ಯಾರು ಹಿತವರು ಈ ನಾಲ್ವರೊಳಗೆ

7

ಯಾರು ಹಿತವರು ಈ ನಾಲ್ವರೊಳಗೆ

Published:
Updated:

ಚಿಂತಾಮಣಿ:  ಇಲ್ಲಿನ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭಿನ್ನಮತ ಜನತೆಗೆ ಮಾಮೂಲಿಯಾಗಿದೆ. ಇದಕ್ಕೆ ಮೂರು ತಲೆಮಾರುಗಳ ಇತಿಹಾಸವಿದೆ. ಭಿನ್ನಮತದ ಸುಳಿಯಲ್ಲಿ ಸಿಕ್ಕಿದರೂ ಅವಕಾಶ ಸಿಕ್ಕಾಗ ಎದುರೇಟು ನೀಡಲು ಕಾಂಗ್ರೆಸ್ ಸದಾ ಹವಣಿಸುವುದು ಕೂಡ ಅಷ್ಟೇ ಸತ್ಯ. ಆದರೆ ಸದಾ ಒಗ್ಗಟ್ಟಿನಿಂದ ಇ್ದ್ದದ ಜೆಡಿಎಸ್ ಸಹ ಬಣಗಳಾಗಿ ಛಿದ್ರವಾಗಿ ಮತದಾರರಲ್ಲಿ ನಿರಾಸೆ ಮೂಡಿಸಿದೆ.ಜೆಡಿಎಸ್‌ನಲ್ಲಿ ಮೂರ‌್ನಾಲ್ಕು ಬಣ ಗೋಚರಿಸುತ್ತಿದ್ದು, ಪ್ರತಿ ಬಣವೂ ಮೇಲುಗೈ ಸಾಧಿಸಲು ಹವಣಿಸುತ್ತಿದೆ. ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಕುಟುಂಬದಲ್ಲೇ ಎರಡು ಹೋಳಾಗಿದೆ. ಕೃಷ್ಣಾರೆಡ್ಡಿ ಅವರ ಮಗಳು ವಾಣಿ ಒಂದು ಕಡೆ, ಭಾವಮೈದುನರು ಮತ್ತೊಂದು ಕಡೆ. ಇನ್ನು ಉದ್ಯಮಿ ಜೆ.ಕೆ.ಕೃಷ್ಣಾರೆಡ್ಡಿ, ಹಿರಿಯ ಸಹಕಾರಿ ಟಿ.ಎನ್.ರಾಜಗೋಪಾಲ್ ಬೇರೆಯಾಗಿ ಚಟುವಟಿಕೆ ನಡೆಸುತ್ತಿದ್ದಾರೆ.ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವ ಸಮಯದಲ್ಲಿ ಬೇಕಾದರೂ ವಿಧಾನಸಭೆ ಚುನಾವಣೆ ಎದುರಾಗಬಹುದು. ಆದ್ದರಿಂದ ಪಕ್ಷದ ಟಿಕೆಟ್ ಪಡೆಯಲು ಪ್ರತಿ ಗುಂಪು ಗುಪ್ತವಾಗಿ ಚಟುವಟಿಕೆ ನಡೆಸುತ್ತಿದೆ. ಹೈಕಮಾಂಡ್ ವಲಯದಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಉಂಟಾಗಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ.ಅನ್ಯರಿಗೆ ಅವಕಾಶ ಕೊಟ್ಟಿಲ್ಲ:
ಒಂದು ಮೂಲದ ಪ್ರಕಾರ ವಾಣಿ ಕೃಷ್ಣಾರೆಡ್ಡಿ ಅವರಿಗೆ ಟಿಕೆಟ್ ನೀಡಿ ಅನುಕಂಪ ಗಿಟ್ಟಿಸುವ ಯತ್ನ ನಡೆಯುತ್ತಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದ 50 ವರ್ಷಗಳ ಇತಿಹಾಸದಲ್ಲಿ ಆಂಜನೇಯರೆಡ್ಡಿ, ಗಂಗಿರೆಡ್ಡಿ ನಂತರ ಚೌಡರೆಡ್ಡಿ, ಕೃಷ್ಣಾರೆಡ್ಡಿ ಕುಟುಂಬದ ಮಧ್ಯೆಯೆ ರಾಜಕಾರಣ ನಡೆಯುತ್ತಿದ್ದು, ಮತದಾರರು ಬೇರೆಯವರಿಗೆ ಅವಕಾಶ ನೀಡಿಲ್ಲ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಂ.ಕೃಷ್ಣಾರೆಡ್ಡಿ ಕೇವಲ 1300 ಮತಗಳ ಅಂತರದಲ್ಲಿ ಸೋತಿದ್ದರು. ಅವರು ಮೃತಪಟ್ಟ ನಂತರ ಆ ಅನುಕಂಪ ಪಡೆಯಲು ಹಾಗೂ ಮಹಿಳೆಗೆ ಟಿಕೆಟ್ ನೀಡಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ವಾಣಿ ಅವರ ಪರವಾದ ಗುಂಪು ಪ್ರಚಾರ ಮಾಡುತ್ತಿದೆ.ವಾಣಿ ಮತ್ತು ಬೆಂಬಲಿಗರು ಇತ್ತೀಚೆಗೆ ಕ್ಷೇತ್ರ ಪ್ರವಾಸ, ಪ್ರಚಾರ ಆರಂಭಿಸಿದ್ದಾರೆ. ಆದರೆ ಅವರಿಗೆ ರಾಜಕೀಯದ ಗಂಧ-ಗಾಳಿ ಇಲ್ಲ, ಹಣದ ಬಲವೂ ಇಲ್ಲ. ಅಷ್ಟೇ ಅಲ್ಲ, ಕುಟುಂಬದಲ್ಲೇ ಒಗ್ಗಟ್ಟಿಲ್ಲದೆ ಪರದಾಡುತ್ತಿದ್ದಾರೆ. ಅವರು ಹೇಗೆ ರಾಜಕೀಯ ಮಾಡಲು ಸಾಧ್ಯ ಎಂದು ಮತ್ತೊಂದು ಗುಂಪಿನವರ ಆರೋಪವಾಗಿದೆ.ಓಲೈಕೆಗೆ ದಾನ, ಧರ್ಮ: ಕೃಷ್ಣಾರೆಡ್ಡಿ ಎರಡು ಬಾರಿ ಸಚಿವರಾಗಿ, ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷರಾಗಿ ಅಪಾರ ಬೆಂಬಲ ಗಳಿಸಿದ್ದರು. ಅವರ ಕುಟುಂಬದಲ್ಲೇ ಒಡಕುಂಟಾಗಿ ಎರಡು ಗುಂಪಾಗಿಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಇನ್ನು ಟಿ.ಕೆ.ಗಂಗಿರೆಡ್ಡಿ ಕುಟುಂಬದ ರಘುನಾಥರೆಡ್ಡಿ, ಕುರ‌್ಲಾರೆಡ್ಡಿ, ಜೆ.ಪಿ.ರೆಡ್ಡಿ ಸೇರಿ ಮತ್ತೊಂದು ಗುಂಪಾಗಿ ತುಳುವನೂರಿನಲ್ಲಿ ಸಮಾವೇಶ ನಡೆಸಿದ್ದಾರೆ.ಬೆಂಗಳೂರು ಉದ್ಯಮಿ ಜೆ.ಕೆ.ಕೃಷ್ಣಾರೆಡ್ಡಿ ಆರ್ಥಿಕವಾಗಿ ಸ್ಥಿತಿವಂತರು. ಕಳೆದ 3-4 ವರ್ಷಗಳಿಂದ ದಾನ- ಧರ್ಮ ಮಾಡುತ್ತಾ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ವೈಯಕ್ತಿಕವಾಗಿ ಹಾಗೂ ಸಂಘ- ಸಂಸ್ಥೆಗಳಿಗೆ ಹಣ ನೀಡುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ.ಮಿತಿ ಮತ್ತು ಅತಿ: ಮಾಜಿ ಮಂತ್ರಿ ಬೈರೇಗೌಡರ ಕಾಲದಲ್ಲಿ ಅವರ ಬಲಗೈ ಬಂಟರಾಗಿ ಮೆರೆದ ಟಿ.ಎನ್.ರಾಜಗೋಪಾಲ್ ತಮ್ಮ ಬಲ ವೃದ್ಧಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಕೆಲವು ಹೋಬಳಿಗಳಲ್ಲಿ ಅವರ ಪ್ರಭಾವ ಇದೆ. ಹಠಮಾರಿ, ಹೊಂದಿಕೊಳ್ಳುವ ಸ್ವಭಾವದವರಲ್ಲ.ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವವಿದೆ. ಆದರೆ ಪಕ್ಷ ಒಗ್ಗೂಡಿಸುವ ಆಲೋಚನೆಯಲ್ಲಿ ಇತ್ತೀಚೆಗೆ ಮುಖಂಡರ ಸಭೆಗಳನ್ನು ನಡೆಸುತ್ತಿದ್ದಾರೆ.ಯಾರು ಹಿತವರು?: ಕ್ಷೇತ್ರದಲ್ಲಿ ಹೀಗೆ ನಾಲ್ಕು ಬಣಗಳು ಚಟುವಟಿಕೆಯಲ್ಲಿ ತೊಡಗಿದ್ದರೆ, ಯಾರು ಹಿತವರು ಈ ನಾಲ್ವರೊಳಗೆ ಎಂದು ಹೈಕಮಾಂಡ್ ಚಿಂತಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಅಧ್ಯಯನ ಹಾಗೂ ಜೆಡಿಎಸ್ ಬಲವರ್ಧನೆಗೆ ಇತ್ತೀಚೆಗೆ ಪಕ್ಷದ ಮುಖಂಡರು ಕರೆದಿದ್ದ ಜಿಲ್ಲೆಯ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಚಿಂತನೆ ನಡೆದಿದ್ದು, ಯಾವುದೇ ಒಮ್ಮತ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry