ಯಾರಿಗೆ ಲಾಭ? ಯಾರಿಗೆ ನಷ್ಟ?

7

ಯಾರಿಗೆ ಲಾಭ? ಯಾರಿಗೆ ನಷ್ಟ?

Published:
Updated:

ಹಜ್ ಯಾತ್ರಿಗಳಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿಯನ್ನು ಮುಂದಿನ ಹತ್ತು ವರ್ಷಗಳೊಳಗೆ ರದ್ದು ಪಡಿಸಬೇಕೆಂದು ಸುಪ್ರಿಂ ಕೋರ್ಟು ನೀಡಿದ ತೀರ್ಪಿನ ಸುದ್ದಿ ಓದಿ ಆಶ್ಚರ್ಯ ಮತ್ತು ಕುತೂಹಲಪಟ್ಟವರಲ್ಲಿ ನಾನೂ ಒಬ್ಬ. ನನ್ನಲ್ಲಿ ಮುಖ್ಯವಾಗಿ ಮೂಡಿದ ಪ್ರಶ್ನೆಯೆಂದರೆ ನಿಜಕ್ಕೂ ಹಜ್ ಯಾತ್ರಿಯಾದ ಸಾಮಾನ್ಯ ಮುಸ್ಲಿಮನೊಬ್ಬನಿಗೆ ಈ ಸಬ್ಸಿಡಿ ಅಥವಾ ಧನಸಹಾಯ ಸರ್ಕಾರ ನೀಡುತ್ತಿರುವುದು ನಿಜವೇ ಎಂಬುದು.ಭಾರತದಲ್ಲಿ ಸರ್ಕಾರ ಮುಸ್ಲಿಮರಿಗೆ ನೀಡುತ್ತಿರುವ ಅನೇಕ ಸವಲತ್ತು(?)ಗಳಲ್ಲಿ ಇದೂ ಒಂದು ಎಂದು ಸನ್ಯಾಸಿಗಳಾದಿಯಾಗಿ, ಸಾಮಾನ್ಯ ಮುಸ್ಲಿಮೇತರರು ಮತ್ತು ಕೆಲವು ರಾಜಕೀಯ ಪಕ್ಷಗಳು ಈ ಬಗ್ಗೆ ಮಾಡುತ್ತಿರುವ ಕಟು ಟೀಕೆ ಟಿಪ್ಪಣಿಗಳನ್ನು ಕೇಳುತ್ತಲೇ ಬಂದವರಲ್ಲಿ ನಾನೂ ಒಬ್ಬ.ಮುಸ್ಲಿಮನು ಪಾಲಿಸಬೇಕಾದ ಐದು ಕರ್ತವ್ಯಗಳಲ್ಲಿ (ಆರೋಗ್ಯ ಮತ್ತು ಸಂಪತ್ತು ಇರುವವನು) ಹಜ್ ಯಾತ್ರೆ ಕೈಗೊಳ್ಳಬೇಕೆನ್ನುವುದಾಗಿದೆ. ಮುಸ್ಲಿಮನೊಬ್ಬನ ಬದುಕಿನ ಅತ್ಯಂತ ಪ್ರಿಯವಾದ ಆಸೆಯೆಂದರೆ ಹಜ್‌ಯಾತ್ರೆ ಮಾಡುವುದು. ಹಿಂದೆ ವರ್ಷಗಳ ಕಾಲ ನಡೆದು, ಕುದುರೆ, ಒಂಟೆಗಳ ಸವಾರಿ ಮಾಡಿ ಪ್ರಯಾಣ ಬೆಳೆಸಿ ನೆರವೇರಿಸಿದರೆ, ಹಡಗುಗಳಲ್ಲಿ ತಿಂಗಳುಗಟ್ಟಲೆ ಕಾಲ ಪ್ರಯಾಣ ಬೆಳೆಸಿ ಹಜ್ ಯಾತ್ರೆ ಪೂರೈಸುವ ಕಾಲ ಮುಗಿದು ಈಗ ಕೆಲವೇ ಗಂಟೆಗಳಲ್ಲಿ ವಿಮಾನಗಳಲ್ಲಿ ಯಾತ್ರೆಯನ್ನು ಕೈಗೊಂಡು ತಿಂಗಳೊಳಗೆ ಮುಗಿಸುವ ಸವಲತ್ತು ಇದೆ. `ಹಜ್ ಯಾತ್ರೆಗಾಗಿ ಆಹ್ವಾನ, ಕರೆಗಳನ್ನು ನೀಡಿರಿ. ಎಲ್ಲ ದೂರದ ಹಾದಿಯಿಂದ ಪ್ರಯಾಣಿಕರು ನಡೆದು, ಒಂಟೆಗಳ ಮೇಲೆ ಸವಾರಿ ಮಾಡಿಕೊಂಡು ಬರುವಂತಾಗಲಿ~ ಎಂದು ಕುರಾನ್‌ನ 22ನೇ ಅಲ್ ಹಜ್ ಸೂರಾದ 27ನೇ ವಾಕ್ಯದಲ್ಲಿ ಹೇಳಲಾಗಿದೆ. ಮುಸ್ಲಿಮ್ ವರ್ಷದ 12ನೆಯ `ಜಿಲ್-ಹಜ್~ ತಿಂಗಳಲ್ಲಿ ಈ ಪ್ರಯಾಣದ ಮುಖ್ಯ ಯಾತ್ರೆ ಮತ್ತು ಸಂಬಂಧಿತ ಆಚರಣೆಗಳು 8ನೇ ದಿನದಿಂದ ಶುರುವಾಗಿ ಹತ್ತನೆಯ ದಿನದಲ್ಲಿ ಮುಖ್ಯಭಾಗಗಳು ಮುಗಿಯುತ್ತದೆ. ಇದಕ್ಕಿಂತ ಮುಂಚಿನ ದಿನಗಳ ಮತ್ತು ನಂತರದ ಭಾಗಗಳು ಭಕ್ತಿ, ಧ್ಯಾನ ಮುಂತಾದ ಆಚರಣೆಗಳ ಭಾಗವಾಗಿರುತ್ತದೆ.ಮೇಲಿನ ವಿವರಗಳನ್ನು ಅವಲೋಕಿಸಿದರೆ ಇದೊಂದು ಸರಳವಾದ ಭಕ್ತಿ ಪ್ರಧಾನ ಯಾತ್ರೆಯಾಗಿದೆ. ಇಲ್ಲಿ ಖರ್ಚು ವೆಚ್ಚಗಳನ್ನು ಭರಿಸುವಂತಹ ಆರ್ಥಿಕವಾಗಿ ಅನುಕೂಲಸ್ಥ ಮತ್ತು ಆರೋಗ್ಯವಂತನಿಗೆ ಈ ಯಾತ್ರೆ ಇಸ್ಲಾಂನಲ್ಲಿ ಕಡ್ಡಾಯ. ಸರ್ಕಾರದ ಸಬ್ಸಿಡಿಯನ್ನು ಪಡೆದು ಹಜ್‌ಯಾತ್ರೆ ಕೈಗೊಳ್ಳುವ ಅಗತ್ಯವಿಲ್ಲವೆನ್ನುವುದು ಸ್ಪಷ್ಟ.ಬಡವರಿಗೆ ಮತ್ತು ಕೆಳಮಧ್ಯಮ ವರ್ಗದವರಿಗೆ ಯಾತ್ರೆ ಮಾಡಲು ಅವಕಾಶ ಮಾಡಿಕೊಡುವಂತೆ ಮಾಡುವುದು ಸಬ್ಸಿಡಿಯ ಉದ್ದೇಶವೆಂದು ಕೆಲವರ ಅಭಿಪ್ರಾಯ.

ಅರ್ಥಿಕವಾಗಿ ಸಾಧ್ಯವಾಗದವರಿಗೆ ಹಜ್‌ಯಾತ್ರೆಯ ಅಗತ್ಯ ಇಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ನೆರೆಯ ಪಾಕಿಸ್ತಾನವೂ ಸೇರಿದಂತೆ ಪ್ರಪಂಚದಲ್ಲಿರುವ 55 ಮುಸ್ಲಿಂ ರಾಷ್ಟ್ರಗಳಲ್ಲಿ ಯಾವುದೂ ಹಜ್ ಯಾತ್ರಿಗಳಿಗೆ ಸಬ್ಸಿಡಿ ನೀಡುವುದಿಲ್ಲ.  ಪಾಕಿಸ್ತಾನದಲ್ಲಿದ್ದ ಇಂಥದ್ದೊಂದು ವ್ಯವಸ್ಥೆಯನ್ನು ಧಾರ್ಮಿಕ ಕಾರಣಗಳಿಗಾಗಿಯೇ ನಿಲ್ಲಿಸಲಾಯಿತು.ಇದಕ್ಕೂ ನ್ಯಾಯಾಲಯವೊಂದರ ತೀರ್ಪೇ ಕಾರಣವಾಗಿತ್ತು. ಮಲೇಶಿಯಾದ ತಾಬೂಂಗ್ ಹಜ್ ಸಂಘಟನೆ ಯಾತ್ರಿಗಳಿಂದ ಮೊದಲೇ ಹಣ ಸಂಗ್ರಹಿಸುತ್ತದೆ. ಹಾಗೆಯೇ ಇದನ್ನು ಬೇರೆ ಬೇರೆ ರೀತಿಯಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಲಾಭದ ಮೂಲಕ ಯಾತ್ರಾರ್ಥಿಗಳಿಗೆ ಯಾತ್ರೆಯ ವೆಚ್ಚ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.  ಈ ಕೆಲಸಕ್ಕಾಗಿ ಅದು ಮ್ಯಾಗ್ಸೆಸೆ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ  ಹಜ್ ನಿರ್ವಹಿಸುವ ಐಶ್ವರ್ಯ ಮತ್ತು ಆರೋಗ್ಯವಿಲ್ಲದವರಿಗೆ, ಅದರಷ್ಟೇ ಪುಣ್ಯಗಳಿಸುವ ಬೇರೆ ಮಾರ್ಗಗಳೂ ಇವೆ.ಒಂದು ವೇಳೆ ಹಜ್ ನಿರ್ವಹಿಸಬೇಕೆಂಬ ಮಹದಾಸೆ ಇಟ್ಟುಕೊಂಡ ಬಡವ ಕಷ್ಟಪಟ್ಟು ಹಣಕೂಡಿಸಿ ಯಾತ್ರೆಗೆ ಹೊರಟರೂ ಭಾರತ ಸರ್ಕಾರ ಕೊಡುತ್ತದೆಯೆಂದು ಹೇಳಲಾಗುವ  ಸಬ್ಸಿಡಿ ಯಾವ ರೀತಿಯಲ್ಲೂ ಸಹಾಯ ಮಾಡುವಂತೆ ಕಾಣುವುದಿಲ್ಲ. ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾವ ಯಾತ್ರಿಕನಿಗೂ ತಾನು ನೀಡುವ ಹಣದ ಎಷ್ಟುಪಾಲು ಸಬ್ಸಿಡಿಯಿದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಯಾರಿಗೆ ಈ ಸಬ್ಸಿಡಿ ಸಲ್ಲುತ್ತದೆ ಎಂಬುದುಕೂಡ ತಿಳಿಯುತ್ತಿಲ್ಲ. 2000 ಇಸವಿಯಲ್ಲಿ ಪ್ರಯಾಣಿಸಿದ ಹಜ್ ಯಾತ್ರಿಯೊಬ್ಬನಿಗೆ ರೂ.78,000/- ವೆಚ್ಚವಾದರೆ, ನಾನು ಯಾತ್ರೆ ಮಾಡುವ ವರ್ಷ 2009ರಲ್ಲಿ ಅದು ರೂ. 1.20ಲಕ್ಷವಾಗಿತ್ತು.