ಯಾರಿಗೂ ಬೇಡವಾದ `ಸಮಾಜ ಕಲ್ಯಾಣ'

ಬುಧವಾರ, ಜೂಲೈ 17, 2019
26 °C

ಯಾರಿಗೂ ಬೇಡವಾದ `ಸಮಾಜ ಕಲ್ಯಾಣ'

Published:
Updated:

ಪರಿಶಿಷ್ಟ ಸಮುದಾಯವರೇ ಹೆಚ್ಚಿರುವ ಕೋಲಾರ ಜಿಲ್ಲೆಯಲ್ಲಿ `ಸಮಾಜ ಕಲ್ಯಾಣ' ಎಂಬುದು ದಶಕಕ್ಕೂ ಮೀರಿದ ಕಾಲದಿಂದ ಆಡಳಿತ ಯಂತ್ರಕ್ಕೆ ಬೇಡದ ಕೂಸಾಗಿದೆ. ಆದರೆ ಈ ಕೂಸಿನ `ಆರೈಕೆ' ಮಾತ್ರ ನಿರಂತರವಾಗಿ ನಡೆಯುತ್ತಿದೆ. ವಿಪರ್ಯಾಸವೆಂದರೆ ಕೂಸು ಬಡವಾಗುತ್ತಿದೆ. ಆರೈಕೆ ಮಾಡುತ್ತಿರುವವರು ಮಾತ್ರ ಶ್ರೀಮಂತರಾಗುತ್ತಿದ್ದಾರೆ.ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಪರಿಶಿಷ್ಟ ವಿದ್ಯಾರ್ಥಿಗಳಿರುವ ಬಹುತೇಕ ಹಾಸ್ಟೆಲ್‌ಗಳು ದೆವ್ವದ ಮನೆಗಳಾಗಿವೆ. (ಈ ಮಾತು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಎ.ನಾರಾಯಣಸ್ವಾಮಿಯವರೇ 2 ವರ್ಷದ ಹಿಂದೆ ಹೇಳಿದ್ದು). ಈಗಲೂ ಈ ಸನ್ನಿವೇಶದಲ್ಲಿ ಬದಲಾವಣೆ ಇಲ್ಲ. ಹಾಸ್ಟೆಲ್‌ಗಳಿಗೆ, ಅಲ್ಲಿರುವ ವಿದ್ಯಾರ್ಥಿಗಳಿಗೆಂದು ಕೋಟ್ಯಂತರ ರೂಪಾಯಿ ಮಾತ್ರ ಬಿಡುಗಡೆಯಾಗುತ್ತಲೇ ಇದೆ.ಉತ್ತಮ ನೀರು, ಆಹಾರ, ಶೈಕ್ಷಣಿಕ ವಾತಾವರಣ ಮತ್ತು ಇರುವ ಜಾಗದಲ್ಲಿ ಕನಿಷ್ಠ ಗೌರವವೂ ಸಿಗದೆ ಬಡ, ದಲಿತ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹಾಸ್ಟೆಲ್‌ಗಳಲ್ಲಿದ್ದಾರೆ. ಅವರ ನಡುವೆಯೇ, ಅವರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಆಗಾಗ್ಗೆ ಹೋರಾಟ ಮಾಡುವವರಲ್ಲಿ, ವಿದ್ಯಾರ್ಥಿಗಳ ಮುಖವಾಡ ಧರಿಸಿದ ಮುಖಂಡರೂ ಇದ್ದಾರೆ. (ಹಾಸ್ಟೆಲ್‌ಗಳಿಗೆ ಆಹಾರವನ್ನು ಪೂರೈಸುವ ಹಲವು ಬೇನಾಮಿ ಪ್ರಭಾವಶಾಲಿ ಗುತ್ತಿಗೆದಾರರಿಗೆ ಹತ್ತಿರವಾದ ಅಂಥವರನ್ನು ನಿಭಾಯಿಸುವುದೇ ವಾರ್ಡನ್‌ಗಳ ಪ್ರಮುಖ ಕೆಲಸವೂ ಆಗಿದೆ. ಕೆಲ ವಾರ್ಡನ್‌ಗಳು ಈ ಬಗ್ಗೆ ಬಹಿರಂಗವಾಗಿ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದೂ ಆಗಿದೆ). ಬಹುತೇಕ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳ ಕೊರತೆಯೂ ಇದೆ. ಈ ನಡುವೆ ನಿಜವಾದ ವಿದ್ಯಾರ್ಥಿಗಳ ಅಳಲನ್ನು ಕೇಳುವವರೇ ಇಲ್ಲವಾಗಿರುವುದು ಸದ್ಯದ ದುರಂತ.ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ, ದಲಿತ ಹೋರಾಟದ ವೇದಿಕೆಗೆ ಪೂರ್ವಸಿದ್ಧತೆಗಳು ನಡೆಯುತ್ತಿದ್ದ ಹಾಸ್ಟೆಲ್‌ಗಳಿಗೆ ಬರಲು ದಲಿತ ವಿದ್ಯಾರ್ಥಿಗಳು ಈಗ ಹಿಂಜರಿಯುತ್ತಿದ್ದಾರೆ. ಓದಿಗಾಗಿ ಬಂದವರು ಮಾತ್ರ ನರಕ ಕಾಣುತ್ತಿದ್ದಾರೆ.ಅಧಿಕಾರಿಗಳು-ಗುತ್ತಿಗೆದಾರರು-ವಾರ್ಡನ್‌ಗಳ ನಡುವಿನ ಅಲಿಖಿತ ಒಪ್ಪಂದಗಳ ನಡುವೆ ನಡೆಯುತ್ತಿರುವ ಅವ್ಯವಹಾರಗಳ ಪರಿಣಾಮವಾಗಿ, ವಿದ್ಯಾರ್ಥಿಗಳಿಗೆ ನೀಡಬೇಕಾದ ತಟ್ಟೆ, ಲೋಟ, ಚಾಪೆ ವಿತರಣೆಯಿಂದ ವಿದ್ಯಾರ್ಥಿ ವೇತನ, ದೂರ ಶಿಕ್ಷಣ... ಹೀಗೆ ಎಲ್ಲದ್ದರಲ್ಲೂ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ದುರ್ವಾಸನೆ ಜಿಲ್ಲೆಯಾದ್ಯಂತ ಹರಡಿ ಹಲವು ವರ್ಷಗಳಾಗಿವೆ. ಅಧಿಕಾರಿಗಳ ವಿರುದ್ಧ  ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅಧಿಕಾರಿ-ವಾರ್ಡನ್ ಮನೆಗಳ ಮೇಲೆ ಲೋಕಾಯುಕ್ತ ದಾಳಿಗಳು ನಡೆದಿವೆ.ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿದ್ದ ಒಬ್ಬ ಅಧಿಕಾರಿ ಅಲ್ಲಿಯೇ ಕೊನೆಯುಸಿರೆಳೆದರು. ಮತ್ತೊಬ್ಬರು ಸೇವೆ ಯಿಂದಲೇ ವಜಾಗೊಂಡಿದ್ದಾರೆ.ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಸಹಿ ಫೋರ್ಜರಿ ಮಾಡಿ ಲಕ್ಷಾಂತರ ಅವ್ಯವಹಾರ, ನಿಗದಿಯಾದ ಅನುದಾನಕ್ಕಿಂತಲೂ ಹೆಚ್ಚು ಹಣ ವೆಚ್ಚ, ಹಾಸ್ಟೆಲ್‌ಗಳಿಗೆ ಕಳಪೆ ಆಹಾರ ಪೂರೈಕೆ ಕೆಲವು ನಿದರ್ಶನಗಳಷ್ಟೆ.ಇದೇ ವೇಳೆ, ಪಾರದರ್ಶಕ, ನೇರ, ನಿಷ್ಠುರವಾಗಿ ಕೆಲಸ ಮಾಡಲು ಮುಂದಾಗುವ ಪರಿಶಿಷ್ಟ ಸಮುದಾಯದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಅದೇ ಸಮುದಾಯದ ಪ್ರಭಾವಿ ಸಮೂಹವೂ ಜಿಲ್ಲೆಯಲ್ಲಿ ಸದಾ ಜಾಗೃತವಾಗಿರುತ್ತದೆ. (ಪ್ರಭಾವಿ ರಾಜಕಾರಣಿಗಳ ಎಡ-ಬಲಗಳಲ್ಲಿ ಸಮಾಜ ಸುಧಾರಕರಂತೆ ನಿಂತುಕೊಳ್ಳಲು ಈ ಸಮೂಹದ ಸದಸ್ಯರಿಗೆ ಸಾಕಷ್ಟು ಸ್ಥಳಾವಕಾಶವೂ ಇದೆ). ಸಾಧ್ಯವಾಗುವುದಾದರೆ ನಿಷ್ಠುರ, ಪ್ರಾಮಾಣಿಕ ಅಧಿಕಾರಿಗಳನ್ನು ಹೊಡೆದು ಓಡಿಸಬೇಕೆಂಬ ಹುನ್ನಾರಗಳಿಗೇನೂ ಕಡಿಮೆ ಇಲ್ಲ. `ನಮ್ಮಂತೆಯೇ ಭ್ರಷ್ಟನಾಗು. ಇಲ್ಲವೇ ಜಾಗ ಖಾಲಿ ಮಾಡು' ಎಂಬುದು ಇಲ್ಲಿಗೆ ಬರುವ ಅಧಿಕಾರಿಗಳಿಗೆ ಸಂಘಟನೆಗಳ ಮುಖಂಡರು, ಬೇನಾಮಿ ಗುತ್ತಿಗೆದಾರರು ಆರಂಭದಲ್ಲೇ ಹಾಕುವ ಬೆದರಿಕೆ.ಹೀಗಾಗಿಯೇ ಈ ಜಿಲ್ಲೆಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾಗಿ ಬರಲು ಹಿಂಜರಿಯುವವರೇ ಹೆಚ್ಚು. ಬಂದವರೂ ಅವ್ಯವಹಾರದ ದಾರಿ ಹಿಡಿಯಬೇಕು. ಇಲ್ಲವೇ ಜಾಗ ಖಾಲಿ ಮಾಡಬೇಕು.ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಕೊಡುವ ಕೋಟ್ಯಂತರ ರೂಪಾಯಿ ಅನುದಾನವನ್ನು ನಿಯಮಗಳ ಅನುಸಾರ ವಿನಿಯೋಗಿಸುವುದಕ್ಕಿಂತಲೂ ಆ ನೆಪದಲ್ಲಿ ಹಣ ಲೂಟಿ ಮಾಡುವ ದುರುದ್ದೇಶ ಹೊಂದಿ ಕಾರ್ಯಾಚರಣೆಗಿಳಿಯುವ ಅದೇ ಸಮುದಾಯದ ಹಲವು ಮುಖಂಡರನ್ನು ಸಂತೃಪ್ತಿಗೊಳಿಸುವುದೇ ಅಧಿಕಾರಿಗಳ ಅನಿವಾರ್ಯ ಕರ್ಮ ಎಂಬ ಸನ್ನಿವೇಶ ಇಲಾಖೆಯಲ್ಲಿ ಸೃಷ್ಟಿಯಾಗಿದೆ.ಪರಿಣಾಮ ಇಷ್ಟೆ: ಕೋಲಾರದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ದಶಕಕ್ಕೂ ಹೆಚ್ಚಿನ ಅವಧಿಯಿಂದಲೂ ಪೂರ್ಣಾವಧಿ ಅಧಿಕಾರಿಗಳಿಗಿಂತ ಪ್ರಭಾರ ಅಧಿಕಾರಿಗಳದೇ ಕಾರುಬಾರು ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ಜಿಲ್ಲೆಯ ಐದು ತಾಲ್ಲೂಕಿನ ಸಮಾಜ ಕಲ್ಯಾಣಾಧಿಕಾರಿಗಳ ಹುದ್ದೆಯೂ ಹಲವು ತಿಂಗಳಿಂದ ಖಾಲಿಯಾಗಿಯೇ ಉಳಿದಿದೆ. ಪ್ರಥಮ ದರ್ಜೆ ಗುಮಾಸ್ತರನ್ನೇ ಪ್ರಭಾರಿಯಾಗಿ ತಾಲ್ಲೂಕುಗಳಿಗೆ ನಿಯೋಜಿಸಲಾಗಿದೆ. ಇಂಥ ಸನ್ನಿವೇಶದಲ್ಲಿ ಇಲಾಖೆಗೆ ಸೇರಿರುವ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆಯ ಸಮಸ್ಯೆ ಮಿತಿಮೀರಿದೆ.`ನಿಮಗೆ ಯಾವ ಅಧಿಕಾರಿ ಬೇಕೋ ಅವರ ಹೆಸರನ್ನು ಹೇಳಿ ಸಾಕು. ಅವರನ್ನೇ ಜಿಲ್ಲಾ ಅಧಿಕಾರಿಯನ್ನಾಗಿ ಕಳಿಸುತ್ತೇವೆ ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಗಳು. ಆದರೆ ಯಾರೂ ಕೋಲಾರಕ್ಕೆ ಅಧಿಕಾರಿಗಳಾಗಿ ಬರಲು ಒಲ್ಲರು' ಎಂಬುದು ಜಿಲ್ಲಾಧಿಕಾರಿಯ ಅಸಹಾಯಕತೆ.10 ವರ್ಷಗಳಲ್ಲಿ 14 ಮಂದಿ ಅನ್ಯ ಇಲಾಖೆಗಳ ಅಧಿಕಾರಿಗಳು ಪ್ರಭಾರ ಜಿಲ್ಲಾ ಅಧಿಕಾರಿಯಾಗಿ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಪೈಕಿ ಬಹುತೇಕರು `ಈ ಇಲಾಖೆಯ ಸಹವಾಸ ಸಾಕು' ಎಂದು ಹೊರನಡೆದಿದ್ದೇ ಹೆಚ್ಚು.ಈಗ ಇರುವ ಪ್ರಭಾರಿ ಅಧಿಕಾರಿಯು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾಧಿಕಾರಿ.  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅವರು ಪ್ರಭಾರಿ ಅಧಿಕಾರಿ. ಹೀಗಾಗಿ ಮೂರನೇ ಹುದ್ದೆ ತಮಗೆ ಬೇಡ ಎಂದು ಅವರು ಜಿಲ್ಲಾ ಪಂಚಾಯಿತಿಗೆ ಪತ್ರವನ್ನೂ ಬರೆದಿದ್ದಾರೆ. ಇಲಾಖೆಗೆ ಸೇರಿದ 80 ಹಾಸ್ಟೆಲ್‌ಗಳ ಪೈಕಿ 62ರಲ್ಲಿ ವಾರ್ಡನ್‌ಗಳೇ ಇಲ್ಲ. ಆ ಹುದ್ದೆಗಳು ಭರ್ತಿಯಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆ ಕೇಳುವವರಿಲ್ಲ. ಕಳಪೆ ಆಹಾರದ ವಿರುದ್ಧ ಮತ್ತು ಮೂಲಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವಷ್ಟು ಕಸುವು ನಿಜವಾದ ವಿದ್ಯಾರ್ಥಿಗಳಲ್ಲಿ ಇಲ್ಲ.ಈ ಹಿಂದೆ ಇಲ್ಲಿದ್ದು, ತಮ್ಮ ಸುಧಾರಣಾವಾದಿ ಕಾರ್ಯಗಳ ಕಾರಣಕ್ಕಾಗಿಯೇ ಎತ್ತಂಗಡಿಯಾಗಿರುವ ಕೆಎಎಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ನಾಲ್ಕನೇ ದರ್ಜೆ ನೌಕರರಾದಿಯಾಗಿ ಇಲಾಖೆಯಲ್ಲಿ ಬಹುತೇಕರು `ಕಲುಷಿತ'ಗೊಂಡಿದ್ದಾರೆ. ದಲಿತ ಶ್ರೇಯೋಭಿವೃದ್ಧಿಗೆ ತೊಡಕಾಗಿರುವ ಅಂಥವರನ್ನೆಲ್ಲ ಒಟ್ಟಿಗೇ ವರ್ಗಾವಣೆ ಮಾಡಬೇಕು. ದಲಿತ ಮುಖಂಡರೆಂಬ ನೆಪದಲ್ಲಿ ದಲಿತ ವಿದ್ಯಾರ್ಥಿಗಳ ಊಟಕ್ಕೇ ಕೈ ಹಾಕುವ ಬೇನಾಮಿ ಗುತ್ತಿಗೆದಾರರನ್ನು ಬಗ್ಗು ಬಡಿಯಬೇಕು. ಹಾಸ್ಟೆಲ್‌ಗಳಲ್ಲಿ ನೆಲೆಯೂರಿರುವ ವಿದ್ಯಾರ್ಥಿಗಳಲ್ಲದ ಪುಂಡರನ್ನು ಓಡಿಸಬೇಕು. ಅದಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಇಲಾಖೆಯ ಉನ್ನತ ಅಧಿಕಾರಿಗಳು- ಎಲ್ಲರೂ ಇಲಾಖೆಯ ಅಧಿಕಾರಿಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು.ಇದು ಸಾಧ್ಯವಾಗುವುದೇ ಎಂಬುದು ಸದ್ಯದ ಪ್ರಶ್ನೆ. ಸಾಧ್ಯವಾಗಬೇಕು ಎಂಬುದು ಸಮಾಜ ಕಲ್ಯಾಣ ಇಲಾಖೆಯ ಕೂಸುಗಳಾದ ಅಸಲಿ ವಿದ್ಯಾರ್ಥಿಗಳ ಆಗ್ರಹ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry