ಯಾಳಗಿ: ನಿಯಂತ್ರಣಕ್ಕೆ ಬಾರದ ವಾಂತಿ, ಭೇದಿ

ಭಾನುವಾರ, ಮೇ 26, 2019
22 °C

ಯಾಳಗಿ: ನಿಯಂತ್ರಣಕ್ಕೆ ಬಾರದ ವಾಂತಿ, ಭೇದಿ

Published:
Updated:

ಕೆಂಭಾವಿ: ಸಮೀಪದ ಯಾಳಗಿಯಲ್ಲಿ ಸೋಮವಾರ ಕಾಣಿಸಿಕೊಂಡ ವಾಂತಿ ಭೇದಿ ನಿಯಂತ್ರಣಕ್ಕೆ ಬಾರದೇ ಗುರುವಾರವೂ ಆರು ಮಕ್ಕಳು ಸೇರಿದಂತೆ 15 ಜನರು ಯಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಗ್ಯ ಕೇಂದ್ರದಲ್ಲಿ ಕೇವಲ ಆರು ಹಾಸಿಗೆಗಳಿದ್ದು, ಹೆಚ್ಚಿನ ರೋಗಿಗಳು ಆಸ್ಪತ್ರೆಯ ಮುಂಭಾಗದ ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆಯುವಂತಾಗಿದೆ. ಗುಂಡಾ ಬಾವಿ ನೀರು ಸೇವನೆಯಿಂದ ವಾಂತಿ ಭೇದಿ ಉಲ್ಬಣವಾಗಿದ್ದರೂ, ಜನರು ಆ ನೀರನ್ನೇ ಬಳಸುತ್ತಿರುವುದರಿಂದ ವಾಂತಿ-ಭೇದಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.ಸಾನಿಯಾ ಮಹಿಬೂಬ, ಅಂಬಿಕಾ ಬಡಿಗೇರ, ರಾಜೇಸಾಬ, ಶಹನಾಜ್ ಇಬ್ರಾಹಿಂ, ಪ್ರಕಾಶ ಚಂದಪ್ಪ, ಮಡಿವಾಳಪ್ಪ ಬಸವರಾಜ, ರಾಜ ವೀರಣ್ಣ, ಶಾಂತಗೌಡ ಪೊಲೀಸ್‌ಪಾಟೀಲ, ರಮೇಶ, ಯಲ್ಲೇಶ ಚಂದ್ರಪ್ಪ, ಜೈತುನ್‌ಬೀ ಹುಸೇನಸಾಬ, ಲಕ್ಷ್ಮಿ ಹೊಸಮನಿ, ಇಮ್ರೋನ್ ಮಹಿಬೂಬ, ದೇವರಾಜ ಶರಣಪ್ಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗುಂಡಾ ಬಾವಿಯ ಸುತ್ತಲು ಗ್ರಾಮದ ಚರಂಡಿ ನೀರು ನಿಲ್ಲುತ್ತಿದ್ದು, ಬಾವಿಯು ತುಂಬಿರುವುದರಿಂದ ಚರಂಡಿ ನೀರು ಬಾವಿಗೆ ಸೇರಿ ನೀರು ಕಲುಷಿತವಾಗಿದೆ. ಬಾವಿಯ ನೀರನ್ನು ಪರೀಕ್ಷಿಸಲಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ವಿಕಾಸ ಹೇಳುತ್ತಾರೆ.ಮೊದಲು ಚಿಕಿತ್ಸೆ ಪಡೆದ ರೋಗಿಗಳು ಗುಣಮುಖರಾಗುತ್ತಿದ್ದು, ಈಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಭಾವಿಯಿಂದ ಶುದ್ಧ ಕುಡಿಯುವ ನೀರನ್ನು ತರಿಸಿ ಕೊಡಲಾಗುತ್ತಿದೆ. ಅಲ್ಲದೇ ಯಾದಗಿರಿಯಿಂದ ಆರೋಗ್ಯ ಇಲಾಖೆಯ ತಂಡ ಬಂದಿದ್ದು, ಗ್ರಾಮದ ಜನರಿಗೆ ಸ್ವಚ್ಛತೆ ಬಗ್ಗೆ ತಿಳಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.ಗುಂಡಾ ಬಾವಿ ನೀರು ಕುಡಿಯದಂತೆ ಗ್ರಾಮದಲ್ಲಿ ಡಂಗುರ ಸಾರಲಾಗಿದ್ದು, ಬೇರೆ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗುರುಬಸಯ್ಯ ಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry