ಗುರುವಾರ , ಮೇ 6, 2021
32 °C

ಯಾವುದೇ ಕ್ಷಣದಲ್ಲಿ ಚುನಾವಣೆ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು:  ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು. ಈ ಸಂದರ್ಭದಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿರುವ ನಾಯಕರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಹೇಳಿದರು.ಸಿದ್ದಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ 105ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡ ಅವರು, ಪಕ್ಷದ ಕೇಂದ್ರ ನಾಯಕರು ಮೌನವಾಗಿರಿ ಎಂದು ಸೂಚಿಸಿದ್ದಾರೆ. ಹೀಗಾಗಿ ನಾನು ಮೌನವಾಗಿದ್ದೇನೆ. ಆದರೆ ಯಾರು ಏನೇ ಹೇಳಲಿ, ಸಿದ್ದಗಂಗಾ ಶ್ರೀಗಳು ಸೂಚಿಸಿದ ದಿನ ನಾನು ಮೌನ ಮುರಿಯುತ್ತೇನೆ. ನನ್ನ ಪ್ರತಿ ಮಾತೂ ಶಿವಕುಮಾರ ಸ್ವಾಮೀಜಿ ಪ್ರೇರಣೆಯಿಂದ ಬರುತ್ತದೆ ಎಂದರು.ನನ್ನ ಪರಿಸ್ಥಿತಿ ಅಕ್ಷರಶಃ ಪಂಜರದ ಗಿಳಿಯಂತೆ ಆಗಿದೆ ಎಂದ ಅವರು ಬೆಳ್ಳಿ ಪಂಜದರಲ್ಲಿಟ್ಟ ಗಿಣಿಯೊಂದರ ನೀತಿ ಕತೆ ಹೇಳಿದರು. ~ಒಂದೂರಲ್ಲಿ ಒಬ್ಬ ಹುಡುಗ ಗಾಳಿಪಟ ಹಾರಿಸುತ್ತಿದ್ದ. ಒಂದು ಹಕ್ಕಿ ಗಾಳಿಪಟಕ್ಕಿಂತಲೂ ಎತ್ತರಕ್ಕೆ ಹಾರಿ ಹೋಯಿತು. ತನ್ನ ಪಟಕ್ಕಿಂತಲೂ ಹಕ್ಕಿ ಎತ್ತರಕ್ಕೆ ಹಾರುವುದನ್ನು ಗಮನಿಸಿ ಹೊಟ್ಟೆಕಿಚ್ಚಿನಿಂದ ಗಾಳಿಪಟ ದಾರ ಕೈಬಿಟ್ಟ.ಗಾಳಿಪಟ ಎತ್ತಲೋ ತೇಲಿ ಹೋಗಿ ನೆಲಕ್ಕೆ ಬಿತ್ತು~ ಎಂದು ಕಥೆ ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಎಚ್ಚರಿಕೆ ನೀಡಿದರು.ನನ್ನ ಪಾಲಿಗೆ ಶಿವಕುಮಾರ ಸ್ವಾಮೀಜಿಯೇ ನಡೆದಾಡುವ ದೇವರು. ಮಠದ ಆವರಣದಲ್ಲಿ ಮತ್ತೊಂದು ದೇವರ ವಿಗ್ರಹದ ಪ್ರತಿಷ್ಠಾಪನೆ ನನಗೆ ಇಷ್ಟವಿರಲಿಲ್ಲ.ಹೀಗಾಗಿ ಅಂಥ ಯಾವುದೇ ಪ್ರಯತ್ನಗಳು ಬೇಡ ಎಂದು ಸೂಚಿಸಿದೆ. ಸ್ವಾಮೀಜಿ ನನ್ನ ಮಾತು ಕೇಳಿ ವಿಗ್ರಹ ಪ್ರತಿಷ್ಠಾಪನೆ ತಡೆದರು ಎಂದು ಕೋಟಿ ಲಿಂಗ ವಿವಾದದಲ್ಲಿ ತಮ್ಮ ಪಾತ್ರ ವಿವರಿಸಿದರು.ಹೈಕೋರ್ಟ್ ತೀರ್ಪಿನಿಂದ ಆನೆ ಬಲ ಬಂದಂತಾಗಿದೆ. ಅಧಿಕಾರ ಕಳೆದುಕೊಂಡ ನಂತರವೂ ಜನ ನನ್ನೊಂದಿಗೆ ಇದ್ದಾರೆ. ರಾಜೀನಾಮೆ ಕೊಡಲು ಹೋದಾಗಲೂ ಕೇಕೆ ಹಾಕುತ್ತಾ ಜನ ನನ್ನೊಂದಿಗೆ ಹೆಜ್ಜೆ ಹಾಕಿದರು. ನನಗೆ ಅನ್ಯಾಯವಾಗುತ್ತಿದೆ ಎನಿಸಿದಾಗ, ನನಗೆ ಇಷ್ಟವಿಲ್ಲದಿದ್ದರೂ ರೆಸಾರ್ಟ್‌ಗೆ ಕರೆದೊಯ್ದರು. ದೆಹಲಿಯೂ ನನ್ನ ಬೆಂಬಲಿಗರು ಪವರ್ ತೋರಿಸಿದರು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.