ಯಾದಗಿರಿ: ಲಿಂಗಾನುಪಾತ ಕಾಪಾಡಲು ಸಲಹೆ

7

ಯಾದಗಿರಿ: ಲಿಂಗಾನುಪಾತ ಕಾಪಾಡಲು ಸಲಹೆ

Published:
Updated:

ಯಾದಗಿರಿ: ಕುಸಿಯುತ್ತಿರುವ ಹೆಣ್ಣಿನ ಸಂಖ್ಯೆಯಿಂದ ಸಮಾಜ ಮತ್ತು ದೇಶದ ಬೆಳವಣಿಗೆಗೆ ಮಾರಕವಾಗಬಹುದು. ಈಗಾಗಲೇ ಕೆಲ ಸಮುದಾಯಗಳಲ್ಲಿ ಮದುವೆಗಾಗಿ ಹೆಣ್ಣು ಸಿಗದ ಪರಿಸ್ಥಿತಿ ಉಂಟಾಗಿದೆ. ಮುಂದೆ ಬರಬಹುದಾದ ಕೆಟ್ಟ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಕೃತ್ಯಗಳನ್ನು ತಡೆಯಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿದ್ಧರಾಮ ಹೊನ್ಕಲ್ ಹೇಳಿದರು.



ಶಹಾಪುರ ತಾಲ್ಲೂಕಿನ ಬೆಂಡೆಗುಂಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ತಂತ್ರ ನಿಷೇಧ ಕಾಯ್ದೆ ಕುರಿತಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.



ವಕೀಲರಾದ ನಿರ್ಮಲಾದೇವಿ, ಪಿಸಿಪಿಎನ್‌ಡಿಟಿ ಕಾಯ್ದೆ ರಚನೆಯ ಉದ್ದೇಶ, ಕಾನೂನಿನಲ್ಲಿ ಅಳವಡಿಕೆ, ಬಳಸಬಹುದಾದ ಸಂದರ್ಭಗಳು ಹಾಗೂ ಇದರಲ್ಲಿ ಭಾಗಿಯಾದವರಿಗೆ ವಿಧಿಸಬಹುದಾದ ದಂಡ ಹಾಗೂ ಶಿಕ್ಷೆ ಪ್ರಮಾಣವನ್ನು ವಿವರಿಸಿದರು.



ಭ್ರೂಣ ಲಿಂಗ ಪತ್ತೆ ಮಾಡಿಸಿಕೊಳ್ಳುವ ಮತ್ತು ಮಾಡುವ ವೈದ್ಯರಿಗೆ ಮೊದಲ ಬಾರಿ ಅಪರಾಧ ಸಾಬೀತಾದರೆ ರೂ. 50ಸಾವಿರ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ, ಎರಡನೇ ಬಾರಿಗೆ ರೂ. ಒಂದು ಲಕ್ಷ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ಎಂದು ತಿಳಿಸಿದರು.



ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಎಚ್. ಸಂತೋಷ ಮಾತನಾಡಿ, ದೇಶದಾದ್ಯಂತದ ಲಿಂಗಾನುಪಾತ ವಿವರವನ್ನು ಸಭೆಗೆ ನೀಡಿ ಇದರಿಂದಾಗುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆ, ಲೈಂಗಿಕ ರೋಗಗಳಲ್ಲಿ ಹೆಚ್ಚಳದ ಬಗ್ಗೆ ವಿವರಣೆ ನೀಡಿದರು.



ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿಠ್ಠಲ ದೊಡಮನಿ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಮಲ್ಲಿಕಾಜುನ ಆಗಮಿಸಿದ್ದರು. ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದಕುಮಾರ ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಮಲ್ಲೇಶಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry