾಗರ ನಿಧನದ ಹಿನ್ನೆಲೆಯಲ್ಲಿ 18 ನೇ ವಾರ್ಡ್‌ಗೆ ಇದೀಗ ಚುನಾವಣೆ ನಡೆಸಲಾಗುತ್ತಿದೆ. ಈಗಾಗಲೇ 9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆದಿದ್ದು, ಜೆಡಿಎಸ್‌ನಲ್ಲಿ 17 ಸದಸ್ಯರ ಪೈಕಿ 14 ಜನರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.ಆದರೆ ಬಿಜೆಪಿಯ ಯಾವೊಬ್ಬ ಸದಸ್ಯರೂ ನಗರಸಭೆಗೆ ಆಯ್ಕೆಯಾಗಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಬಸವರಾಜ ಮುದ್ನಾಳ ಅವರನ್ನು ಗೆಲ್ಲಿಸುವ ಮೂಲಕ ನಗರಸಭೆಯಲ್ಲಿ ಖಾತೆ ತೆರೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.ಇನ್ನೊಂದೆಡೆ ಜೆಡಿಎಸ್ ಕೂಡ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಚಂದ್ರಶೇಖರ ಬೀರನಾಳಕರ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್‌ನ ಮುಖಂಡರು, ಮನೆ ಮನೆಗೆ ತೆರಳಿ, ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.ಇನ್ನೊಂದೆಡೆ ಅಧ್ಯಕ್ಷ ಸ್ಥಾನವನ್ನು ಪಡೆದಿರುವ ಕಾಂಗ್ರೆಸ್ ಕೂಡ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸಿದೆ. ಅಯ್ಯಪ್ಪ ಸುಂಗಲಕರ ಅವರ ಪರವಾಗಿ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ವಾರ್ಡಿನಲ್ಲಿ ಪ್ರಚಾರ ಮಾಡುತ್ತಿದ್ದು, ಈ ಬಾರಿ ಜಯ ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.ಪರಿಣಾಮ ಇಲ್ಲ: ನಗರಸಭೆಯ 31 ಸ್ಥಾನಗಳ ಪೈಕಿ, ಈಗಾಗಲೇ ಜೆಡಿಎಸ್ 17, ಕಾಂಗ್ರೆಸ್ 9 ಹಾಗೂ ನಾಲ್ವರು ಪಕ್ಷೇತರ ಸದಸ್ಯರಿದ್ದು, ಇದೀಗ 18 ನೇ ವಾರ್ಡಿನ ಚುನಾವಣೆ ನಡೆಯಬೇಕಾಗಿದೆ.ಹೀಗಾಗಿ ಈಗ ನಡೆಯುತ್ತಿರುವ ಚುನಾವಣೆಗೆ ಅಷ್ಟೇನೂ ಮಹತ್ವ ಇಲ್ಲ. ಆದರೆ ಬಿಜೆಪಿಗೆ ಇದು ಸವಾಲಾಗಿ ಪರಿಣಮಿಸಿದ್ದು, ನಗರಸಭೆಯಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿ ಪಕ್ಷದ ಮುಖಂಡರಿದ್ದಾರೆ. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಅಧಿಕಾರ ಅನುಭವಿಸುತ್ತಿದ್ದು, ಈ ಉಪಚುನಾವಣೆಯ ಫಲಿತಾಂಶದಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿಲ್ಲ.ನಗರಸಭೆಯ ಸದಸ್ಯರ ಆಯ್ಕೆಗಾಗಿ ಬಿಜೆಪಿಯ ಮುಖಂಡರು ಕಸರತ್ತು ನಡೆಸಿದ್ದರೇ, ಅದೇ ಪಕ್ಷದ ಯುವ ಮುಖಂಡ ಮಲ್ಲಿನಾಥ ಸುಂಗಲಕರ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಬಿಜೆಪಿಗೆ ಸ್ಪಲ್ಪ ಹಿನ್ನಡೆ ಉಂಟು ಮಾಡಲಿದೆ ಎಂದು ವಾರ್ಡಿನ ಮತದಾರರು ಹೇಳುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry