ಯಾದಗಿರಿ: ಪಾಲಕರ ಮಡಿಲು ಸೇರಿದ ವೈಷ್ಣವಿ

7

ಯಾದಗಿರಿ: ಪಾಲಕರ ಮಡಿಲು ಸೇರಿದ ವೈಷ್ಣವಿ

Published:
Updated:

ಯಾದಗಿರಿ: ನಗರದ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ಎರಡೂವರೆ ವರ್ಷದ ಮಗುವಿಗೆ ಇದೀಗ ಪಾಲಕರು ಸಿಕ್ಕಿದ್ದಾರೆ. ಒಂದು ವಾರ ಅಳುತ್ತಲೇ ಕಳೆದ ವೈಷ್ಣವಿಯ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಅಮ್ಮನ ಮಡಿಲು ಸಿಕ್ಕಿದೆ. ಇದರ ಜೊತೆಗೆ ದೂರವಾಗಿದ್ದ ಅಪ್ಪ-ಅಮ್ಮನನ್ನು ಒಂದು ಮಾಡುವಲ್ಲಿಯೂ ಈ ಪ್ರಕರಣ ಯಶಸ್ವಿಯಾಗಿದೆ.ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ಮಗುವಿನ ಪಾಲಕರು ಭಾನುವಾರ ನಗರಕ್ಕೆ ಆಗಮಿಸಿದ್ದು, ತಮ್ಮ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಮೇ 20ರಂದು ಈ ಬಾಲಕಿಯನ್ನು ನಗರದ ರೈಲು ನಿಲ್ದಾಣದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಬಿಟ್ಟು ಹೋಗಿದ್ದರು. ಸ್ಥಳೀಯರಾದ ಪಾಷಾ ಎಂಬವವರಿಗೆ ಈ ಮಗುವನ್ನು ಒಪ್ಪಿಸಿದ್ದ ಅಪರಿಚಿತರು, ತಮ್ಮ ರೈಲು ಬರುತ್ತಿದೆ. ಈ ಮಗುವನ್ನು ಯಾರೋ ಬಿಟ್ಟು ಹೋಗಿದ್ದಾರೆ. ತೆಗೆದುಕೊಳ್ಳಿ ಯಾರಾದರೂ ಬಂದರೆ, ಮಗುವನ್ನು ಅವರಿಗೆ ಒಪ್ಪಿಸಿ ಎಂದು ಹೇಳಿ ಹೋಗಿದ್ದರು. ಮೂರು ದಿನಗಳಾದರೂ ಮಗುವಿನ ಪಾಲಕರು ಬರದೇ ಇದ್ದ ಮೇಲೆ ಪಾಷಾ ಈ ಮಗುವನ್ನು ಪೊಲೀಸರ ವಶಕ್ಕೆ ನೀಡಿದ್ದ. ನಂತರ ಪೊಲೀಸರು ಇಲ್ಲಿಯ ಡಾನ್ ಬಾಸ್ಕೋ ಸೇವಾ ಕೇಂದ್ರದಲ್ಲಿ ಈ ಮಗುವನ್ನು ಇರಿಸಿದ್ದರು. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗಿತ್ತು.ಇದನ್ನು ನೋಡಿದ ಮಗುವಿನ ಪಾಲಕರಾದ ಬೆಂಗಳೂರಿನ ವೆಂಕಟೇಶ ಹಾಗೂ ಅಮ್ಮು ಭಾನುವಾರ ನಗರಕ್ಕೆ ಆಗಮಿಸಿ, ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮೇ 19ರಂದೇ ಬೆಂಗಳೂರಿನ ಕಾಡುಗೊಂಡನಹಳ್ಳಿಯ ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ ವೈಷ್ಣವಿ ನಾಪತ್ತೆಯಾಗಿದ್ದಳು. ಗಡ್ಡಧಾರಿ ವ್ಯಕ್ತಿಯೊಬ್ಬ ಮಗುವನ್ನು ಕರೆದುಕೊಂಡು ಹೋಗಿದ್ದಾಗಿ ಬಾಲಕಿ ಜೊತೆ ಆಟವಾಡುತ್ತಿದ್ದ ಮಕ್ಕಳು ತಿಳಿಸಿದ್ದರು.ಈ ಕುರಿತು ಬಾಲಕಿಯ ತಾಯಿ ಅಮ್ಮು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಂದೇ ರಾತ್ರಿ ದೂರು ನೀಡಿದ್ದರು.

ಒಂದಾದ ತಂದೆ-ತಾಯಿ: ಮಗು ಪತ್ತೆಯಾಗಿರುವ ಪ್ರಕರಣ ಹಲವಾರು ಹೊಸ ವಿಷಯಗಳನ್ನು ಹೊರಹಾಕಿದೆ. ಭಾನುವಾರ ವೈಷ್ಣವಿಯ ತಂದೆ ಹಾಗೂ ತಾಯಿ ಪ್ರತ್ಯೇಕವಾಗಿ ಯಾದಗಿರಿಗೆ ಬಂದಿದ್ದು, ಇದರಿಂದ ಪೊಲೀಸ್ ಅಧಿಕಾರಿಗಳಲ್ಲಿ ಸಂಶಯ ಮೂಡಿತ್ತು.ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಸಿಪಿಐ ಶಂಕರಗೌಡ ಪಾಟೀಲ, ಈ ಕುರಿತು ಮಗುವಿನ ತಂದೆ-ತಾಯಿಯನ್ನು ವಿಚಾರಿಸಿದರು. ಆಗ ಇಬ್ಬರ ಮಧ್ಯೆಯೂ ವಿರಸ ಇರುವುದು ಬಯಲಿಗೆ ಬಂದಿದೆ.ಮಗುವಿನ ತಂದೆ ವೆಂಕಟೇಶ ಹಾಗೂ ತಾಯಿ ಅಮ್ಮು ಬೇರೆಯಾಗಿ ವಾಸಿಸುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಿಂದ ಸಂಸಾರದಲ್ಲಿ ಒಡಕು ಮೂಡಿತ್ತು. ಇದರಿಂದಾಗಿ ಅಮ್ಮು ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಪತಿ ವೆಂಕಟೇಶ, ಮಗು ಹಾಗೂ ತನ್ನ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ ಎಂದು ಅಮ್ಮು ಹೇಳುತ್ತಾರೆ.ಇದೆಲ್ಲವನ್ನೂ ಆಲಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ, ಮಗುವಿಗೆ ತಂದೆ-ತಾಯಿ ಸಿಕ್ಕಿದ್ದು, ಇಬ್ಬರ ಪ್ರೀತಿಯೂ ಮಗುವಿಗೆ ಸಿಗಲಿ ಎಂಬ ಉದ್ದೇಶದಿಂದ ಮಗುವನ್ನು ಅವರಿಗೆ ಒಪ್ಪಿಸಲು ಒಂದು ಕರಾರು ಹಾಕಿದರು.ತಂದೆ-ತಾಯಿ ಇಬ್ಬರೂ ಒಟ್ಟಾಗಿ ವೈಷ್ಣವಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾದರೆ ಮಗುವನ್ನು ಹಸ್ತಾಂತರಿಸುವುದಾಗಿ ಹೇಳಿದರು. ಇದಕ್ಕೆ ಮೌಖಿಕವಾಗಿ ಪಾಲಕರು ಒಪ್ಪಿಗೆ ನೀಡಿದರೂ, ಕೇಳದ ಶಂಕರಗೌಡ ಪಾಟೀಲರು, ಲಿಖಿತ ಹೇಳಿಕೆ ಬರೆಸಿಕೊಂಡ ನಂತರವೇ ಮಗುವನ್ನು ಪಾಲಕರಿಗೆ ಒಪ್ಪಿಸಿದರು.ಇದರಿಂದಾಗಿ ಬೆಂಗಳೂರಿನ ಕೆಜಿ ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಮಗು ನಾಪತ್ತೆ ಪ್ರಕರಣ ಇತ್ಯರ್ಥಗೊಂಡಿತು. ಜೊತೆಗೆ ಬೇರೆಯಾಗಿದ್ದ ಸಂಸಾರ ಮಗುವಿನ ನಾಪತ್ತೆ ಪ್ರಕರಣದಿಂದಾಗಿ ಮತ್ತೆ ಒಂದಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry