ಯಾರು ಹಿತವರು: ಹಳಬರೋ, ಹೊಸಬರೋ?

7
ಒಕ್ಕಲಿಗರ ಸಂಘದ ಚುನಾವಣೆ ನಾಳೆ: ಮತದಾರರ ಚಿತ್ತ ಚಂಚಲ

ಯಾರು ಹಿತವರು: ಹಳಬರೋ, ಹೊಸಬರೋ?

Published:
Updated:

ಕೋಲಾರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಒಂದು ದಿನ ಉಳಿದಿದೆ. ಜ.5ರಂದು ನಡೆಯಲಿರುವ ಚುನಾ­ವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬ ಜಿಜ್ಞಾಸೆಯೂ ಮತದಾರರ ವಲಯದಲ್ಲಿ ಶುರುವಾಗಿದೆ.ಸ್ಪರ್ಧಾ ಕಣದಲ್ಲಿರುವವರ ಪೈಕಿ ಆರು ಮಂದಿ ಮೊದಲ ಬಾರಿಗೆ ಸ್ಪರ್ಧಿ­ಸು­ತ್ತಿದ್ದಾರೆ. ಡಾ.ಡಿ.ಕೆ.ರಮೇಶ್, ಎಚ್.­ಲೋಕೇಶ್ ಕಲ್ಲಂಡೂರು, ಟಿ.ಎಂ.­ರಂಗ­ನಾಥ್, ಸಿ.ವಿ.ಲೋಕೇಶಗೌಡ, ಎನ್.­ಶ್ರೀರಾಮ­ರೆಡ್ಡಿ, ಎಂ.ಎಲ್.ಸತೀಶ್ ಸಂಘಕ್ಕೆ ಪ್ರವೇಶ ಪಡೆಯುವ ಅವಕಾಶ­ಕ್ಕಾಗಿ ಕಾದು ನೋಡುತ್ತಿದ್ದಾರೆ.ಎನ್.ರಮೇಶ್ ಯಲುವನಹಳ್ಳಿ, ಆರ್.ನಂಜುಂಡಗೌಡ ಕಲ್ಲಂಡೂರು ಎರಡು ಬಾರಿ ಆಯ್ಕೆಯಾಗಿದ್ದು ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಡಾ,ನವೀನ್ ಕುಮಾರ್, ಡಾ.ಸದಾ­ಶಿವರೆಡ್ಡಿ, ಪಿ.ನಾಗರಾಜ್ ಒಮ್ಮೆ ಆಯ್ಕೆಯಾಗಿದ್ದು ಎರಡನೇ ಬಾರಿ ಸ್ಪರ್ಧಿಸಿದ್ದಾರೆ. ಕೆ.ಬಿ.ಗೋಪಾಲಕೃಷ್ಣ ಎರಡು ಬಾರಿ ಸೋಲು ಕಂಡು ಮೂರನೇ ಬಾರಿ ಸ್ಪರ್ಧಿಸಿದ್ದಾರೆ. ವಿ.ಇ.­ರಾಮಚಂದ್ರ ಒಮ್ಮೆ ಸೋತು ಎರಡನೇ ಬಾರಿ ಸ್ಪರ್ಧಿಸಿದ್ದಾರೆ.ಯಾರಿಗೆ ಮತ?

ಸಂಘದಲ್ಲಿ ಈಗಾಗಲೇ ಪದಾಧಿಕಾರಿ­ಗಳಾಗಿ ಹಳಬರಾದವರಿಗೆ ಮತ ಹಾಕಿ ಮತ್ತೆ ‘ಗೆದ್ದ ಎತ್ತಿನ ಬಾಲ ಹಿಡಿಯು­ವುದೋ’ ಅಥವಾ ಹೊಸಬರನ್ನು ಆಯ್ಕೆ ಮಾಡಿ ಸಂಘದಲ್ಲಿ ಹೊಸ ‘ಉತ್ಸಾಹಿ ಯುವಜನರಿಗೆ’ ಅವಕಾಶ ಮಾಡಿ­ಕೊಡು­ವುದೋ ಎಂದು ಮತದಾರರು ಚರ್ಚಿಸುತ್ತಿದ್ದಾರೆ. ಇದೇ ವೇಳೆ, ಗೆಲ್ಲುವ ತಂತ್ರಗಳನ್ನು ಬಲ್ಲ ಹಿರಿಯರು ತಮ್ಮದೇ ರೀತಿಯಲ್ಲಿ ಪ್ರಚಾರ ನಡೆಸಿದ್ದರೆ, ‘ಎಳಸು’ ಹೊಸ ಅಭ್ಯರ್ಥಿಗಳು ಹಿರಿಯ­ರನ್ನು ಮಣಿಸಿ ಗೆಲ್ಲುವುದು ಹೇಗೆ ಎಂಬ ಚಿಂತೆಯಲ್ಲೂ ಇದ್ದಾರೆ.ಹೊಸಬರು ಬರಲಿ

