ಯಾಹೂ : ವಿಚಾರಣೆ ತಡೆಯಾಜ್ಞೆಗೆ ನಕಾರ

7

ಯಾಹೂ : ವಿಚಾರಣೆ ತಡೆಯಾಜ್ಞೆಗೆ ನಕಾರ

Published:
Updated:

ನವದೆಹಲಿ (ಪಿಟಿಐ): ವೆಬ್‌ಸೈಟ್‌ಗಳಲ್ಲಿ ಆಕ್ಷೇಪಾರ್ಹ ವಿಷಯಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಕೆಳಹಂತದ ನ್ಯಾಯಾಲಯವೊಂದು ತನಗೆ ಸಮನ್ಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ  ಯಾಹೂ ಇಂಡಿಯಾ ಅರ್ಜಿ ಸಲ್ಲಿಸಿದ್ದು ದೆಹಲಿ ಹೈಕೋರ್ಟ್ ಆ ನ್ಯಾಯಾಲಯದ ವಿಚಾರಣೆಯನ್ನು ತಡೆಹಿಡಿಯಲು ನಿರಾಕರಿಸಿದೆ.ವಿಚಾರಣೆಗೆ ತಡೆಯಾಜ್ಞೆ ನೀಡಲು ಶುಕ್ರವಾರ ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೈಟ್, ತಮಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಾರ್ಚ್ ಒಂದರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕೆಳ ನ್ಯಾಯಾಲಯವು ಮಾರ್ಚ್ 13ರಂದು ಪ್ರಕರಣದ ವಿಚಾರಣೆ ನಡೆಸುವುದಕ್ಕೂ ಮುನ್ನವೇ ಹೈಕೋರ್ಟ್ ವಿಚಾರಣೆ ಆರಂಭಿಸಲಿದ್ದು, ಈ ಹಂತದಲ್ಲಿ ಯಾವುದೇ ಆದೇಶ ನೀಡುವುದಿಲ್ಲ ಎಂದು ಅವರು ಹೇಳಿದರು.ಯಾಹೂ ಇಂಡಿಯಾ ಪ್ರೈವೇಟ್ ಲಿ. ಪರವಾಗಿ ಹಾಜರಿದ್ದ ಹಿರಿಯ ವಕೀಲ ಅರವಿಂದ್ ನಿಗಮ್, ದೂರಿನಲ್ಲಿ ಕಂಪೆನಿಯ ಹೆಸರನ್ನು ನಮೂದಿಸಿಲ್ಲದ ಕಾರಣ ಕಲಾಪಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಬೇಕೆಂದು ಕೋರಿದರು. ಕೆಳನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವ ವಿನಯ್ ರಾಯ್ ಅವರು ತಮಗೆ ಪ್ರತಿವಾದಿ ಅರ್ಜಿಯ ಪ್ರತಿ ಸಿಗದ ಕಾರಣ ಪ್ರತ್ಯುತ್ತರ ನೀಡಲು ಕಷ್ಟವಾಗುತ್ತದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.ಈ ಹಿಂದೆ ಜನವರಿ 20ರಂದು, ತನಗೆ ಸಮನ್ಸ್ ನೀಡಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಯಾಹೂ ಇಂಡಿಯಾ ಸಲ್ಲಿಸಿದ ಅರ್ಜಿಯ ಮೇಲೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆಗ ನ್ಯಾಯಾಲಯವು ಯಾಹೂ ಇಂಡಿಯಾ ಅರ್ಜಿಯ ಪ್ರತ್ಯೇಕ ವಿಚಾರಣೆಗೆ ಅವಕಾಶ ನೀಡಿತ್ತು.`ದೂರುದಾರರ ಅರ್ಜಿ ಮತ್ತು ಮ್ಯಾಜಿಸ್ಟ್ರೇಟ್ ಆದೇಶವು ಜಾಂಬೀ, ಆರ್ಕುಟ್, ಯೂ ಟ್ಯೂಬ್, ಫೇಸ್‌ಬುಕ್, ಬ್ಲಾಗ್‌ಸ್ಪಾಟ್ ವೆಬ್‌ಸೈಟ್‌ಗಳಿಂದ ವಶಪಡಿಸಿಕೊಂಡ ಆಕ್ಷೇಪಾರ್ಹ ಸಾಮಗ್ರಿಗಳೊಂದಿಗೆ ತಳಕು ಹಾಕಿದ್ದು, ಆದರೆ ಇದಾವುದೂ ನನಗೆ ಸಂಬಂಧಿಸಿಲ್ಲ~ ಎಂದು ಯಾಹೂ ಇಂಡಿಯಾ ವಾದಿಸಿದೆ. `ಇತರ 20 ವೆಬ್‌ಸೈಟ್‌ಗಳಿಗೆ ಸಮನ್ಸ್ ಜಾರಿಗೊಳಿಸಿರುವುದರ ಭಾಗವಾಗಿ ನಮಗೂ ಸಮನ್ಸ್ ನೀಡಿದ್ದು, ಯಾಹೂ ಇಂಡಿಯಾದಿಂದ ಪಡೆದ ಯಾವ ಸಾಮಗ್ರಿಯನ್ನೂ ದೂರಿನಲ್ಲಿ ಪ್ರಸ್ತಾಪಿಸಿಲ್ಲ~ ಎಂದೂ ಸಂಸ್ಥೆ ತಿಳಿಸಿದೆ.`ದೂರಿನಲ್ಲಿ ಆರೋಪಿಸಿದಂತೆ ಯಾಹೂ ಇಂಡಿಯಾ ಸಾಮಾಜಿಕ ಜಾಲತಾಣವಲ್ಲ, ಬದಲಾಗಿ ಇ-ಮೇಲ್ ಮತ್ತು ಚಾಟ್ ಸೇವೆ ಮಾತ್ರ ಒದಗಿಸುತ್ತಿದೆ. ಯಾಹೂವಿನಲ್ಲಿ ಯಾವುದೇ ಆಕ್ಷೇಪಾರ್ಹ ಸಾಮಗ್ರಿಗಳನ್ನು ಹಾಕ್ಲ್ಲಿಲ~   ಎಂದಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಡಿ. 23ರಂದು ಅಪರಾಧ ಸಂಚು, ಅಶ್ಲೀಲ ಪುಸ್ತಕ ಮತ್ತು ಸಾಮಗ್ರಿಗಳ ಮಾರಾಟ  ಆರೋಪಗಳ ಮೇಲೆ 21 ವೆಬ್‌ಸೈಟ್‌ಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.ಇದಕ್ಕೂ ಮುನ್ನ ಕೇಂದ್ರ ಸರ್ಕಾರವು 21 ವೈಬ್‌ಸೈಟ್‌ಗಳಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಮತ್ತು ವರ್ಗಗಳ ನಡುವೆ ದ್ವೇಷ ಹೆಚ್ಚಿಸುವ ಅಪರಾಧ ವಿಷಯಗಳನ್ನು ಹಾಕಿರುವುದಕ್ಕೆ ಸಾಕಷ್ಟು ಪುರಾವೆ ಇರುವುದಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ತಾವು ಯಾವುದೇ ಅಪರಾಧ ಎಸಗದ ಕಾರಣ ತಮ್ಮ ಮೇಲಿನ ಸಮನ್ಸ್ ರದ್ದುಪಡಿಸುವಂತೆ ಗೂಗಲ್ ಇಂಡಿಯಾ ಮತ್ತು ಫೇಸ್‌ಬುಕ್ ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮನ್ಸ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry