ಯುಗಮಾನಕ್ಕೆ ಸಾಕ್ಷಿಯಾದ ತುರುವೇಕೆರೆ

7

ಯುಗಮಾನಕ್ಕೆ ಸಾಕ್ಷಿಯಾದ ತುರುವೇಕೆರೆ

Published:
Updated:

ಭಾರತೀಯ ಧಾರ್ಮಿಕ ಪರಂಪರೆಯ ನಂಬಿಕೆಯಲ್ಲಿ ನಾಲ್ಕು ಯುಗಗಳಿಗೂ ಮಹತ್ವವಿದೆ. ಕೃತಯುಗ, ತೇತ್ರಾಯುