ಯಾರಿಗ್ಹೇಳೋಣ ನಾವು ನಮ್ ಪ್ರಾಬ್ಲಮ್ಮು...

7

ಯಾರಿಗ್ಹೇಳೋಣ ನಾವು ನಮ್ ಪ್ರಾಬ್ಲಮ್ಮು...

Published:
Updated:

ಗುಲ್ಬರ್ಗ: ಹಿಂದುಳಿದ ಮತ್ತು ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರ ನಿರ್ಮಿಸಿರುವ ವಸತಿ ನಿಲಯಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವುದರಿಂದ ಅಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಕಟ್ಟಡವಿದ್ದರೆ, ಕೋಣೆಯಿಲ್ಲ. ಕೋಣೆಯಿದ್ದರೆ ಊಟವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಸತಿ ನಿಲಯಗಳ ಪೈಕಿ ಗುಲ್ಬರ್ಗದ ಶಕ್ತಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವೂ ಒಂದು.ಗುಲ್ಬರ್ಗ, ಬೀದರ್, ವಿಜಾಪುರ, ಯಾದಗಿರಿ, ಕೊಪ್ಪಳ ಮುಂತಾದ ಜಿಲ್ಲೆಗಳ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಊಟಕ್ಕಾಗಿ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ಕೋಣೆಯಲ್ಲಿ 13 ಕೋಣೆಗಳನ್ನು ಹೊಂದಿರುವ ಈ ವಸತಿ ನಿಲಯದ ಒಂದೊಂದು ಕೋಣೆಯಲ್ಲಿ ಏಳೆಂಟು ಜನ ವಾಸವಾಗಿದ್ದಾರೆ.80 ವಿದ್ಯಾರ್ಥಿಗಳಿಗೆ ಮಾತ್ರ ಊಟ ಮತ್ತ ವಸತಿ ವ್ಯವಸ್ಥೆ ಇರುವ ಈ ವಸತಿ ನಿಲಯದಲ್ಲಿ ಹೆಚ್ಚುವರಿಯಾಗಿ 100 ವಿದ್ಯಾರ್ಥಿಗಳನ್ನು ನೀಡಿರುವುದರಿಂದ ಇದೀಗ ಬರೋಬ್ಬರಿ 225 ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕಾಗಿದೆ.“ಕೈಯಲ್ಲಿ ಹಿಡಿದರೆ ತಕ್ಷಣ ಮುರಿಯುವ ಬಿಸಿ ರೊಟ್ಟಿ, ಯಾರೂ ತಿನ್ನಲಾಗದ ದಪ್ಪನೆಯ ಖಡಕ್ ರೊಟ್ಟಿ, ಹದವಿಲ್ಲದ ಚಪಾತಿ, ತರಕಾರಿ, ಕಾಳು ಇಲ್ಲದ ಪಲ್ಯ, ಕೇವಲ ಪುಡಿಖಾರ,ಟೊಮೆಟೊ ಹಾಕಿದ ತಿಳಿ ಸಾರು ತಿಂದು ಸಾಕಾಗಿ ಹೋಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಗುಣಮಟ್ಟದ ಆಹಾರದ ಸೌಕರ್ಯ ಇಲ್ಲದ್ದರಿಂದ ಈ ವಿಷಯವನ್ನು ತಿಂಗಳಿಗೆ ಎರಡ್ಮೂರು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರುವುದೇ ಬಹು ದೊಡ್ಡ ಕ್ರಮವಾಗಿದೆ.

 

ಮೇಲಧಿಕಾರಿಗಳು ಬಂದು ಹೋದ ನಂತರ ಎರಡ್ಮೂರು ದಿನ ಮಾತ್ರ ಎಲ್ಲವೂ ಸರಿಯಿರುತ್ತದೆ. ಮತ್ತೆ ಯಥಾಸ್ಥಿತಿ ಮುಂದುವರಿಯುತ್ತದೆ. ವಸತಿ ನಿಲಯದ ಸುತ್ತಲೂ ಜಾಲಿಕಂಟಿ ಬೆಳೆದಿರುವುದರಿಂದ ಹಂದಿ, ನಾಯಿಗಳ ಕಾಟವೂ ಹೆಚ್ಚಾಗಿದೆ. ಕೊಳಚೆ ನೀರು ಹರಿಯುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ.ಹೀಗಾಗಿ ನಮ್ಮ ಪಾಡು ನಾಯಿಪಾಡು ಆಗಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಊಟ ಮಾತ್ರ ಕೊಡಲಾಗುತ್ತಿದ್ದು, ವಿದ್ಯಾರ್ಥಿಗಳ ವಸತಿ ವ್ಯವಸ್ಥೆಗಾಗಿ ಸರ್ಕಾರದಿಂದ ಬರುವ ಹಣವನ್ನು ಸಹ ಅಧಿಕಾರಿಗಳು ನುಂಗಿ ಹಾಕುತ್ತಿದ್ದಾರೆ” ಎಂದು ಅಲ್ಲಿನ ವಿದ್ಯಾರ್ಥಿಗಳು ಆರೋಪಿಸುತ್ತಾರೆ.ಬಡ ವಿದ್ಯಾರ್ಥಿಗಳ ಓದಿಗಾಗಿ ಸರ್ಕಾರ ಒದಗಿಸಿರುವ ಸೌಕರ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನುಷ್ಠಾನವಾಗುವಲ್ಲಿ ವಿಫಲವಾಗುತ್ತವೆ ಎನ್ನುವುದಕ್ಕೆ ಈ ವಸತಿ ನಿಲಯ ಸಾಕ್ಷಾತ್ ಉದಾಹರಣೆಯಾಗಿದೆ. ಇನ್ನು ಮುಂದಾದರು ವಸತಿ ನಿಲಯದ ವ್ಯವಸ್ಥೆ ಸುಧಾರಿಸಿಯಾರೇ? ಎಂದು ಕಾದು ನೋಡಬೇಕಿದೆ.ಹುಡುಗ್ರು ಸುಮ್ನೆ ಹೇಳ್ತಾವ್ರೀ....

ಪ್ರತಿ ದಿನ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಮಂಡಕ್ಕಿ ಅಥವಾ ಚಿತ್ರಾನ್ನ ನೀಡಲಾಗುವುದು. ಮಧ್ಯಾಹ್ನ ರೊಟ್ಟಿಯ ಜೊತೆಗೆ ಕಾಯಿಪಲ್ಯ ಮತ್ತು ಅನ್ನ, ರಾತ್ರಿ ಚಪಾತಿ, ಕಾಳು ಪಲ್ಯ, ಅನ್ನ ನಿಯಮಿತವಾಗಿ ನೀಡಲಾಗುತ್ತದೆ. ಏನೋ ಒಮ್ಮಮ್ಮೆ  ಹೆಚ್ಚು ಕಡಿಮೆ ಆಗಿರಬೇಕು ಎಂದು ವಿದ್ಯಾರ್ಥಿಗಳಿಗೆ ನೀಡಲಾಗುವ ಪದಾರ್ಥಗಳನ್ನು ಸಂಗ್ರಹ ಮಾಡಿಟ್ಟಿರುವ ಕೋಣೆಗೆ ಕರೆದೊಯ್ದು ಬಟಾಣಿ, ಹೆಸರು, ಅಲಸಂದಿ, ರವಾ, ಅಕ್ಕಿ, ಪುಡಿಖಾರವನ್ನು ತೋರಿಸುತ್ತಾರೆ ವಸತಿ ನಿಲಯದ ಮೇಲ್ವಿಚಾರಕ ಯೂನೂಸ್. ಮೇಲಾಗಿ ಹುಡುಗ್ರು ಸುಮ್ನೆ ಹೇಳ್ತಾವ್ರೀ.. ಎಂದು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry