ಸೋಮವಾರ, ಮೇ 23, 2022
21 °C

ಯಾರ ಭವಿಷ್ಯಕ್ಕೂ ನಿಲುಕದ ಪಾಕಿಸ್ತಾನ!

ಪ್ರಜಾವಾಣಿ ವಾರ್ತೆ/ ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಢಾಕಾ: ‘ಪಾಕಿಸ್ತಾನ ತಂಡದಲ್ಲಿರುವಷ್ಟು ಸಮಸ್ಯೆಗಳು ಮತ್ತೆಲ್ಲೂ ಇಲ್ಲ. ಫಿಕ್ಸಿಂಗ್, ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್, ಕಿತ್ತಾಟ, ಮದ್ದು ಸೇವನೆ, ಆಯ್ಕೆ ವಿವಾದ, ಭ್ರಷ್ಟಾಚಾರದ ಕಾರಣ ಯಾವಾಗಲೂ ಸುದ್ದಿಯಲ್ಲಿರುತ್ತದೆ. ದೇಶದಲ್ಲಿ ಸದಾ ರಕ್ತ ಹರಿಯುತ್ತಿರುತ್ತದೆ. ಆದರೂ ಅದ್ಭುತವಾಗಿ ಆಡುತ್ತಾರೆ, ಪ್ರತಿಭಾವಂತರು ಬೆಳಕಿಗೆ ಬರುತ್ತಿರುತ್ತಾರೆ. ಅದಕ್ಕೆ ಕಾರಣ ತಿಳಿಯಲು ಈ ತಂಡದ ಕೋಚ್ ಆದೆ’

ಸಮಸ್ಯೆಗಳ ಗೂಡು ಎಂದು ಗೊತ್ತಿದ್ದರೂ ಏಕೆ ಪಾಕ್ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದೀರಿ ಎಂಬ ಪ್ರಶ್ನೆಯೊಂದಕ್ಕೆ ಬಾಬ್ ವೂಲ್ಮರ್ ಈ ರೀತಿ ಪ್ರತಿಕ್ರಿಯಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅವರು ನಿಗೂಢ ಸಾವನ್ನಪ್ಪಿದ್ದರು.

ಚಂಚಲ ಮನಸ್ಸಿನ ಪಾಕ್ ತಂಡದ ಸಮಸ್ಯೆಗಳಿಗೆ ಇನ್ನೂ ಬ್ರೇಕ್ ಸಿಕ್ಕಿಲ್ಲ, ಆ ದೇಶದಲ್ಲಿ ರಕ್ತಪಾತವೂ ನಿಂತಿಲ್ಲ. ಆದರೆ ತಂಡದ ಪ್ರದರ್ಶನದ ಮೇಲೆ ಅದು ಕಿಂಚಿತ್ ಪರಿಣಾಮ ಬೀರಿಲ್ಲ ಎನ್ನುವುದು ಅಚ್ಚರಿ ವಿಷಯ. ಈ ವಿಶ್ವಕಪ್ ಕ್ರಿಕೆಟ್ ಟೂರ್ನಿಯೇ ಅದಕ್ಕೆ ಸಾಕ್ಷಿ.

‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮೊದಲ ಕ್ವಾರ್ಟರ್ ಫೈನಲ್ ಹೋರಾಟಕ್ಕೆ ಸಿದ್ಧವಾಗಿ ನಿಂತಿರುವ ಶಾಹೀದ್ ಅಫ್ರಿದಿ ಪಡೆ ಹೊಸ ಹುಮ್ಮಸ್ಸಿನಿಂದಲೇ ಮಂಗಳವಾರ ಅಭ್ಯಾಸ ನಿರತವಾಗಿತ್ತು. ಈ ತಂಡದ ಆಟಗಾರರು ಬುಧವಾರ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್ ತಂಡದ ಸವಾಲಿಗೆ ಎದೆಕೊಡಲಿದ್ದಾರೆ.

ಈ ವಿಶ್ವಕಪ್ ಆರಂಭಕ್ಕೆ ಮುನ್ನವಷ್ಟೇ ಪಾಕ್‌ನ ಮೂರು ಮಂದಿ ಪ್ರತಿಭಾವಂತ ಆಟಗಾರರು ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಗಾಗಿದ್ದರು. ಹಾಗೇ, ಪಾಕ್‌ನಲ್ಲಿ ಎರಡು ವರ್ಷದಿಂದ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇದಕ್ಕೆ ಕಾರಣ ಆ ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಸಂಭವಿಸಬಹುದಾದ ಬಾಂಬ್ ಸ್ಫೋಟದ ಭಯ! ಹಾಗಾಗಿಯೇ ವಿಶ್ವಕಪ್ ಆತಿಥ್ಯ ನೀಡಿಲ್ಲ. ಆದರೆ ಅದ್ಯಾವುದೂ ಈ ತಂಡದ ಚಿತ್ತಕ್ಕೆ ಭಂಗ ತಂದಿಲ್ಲ. ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಪಾಕ್ ಈಗ ವಿಶ್ವಕಪ್ ಗೆಲ್ಲುವ ಫೇವರಿಟ್.

‘ಕೆಲ ಘಟನೆಗಳನ್ನು ನೆನಪಿಸಿಕೊಂಡರೆ ನನಗೂ ದುಃಖವಾಗುತ್ತದೆ. ಆದರೆ ಅಲ್ಲಾ (ದೇವರು) ನಮ್ಮನ್ನು ಕೈಬಿಡುವುದಿಲ್ಲ. ನಮ್ಮ ನಿಜವಾದ ಸಾಮರ್ಥ್ಯವೇನು ಎಂಬುದನ್ನು ತೋರಿಸುತ್ತೇವೆ’ ಎಂದ ಅಫ್ರಿದಿ ಮಾತಿನಲ್ಲಿ ಆ ದೇಶದ ಪರಿಸ್ಥಿತಿ ಹಾಗೂ ಅಲ್ಲಿನ ಕ್ರಿಕೆಟ್ ಚಿತ್ರಣ ಅಡಗಿದೆ.

ಈ ತಂಡ ಒಂಥರಾ ಪ್ರತಿಭೆಗಳ ಆಗರ. ಆದರೆ ಸಮಸ್ಯೆಗಳ ಗೂಡು! ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ ಯಾವಾಗ ಈ ತಂಡದಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಆಸ್ಟ್ರೇಲಿಯಾ ಎದುರು ಗೆಲ್ಲುವ ಈ ತಂಡ ನಾಳೆ ಐರ್ಲೆಂಡ್ ಎದುರು ಸೋತುಬಿಡುತ್ತದೆ. ಮತ್ತೊಂದು ವಿವಾದದಲ್ಲಿ ಸಿಕ್ಕಿ ಬೀಳುತ್ತದೆ. ಹಾಗಾಗಿ ಈ ತಂಡ ಯಾರ ಭವಿಷ್ಯಕ್ಕೂ ನಿಲುಕದು!

ಅದೇನೇ ಇರಲಿ, 12 ವರ್ಷಗಳಿಂದ ವಿಶ್ವಕಪ್‌ನಲ್ಲಿ ಅಜೇಯವಾಗುಳಿದು ಸತತ 34 ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಹ್ಯಾಟ್ರಿಕ್ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸದೆಬಡಿದಿರುವುದು ಪಾಕ್ ಆಟಗಾರರಿಗೆ ಮತ್ತಷ್ಟು ಸ್ಫೂರ್ತಿ ನೀಡಿದೆ.

ಬುಧವಾರ ಪಾಕ್‌ನಲ್ಲಿ ರಿಪಬ್ಲಿಕ್ ಡೇ ಕಾರಣ ರಜೆ. ತಮ್ಮ ದೇಶದ ಕ್ವಾರ್ಟರ್ ಫೈನಲ್ ಹೋರಾಟ ವೀಕ್ಷಿಸಲು ಅಲ್ಲಿನ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೊಂದು ಸಂಭ್ರಮದ ದಿನವಿಲ್ಲ. ‘ಪಾಕಿಸ್ತಾನ ದಿನ’ಕ್ಕೆ ಅಫ್ರಿದಿ ಪಡೆ ಗೆಲುವಿನ ಕೊಡುಗೆ ನೀಡಬಲ್ಲದೇ ಎಂಬುದು ಈಗ ಕುತೂಹಲ. ಕೆರಿಬಿಯನ್ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿರುವುದನ್ನು ಗಮನಿಸಿದರೆ ಪಾಕ್ ತಂಡವೇ ಗೆಲುವಿನ ನೆಚ್ಚಿನ ತಂಡ.

ಇತ್ತ ವಿಂಡೀಸ್ ತನ್ನ ಗತಕಾಲದ ವೈಭವಕ್ಕೆ ಮರಳಲು ಪ್ರಯತ್ನಿಸುತ್ತಿದೆ. 1975 ಹಾಗೂ 79ರ ಚಾಂಪಿಯನ್ ತಂಡಕ್ಕೆ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇಂಗ್ಲೆಂಡ್ ಹಾಗೂ ಭಾರತ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯಗಳಲ್ಲಿ ಅದು ಸಾಬೀತಾಗಿದೆ.

ಇಂಗ್ಲೆಂಡ್‌ನ 243 ರನ್‌ಗಳಿಗೆ ಉತ್ತರವಾಗಿ ಒಂದು ಹಂತದಲ್ಲಿ 6 ವಿಕೆಟ್‌ಗೆ 222 ರನ್ ಗಳಿಸಿದ್ದ ವಿಂಡೀಸ್ ಒಮ್ಮೆಲೆ ಕುಸಿತ ಕಂಡಿತ್ತು. ಭಾರತದ 268 ರನ್‌ಗಳಿಗೆ ಉತ್ತರವಾಗಿ 2 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದ್ದ ಈ ತಂಡ 34 ರನ್ ಸೇರಿಸುವಷ್ಟರಲ್ಲಿ ಕೊನೆಯ 8 ವಿಕೆಟ್ ಕಳೆದುಕೊಂಡಿತ್ತು.

ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದ ಈ ತಂಡದ ಪ್ರಮುಖ ಬೌಲರ್ ಕೆಮರ್ ರೋಚ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈಗ ಚೇತರಿಸಿಕೊಂಡಿದ್ದಾರೆ. ಗೇಲ್ ಮಂಗಳವಾರ ಅಭ್ಯಾಸದ ವೇಳೆ ಸಹ ಆಟಗಾರರು ದೈಹಿಕ ಕಸರತ್ತು ನಡೆಸುವುದನ್ನು ನೋಡುತ್ತಾ ನಿಂತಿದ್ದರು! ಆದರೆ ನೆಟ್ಸ್‌ನಲ್ಲಿ ಸ್ವಲ್ಪ ಹೊತ್ತು ಬ್ಯಾಟ್ ಮಾಡಿದರು. ಎಸ್.ಚಂದ್ರಪಾಲ್ ಕೂಡ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಇದೇ ಕ್ರೀಡಾಂಗಣದಲ್ಲಿ ಡೆರೆನ್ ಸ್ಯಾಮಿ ಬಳಗ ಲೀಗ್‌ನಲ್ಲಿ ಆತಿಥೇಯ ಬಾಂಗ್ಲಾ ತಂಡವನ್ನು 58 ರನ್ ಗಳಿಗೆ ಆಲ್‌ಔಟ್ ಮಾಡಿತ್ತು. ಅದು ಈ ತಂಡದವರಿಗೆ ಸ್ಫೂರ್ತಿ ಆಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.