ಖಾಸಗಿಯವರು ಸಂಘಟಿಸುವ  ಹಜ್ ಯಾತ್ರೆಯ ಅದ್ದೂರಿಯ ಪ್ರಯಾಣ, ಸ್ಟಾರ್ ಹೋಟೆಲ್‌ಗಳ ಭರ್ಜರಿ ಊಟದ ವ್ಯವಸ್ಥೆಯನ್ನು ಆರಿಸಿಕೊಂಡರೆ ನಾವು ಆರಿಸಿಕೊಳ್ಳುವ ದರ್ಜೆಗೆ ಅನುಸಾರವಾಗಿ ವೆಚ್ಚ ಹೆಚ್ಚಾಗುತ್ತದೆ. ಇದು ಹಜ್ ಸಮಿತಿ ಸಂಘಟಿಸುವ ಯಾತ್ರೆಯ ಎರಡರಿಂದ ಮೂರು ಪಟ್ಟಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಜೆದ್ದಾ ತಲುಪಲು ಬೇಕಾಗುವ ವಿಮಾನಯಾನದ ಖರ್ಚು, ಸಾಮಾನ್ಯ ವಸತಿ ಹಾಗೂ ಉಳಿದ ಖರ್ಚುಗಳನ್ನು ಕೂಡಿಸಿದರೆ ಹೆಚ್ಚು ಕಡಿಮೆ ಅದು 1.20 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಹಾಗಿದ್ದರೆ ಸರ್ಕಾರ ನೀಡುತ್ತಿದೆ ಎಂದು ಹೇಳಲಾಗುವ ಸಬ್ಸಿಡಿ ಹಣದಿಂದ ಯಾರಿಗೆ ಲಾಭವಾಯಿತು ಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಗುತ್ತಿಲ್ಲ.ಈ ಪ್ರಶ್ನೆಯನ್ನು ಯಾರಲ್ಲಿ ಕೇಳಿದರೂ ಅವರು  ಏರ್ ಇಂಡಿಯಾದತ್ತ ಕೈತೋರಿಸುತ್ತಿದ್ದರು. ನನಗಂತೂ ಹಜ್ ಸಬ್ಸಿಡಿ ಎಂಬುದೂ ಕೂಡ ಅಲ್ಪಸಂಖ್ಯಾತರು ಎಂಬ ವಿಂಗಡನೆ, ಸಾಚಾರ್ ಕಮಿಟಿ, ಮೀಸಲಾತಿ ಮುಂತಾದ ಮೊಣಕೈ ಗಂಟಿಗೆ ಬೆಲ್ಲ ಹಚ್ಚಿ ನೆಕ್ಕಿಸುವ ವಂಚನೆಗೆ ಮುಸ್ಲಿಮರನ್ನು ಸತತವಾಗಿ ತುತ್ತಾಗಿಸುವ ಪ್ರಯತ್ನ ಮತ್ತು ವಿರೋಧಿಗಳಿಗೆ ಓಟುಗಳಿಸಲು ಅವಕಾಶಮಾಡಿಕೊಡುವ ವ್ಯವಸ್ಥಿತ ಸಂಚಿನ ಭಾಗವೆಂದು ಅನ್ನಿಸುತ್ತದೆ. ಹಜ್ ಯಾತ್ರೆಯ ಮಟ್ಟಿಗೆ ಸರ್ಕಾರದ ಪಾತ್ರ ಅಗತ್ಯವಿರುವ ಕಾಗದ ಪತ್ರಗಳನ್ನು  ಒದಗಿಸುವುದು, ವೀಸಾ ವ್ಯವಸ್ಥೆ ಮಾಡುವುದು ಮೊದಲಾದ ಅಧಿಕೃತ ಕಾರ್ಯಗಳಿಗಷ್ಟೇ ಸೀಮಿತವಾಗಿ ಉಳಿಯಬೇಕು. ಪ್ರಯಾಣದ ವ್ಯವಸ್ಥೆಯನ್ನು ಹಜ್ ಕಮಿಟಿ ಅಥವಾ ಸಂಬಂಧಿತ ಜವಾಬ್ದಾರಿಯುತ ಸಂಸ್ಥೆಗೆ ವಹಿಸಿಕೊಡಬೇಕು. ಈಗಿರುವಂತೆ ಹಜ್‌ಸಮಿತಿ ಎಂಬುದು ಸರ್ಕಾರದ ಅಧೀನದಲ್ಲಿರುವ ಸ್ವಾಯತ್ವ ಸಂಸ್ಥೆ. ಅದು ಹಜ್ ಯಾತ್ರೆಯ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ತನ್ನ ನೆಲೆಯಲ್ಲಿಯೇ ಅನೇಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಅದರಲ್ಲಿ ಮುಖ್ಯವಾದುದು ಹಜ್ ಯಾತ್ರಿಕರಿಗೆ ಬೇಕಾದ ವಿಮಾನಯಾನ ಸೇವೆಯ ಶುಲ್ಕವನ್ನು ಕಡಿಮೆ ಮಾಡುವುದು. ಈಗ ಅದು ಏರ್ ಇಂಡಿಯಾದ ಏಕಸ್ವಾಮ್ಯವಾಗಿದೆ. ಬದಲಿಗೆ ಹಜ್ ಯಾತ್ರಿಕರನ್ನು ಕರೆದೊಯ್ಯಲು ಜಾಗತಿಕ ಟೆಂಡರ್ ಕರೆದು ವಿಮಾನಯಾನ ಸಂಸ್ಥೆಯನ್ನು ಆರಿಸಬೇಕು. ಖಾಸಗಿ ವಿಮಾನಯಾನ ಕಂಪೆನಿಗಳು ಹೀಗೆ ಒಂದು ಲಕ್ಷಕ್ಕೂ ಮೀರಿದ ಯಾತ್ರಿಕರನ್ನು ಕರೆದೊಯ್ಯುವ ವ್ಯವಸ್ಥೆಗೆ ಸ್ಪರ್ಧಾತ್ಮಕವಾಗಿ ಸ್ಪಂದಿಸುವುದರಲ್ಲಿ ಸಂಶಯವಿಲ್ಲ.ಮೆಕ್ಕಾ ಹಾಗೂ ಮದೀನಾಗಳಲ್ಲಿ ಯಾತ್ರಿಕರಿಗೆ ಒದಗಿಸುವ ವಸತಿಯ ವಿಷಯದಲ್ಲೂ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ. ಖಾಸಗಿ ಏಜನ್ಸಿಗಳ ಮೂಲಕ ಹಜ್ ಯಾತ್ರೆ ನಡೆಸುವ ಯಾತ್ರಿಕರು ಪಾವತಿಸುವ ಮೊತ್ತಕ್ಕೆ ಹೋಲಿಸಿದಲ್ಲಿ ಅವರು ಪಡೆಯುವ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಅತ್ಯುತ್ತಮ ಎನ್ನಬಹುದು. ಹಜ್ ಸಮಿತಿ ಲಕ್ಷಾಂತರ ಯಾತ್ರಿಕರಿಗಾಗಿ ಒಟ್ಟಾಗಿ ಇವುಗಳನ್ನು ಪಡೆಯುವುದರಿಂದ ಇನ್ನೂ ಕಡಿಮೆ ದರದಲ್ಲಿ ಒಳ್ಳೆಯ ವ್ಯವಸ್ಥೆ ಒದಗಿಸಲು ಸಾಧ್ಯವಿದೆ.ಇನ್ನು ಸುಪ್ರಿಂಕೋರ್ಟಿನ ತೀರ್ಪಿನಲ್ಲಿ ಉಲ್ಲೇಖವಾದ ಸರ್ಕಾರದ ವ್ಯವಸ್ಥೆಯ ಮೂಲಕ ಸದ್ಭಾವನೆಯ ಹಜ್ ಯಾತ್ರೆಯ ಪ್ರತಿನಿಧಿಗಳ `ಗುಡ್‌ವಿಲ್~ ತಂಡಕ್ಕಾಗಿ ಮಾಡುವ ವೆಚ್ಚವನ್ನು ಮತ್ತು ಕ್ರಮವನ್ನು ನಿಲ್ಲಿಸಲು ಹತ್ತು ವರ್ಷ ಕಾಯದೆ ಕೂಡಲೇ ನಿಲ್ಲಿಸುವ ವ್ಯವಸ್ಥೆ ಮಾಡಬೇಕು.  ಈ ತಂಡದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರಿಸಿದ ರಾಜಕಾರಣಿಗಳು, ಧರ್ಮಪಂಡಿತರು ಮತ್ತು ಸ್ವಯಂಸೇವಕರು ಇರುತ್ತಾರೆ. ನನ್ನ ಅನುಭವ ಪ್ರಕಾರ ಸಾಮಾನ್ಯ ಹಜ್ ಯಾತ್ರಿಗಳಿಗೆ ಇವರು ಎಲ್ಲಿರುತ್ತಾರೆಂದೇ ತಿಳಿಯುವುದಿಲ್ಲ. ಮಾರ್ಗದರ್ಶನ, ಸೇವೆ, ಸಹಾಯ ಮುಂತಾದ ಕರ್ತವ್ಯಗಳು ಇವರಿಗಿದ್ದರೂ, ಇದರ ಯಾವ ಪ್ರಯೋಜನವೂ ಯಾತ್ರಿಗಳಿಗೆ ಸಿಗುವುದಿಲ್ಲ. ಪ್ರಸಿದ್ಧ ಉರ್ದು ಕವಿ ಮೀರ್ ತಾಖಿ ಮೀರ್‌ರವರ ಪದ್ಯದ ಸಾಲೊಂದನ್ನು ಈ ಸಂದರ್ಭಕ್ಕೆ ಉದಾಹರಿಸಬಹುದು:“ಹಜ್‌ಯಾತ್ರೆ ಮಾಡುವಿಯೆಂದರೆ ಕರೆ ಜೊತೆಗೆ ಧರ್ಮ ಪಂಡಿತನ

ಪವಿತ್ರ ಕಾಬಾದರ್ಶನ ಗುರಿ ನಿನ್ನದಾದರೆ ನಡೆ ಜೊತೆಗೆ ಸವಾರಿ ಕತ್ತೆಯ“

(ಲೇಖಕರು ಕನ್ನಡ ಸಾಹಿತಿ) 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry