ಯಾರ ಹೆಗಲಿಗೆ ಉಸ್ತುವಾರಿಯ ನೊಗ?

7

ಯಾರ ಹೆಗಲಿಗೆ ಉಸ್ತುವಾರಿಯ ನೊಗ?

Published:
Updated:

ಗದಗ: ಮುದ್ರಣ ಕಾಶಿ ಖ್ಯಾತಿ ಹೊಂದಿರುವ ಜಿಲ್ಲೆಯು ಬಿಜೆಪಿ ಸರ್ಕಾರದಲ್ಲಿದ್ದ ಏಕೈಕ ಸಚಿವ ಸ್ಥಾನವನ್ನು ಕಳೆದುಕೊಂಡಿದೆ. ಇಲ್ಲಿನ ನರಗುಂದ ಮತಕ್ಷೇತ್ರದ ಶಾಸಕರೂ, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದ ಸಿ.ಸಿ. ಪಾಟೀಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಚಿವ ಸ್ಥಾನದ ಪ್ರಾತಿನಿಧ್ಯ ಹೋಗಿದೆ.ಒಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಳೆದ 2008ರ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಶಾಸಕ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಎದುರಾಳಿಗಳಿಗೆ ಭಾರಿ ಮುಖಭಂಗ ಉಂಟುಮಾಡಿದ್ದು ಈಗ ಇತಿಹಾಸ.

 

ಪಕ್ಷೇತರರ ಸಹಕಾರದೊಟ್ಟಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಿ.ಸಿ. ಪಾಟೀಲ, ಮೊದಲಿಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ, ನಂತರ ಅವರ ಆಶೀರ್ವಾದದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ ಬೆಳೆದವರು.ಯಡಿಯೂರಪ್ಪನವರ ಬಗೆಗಿನ ಈ ಸ್ವಾಮಿ ನಿಷ್ಠೆಯನ್ನು ಅವಕಾಶ ಸಿಕ್ಕಾಗಲೆಲ್ಲ ಪ್ರದರ್ಶಿಸುವ ಬಂದ ಪಾಟೀಲ, ಆ ಕಾರಣಕ್ಕಾಗಿಯೇ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಜಿದ್ದಿಗೆ ಬಿದ್ದರು. ಶ್ರೀ ರಾಮುಲು ಕೈ ಯಿಂದ ಉಸ್ತುವಾರಿ ಸ್ಥಾನ ವನ್ನು ಕಿತ್ತು ಕೊಳ್ಳುವಲ್ಲಿ ಬೆನ್ನಿಗೆ ನಿಂತಿದ್ದು ಅದೇ ಸ್ವಾಮಿನಿಷ್ಠೆ!ಆದರೀಗ ಪರಿಸ್ಥಿತಿ ಬದಲಾಗಿದೆ. ಸದನದಲ್ಲಿನ ತಮ್ಮ ಕೃತ್ಯದಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಅವರನ್ನು ಯಾವ ನಿಷ್ಠೆಯೂ ಕಾಪಾಡಲಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪರ್ಯಾಯ ಸ್ಥಾನಕ್ಕೆ ಬೇಡಿಕೆಯೂ, ಉಸ್ತುವಾರಿಯ ಕೂಗು ಏಳುತ್ತಿದೆ. ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರ ಹಾಗೂ ರಾಮಣ್ಣ ಲಮಾಣಿ ಹೀಗೆ ಮೂವರು ಬಿಜೆಪಿ ಶಾಸಕರು ಜಿಲ್ಲೆಯಲ್ಲಿದ್ದಾರೆ. ಒಂದು ವೇಳೆ ಸಂಪುಟ ವಿಸ್ತರಣೆ ನಡೆದು ಗದುಗಿಗೆ ಪ್ರಾತಿನಿಧ್ಯ ಕೊಡಲು ಸರ್ಕಾರ ಮನಸ್ಸು ಮಾಡಿದಲ್ಲಿ ಕಳಕಪ್ಪ ಬಂಡಿಗೆ ಅವಕಾಶ ಹೆಚ್ಚು ಎನ್ನುತ್ತವೆ ಬಿಜೆಪಿ ಮೂಲಗಳು.ಆದರೆ ಬಂಡಿ ಯಡಿಯೂರಪ್ಪ ನಿಷ್ಠರಲ್ಲ. ಮೊದಲಿನಿಂದಲೂ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಪಾಳಯದಲ್ಲೇ ಗುರುತಿಸಿಕೊಂಡು ಬಂದವರು. ಈಗಿನ ಪರಿಸ್ಥಿತಿಯೊಳಗೆ ಶೆಟ್ಟರರು ಬಂಡಿ ಪರ ಧ್ವನಿ ಎತ್ತಿದರೂ ಅವಕಾಶ ಸಿಗುವುದು ಕಷ್ಟ ಎನ್ನುತ್ತಾರೆ ಸ್ಥಳೀಯ ಮುಖಂಡರು. ಆದರೆ ಸರ್ಕಾರ ಸದ್ಯಕ್ಕಂತೂ ಸಂಪುಟ ವಿಸ್ತರಣೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಬೇರೆ ಮಾತು.ಸದ್ಯ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರನ್ನು ಸರ್ಕಾರ ನೇಮಿಸಬೇಕಿದೆ. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರು ಸ್ಥಳೀಯ ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ. ಬೊಮ್ಮಾಯಿ ಅವರು ನೆರೆಯ ಹಾವೇರಿ ಜಿಲ್ಲೆಯವರೂ, ಗದುಗಿನೊಂದಿಗೆ, ಸಿ.ಸಿ. ಪಾಟೀಲರೊಂದಿಗೆ ನಂಟು ಹೊಂದಿದವರೂ ಆಗಿದ್ದಾರೆ. ಅಲ್ಲದೆ ಯಡಿಯೂರಪ್ಪನವರ ಪರಮಾಪ್ತರು ಆಗಿದ್ದು, ಅವರ ಬಣದವರೇ ಸಿ.ಸಿ. ಪಾಟೀಲರ ಉಸ್ತುವಾರಿ ಕೋಟಾವನ್ನು ತುಂಬಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಸದ್ಯಕ್ಕೆ ಚುನಾವಣೆ ಬೇಡಅತ್ತ ವಿಧಾನಸೌಧದಲ್ಲಿ ಕಾಂಗ್ರೆಸ್ಸಿಗರು ಕಳಂಕಿತರನ್ನು ಶಾಸಕ ಸ್ಥಾನದಿಂದ ಕಿತ್ತೊಗೆಯಲು ಒತ್ತಾಯಿಸತೊಡಗಿದ್ದಾರೆ. ಇತ್ತ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗರಲ್ಲಿ ಅಂತಹ ಉತ್ಸಾಹದ ಲಕ್ಷಣಗಳು ಕಂಡುಬರುತ್ತಿಲ್ಲ. ಸಚಿವ ಸ್ಥಾನ ಹೋದದ್ದೇ ಸಾಕು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ನರಗುಂದದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಇಲ್ಲದ ತಲೆನೋವೆ ಹೆಚ್ಚು.ಅದಕ್ಕೆ ಕಾರಣಗಳು ಹಲವು. ಬಿಜೆಪಿ ಸರ್ಕಾರದ ಆಡಳಿತಾವಧಿ ಇನ್ನೊಂದು ವರ್ಷವಿದೆ. ಈಗ ಉಪಚುನಾವಣೆ ನಡೆದರೂ ಮತ್ತೊಂದು ವರ್ಷಕ್ಕೆ ಮತ್ತೆ ಚುನಾವಣೆಗೆ ನಿಲ್ಲಬೇಕು. ಇಲ್ಲಿಂದ ಗೆದ್ದುಹೋದರೂ ಶಾಸಕ ಸ್ಥಾನದ ಹೊರತು ಹೆಚ್ಚೇನೂ ಉಪಯೋಗವಿಲ್ಲ.

 

ಹೀಗಾಗಿ ತರಾತುರಿಯ ಚುನಾವಣೆಗೆ ಕಾಂಗ್ರೆಸ್‌ಗೆ ಒಲವಿಲ್ಲ ಎನ್ನಲಾಗಿದೆ. ಉತ್ತರ ಕರ್ನಾಟಕದ ಪ್ರಭಾವಿ ಮುಖಂಡರೂ, ಕಾಂಗ್ರೆಸ್ ನಾಯಕರೂ ಆದ ಎಚ್.ಕೆ. ಪಾಟೀಲರ ಆದಿಯಾಗಿ ಎಲ್ಲರೂ ಕಾದುನೋಡುವ ತಂತ್ರ ಅನುಸರಿಸುತ್ತಿರುವುದು ಈ ಅಭಿಪ್ರಾಯವನ್ನು ಪುಷ್ಟಿಕರಿಸುವಂತಿದೆ. ಅಲ್ಲದೆ ರಾಜ್ಯದ ಈಚಿನ ಉಪಚುನಾವಣೆಗಳಲ್ಲಿ ಮತದಾರರು ಆಡಳಿತ ಪಕ್ಷವನ್ನು ಬೆಂಬಲಿಸುತ್ತ ಬಂದಿರುವುದು ಸಹ ಕಾಂಗ್ರೆಸ್ ಪಾಳಯದ ಹಿಂಜರಿಕೆಗೆ ಕಾರಣವಾಗಿದೆ.ನರಗುಂದ ಕ್ಷೇತ್ರದಲ್ಲಿ ಸದ್ಯ ಯಾವುದೇ ದಿನದಲ್ಲಿ ಚುನಾವಣೆ ನಡೆದರೂ ಮಾಜಿ ಸಚಿವ ಬಿ.ಆರ್. ಯಾವಗಲ್‌ರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ. ಇದೇ 11ರಂದು ನರಗುಂದದಲ್ಲಿ ಕಾರ್ಯಕರ್ತರ ಸಭೆಯನ್ನು ಪಕ್ಷ ಆಯೋಜಿಸಿದೆ. ಆದರೆ ಚುನಾವಣೆಗೆ ಮಾತ್ರ ಸಿದ್ಧರಿಲ್ಲ. ಅದಕ್ಕೂ ಮುನ್ನ ಪಕ್ಷ ಬಲವರ್ಧನೆ ಅಗತ್ಯ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry