ಮಂಗಳವಾರ, ಮೇ 18, 2021
28 °C

`ಯಾವುದೇ ಜ್ವರವನ್ನು ನಿರ್ಲಕ್ಷಿಸಬೇಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಯಾವುದೇ ಜ್ವರವನ್ನು ನಿರ್ಲಕ್ಷಿಸಬೇಡಿ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅಶೋಕ ಕುಮಾರ್ ಇಲ್ಲಿ ತಿಳಿಸಿದರು.

ಇಲ್ಲಿನ ಬಂಡಿಮಠ ಬಸ್‌ನಿಲ್ದಾಣ ಸಮೀಪದಲ್ಲಿರುವ ನೌಕರರ ಸಭಾಭವನದಲ್ಲಿ ಸೋಮವಾರ ನಡೆದ ತಾಲ್ಲೂಕಿನ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮಲೇರಿಯಾ, ಡೆಂಗ್ಯು ಹಾಗೂ ಚಿಕುನ್‌ಗುನ್ಯಾ ಮೊದಲಾದ ಜ್ವರದಿಂದ ಹಲವು ಮಂದಿ ಬಳಲುತ್ತಿದ್ದು ತಾಲ್ಲೂಕಿನ ಎಲ್ಲ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈ ರೋಗಗಳ ಬಗ್ಗೆ ಜನಜಾಗೃತಿ ಮತ್ತು ಸಮೀಕ್ಷೆ ನಡೆಸಬೇಕಾಗಿದೆ.ನೂತನ ಕಟ್ಟಡ ನಿರ್ಮಾಣವಾಗುವಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಮಿಕರ ಬಗ್ಗೆ ವಿಶೇಷ ಗಮನ ನೀಡಬೇಕಾಗಿದ್ದು ಅವರಲ್ಲಿ ಜ್ವರದ ಲಕ್ಷಣ ಕಂಡುಬಂದರೆ ಅದನ್ನು ನಿರ್ಲಕ್ಷಿಸದೇ ರಕ್ತ ಪರೀಕ್ಷೆ ನಡೆಸಬೇಕು. ಗ್ರಾಮೀಣ ಪ್ರದೇಶಗಳಿಂದ ಹಿಡಿದು ಪಟ್ಟಣದ ತನಕ ಎಲ್ಲ ಮನೆಮನೆಗಳಿಗೆ ಭೇಟಿ ನೀಡಿ ಮನೆಯ ಸುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸಂಗ್ರಹ ಮಾಡದಂತೆ ಜಾಗೃತಿ ಮೂಡಿಸಬೇಕು. ಘನತ್ಯಾಜ್ಯ ಸಂಗ್ರಹವಾಗಿದ್ದಲ್ಲಿ ಅವುಗಳನ್ನು ತೆರವುಗೊಳಿಸುವಂತೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಬೇಕು. ಜನರನ್ನು ಬಾಧಿಸುತ್ತಿರುವ ರೋಗಗಳ ಕುರಿತು ಮಾಹಿತಿ ನೀಡುವುದು, ಅರಿವು ಮೂಡಿಸುವುದು ಹಾಗೂ ಸಂವಾದ ನಡೆಸುವುದನ್ನು ಅವಶ್ಯ ಕೈಗೊಳ್ಳಬೇಕು ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಮಾತನಾಡಿ ಈ ರೋಗಗಳ ವಿರುದ್ಧ ಸಮರ ಸಾರಲು ಆರೋಗ್ಯಾಧಿಕಾರಿಗಳು, ಸಹಾಯಕ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಹೀಗೆ ಎಲ್ಲರೂ ಪ್ರಯತ್ನಿಸಬೇಕಾಗಿದೆ. ನರ್ಸಿಂಗ್ ವಿದ್ಯಾರ್ಥಿಗಳ ನೆರವಿನೊಂದಿಗೆ ಪ್ರತಿಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಡೆಂಗೆ ಸೊಳ್ಳೆ ಹೆಚ್ಚಾಗಿ ಹಗಲು ಹೊತ್ತು ಕಚ್ಚುವುದರಿಂದ ವಯಸ್ಸಾದವರು, ಮಕ್ಕಳು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾಗಿದೆ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಸ್ವಾಗತಿಸಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜ್ಞಾನೇಶ್ ಕಾಮತ್, ಜಿಲ್ಲಾ ಕೀಟಶಾಸ್ತ್ರಜ್ಞ ಜ್ಯೋತ್ಸ್ನಾ ಕೈರನ್ನ ಹಾಗೂ ಎಲ್ಲ ವಿಭಾಗದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.