ಈಗಾಗಲೇ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದವರು ಜನಾಂಗಕ್ಕಾಗಿ ಮಾಡಿದ್ದು ಅಷ್ಟರಲ್ಲೇ ಇದೆ. ಹೀಗಾಗಿ ಮತ ಕೇಳಲು ಬಂದ ಕೆಲವು ಹಿರಿಯ­ರಿಗೆ, ಮೊದಲು ಸಂಘಕ್ಕೆ ಒಂದಷ್ಟು ಹಣ­ವನ್ನು ಕೊಡುಗೆಯಾಗಿ ನೀಡಿ ಆಮೇಲೆ ಬನ್ನಿ ಎಂದು ಹೇಳಿ ಕಳಿಸಿರುವೆ ಎಂಬುದು ನಗರದ ಹಿರಿಯ ವಕೀಲರೊಬ್ಬರ ಖಚಿತ ನುಡಿ.ಸಂಘದ ನಿರ್ದೇಶಕರಾಗುವುದರಿಂದ ದೊರಕುವ ಅವಕಾಶಗಳಿಂದ ಕೋಟಿ­ಗಟ್ಟಲೆ ಹಣ ಸಂಪಾದಿಸುವುದೇ ಬಹು­ತೇಕರ ಪ್ರಧಾನ ಆಶಯವೇ ಹೊರತು ಜನಾಂಗದ ಅಭಿವೃದ್ಧಿಯಂತೂ ಅಲ್ಲ ಎನ್ನುತ್ತಾರೆ ಅವರು.ಕಾರ್ಯನಿರತ ರಾಜಕಾರಣಿಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದ ಕೆಲವು ಹಿರಿಯರು ಸ್ಪರ್ಧಿಸಿದ್ದಾರೆ. ಈ ಐದು ವರ್ಷದಲ್ಲಿ ಅವರು ಜಿಲ್ಲೆಯ ಜನಾಂಗದ ಒಳಿತಿನ ಕಡೆಗೆ ಗಮನ ಹರಿಸಿದ್ದು ಕಡಿಮೆ ಎಂಬುದು ಮತ್ತೊಬ್ಬ ಮತದಾರರ ಅಭಿಪ್ರಾಯ. ಹೀಗಾ­ಗಿಯೇ ಹೊಸ ಅಭ್ಯರ್ಥಿಗಳ ಕಡೆಗೆ ಆಶಾವಾದದಿಂದ ನೋಡುತ್ತಿದ್ದಾರೆ.ಹಳಬರ ಸಾಮರ್ಥ್ಯ

ಪ್ರತಿ ಚುನಾವಣೆ ಸಂದರ್ಭದಲ್ಲೂ ಏಳುವ ಇಂಥ ಆಡಳಿತ ವಿರೋಧಿ ಅಲೆಗೆ ಎದುರಾಗಿ ನಿಂತಿರುವ ‘ಹಿರಿಯರಲ್ಲೂ ಆತ್ಮವಿಶ್ವಾಸವೇನೂ ಕುಂದಿಲ್ಲ. ಐದು ವರ್ಷಗಳ ಅವಧಿಯಲ್ಲಿ ತಮ್ಮ ಹಲವು ಸಂಬಂಧಿಕರನ್ನು ಸಂಘದ ಸದಸ್ಯರನ್ನಾಗಿ ಮಾಡಿ ತಮ್ಮ ಗೆಲುವನ್ನು ಮೊದಲೇ ಖಚಿತಪಡಿಸಿಕೊಂಡಿದ್ದಾರೆ ಎಂಬ ಮಾತು­ಗಳೂ ಕೇಳಿಬರುತ್ತಿದೆ. ಮತಕ್ಕಾಗಿ ಹಣ ಹಂಚಿಕೆಯಲ್ಲಿ ಹೊಸಬರು ತಮಗೆ ಪೈಪೋಟಿ ನೀಡಲಾಗದಷ್ಟು ಮುಂದಕ್ಕೆ ಕೆಲವು ಹಳಬರು ಹೋಗಿದ್ದಾರೆ. ಅವ­ರಿಗೆ ಹಳಬರಲ್ಲಿ ಹಣ ಬಲವೇ ಜನ ಬಲವೂ ಆಗಿದೆ. ಹೀಗಾಗಿ ಅವರ ಆಯ್ಕೆ ಖಚಿತ ಎನ್ನಲಾಗುತ್ತಿದೆ.‘ಹಳೆ ಬೇರು, ಹೊಸ ಚಿಗುರು ಕೂಡಿ­ರಲು ಮರ ಸೊಬಗು’ ಎಂಬ ಕವಿ­ವಾಣಿಗೆ ತಕ್ಕಂತೆ ಹಳಬರು ಮತ್ತು ಹೊಸಬರು ಒಟ್ಟಿಗೇ ಆಯ್ಕೆಯಾದರೆ ಚೆನ್ನ ಎಂಬುದು ಹಲವರ ಅನಿಸಿಕೆ.ವರ್ತೂರು –ರಾಮು ‘ವೈಮನಸ್ಯ’

ಕೋಲಾರ ತಾಲ್ಲೂಕಿನಲ್ಲಿ ಈ ಚುನಾ­ವಣೆಯು ಶಾಸಕ ಆರ್.ವರ್ತೂರು ಪ್ರಕಾಶ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಚೌಡೇಶ್ವರಿ ಅವರ ಪತಿ ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ನಡುವಿನ ರಾಜಕೀಯ ವೈರತ್ವ ಇನ್ನಷ್ಟು ಗಡುಸಾಗಲು ದಾರಿ ಮಾಡಿರುವುದು ಗಮನಾರ್ಹ.2010ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ರಾಮು ಶಾಸಕರ ಬಣದಲ್ಲಿದ್ದರು. ಅವರ ಬಣ­ದಿಂದಲೇ ಚೌಡೇಶ್ವರಿ ಸ್ಪರ್ಧಿಸಿದ್ದರು. ಆದರೆ ಎರಡನೇ ಅವಧಿಗೆ ಜಿಪಂ ಅಧ್ಯಕ್ಷ ಆಯ್ಕೆ ನಡೆಯುವ ಸಂದರ್ಭದಲ್ಲಿ ರಾಮು ಮತ್ತು ಚೌಡೇಶ್ವರಿ ವರ್ತೂರು ಬಣ ತೊರೆದು ಜೆಡಿಎಸ್ ಸೇರಿದ್ದರು. ಚೌಡೇಶ್ವರಿ ಅಧ್ಯಕ್ಷರಾಗಿ ಆಯ್ಕೆ­ಯಾಗಿದ್ದರು.ಇದೇ ಹಿನ್ನೆಲೆಯಲ್ಲಿ ಶಾಸಕರು ರಾಮು ಅವರಿಗೆ ಮತ ಹಾಕಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದು ರಾಮು ಬಣದ ಆರೋಪ. ಆದರೆ ಇಂಥ ಆರೋಪಗಳನ್ನು ಲೆಕ್ಕಕ್ಕಿ­ಡದ ವರ್ತೂರು ಬಣದ ಬೆಗ್ಲಿ ಸೂರ್ಯ­ಪ್ರಕಾಶ್ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ತಮ್ಮ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆಆಯ್ಕೆಯಾದವರಿಗೆ ಪ್ರಯೋಜನವೇನು?

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗುವವರಿಗೆ ಆಗುವ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆಗೆ ಸಮುದಾಯದವರು ನೀಡುವ ಪ್ರತಿಕ್ರಿಯೆಯೂ ಕುತೂಹಲಕಾರಿಯಾಗಿದೆ.

ಸಂಘವು ನಡೆಸುವ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು-­ಗಳಲ್ಲಿ ಆಡಳಿತ ಮಂಡಳಿ ಸೀಟುಗಳನ್ನು ಇಂತಿಷ್ಟು ಎಂದು ಎಲ್ಲ ನಿರ್ದೇಶಕ­ರಿಗೂ ಮೀಸಲಿಡಲಾಗುತ್ತದೆ. ಅದನ್ನು ನಿರ್ದೇಶಕರು ಅಪಾರ ಹಣಕ್ಕೆ ಮಾರಾಟ ಮಾಡಿ ಇನ್ನಷ್ಟು ಶ್ರೀಮಂತರಾಗುತ್ತಾರೆ. ಬಹುತೇಕರ ಗುರಿ ಇದೇ ಆಗಿದೆ ಎನ್ನುತ್ತಾರೆ ಮತದಾರರೊಬ್ಬರು.ಪ್ರಮುಖವಾದ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವವರಿಂದ ಲಕ್ಷಾಂತರ ರೂಪಾಯಿ ವಂತಿಗೆ ಪಡೆಯಲಾಗುತ್ತದೆ. ಪ್ರವೇಶ ಶುಲ್ಕವನ್ನು ಹೊರತು­ಪಡಿಸಿದ ವಂತಿಗೆ ಹಣವೆಲ್ಲವೂ ನಿರ್ದೇಶಕರಿಗೆ ಸೇರುತ್ತದೆ. ಸಂಸ್ಥೆಗಳಿಗೆ ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿಯೂ ನಿರ್ದೇಶಕರಿಗೆ ಮೀಸಲಿರುತ್ತದೆ. ಅಲ್ಲಿಯೂ ಸಾಕಷ್ಟು ‘ಹಣ ಸಂಪಾದನೆಗೆ’ ಅವಕಾಶವಿದೆ. ಹೀಗಾಗಿಯೇ ಈ ಚುನಾವಣೆಗೆ ಇಷ್ಟೊಂದು ಮಹತ್ವ ಬಂದಿದೆ ಎಂಬುದು ಮತದಾರರ ನುಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry