ಸೋಮವಾರ, ನವೆಂಬರ್ 18, 2019
28 °C

`ಯುಗದ ವೇಗಕ್ಕೆ ಹೊಂದಿಕೊಳ್ಳದಿದ್ದರೆ ಕನ್ನಡಕ್ಕೆ ಉಳಿವಿಲ್ಲ'

Published:
Updated:

ಮಂಗಳೂರು:  `ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಂಡು ನಾವು ಬೀಗಬಹುದು. ಆದರೆ, ಯುಗದ ವೇಗಕ್ಕೆ ಕನ್ನಡವನ್ನು ಹೊಂದಿಸದಿದ್ದರೆ ಈ ಭಾಷೆಗೆ ಉಳಿಗಾಲವಿಲ್ಲ' ಎಂದು ಕನ್ನಡ ಸಾಹಿತಿ ನಾ.ದಾಮೋದರ ಶೆಟ್ಟಿ ಅಭಿಪ್ರಾಯಪಟ್ಟರು.ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಡಿ.ಪರಮೇಶ್ವರ ಹೆಬ್ಬಾರ್ ಸಭಾಂಗಣದ ಎಂ.ವಾಸುದೇವ ರಾವ್ ವೇದಿಕೆಯಲ್ಲಿ ಭಾನುವಾರ ನಡೆದ ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಜಾಗತೀಕರಣಕ್ಕೆ ದುಡ್ಡಿನ ಭಾಷೆ ಬೇಕು. ಇದನ್ನರಿಯದ ಕನ್ನಡವನ್ನು ಜಾಗತೀಕರಣ ಒಪ್ಪಿಕೊಳ್ಳುವುದಿಲ್ಲ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶೇ 33ರಷ್ಟು ಕಂಪೆನಿಗಳು ರಾಜ್ಯದಲ್ಲಿವೆ. ನೆಲದಲ್ಲಿ ಆಶ್ರಯ ಪಡೆದು ಕನ್ನಡಿಗರನ್ನು ಇಂಗ್ಲಿಷಿಗರನ್ನಾಗಿ ಪರಿವರ್ತಿಸಿರುವ ಇನ್ಫೋಸಿಸ್, ವಿಪ್ರೋದಂತಹ ಕಂಪೆನಿಗಳು ಕನ್ನಡಕ್ಕಾಗಿ ಏನು ಮಾಡಿವೆ? ಆಧುನಿಕ ತಂತ್ರಜ್ಞಾನದಲ್ಲಾಗುವ ಬೆಳವಣಿಗೆಗಳು ನಾರಾಯಣಮೂರ್ತಿ ಅವರಿಗೆ ಗೊತ್ತಿರಲಿಲ್ಲವೇ?' ಎಂದು ಅವರು ಪ್ರಶ್ನಿಸಿದರು  `ಆಧುನಿಕ ತಂತ್ರಜ್ಞಾನವನ್ನು ಕನ್ನಡ ಭಾಷೆಯಲ್ಲೂ ಅಳವಡಿಸಿ ಅಭಿವೃದ್ಧಿಪಡಿಸಿದ್ದರೆ ಈ ಭಾಷೆಗೂ ಮನ್ನಣೆ ಸಿಗುತ್ತಿತ್ತು. ನಮ್ಮಲ್ಲಿ ಆಶ್ರಯ ಪಡೆದ ಕಂಪೆನಿಗಳಿಂದಾಗಿಯೇ ಈ ನೆಲದಿಂದ ಕನ್ನಡ ಗಡಿಪಾರು ಆಗುವ ಸ್ಥಿತಿ ಎದುರಿಸುತ್ತಿದೆ' ಎಂದು ಅಭಿಪ್ರಾಯಪಟ್ಟರು.`ಮಕ್ಕಳಿಗೆ ನಾವು ಕಷ್ಟಪಟ್ಟು ವಿದ್ಯೆ ಕಲಿಸುತ್ತೇವೆ. ಆದರೆ, ಅವರು ಹೋಗಿ ನೆಲೆಸುವುದು, ಪರಿಶ್ರಮ ಪಡುವುದು ವಿದೇಶದ ಅಭಿವೃದ್ಧಿಗೆ. ಹಾಗಾದರೆ, ಏತಕ್ಕಾಗಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು?' ಎಂದು ಅವರು ಪ್ರಶ್ನಿಸಿದ ಅವರು. ಮಕ್ಕಳಲ್ಲಿ ಕನ್ನಡ ನಿಷ್ಠೆ, ತಾಯ್ನೆಲ ನಿಷ್ಠೆ ಬೆಳೆಸದಿದ್ದರೆ ಅನಾಹುತಗಳು ಎದುರಾಗಲಿವೆ. ಇದನ್ನು ತಡೆಯಲು ಹಿರಿಯರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.ಕನ್ನಡ ಪುಸ್ತಕ ಪ್ರಕಟಣೆ ಹಾಗೂ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ಹಿಂದಿನ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, `ಕೇರಳದಲ್ಲಿ ಯಾವುದೇ ಪುಸ್ತಕ ಮಾರಾಟವಾದರೆ ಶೇ 40ರಷ್ಟು ಹಣ ಲೇಖಕನಿಗೆ ಸಲ್ಲುತ್ತದೆ. ಅಲ್ಲಿನ ಮಾದರಿಯಲ್ಲಿ ನಮ್ಮಲ್ಲೂ ಪುಸ್ತಕ ಪ್ರಕಟಣೆಗೆ ಸಹಕಾರಿ ವ್ಯವಸ್ಥೆಯನ್ನು ರೂಪಿಸಬೇಕು' ಎಂದು ಸಲಹೆ ನೀಡಿದರು.ಲೀಲಾವತಿ ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿದರು.

ನಾಗೇಂದ್ರ ಭಾರದ್ವಾಜ್ ಅವರು ಪುಸ್ತಕ ಪ್ರದರ್ಶನವನ್ನು, ಕಡಂಬೋಡಿ ಮಹಾಬಲ ಪೂಜಾರಿ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ತಾಲ್ಲೂಕು ಕ.ಸಾ.ಪ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ನಿಕಟಪೂರ್ವ ಅಧ್ಯಕ್ಷ ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಪಿ.ಪಿ. ಉಪಾಧ್ಯಾಯ, ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಪಿ.ರಂಜನ್ ರಾವ್, ರಮೇಶ್ ಭಟ್, ಕೃಷ್ಣ ಹೆಬ್ಬಾರ್, ವಿನಯ ಆಚಾರ್ಯ ಉಪಸ್ಥಿತರಿದ್ದರು.

ಪ್ರೊ.ಗಿರಿಧರ ಹತ್ವಾರ್ ಸ್ವಾಗತಿಸಿದರು. ನವೀನ್ ಶೆಟ್ಟಿ ನಿರೂಪಿಸಿದರು. ಸದಾಶಿವ ಶೆಟ್ಟಿ ವಂದಿಸಿದರು.ಮಾಜಿ ಶಾಸಕ ಬಾಲಕೃಷ್ಣ ಭಟ್ ವಿಷ್ಣುಮೂರ್ತಿ ದೇವಳದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಹಾಗೂ ದ.ಕ. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಸಮ್ಮೇಳನದ ಅಂಗವಾಗಿ ತುಳುನಾಡಿನ ಕೃಷಿ ಹಾಗೂ ಗೃಹಬಳಕೆಯ ಹಳೆಯ ಪರಿಕಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಪ್ರತಿಕ್ರಿಯಿಸಿ (+)