ಯಾವತ್ತೂ ಭರವಸೆಯ ಕೈಬಿಡಬಾರದು

7

ಯಾವತ್ತೂ ಭರವಸೆಯ ಕೈಬಿಡಬಾರದು

Published:
Updated:
ಯಾವತ್ತೂ ಭರವಸೆಯ ಕೈಬಿಡಬಾರದು

ಬೆಂಗಳೂರು: `ತಂಡದಲ್ಲಿ ಸ್ಥಾನ ಸಿಕ್ಕಿದ ವಿಷಯ ಗೊತ್ತಾಗುತ್ತಿದ್ದಂತೆ ಆ ಖುಷಿಯನ್ನು ಅಪ್ಪ ಶ್ರೀನಾಥ್ ಅವರೊಂದಿಗೆ ಹಂಚಿಕೊಳ್ಳಲು ಮುಂದಾದೆ. ಆದರೆ ಬನ್ನೇರುಘಟ್ಟದ ತಮ್ಮ ಕಚೇರಿಗೆ ತೆರಳಿದ್ದ ಅವರು ಮೊಬೈಲ್ ತೆಗೆದುಕೊಂಡು ಹೋಗಿರಲಿಲ್ಲ. ಹಾಗಾಗಿ ಅವರಿಗೆ ತಕ್ಷಣ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ. ಅಮ್ಮ ನಿರ್ಮಲಾ ಕರೆ ಮಾಡಿ ನನ್ನ ಸಂತೋಷದಲ್ಲಿ ಭಾಗಿಯಾದರು. ನನ್ನ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ~ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಎಡಗೈ ವೇಗಿ ಎಸ್.ಅರವಿಂದ್ ಗುರುವಾರ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದು ಹೀಗೆ. `ಇಂಗ್ಲೆಂಡ್ ವಿರುದ್ಧದ ಈ ಸರಣಿಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕಾರಣ ಸೊಂಟ ನೋವಿನ ಕಾರಣ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಉದಯೋನ್ಮುಖ ಆಟಗಾರರ ಟೂರ್ನಿಯನ್ನು ತಪ್ಪಿಸಿಕೊಂಡಿದ್ದೆ.ಆದರೆ ಒಂದು ದಿನ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂಬ ಭರವಸೆ ಇತ್ತು. ಯಾವತ್ತೂ ಭರವಸೆಯ ಕೈಬಿಡಬಾರದು ಎಂಬುದನ್ನು ನಾನು ಇಷ್ಟು ದಿನಗಳಲ್ಲಿ ಕಲಿತುಕೊಂಡಿದ್ದೇನೆ~ ಎಂದು 27 ವರ್ಷ ವಯಸ್ಸಿನ ಬೌಲರ್ ನುಡಿದರು.ಉದ್ಯಾನ ನಗರಿಯ ಎಸ್‌ಜೆಆರ್‌ಸಿ ಕಾಲೇಜ್‌ನಲ್ಲಿ ಬಿಕಾಂ ಓದಿರುವ ಅರವಿಂದ್ 2008ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದರು. ಇವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಉದ್ಯೋಗಿ ಕೂಡ. ಆರಂಭದಲ್ಲಿ ಹೆರಾನ್ಸ್ ಕ್ರಿಕೆಟ್ ಕ್ಲಬ್‌ಗೆ ಆಡುತ್ತಿದ್ದ ಅರವಿಂದ್ ಈಗ ವಲ್ಚರ್ಸ್ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ.ನಾಲ್ಕನೇ ಐಪಿಎಲ್ ಅವತರಣಿಕೆಯಲ್ಲಿ  ಅವರು ಜಹೀರ್ ಖಾನ್, ಬ್ರೆಟ್ ಲೀ, ಡೇಲ್ ಸ್ಟೇನ್ ಅವರಂಥ ವಿಶ್ವದರ್ಜೆಯ ವೇಗದ ಬೌಲರ್‌ಗಳನ್ನು ಮೀರಿಸಿ ಅತಿ ಹೆಚ್ಚು ವಿಕೆಟ್ ಪಡೆದಿದ್ದರು.ಲಸಿತ್ ಮಾಲಿಂಗ (28 ವಿಕೆಟ್) ಹಾಗೂ ಮುನಾಫ್ ಪಟೇಲ್ (22) ಬಳಿಕ ಅರವಿಂದ್ (21) ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದರು. ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಲು ಕಾರಣವಾಗಿತ್ತು.2009-10ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ತಲುಪಲು ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಜೊತೆ ಅರವಿಂದ್ ಅವರ ಪ್ರಯತ್ನ ಕೂಡ ಕಾರಣ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 20 ಪಂದ್ಯಗಳಿಂದ 68 ಕಬಳಿಸಿದ್ದಾರೆ.

 

ಆಡಿದ 17 ಐವತ್ತು ಓವರ್‌ಗಳ ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ. ಅರವಿಂದ್ ಅವರು ಪತ್ರಿಕೆಗೆ ನೀಡಿರುವ ಸಂದರ್ಶನದ ವಿವರ ಇಂತಿದೆ.* ತಂಡದಲ್ಲಿ ಸ್ಥಾನ ಸಿಕ್ಕಿದ ವಿಷಯ ನಿಮಗೆ ಗೊತ್ತಾಗಿದ್ದು ಹೇಗೆ?

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯಕ್ಕೆ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಸಿದ್ಧತೆಯಲ್ಲಿ ತೊಡಗಿದ್ದೆವು. ಆಗ ಭಾರತ ತಂಡದಲ್ಲಿ ಸ್ಥಾನ ಲಭಿಸಿದ ವಿಷಯ ನನಗೆ ಗೊತ್ತಾಯಿತು.* ಸ್ಥಾನ ಲಭಿಸಿದ ವಿಷಯ ಗೊತ್ತಾದ ತಕ್ಷಣ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?

ಒಂದು ಕ್ಷಣ ಅಚ್ಚರಿಯಾಯಿತು. ಜೊತೆಯಲ್ಲಿಯೇ ಖುಷಿಯಾಯಿತು. ಹಿರಿಯ ಕ್ರಿಕೆಟಿಗರು, ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾಗ ಆ ಖುಷಿ ಮತ್ತಷ್ಟು ಹೆಚ್ಚಾಯಿತು. ಇದೊಂದು ನನ್ನ ಜೀವನದ ಅತ್ಯುತ್ತಮ ಕ್ಷಣ. ಇಷ್ಟು ದಿನಗಳ ಕಠಿಣ ಪ್ರಯತ್ನಕ್ಕೆ ಫಲ ಲಭಿಸಿದ ಸಮಯ.ಇಷ್ಟು ದಿನಗಳ ನನ್ನ ಕನಸು ಈಡೇರಿದ ಗಳಿಗೆ.* ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತಾ?

ಈ ವರ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಾನು ಸೊಂಟದ ನೋವಿನಿಂದ ಚೇತರಿಸಿಕೊಂಡಿದ್ದೆ. ಹಾಗಾಗಿ ದೇಶಿ ಕ್ರಿಕೆಟ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರಿ ಮುಂದಿನ ಮುಂದಿನ ವರ್ಷ ಸ್ಥಾನ ಪಡೆಯುವ ಗುರಿ ನನ್ನದಾಗಿತ್ತು.* ಮುಂದಿನ ಸವಾಲಿಗೆ ಹೇಗೆ ಸಿದ್ಧವಾಗುತ್ತೀರಿ?

ಐಪಿಎಲ್ ಆಗಲಿ, ರಣಜಿ ಆಗಲಿ, ಮತ್ಯಾವುದೇ ಪಂದ್ಯವಿರಲಿ ಪೂರ್ಣ ಪ್ರಯತ್ನ ಹಾಕಿ ಆಡುವುದು ನನ್ನ ಉದ್ದೇಶ. ಹಾಗೇ, ಪ್ರದರ್ಶನ ಮಟ್ಟ ಕಾಯ್ದುಕೊಂಡು ಹೋಗಬೇಕು ಅಷ್ಟೆ. ರಾಷ್ಟ್ರೀಯ ತಂಡದಲ್ಲಿ ಯಶಸ್ವಿಯಾಗುವ ವಿಶ್ವಾಸ ನನಗಿದೆ.* ನಿಮ್ಮ ಪ್ರತಿಭೆ ಪ್ರದರ್ಶಿಸಲು ಕಾರಣವಾದ ಐಪಿಎಲ್ ಟೂರ್ನಿ ಬಗ್ಗೆ ಹೇಳಿ?

ಇದೊಂದು ನನ್ನ ಜೀವನದಲ್ಲಿ ಮರೆಯಲಾಗದ ಟೂರ್ನಿ. ಟರ್ನಿಂಗ್ ಪಾಯಿಂಟ್ ಕೂಡ. ಅತ್ಯುತ್ತಮ ಆಟಗಾರರ ನಡುವೆ ನಾನು ಮಿಂಚಿದ್ದು ಖುಷಿ ನೀಡಿತ್ತು.

 

ನನ್ನ ನೆಚ್ಚಿನ ಹೀರೊ ಜಹೀರ್ ಖಾನ್ ಜೊತೆ ಬೌಲಿಂಗ್ ಮಾಡುವ ಅವಕಾಶ ಲಭಿಸಿತು. ಚೆನ್ನಾಗಿ ಬೌಲಿಂಗ್ ಮಾಡುತ್ತ್ದ್ದಿದೀಯಾ ಎಂದು ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟಿಗರು ಕೂಡ ಮೆಚ್ಚುಗೆಯ ಮಾತು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry