ಯಾದಗಿರಿ ಬೆಟ್ಟದಲ್ಲಿ ಭುವನೇಶ್ವರಿ ವೈಭವ

7

ಯಾದಗಿರಿ ಬೆಟ್ಟದಲ್ಲಿ ಭುವನೇಶ್ವರಿ ವೈಭವ

Published:
Updated:

ಯಾದಗಿರಿ: ಒಂಬತ್ತು ದಿನ ಪವಿತ್ರ ಭಾವನೆ, ಭಕ್ತಿ, ಶ್ರದ್ಧೆಯಿಂದ ಆಚರಿಸುವ ದೇವಿಯ ವ್ರತ ನವರಾತ್ರಿ. ಒಂಬತ್ತು ದಿನಗಳವರೆಗೆ ದೇವಿಯ ವಿವಿಧ ಅವತಾರಗಳನ್ನು ಆರಾಧಿಸಲಾಗುತ್ತದೆ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಹೀಗೆ ಅನೇಕ ಅವತಾರಗಳಲ್ಲಿರುವ ಶ್ರೀದೇವಿಯ ಆರಾಧನೆಗೆ ಮೀಸಲಾಗಿರುವ ನವರಾತ್ರಿ ಉತ್ಸವ ಯಾದಗಿರಿ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.ನಗರದ ಹಲವೆಡೆ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಬೆಟ್ಟದ ಮೇಲಿರುವ ಭುವನೇಶ್ವರಿ ದೇಗುಲದಲ್ಲಿ ನವರಾತ್ರಿ ಸಂಭ್ರಮ ಇಮ್ಮಡಿಸಿದೆ. ಸುಮಾರು 900 ಅಡಿ ಎತ್ತರದ ಬೆಟ್ಟದ ಗರ್ಭದಲ್ಲಿ ಉದ್ಭವಿಸಿದ ಭುವನೇಶ್ವರಿ ಮೂರ್ತಿಯನ್ನು ಹೊಂದಿರುವ ಈ ದೇಗುಲ, ನಿಸರ್ಗದ ರಮಣೀಯ ದೃಶ್ಯದ ಮಧ್ಯೆ ಕಂಗೊಳಿಸುತ್ತಿದೆ.ಯಾದಗಿರಿಯ ಬೆಟ್ಟಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಕಲ್ಯಾಣ ಚಾಲುಕ್ಯರ ಎರಡನೇ ತೈಲಪನ ಕಾಲದಲ್ಲಿ ಹಾಗೂ 2 ನೇ ಜಯಸಿಂಹ, 1 ನೇ ಸೋಮೇಶ್ವರನ ಕಾಲಾವಧಿಯಲ್ಲಿ ಯಾದಗಿರಿ, ಕೊಳ್ಳಿಪಾಕ, ಕೊಟ್ಟಲಗೇರೆ, ಪ್ರದೇಶಗಳನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂಬುದು ಇತಿಹಾಸದ ಕುರುಹುಗಳಿಂದ ತಿಳಿದು ಬರುತ್ತದೆ. ಒಂದನೇ ಸೋಮೇಶ್ವರನ ಕಾಲದಲ್ಲಿ ಸ್ವಲ್ಪ ಕಾಲ ಯಾದಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ನಂತರ ಯಾದಗಿರಿಯನ್ನು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ವರ್ಗಾಯಿಸಿದನು. ಈ ಹಿಂದೆ 6 ನೇ ವಿಕ್ರಮಾದಿತ್ಯನ ಕಾಲಾವಧಿಯಲ್ಲಿ ಯಾದಗಿರಿಯು ಪ್ರಾಂತ ಪ್ರದೇಶವಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಇಂತಹ ಇತಿಹಾಸವನ್ನು ಹೊಂದಿರುವ ಯಾದಗಿರಿಯ ಬೆಟ್ಟದ ಮೇಲಿನ ಕೋಟೆಯ ತಪ್ಪಲಿನಲ್ಲಿ ಉದ್ಭವಿಸಿರುವ ಭುವನೇಶ್ವರಿ ದೇವಿಯು, ಈಗಲೂ ಈ ಭಾಗದ ಆರಾಧ್ಯ ದೈವವಾಗಿದ್ದಾಳೆ.ಅದರಲ್ಲಿಯೂ ನವರಾತ್ರಿ ಉತ್ಸವ ಬಂತೆಂದರೆ ಸಾಕು, ಭಕ್ತಾದಿಗಳು ಬೆಟ್ಟದ ಮೇಲೇರಿ ದೇವಿಯ ದರ್ಶನ ಪಡೆಯುತ್ತಾರೆ.ಈ ಸಂದರ್ಭದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ವೈಷ್ಣವದೇವಿಯ ದರ್ಶನ ಪಡೆದಂತಹ ಅನುಭವ ಇಲ್ಲಿನ ಭಕ್ತರಿಗಾಗುತ್ತಿದೆ.ಸುಮಾರು 31 ವರ್ಷಗಳಿಂದ ವಿಶೇಷವಾಗಿ ಇಲ್ಲಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಪ್ರತಿವರ್ಷ ವಿಶಿಷ್ಟ ಕಾರ್ಯಕ್ರಮಗಳು ಮೂಲಕ ದೇವಿಯ ಆರಾಧನೆಯೂ ನಡೆಯುತ್ತದೆ. ಘಟಸ್ಥಾಪನೆ, ದೀಪಾರಾಧನೆ, ಧ್ವಜಾರೋಹಣ, ನಿತ್ಯ ದೇವಿ ಪಂಚಾಮೃತ ಅಭಿಷೇಕ, ಕನ್ನಡದಲ್ಲಿ ಶ್ರೀದೇವಿಯ ಪಾರಾಯಣ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದುರ್ಗಾಷ್ಟಮಿಯಂದು ಗಣಹೋಪ,, ಮಹಾನವಮಿಯಂದು ಶತಚಂಡಿ ಹೋಮಗಳು ನಡೆಯುತ್ತವೆ.ಈ ಎಲ್ಲ ಕಾರ್ಯಕ್ರಮಗಳು ನಡೆದ ನಂತರ ಬಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪನೆ ಮಾಡಲಾಗುತ್ತದೆ. ಬೆಟ್ಟದ ಮೇಲೇರಿ, ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುವ ಹುಮ್ಮಸ್ಸು ಭಕ್ತರಲ್ಲಿ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ದೇವಿಯ ಉಪಾಸಕರಾದ ಮಲ್ಲಣ್ಣ ಕಟ್ಟಿಮನಿ.  ಪ್ರತಿವರ್ಷ ಇಲ್ಲಿ ಬರುವ ಭಕ್ತರ ಸಂಖ್ಯೆ ಎಷ್ಟಿರುತ್ತದೆ ಎಂದರೆ, ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಿ, ಸರದಿಯಲ್ಲಿ ಸಾಗಲು ವ್ಯವಸ್ಥೆ ಮಾಡಲಾಗುತ್ತದೆ. “ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಬೆಟ್ಟದ ಮೇಲಿರುವ ಭುವನೇಶ್ವರಿ ದೇವಿಯ ದರ್ಶನ ಪಡೆಯುವುದೇ ಒಂದು ಅದ್ಭುತ ಅನುಭವ. ದೂರದ ವೈಷ್ಣವದೇವಿಯ ದರ್ಶನ ಪಡೆದಂತೆಯೇ ಎಂಬುದು ಅನೇಕ ಭಕ್ತರ ನಂಬಿಕೆಯಾಗಿದೆ” ಎನ್ನುತ್ತಾರೆ ಶ್ರೀದೇವಿಯ ಭಕ್ತ ಶ್ರೀಕಾಂತ.ವರ್ಷದಿಂದ ವರ್ಷಕ್ಕೆ ಇಲ್ಲಿ ಸೇರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿಜಕ್ಕೂ ಇದೊಂದು ಅಪರೂಪದ ದೇವಾಲಯವಾಗಿದ್ದು, ಇನ್ನಷ್ಟು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ.ನವರಾತ್ರಿ ಸಂದರ್ಭದಲ್ಲಿ ದೇವಾಲಯಕ್ಕೆ ಮಾಡುವ ದೀಪಾಲಂಕಾರದಿಂದಾಗಿ ಇಡೀ ಬೆಟ್ಟವೇ ಶೃಂಗಾರಗೊಂಡಂತೆ ಕಾಣುತ್ತದೆ. ಇದನ್ನು ನೋಡುವುದೇ ಒಂದು ವೈಭವ ಎಂದು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry