ಸೋಮವಾರ, ನವೆಂಬರ್ 18, 2019
20 °C

`ಯಾರು ಆ ದೊಡ್ಡ ವ್ಯಕ್ತಿ?'

Published:
Updated:

ಬೆಂಗಳೂರು: `ಎಷ್ಟೇ ದೊಡ್ಡ ವ್ಯಕ್ತಿಯನ್ನಾಗಲಿ ನಾವು ತ್ಯಾಗ ಮಾಡಲು ಸಿದ್ಧ' ಎಂದು ನೀಡಿರುವ ಜಾಹೀರಾತು ನಿರ್ದಿಷ್ಟವಾಗಿ ಯಾರ ಕುರಿತಾದುದು ಎಂಬುದನ್ನು ಬಿಜೆಪಿ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಉಪಾಧ್ಯಕ್ಷ  ಕೆ.ಎಚ್. ಶ್ರೀನಿವಾಸ್ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಡಿರುವ ಸಾಧನೆಗಳನ್ನು ಬಿಜೆಪಿ ತನ್ನ ಸಾಧನೆ ಎಂಬಂತೆ ಜಾಹೀರಾತುಗಳಲ್ಲಿ ಬಿಂಬಿಸಿಕೊಳ್ಳುತ್ತಿದೆ. ಇದಕ್ಕೂ ನಮ್ಮ ಆಕ್ಷೇಪವಿದೆ. ಈ ರೀತಿ ಸುಳ್ಳು ಜಾಹೀರಾತುಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು' ಎಂದು ಒತ್ತಾಯಿಸಿದರು.`ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯವು ಕಳೆದ ಐದು ವರ್ಷಗಳಲ್ಲಿ  ಕಳೆದುಕೊಂಡಿರುವುದನ್ನು ಮತ್ತೆ ಕೊಡುವುದಾಗಿ ಹೇಳಿದ್ದಾರೆ.ಆದರೆ ಅವರದೇ ಪಕ್ಷದ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್‌ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಮುಂತಾದ ಹಗರಣಗಳಿಂದ ಕೊಳೆತು ನಾರುತ್ತಿದೆ. ತಮ್ಮ ಮನೆಯಲ್ಲಿಯೇ ಹೆಗ್ಗಣ ಸತ್ತು ಬಿದ್ದಿರುವಾಗ ಪಕ್ಕದ ಮನೆಯಲ್ಲಿ ಸತ್ತಿರುವ ನೊಣ ಹುಡುಕುವುದು ಹಾಸ್ಯಾಸ್ಪದ' ಎಂದು ಟೀಕಿಸಿದರು.ಡಾ.ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲವು ಸಾಹಿತಿಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಸ್ಥಿರ ಸರ್ಕಾರ ನೀಡಲು ಹೆಣಗಾಡುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡಲು ಹೇಗೆ ಸಾಧ್ಯ? ಕೆಲವೇ ಮಂದಿ ಸಾಹಿತಿಗಳ ಅಭಿಪ್ರಾಯ ಎಲ್ಲಾ ಸಾಹಿತಿಗಳ ಅಭಿಪ್ರಾಯವಾಗಲು ಸಾಧ್ಯವಿಲ್ಲ.ಬಿಜೆಪಿ ಬಗ್ಗೆ ಜನರಿಗೆ ಸಿಟ್ಟಿರುವುದರಿಂದ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ತಪ್ಪು. ಕಾಂಗ್ರೆಸ್‌ನ ಈ ಲೆಕ್ಕಾಚಾರ ಉತ್ತರ ಪ್ರದೇಶದಲ್ಲಿ ಈಗಾಗಲೇ ಸುಳ್ಳಾಗಿದೆ ಎಂದರು.ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯಕುಮಾರ್ ಅವರು ಅಡ್ವಾಣಿ ಅವರ ಮಕ್ಕಳ ಕುರಿತು ನೀಡಿರುವ ಹೇಳಿಕೆ ಸಮರ್ಥಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, `ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಹೇಳಿಕೆ ನೀಡುತ್ತಿರುವುದು ಪಕ್ಷದ ಶಿಸ್ತಿಗೆ ತಕ್ಕುದ್ದಲ್ಲ' ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)