ಯಾಸೀನ್ ಭಟ್ಕಳ ಸಹಚರನಿಗಾಗಿ ಹುಡುಕಾಟ

7

ಯಾಸೀನ್ ಭಟ್ಕಳ ಸಹಚರನಿಗಾಗಿ ಹುಡುಕಾಟ

Published:
Updated:

ಪಟ್ನಾ (ಐಎಎನ್‌ಎಸ್): ನೇಪಾಳ ಗಡಿಯಲ್ಲಿ ಇತ್ತೀಚೆಗೆ ಪೊಲೀಸರಿಗೆ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳನ ಆಪ್ತ ಸಹಚರರಿಗೆ ಬಲೆ ಬೀಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಅಧಿಕಾರಿಗಳು ಸೋಮವಾರ ಬಿಹಾರದ ಸಮಸ್ಟಿಪುರ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.ಭಟ್ಕಳ ಸೆರೆ ಸಿಕ್ಕ ನಾಲ್ಕು ದಿನಗಳ ನಂತರ ಸೋಮವಾರ ಸಮಷ್ಟಿಪುರ ಜಿಲ್ಲೆಗೆ ಬಂದಿಳಿದ ಎನ್‌ಐಎ ಅಧಿಕಾರಗಳ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿತು.ಭಟ್ಕಳ ಸಹಚರ ಹಾಗೂ ಹಲವು ಭಯೋತ್ಪಾದನಾ ದಾಳಿಗಲಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ತಹ್ಸಿಮ್ ಅಲಿಯಾಸ್ ಮೋನುನ ಸ್ವಗ್ರಾಮ ಮನಿಯಾರಿ ಗ್ರಾಮದಲ್ಲಿಯ ಮನೆಯ ಮೇಲೆ ಹಠಾತ್ ದಾಳಿ ನಡೆಸಿದ ತಂಡ ಬರಿಗೈಯಲ್ಲಿ ಮರಳಿದೆ. ದಾಳಿಯ ವೇಳೆ ಮೋನು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಮೋನು ತಲೆಗೆ ಎನ್‌ಐಎ ಹತ್ತು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಅವನ ವಿರುದ್ಧ ಬಂಧನ ವಾರೆಂಟ್ ಕೂಡಾ ಹೊರಡಿಸಲಾಗಿದೆ. ಹಲವಾರು ವಿಧ್ವಂಸಕ ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ಪೊಲಿಸರಿಗೆ ಬೇಕಾಗಿರುವ ಮೋನುಗಾಗಿ ಎನ್‌ಐಎ ಅಧಿಕಾರಿಗಳು ಈ ವರ್ಷದ ಆರಂಭದಲ್ಲಿಯೇ ಹುಟುಕಾಟ ನಡೆಸಿದ್ದರು. ಕಳೆದ ಎಂಟು ತಿಂಗಳಲ್ಲಿ ಮೂರು ಬಾರಿ ಎನ್‌ಐಎ ಅಧಿಕಾರಿಗಳು ಅವನ ಮನೆಯ ಮೇಲೆ ದಾಳಿ ನಡೆಸಿದ್ದಾರೆ.ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಿಹಾರದ ಯುವಕರನ್ನು ನಿಯೋಜಿಸುತ್ತಿದ್ದ ಯಾಸೀನ್ ಭಟ್ಕಳ, ಬಾಂಬ್ ಸ್ಫೋಟ ಮತ್ತು ಭಯೋತ್ಪಾದನಾ ಪ್ರಕರಣಗಳಲ್ಲಿ 12 ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ.ಕಳೆದ ಐದು ವರ್ಷಗಳಿಂದ ಬಿಹಾರದ ಮಿಥಿಲಾಂಚಲ, ದರ್ಭಾಂಗ, ಮಧುಬನಿ ಮತ್ತು ಸಮಷ್ಟಿಪುರ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳಿಗಾಗಿ ಬಡ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾಗಿ ಭಟ್ಕಳ ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.    

      

ಇದೇ ಜನವರಿಯಲ್ಲಿ ದರ್ಭಾಂಗ ಜಿಲ್ಲೆಯ ಚಕ್‌ಜೋರಾ ಗ್ರಾಮದಲ್ಲಿ ಭಟ್ಕಳ ಸಹಚರ ಡ್ಯಾನಿಷ್ ಅನ್ಸಾರಿಯನ್ನು ಎನ್‌ಐಎ ತಂಡ ಬಂಧಿಸಿತ್ತು. 2009 ಮತ್ತು 2010ರಲ್ಲಿ ಭಟ್ಕಳನಿಗೆ ಅನ್ಸಾರಿ ಆಶ್ರಯ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಸಕ್ರಿಯನಾಗಿದ್ದ ಯಾಸೀನ್ ಭಟ್ಕಳನ ಚಟುವಟಿಕೆಗಳ ಬಗ್ಗೆ ಎನ್‌ಐಎ ತಂಡ ಕೋಲ್ಕತ್ತದಲ್ಲಿ ತನಿಖೆಯನ್ನು ಚುರುಕುಗೊಳಿಸಿದೆ.ಬಂಧಿತ ಶಂಕಿತ ಉಗ್ರರು ವಿಚಾರಣೆಯ ವೇಳೆ ನಿಡಿದ ಸುಳಿವಿನ ಮೇಲೆ ಎನ್‌ಐಎ ತಂಡ ಪಶ್ಚಿಮ ಬಂಗಾಳದ ಹಲವೆಡೆ ಶೋಧ ನಡೆಸುತ್ತಿದೆ.ಭಟ್ಕಳ ರಾಜ್ಯದಲ್ಲಿ ಅನೇಕ ವರ್ಷ ತಲೆಮರೆಸಿಕೊಂಡಿದ್ದ. ನೇಪಾಳ ಗಡಿಯಲ್ಲಿ ಸಕ್ರಿಯನಾಗಿದ್ದ ಭಟ್ಕಳ ಅನೇಕ ಕಾರ್ಯಾಚರಣೆಗಳನ್ನು ಇಲ್ಲಿಂದಲೇ ನಡೆಸಿದ್ದ ಎಂದು ಇಂಡಿಯನ್ ಮುಜಾಹಿದೀನ್‌ನ ಬಂಧಿತ ಉಗ್ರರಾದ ಅನ್ವರ್ ಮಲಿಕ್ ಮತ್ತು ಮಹಮ್ಮದ್ ಫಾಸಿಹ್ ಬಾಯ್ಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry