ಶನಿವಾರ, ಮೇ 8, 2021
26 °C

ಯಾವ ಮೋಹದ ಮಾಯೆ?

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಅಮೆರಿಕದ ಪ್ರತಿಷ್ಠಿತ ಹೊರಗುತ್ತಿಗೆ ಕಂಪೆನಿ ಐ-ಗೇಟ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಫಣೀಶ್ ಮೂರ್ತಿ ಅವರನ್ನು ತಮ್ಮ ಕೈಕೆಳಗಿನ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕಂಪೆನಿಯ ಆಡಳಿತ ಮಂಡಳಿ ಮೂರು ವಾರಗಳ ಹಿಂದೆ ಕಿತ್ತುಹಾಕಿತು.ಐ-ಗೇಟ್ ನಿಯಮಾವಳಿ ಪ್ರಕಾರ, ಅಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿ ಜತೆ ಸಂಬಂಧ ಹೊಂದಿದ್ದರೆ ಆ ಕುರಿತು ಕಂಪೆನಿಗೆ ಮಾಹಿತಿ ನೀಡಬೇಕಾಗಿದ್ದು, ಆ ನಿಯಮವನ್ನು ಮೂರ್ತಿ ಪಾಲಿಸಿರಲಿಲ್ಲ. ಐ-ಗೇಟ್‌ನ ಬೃಹತ್ ಬೆಳವಣಿಗೆಗೆ ಕಾರಣರಾದ ಫಣೀಶ್‌ರನ್ನು ಹಿಂದೆ ಮುಂದೆ ನೋಡದೆ ವಜಾಗೊಳಿಸಲಾಯಿತು.ಈ ಪ್ರಕರಣ ಕುರಿತು ಫಣೀಶ್ ತಮ್ಮದೇ ಆದ ಸಮಜಾಯಿಷಿ ನೀಡಿದರು. `ಆ ಮಹಿಳೆ ಜತೆ ಲೈಂಗಿಕ ಸಂಬಂಧ ಹೊಂದಿದ್ದುದು ನಿಜ. ಈ ಬಗ್ಗೆ ಕಂಪೆನಿಗೂ ತಿಳಿಸಿದ್ದೆ. ಆದರೆ ಈ ಮಾಹಿತಿ ನೀಡಿರುವ ಸಮಯದ ಬಗ್ಗೆ ಈಗ ತಕರಾರು ಎದ್ದಿದೆ. ಇದೊಂದು ಸುಲಿಗೆ ಯತ್ನ. ನನ್ನ ವಿರುದ್ಧ ಪ್ರಕರಣ ದಾಖಲಾದಲ್ಲಿ ಕೋರ್ಟ್‌ನಲ್ಲಿ ಹೊಡೆದಾಡುತ್ತೇನೆ' ಎಂದು ಸ್ವಲ್ಪವೂ ಅಳುಕದೇ ಹೇಳಿದರು.ಮೂರ್ತಿ ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೇ ಮೊದಲಲ್ಲ. ಹತ್ತು ವರ್ಷಗಳ ಹಿಂದೆ ಫಣೀಶ್ ಭಾರತದ ಐ.ಟಿ ದೈತ್ಯ ಇನ್ಫೊಸಿಸ್‌ನ ಆಡಳಿತ ವರ್ಗದ ಅವಿಭಾಜ್ಯ ಅಂಗವಾಗಿದ್ದರು. ತಮ್ಮ ದಕ್ಷತೆಯಿಂದ ಇನ್ಫೊಸಿಸ್‌ನ ಎರಡನೇ ಮೂರ್ತಿ ಎಂಬ ಬಿರುದನ್ನು ಸಹ ಪಡೆದಿದ್ದರು. ಆದರೆ, ಇಂತಹದ್ದೇ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡು ಇನ್ಫೊಸಿಸ್‌ನಿಂದ ಅವರು ಕಾಲುಕೀಳಬೇಕಾಯಿತು. ಅಲ್ಲಿಂದ ಹೊರಬಿದ್ದ ಫಣೀಶ್ ಮೂರ್ತಿ ತಮ್ಮದೇ ಆದ ಸಾಫ್ಟ್‌ವೇರ್ ಸಂಸ್ಥೆ ಸ್ಥಾಪಿಸಿದ್ದರು. ಅದನ್ನು ಐ-ಗೇಟ್‌ನಲ್ಲಿ ವಿಲೀನಗೊಳಿಸಿ, ಐ- ಗೇಟ್ ಬೆಳವಣಿಗೆಗೂ ಕಾರಣರಾದರು.

ಫಣೀಶ್ ಮೂರ್ತಿ ಅವರನ್ನು ಹತ್ತಿರದಿಂದ ಬಲ್ಲವರು ಅವರ ಅಸಾಧ್ಯ ನಾಯಕತ್ವ ಗುಣ, ಬುದ್ಧಿವಂತಿಕೆಯನ್ನು ಕೊಂಡಾಡುತ್ತಾರೆ. ಆದರೆ, ಮಾನವ ಸಹಜ ದೌರ್ಬಲ್ಯಕ್ಕೆ ಶರಣಾಗಿ ತಮ್ಮ ವೃತ್ತಿಜೀವನವನ್ನೇ ಅವರು ಬಲಿಕೊಟ್ಟರೇ ಎಂಬ ಪ್ರಶ್ನೆಯೂ ಕಾಡುತ್ತದೆ. ಇದು ಫಣೀಶ್ ಮೂರ್ತಿ ಒಬ್ಬರದ್ದೇ ಕಥೆಯಲ್ಲ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನದ ತುತ್ತತುದಿಗೇರಿದ ವ್ಯಕ್ತಿಗಳು, ದೇಶವೊಂದರ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿರುವ ನಾಯಕರು ತಮ್ಮ ಲೈಂಗಿಕ ವಾಂಛೆಯಿಂದಾಗಿ ಪಾತಾಳಕ್ಕೆ ಕುಸಿದ ಎಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ.ಅಂತರ ರಾಷ್ಟ್ರೀಯ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್‌ನ ಏಳಿಗೆಗೆ ಕಾರಣರಾಗಿದ್ದ ಕೇರಳ ಮೂಲದ ಡೇವಿಡ್ ಡೇವಿಡಾರ್ ಅವರ ವಿರುದ್ಧ ಮೂರು ವರ್ಷಗಳ ಹಿಂದೆ ಇಂತಹದ್ದೇ ದೂರು ಕೇಳಿ ಬಂದಿತ್ತು. ಪೆಂಗ್ವಿನ್ ಕೆನಡಾದ ಮುಖ್ಯಸ್ಥರಾಗಿದ್ದ ಅವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಂಪೆನಿಯ ಮಾಜಿ ನಿರ್ದೇಶಕಿ ಲೀಸಾ ರಂಡಲ್ ಆರೋಪಿಸಿದ್ದರು. ಮೂರು ವರ್ಷಗಳ ಕಾಲ ಅವರು ತಮಗೆ ಅಶ್ಲೀಲ ಟೆಕ್ಸ್ಟ್ ಸಂದೇಶ, ಇ-ಮೇಲ್ ಕಳುಹಿಸುತ್ತಿದ್ದರು ಎಂದು ಆಕೆ ದೂರಿದ್ದರು. ಪೆಂಗ್ವಿನ್ ಸಂಸ್ಥೆ ಯಾವುದೇ ದಯೆ, ದಾಕ್ಷಿಣ್ಯ ತೋರದೇ ಡೇವಿಡ್ ಅವರನ್ನು ಮನೆಗೆ ಕಳುಹಿಸಿತು.ಅಂತರ ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಧ್ಯಕ್ಷರಾಗಿದ್ದ, ಜಾಗತಿಕ ಮಟ್ಟದಲ್ಲೂ ಭಾರಿ ಪ್ರಭಾವ ಹೊಂದಿದ್ದ ಫ್ರಾನ್ಸ್‌ನ ಡೊಮಿನಿಕ್ ಸ್ಟ್ರಾಸ್ ಖಾನ್ ಸಹ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಕಾರಣ ಎರಡು ವರ್ಷಗಳ ಹಿಂದೆ `ಐಎಂಎಫ್'ನ ಪ್ರತಿಷ್ಠಿತ ಹುದ್ದೆಯಿಂದ ಹೀನಾಯವಾಗಿ ಕೆಳಗಿಳಿಯಬೇಕಾಯಿತು. ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಆಪ್ತರಾಗಿದ್ದ ಅವರು, ಮರುವರ್ಷ ನಡೆಯಲಿದ್ದ ಫ್ರಾನ್ಸ್ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು.ಕಾರ್ಯನಿಮಿತ್ತ ನ್ಯೂಯಾರ್ಕ್‌ಗೆ ತೆರಳಿದ್ದ ಅವರು ಅಲ್ಲಿನ ಹೋಟೆಲ್ ಪರಿಚಾರಿಕೆಯನ್ನು ಬಲಾತ್ಕರಿಸುವ ಮಟ್ಟಕ್ಕೆ ಹೋಗಿದ್ದರು. ಆಕೆ ನೀಡಿದ ದೂರಿನ ಅನ್ವಯ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಲಾಯಿತು. `ಐಎಂಎಫ್' ಹುದ್ದೆಯ ಜತೆ ಅವರ ದಾಂಪತ್ಯವೂ ಮುರಿದುಬಿತ್ತು. ತಮ್ಮ ದೌರ್ಬಲ್ಯ ಹತ್ತಿಕ್ಕಲು ವಿಫಲರಾದ ಸ್ಟ್ರಾಸ್ ಖಾನ್ ಅದಕ್ಕಾಗಿ ಚಿನ್ನದಂತಹ ವೃತ್ತಿಜೀವನವನ್ನು ಬಲಿಕೊಡಬೇಕಾಯಿತು.

ಅದೊಂದು ದುರ್ಬಲ ಗಳಿಗೆಯಾಗಿತ್ತು ಎಂದು ನ್ಯೂಯಾರ್ಕ್ ಘಟನೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿ ಸ್ಟ್ರಾಸ್ ಖಾನ್ ಹೇಳಿಕೆ ನೀಡಿದರು. ಅವರ ವರ್ಣರಂಜಿತ ಬದುಕಿನ ಬಗ್ಗೆ, ಅವರು ಪಾಲ್ಗೊಳ್ಳುವ ರಂಗಿನ ಪಾರ್ಟಿಗಳ ಬಗ್ಗೆ ಮೊದಲು ಗುಸುಗುಸು ಕೇಳಿಬರುತ್ತಿತ್ತಾದ್ದರೂ ಅದೊಂದು ಹೆಮ್ಮೆಯ ಸಂಗತಿ ಎಂಬಂತೆ ಮಾಧ್ಯಮಗಳು ಬಣ್ಣಿಸುತ್ತಿದ್ದವು.90ರ ದಶಕದಲ್ಲಿ ಶ್ವೇತಭವನದಲ್ಲಿ ನಡೆದಿದ್ದ ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಶ್ವೇತಭವನದ ಇಂಟರ್ನಿ ಮೋನಿಕಾ ಲೆವೆಸ್ಕಿ ನಡುವಿನ ಲೈಂಗಿಕ ಪ್ರಕರಣವನ್ನು ಇದೇ ಸಾಲಿಗೆ ಸೇರಿಸಬಹುದು.ತಮ್ಮಲ್ಲಿನ ಪ್ರತಿಭೆಯಿಂದಾಗಿ ಅಮೆರಿಕದ ಜನರ ಆರಾಧ್ಯ ದೈವವಾಗಿದ್ದ ಅಪ್ರತಿಮ ಗಾಲ್ಫ್ ಆಟಗಾರ ಟೈಗರ್ ವುಡ್ ಸಹ ತಮ್ಮ ಸರಣಿ ಲೈಂಗಿಕ ಪ್ರಕರಣಗಳಿಂದಾಗಿ ಮೂರು ವರ್ಷಗಳ ಹಿಂದೆ ಹೆಡ್‌ಲೈನ್‌ಗಳಲ್ಲಿ ಕಾಣಿಸಿಕೊಂಡರು. ಈ ಸತ್ಯ ಹೊರಬಿದ್ದಾಗ ಅವರ ಪ್ರೀತಿಯ ಪತ್ನಿ ಮನೆಯಿಂದ ಹೊರನಡೆದರು. ಕೇವಲ ಜಾಹೀರಾತು ಒಂದರಿಂದಲೇ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದ, ಹಲವು ಕಂಪೆನಿಗಳ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಡರ್ ಆಗಿದ್ದ ಟೈಗರ್ ವುಡ್ಸ್ ಜನಪ್ರಿಯತೆಯ ಗ್ರಾಫ್ ದಿಢೀರ್ ಎಂದು ಕುಸಿದಿತ್ತು.ಪ್ರಭಾವಿಗಳ ಆಕರ್ಷಣೆ

ಅಷ್ಟಕ್ಕೂ ಇಂತಹ ಖ್ಯಾತನಾಮರು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು, ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು, ಅಸಾಧ್ಯ ಪ್ರತಿಭೆಯುಳ್ಳವರು ಕ್ಷಣಮಾತ್ರದ ಲೈಂಗಿಕ ದೌರ್ಬಲ್ಯಕ್ಕೆ ಸೋತು ವೃತ್ತಿಜೀವನವನ್ನು ಬಲಿಕೊಡುವುದು ಏಕೆ? ಸುಂದರಳಾದ ಪತ್ನಿ, ಸಂತೃಪ್ತ ವೈವಾಹಿಕ ಬದುಕು ಇದ್ದಾಗಲೂ ಯಾವ ಮೋಹದ ಮಾಯೆ ಅವರನ್ನು ಕಾಡುತ್ತದೆ?ಮನುಷ್ಯ ಎಷ್ಟೇ ಮುಂದುವರಿದರೂ, ಆಧುನಿಕತೆಗೆ ತೆರೆದುಕೊಂಡಿದ್ದರೂ ಕೆಲ ವಿಚಾರಗಳಲ್ಲಿ ಪ್ರಾಣಿ ಸಹಜ ಸ್ವಭಾವ ಮರೆಯಾಗದು. ನಮ್ಮ ಹುಟ್ಟಿಗೆ ಕಾರಣವಾಗುವ ಜೈವಿಕ ಅಂಶಗಳು ವಿವೇಚನಾ ಶಕ್ತಿಯನ್ನು ಮೀರಿ ಒಮ್ಮಮ್ಮೆ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅವು ನಮ್ಮ ನಡವಳಿಕೆ, ವರ್ತನೆಯಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಮಾನವಶಾಸ್ತ್ರಜ್ಞರು.ಅಮೆರಿಕದ ಉತಾಹ್ ವಿಶ್ವವಿದ್ಯಾಲಯದ ಜೀವವಿಜ್ಞಾನಿ ಡೇವಿಡ್ ಕರಿಯರ್ ಪ್ರಕಾರ, ಲೈಂಗಿಕ ಆಯ್ಕೆಯ ಪ್ರಶ್ನೆ ಬಂದಾಗ ಹೆಣ್ಣು ಪ್ರಾಣಿ ಬಲಶಾಲಿ ಗಂಡಿನತ್ತ ಆಕರ್ಷಿತವಾಗುತ್ತದೆ. ಬಲಶಾಲಿ ಗಂಡುಗಳು ತಮಗೆ, ತಮ್ಮ ಸಂತಾನಕ್ಕೆ ಉತ್ತಮ ರಕ್ಷಣೆ ಒದಗಿಸಬಲ್ಲರು ಎಂಬ ಅಂಶ ಈ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿ ಪ್ರಪಂಚದ ಈ ನಿಯಮಕ್ಕೆ ಮನುಷ್ಯರೂ ಹೊರತಲ್ಲ. ಪ್ರಾಣಿಗಳಲ್ಲಿ ದೈಹಿಕ ಬಲ ಹೆಣ್ಣುಗಳನ್ನು ಆಕರ್ಷಿಸಿದರೆ, ಮನುಷ್ಯರಲ್ಲಿ ಅಧಿಕಾರ ಮತ್ತು ಪ್ರಭಾವ ಆ ಕೆಲಸ ಮಾಡುತ್ತದೆ.ಬ್ರಿಟನ್ ಸಂಶೋಧಕರು ಲೈಂಗಿಕ ವರ್ತನೆಗಳ ಕುರಿತು ನಡೆಸಿದ್ದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಬಹುತೇಕ ಮಹಿಳೆಯರು ಸಾಮಾನ್ಯ ಪುರುಷರಿಗಿಂತ, ಸಿರಿವಂತ ಪುರುಷರ ಜತೆಗಿನ ಲೈಂಗಿಕ ಸಂಬಂಧ ಹೆಚ್ಚು ತೃಪ್ತಿ ನೀಡುತ್ತದೆ ಎಂದು ಹೇಳಿದ್ದರು. ಲಂಡನ್ ಟೈಮ್ಸ ಈ ವರದಿ ಪ್ರಕಟಿಸಿತ್ತು. ಹೆಸರು, ಸಂಪತ್ತು, ಅಧಿಕಾರ ಮತ್ತು ಪ್ರಭಾವ ಹೊಂದಿರುವ ಪುರುಷರತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ ಎನ್ನುವುದು ಸುಳ್ಳಲ್ಲ. ಸಹೋದ್ಯೋಗಿಗಳು, ಸಂಗೀತ- ನೃತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಕಾಣುವ ಗುರು-ಶಿಷ್ಯೆಯರ ನಡುವಿನ ಬೌದ್ಧಿಕ ಆಕರ್ಷಣೆಯನ್ನೂ ಈ ಸಾಲಿಗೆ ಸೇರಿಸಬಹುದು.ಕಾರಣವೇನು?

ರಾಜಕಾರಣಿಗಳು ಸೇರಿದಂತೆ ದೊಡ್ಡ, ದೊಡ್ಡ ಕಂಪೆನಿಗಳ ಮೇಲುಸ್ತರದ ಅಧಿಕಾರಿಗಳು, ಪ್ರಭಾವಿಗಳು, ಸಿನಿಮಾ ನಟರು, ಫುಟ್‌ಬಾಲ್, ಟೆನಿಸ್ ಆಟಗಾರರು, ಕಲಾವಿದರು ಎಲ್ಲಿಯೇ ಹೋದರೂ ಅವರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತದೆ. ಅವರನ್ನು ಆರಾಧನಾ ಭಾವದಿಂದ ನೋಡಲಾಗುತ್ತದೆ. ತಾವು ಮತ್ತಷ್ಟು ಬಲಶಾಲಿಗಳು ಎಂಬ ಭ್ರಮೆ ಅವರಲ್ಲಿ ಹುಟ್ಟಲು ಕಾರಣವಾಗುತ್ತದೆ. ತಾವು ಹೇಗೆಯೇ ನಡೆದುಕೊಂಡರೂ ನಡೆಯುತ್ತದೆ, ತಾವು ಮಾಡುವುದೇ ಸರಿ ಎಂಬ ತಪ್ಪು ಕಲ್ಪನೆ ಅವರಲ್ಲಿ ಮೂಡುತ್ತದೆ.ಪ್ರಭಾವಿ ಪುರುಷರ ಜತೆ ಕೆಲಸ ಮಾಡುವ ಯಾವುದೋ ಮಹಿಳಾ ಉದ್ಯೋಗಿ, ಆಕರ್ಷಣೆಗೋ, ಕೆಲಸ ಕಳೆದುಕೊಳ್ಳುವ ಭೀತಿಯಿಂದಲೋ ಅವರ ಲೈಂಗಿಕ ಅಭೀಷ್ಟೆಯನ್ನು ಈಡೇರಿಸಿರಬಹುದು. ಒಮ್ಮೆ ಇಂತಹ ಅನುಭವ ಪಡೆದ ಮೇಲೆ ಎಲ್ಲ ಸಂದರ್ಭಗಳಲ್ಲೂ ಕೈಕೆಳಗಿನ ಮಹಿಳಾ ಉದ್ಯೋಗಿಗಳಿಂದ ಅವರು ಅದನ್ನೇ ಬಯಸುತ್ತಾರೆ. ಎಲ್ಲವೂ ಸರಿಯಾಗಿ ನಡೆದಲ್ಲಿ ಆದೀತು. ಇಂತಹ ಪ್ರಕರಣಗಳು ಬಹಿರಂಗಗೊಂಡಾಗ ಫಣೀಶ್ ಮೂರ್ತಿ, ಸ್ಟ್ರಾಸ್ ಖಾನ್ ಅವರಂತೆ ತಲೆದಂಡ ನೀಡಬೇಕಾಗುತ್ತದೆ. ವ್ಯಕ್ತಿತ್ವವೇ ಕುಸಿದುಬಿದ್ದು ಮುಜುಗರ ಎದುರಿಸಬೇಕಾಗುತ್ತದೆ.ಪ್ರತಿಷ್ಠಿತರಿಗೆ ಸಂಬಂಧಿಸಿದ ಹಗರಣಗಳಲ್ಲಿ ಕೆಳಹಂತದ ಸಹೋದ್ಯೋಗಿ ಒಪ್ಪಿಕೊಂಡೇ ಲೈಂಗಿಕ ಸುಖ ನೀಡಿರಬಹುದು. ಆನಂತರ ಅದನ್ನೇ ಬಂಡವಾಳವಾಗಿಸಿಕೊಂಡು ಈ ಮಹಿಳೆಯರು ಖ್ಯಾತನಾಮರನ್ನು ಇಕ್ಕಟ್ಟಿಗೆ ಸಿಕ್ಕಿಸಿದ, ಭಾರಿ ಮೊತ್ತದ ಪರಿಹಾರ ಪಡೆದುಕೊಂಡ ಪ್ರಕರಣಗಳು ಸಾಕಷ್ಟಿವೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಪ್ರಭಾವಿಗಳು ಉದ್ಯೋಗದಿಂದ ಕಿತ್ತುಹಾಕುವ ಬೆದರಿಕೆ ಒಡ್ಡಿ, ಇಲ್ಲವೇ ಬಡ್ತಿ ನೀಡುವ, ಹೆಚ್ಚಿನ ಅವಕಾಶಗಳನ್ನು ನೀಡುವ ಆಮಿಷ ಒಡ್ಡಿ ಮಹಿಳಾ ಸಹೋದ್ಯೋಗಿಯನ್ನು ಲೈಂಗಿಕವಾಗಿ ಬಳಸಿಕೊಂಡಿರಬಹುದು. ಸನ್ನಿವೇಶ ಎಂಥದ್ದೇ ಇರಲಿ, ಅಂತಿಮವಾಗಿ ಹಾಳಾಗುವುದು ಕಚೇರಿಯ ವಾತಾವರಣ. ಮೇಲಧಿಕಾರಿಯ ತಾರತಮ್ಯ ಧೋರಣೆ ಎಲ್ಲರ ಕಣ್ಣುಕುಕ್ಕುತ್ತದೆ.ಇನ್ನು ಸಮಾಜದ ಕೆಳವರ್ಗದ ಮಹಿಳೆಯ ಮೇಲೆ ನಿತ್ಯ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸುದ್ದಿಯಾಗುವುದೇ ಇಲ್ಲ. ಗಾರ್ಮೆಂಟ್ ಕೆಲಸಗಾರರು, ಮನೆ ಕೆಲಸದವರು, ಮನೆ ಕಟ್ಟುವ ಕೆಲಸ ಮಾಡುವ ಮಹಿಳೆಯರು ಮೇಸ್ತ್ರಿಯಿಂದ, ಮೇಲ್ವಿಚಾರಣಾ ಅಧಿಕಾರಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಲೇ ಇರುತ್ತಾರೆ. ತೊತ್ತಿನ ಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆಯಿಂದ ಈ ಮಹಿಳೆಯರು ಅಂತಹ ಕಿರುಕುಳ ಸಹಿಸಿಕೊಳ್ಳಬೇಕಾಗುತ್ತದೆ.ನೈತಿಕ, ಅನೈತಿಕತೆಯ ನಡುವಿನ ಗೆರೆ ತುಂಬಾ ತೆಳು. ಆ ಮೌಲ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗುತ್ತಲೇ ಹೋಗುತ್ತವೆ. ಆದರೆ, ತಾನು ಇರುವ ಹುದ್ದೆಯ ಕಾರಣದಿಂದಾಗಿ ಕೆಳ ಹಂತದ ಮಹಿಳಾ ಉದ್ಯೋಗಿಯಿಂದ ಲೈಂಗಿಕ ಸುಖ ಬಯಸುವುದನ್ನು, ಪಡೆಯುವುದನ್ನು ಯಾವ ಆಡಳಿತ ಮಂಡಳಿಯೂ ಒಪ್ಪಿಕೊಳ್ಳದು. ಕಚೇರಿಯ ವಾತಾವರಣವನ್ನು ಸೌಹಾರ್ದವಾಗಿ ಇಡುವಲ್ಲಿ, ತಮ್ಮ ವೃತ್ತಿಜೀವನವನ್ನು ಸುಭದ್ರವಾಗಿ ಕಾಪಾಡಿಕೊಳ್ಳುವಲ್ಲಿ ಕೆಳಹಂತದ ಮಹಿಳಾ ಸಹೋದ್ಯೋಗಿ ತಾನೇ ಒಪ್ಪಿಕೊಂಡು ಲೈಂಗಿಕ ಸಂಬಂಧಕ್ಕೆ ಮುಂದಾದ ಸಂದರ್ಭದಲ್ಲೂ ಪುರುಷ ಮೇಲಧಿಕಾರಿ ಸಂಯಮ ವಹಿಸುವುದು ಒಳಿತು.ಕಾರ್ಪೊರೇಟ್ ಕಲ್ಚರ್

ಮೇಲಧಿಕಾರಿಗಳು ಕೆಳ ಹಂತದ ಮಹಿಳಾ ಸಹೋದ್ಯೋಗಿಗಳನ್ನು ಲೈಂಗಿಕ ದೃಷ್ಟಿಯಿಂದ ನೋಡುವುದು ಏಕೆ? `ಭೂಮಿಕಾ'ದ ಪ್ರಶ್ನೆಗೆ ಇಬ್ಬರು ತಜ್ಞರು ಉತ್ತರಿಸಿದ್ದಾರೆ.ಇದಕ್ಕೆಲ್ಲ ಈಗಿನ `ಕಾರ್ಪೊರೇಟ್ ಕಲ್ಚರ್' ಬಹುತೇಕ ಕಾರಣ. ಕಾರ್ಪೊರೇಟ್ ಜಗತ್ತಿನಲ್ಲಿ ನೀನು ಮೇಲಕ್ಕೆ ಏರಿದರೆ

ಅಧಿಕಾರ, ಸೌಲಭ್ಯ, ಸವಲತ್ತು ಎಲ್ಲವೂ ಸಿಗುತ್ತದೆ ಎಂಬ ಭಾವ ಮೂಡಿಸಲಾಗುತ್ತದೆ. ನೀನೇ ಎಲ್ಲವೂ ಎಂಬ ಭ್ರಮೆ ಹುಟ್ಟಿಸಲಾಗುತ್ತದೆ. ಅಂತಹ ವಾತಾವರಣದಲ್ಲಿ ಯಾವುದೇ ವ್ಯಕ್ತಿಗೆ ಅಧಿಕಾರ ದೊರಕಿದಾಗ ಆತನಿಗೆ ಮದ ಏರುತ್ತದೆ. ಪ್ರಾಣಿ ಸಹಜ ಕೋಪ, ತಾಪ ಹೆಚ್ಚುತ್ತದೆ. ಅದರ ಜತೆ ಲೈಂಗಿಕ ಇಚ್ಛೆಯೂ ಹೆಚ್ಚುತ್ತದೆ. ನಾನು ಎಲ್ಲವನ್ನೂ ನಿಯಂತ್ರಿಸುತ್ತೇನೆ, ಉಳಿದವರೆಲ್ಲ ನನಗೆ ತಲೆಬಾಗಬೇಕು ಎಂಬ ದರ್ಪ ಕಾಣುತ್ತದೆ. ಮಹಿಳಾ ಸಹೋದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು, ಅವರಿಂದ ಲೈಂಗಿಕ ಸುಖ ಬಯಸಲು ಈ ಮನೋವೈಜ್ಞಾನಿಕ ಅಂಶ ಕಾರಣವಾಗುತ್ತದೆ. ಉದ್ಯೋಗದಲ್ಲಿ ಮೇಲೆ ಏರಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕೆಲ ಮಹಿಳೆಯರು ಇದಕ್ಕೆಲ್ಲ ಒಪ್ಪಿಕೊಳ್ಳಬಹುದು.

- ಡಾ. ಕಾರ್ತಿಕ್ ಕಶ್ಯಪ್,ಮನೋರೋಗ ತಜ್ಞಅಸಹಾಯಕ ಸ್ಥಿತಿ


ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ಇಲ್ಲದಿರುವುದು, ಪುರುಷರಲ್ಲಿನ ಅತಿಯಾದ ಲೈಂಗಿಕ ಆಸಕ್ತಿ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಮಹಿಳೆಯರು ಜೀವನ ನಿರ್ವಹಣೆಗಾಗಿ, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಇದಕ್ಕೆಲ್ಲ ಸಮ್ಮತಿ ಸೂಚಿಸಬಹುದು. ಮಹಿಳೆಯರ ಅಸಹಾಯಕ ಪರಿಸ್ಥಿತಿಯನ್ನು ಪುರುಷ ಮೇಲಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಡಾ. ಪದ್ಮಿನಿ ಪ್ರಸಾದ್, ಲೈಂಗಿಕ ರೋಗ ತಜ್ಞೆಮಹಿಳೆಯರು ಏಕೆ ಭಿನ್ನ?


ಅಧಿಕಾರಯುತ ಹುದ್ದೆಯಲ್ಲಿರುವ ಪುರುಷರು ಮಾಡಿದಂತೆ ಪ್ರಭಾವಿ ಮಹಿಳೆಯರು ತಮ್ಮ ಕೈಕೆಳಗಿನ ಪುರುಷ ಸಹೋದ್ಯೋಗಿಗಳ ಜತೆ ನಡೆದುಕೊಳ್ಳುವುದಿಲ್ಲವೇಕೆ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಇದಕ್ಕೂ ಜೀವವಿಜ್ಞಾನ ಉತ್ತರ ಹೇಳುತ್ತದೆ.ತಮ್ಮ ವಂಶವಾಹಿಗಳನ್ನು ಹೆಚ್ಚೆಚ್ಚು ಹರಡುವುದು ಬಹುತೇಕ ಎಲ್ಲ ಜೀವಿಗಳ ಜೈವಿಕ ಆಶಯವಾಗಿರುತ್ತದೆ. ಪುರುಷರಲ್ಲಿ ಈ ಅಭೀಪ್ಸೆ ಹೆಚ್ಚಿರುತ್ತದೆ. ಪ್ರಾಚೀನ ಕಾಲದಲ್ಲಿ ರಾಜ, ಮಹಾರಾಜರು, ಜಮೀನುದಾರರು ಹೆಚ್ಚೆಚ್ಚು ಪತ್ನಿಯರು, ಉಪ ಪತ್ನಿಯರನ್ನು ಹೊಂದಿರುತ್ತಿದ್ದುದು, ಯುದ್ಧದಲ್ಲಿ ಗೆದ್ದ ರಾಜ, ಸೋತ ರಾಜನ ಹೆಂಡತಿಯನ್ನು ತನ್ನವಳಾಗಿಸಿಕೊಳ್ಳಲು ಹೊರಡುತ್ತಿದ್ದುದರ ಹಿಂದೆ ತನ್ನ ಬಲ ಸ್ಥಾಪಿಸಿಕೊಳ್ಳುವ ಜತೆ ತನ್ನ ವಂಶವಾಹಿಯನ್ನು ಬಲಗೊಳಿಸಿಕೊಳ್ಳುವ ಸುಪ್ತ ಆಶಯವೂ ಇರುತ್ತಿತ್ತು. ಆದರೆ, ಮಹಿಳೆಯರು ಹಾಗಲ್ಲ. ಅವರು ಸಂಯಮದಿಂದ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ, ಅವರನ್ನು ಬೆಳೆಸುವಲ್ಲಿ ಸಹಾಯ ಮಾಡುವ ಆರೋಗ್ಯವಂತ ಪುರುಷರತ್ತ ಅವರ ಒಲವು ಇರುತ್ತದೆ.  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.