ಸೋಮವಾರ, ಆಗಸ್ಟ್ 19, 2019
21 °C

ಯಾವ ಎಮ್ಮೆಲ್ಲೆ ಅಂತಾ ಕೇಳ್ತೀಯಂತಲ್ಲೋ...

Published:
Updated:

ಕುಷ್ಟಗಿ: ಯಾಕಪಾ, ನಮ್ಮ ಕಾರ್ಯಕರ್ತರು ಫೋನ್ ಮಾಡೀದ್ರ ಯಾವ ಎಮ್ಮೆಲ್ಲೆ ಅಂತಾ ಕೇಳ್ತೀಯಂತಲ್ಲೋ, ಯಾರ ಅನ್ನೋದು ಇನ್ನ ಗೊತೈತಿಲ್ಲಾ ನಿನಗ. ಎಷ್ಟು ಜನಾ ಅದಾರ ಎಮ್ಮೆಲ್ಲೆರು?........ಜೆಸ್ಕಾಂ ಉಪ ವಿಭಾಗದ ಅಧಿಕಾರಿಯೊಬ್ಬರನ್ನು ಶಾಸಕ ದೊಡ್ಡನಗೌಡ ಪಾಟೀಲ ಮೊಬೈಲ್‌ನಲ್ಲೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡದ್ದು ಹೀಗೆ. ಶನಿವಾರ ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಬೆಂಚಮಟ್ಟಿ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆ ನಂತರ ಮುದೇನೂರು ಭಾಗದ ಬಿಜೆಪಿ ಕಾರ್ಯಕರ್ತ ಆರ್.ಎಸ್.ಹಿರೇಮಠ ಎಂಬುವವರ ದೂರಿನ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಅಲ್ಲಿಂದಲೇ ಜೆಸ್ಕಾಂ ಅಧಿಕಾರಿಯ ಬೆವರಿಳಿಸಿದರು.ಮುದೇನೂರು ಗ್ರಾಮದಲ್ಲಿ ಈಚೆಗೆ ಶಾಲಾ ಕ್ರೀಡಾಕೂಟ ನಡೆಯುತ್ತಿದ್ದಾಗ ಜೆಸ್ಕಾಂಗೆ ಕರೆ ಮಾಡಿದ ಹಿರೇಮಠ `ಇಂದು ಶಾಸಕರು ಬರುತ್ತಾರೆ ಹಾಗಾಗಿ ವಿದ್ಯುತ್ ಲೋಡ್‌ಶೆಡ್ಡಿಂಗ್ ರದ್ದುಪಡಿಸುವಂತೆ ಕ್ರಮ ಕೈಗೊಳ್ಳಲು ಹೇಳಿದ್ದರು. ದೂರವಾಣಿ ಸಂಭಾಷಣೆ ವೇಳೆ ಜೆಸ್ಕಾಂ ಅಧಿಕಾರಿ `ಯಾವ ಎಮ್ಮೆಲ್ಲೆ?' ಎಂದು ಪ್ರಶ್ನಿಸಿದ್ದು ಶಾಸಕ ದೊಡ್ಡನಗೌಡರಿಂದ ತರಾಟೆಗೆ ಒಳಗಾಗುವಂತಾಯಿತು.

ಅಷ್ಟೇ ಅಲ್ಲ ಇನ್ನೊಮ್ಮೆ ಇಂಥ ದೂರು ಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ದೊಡ್ಡನಗೌಡ ಜೆಸ್ಕಾಂ ಅಧಿಕಾರಿಗೆ ನೀಡಿದರು.ಬದಲಾದ ಅಧಿಕಾರ: ಈ ಕ್ಷೇತ್ರದಲ್ಲಿ ಯಾರೇ ಶಾಸಕರಿದ್ದರೂ ಪರೋಕ್ಷವಾಗಿ ಅಧಿಕಾರ ಚಲಾಯಿಸುವವರು ಮಾತ್ರ ಮಾಜಿ ಶಾಸಕರು ಎಂಬುದು ಇಲ್ಲಿಯ ವಿಶೇಷ. ಕಳೆದ ಬಾರಿ ಅಮರೇಗೌಡ ಬಯ್ಯಾಪುರ ಶಾಸಕ ಆಗಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹಾಗಾಗಿ ಬಿಜೆಪಿಯ ಮಾಜಿ ಶಾಸಕರಾಗಿದ್ದ ದೊಡ್ಡನಗೌಡರ ಹಿಡಿತ ಇದ್ದುದು ಗುಟ್ಟಾಗಿ ಉಳಿದಿರಲಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಸಿಕೊಳ್ಳುತ್ತಿದ್ದಾರೆ.ಅಧಿಕಾರಿಗಳ ವರ್ಗಾವಣೆ ಮಾಜಿ ಶಾಸಕ ಬಯ್ಯಾಪುರ ಅವರನ್ನು ಅವಲಂಬಿಸಿದೆ. ತಹಶೀಲ್ದಾರ್, ಸಿಪಿಐ, ತೋಟಗಾರಿಕೆ, ಅಬಕಾರಿ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನೂ ಕೆಲ ಇಲಾಖೆ ಅಧಿಕಾರಿಗಳ ಎತ್ತಂಗಡಿ ಸನ್ನಿಹಿತವಾಗಿದ್ದು ಇಲ್ಲಿಗೆ ಬರುವುದಕ್ಕೆ ಬೇರೆಯವರಿಗೆ ಮಾಜಿ ಶಾಸಕ ಬಯ್ಯಾಪುರ ಸರ್ಕಾರಕ್ಕೆ ಶಿಫಾರಸು ಪತ್ರ ನೀಡಿದ್ದಾರೆ ಎಂಬುದನ್ನು ಹೆಸರು ಬಹಿರಂಗ ಪಡಿಸಲು ಇಚ್ಛಿಸದ  ಕೆಲ ಅಧಿಕಾರಿಗಳು `ಪ್ರಜಾವಾಣಿ' ಬಳಿ ಅಳಲು ತೋಡಿಕೊಂಡರು.

Post Comments (+)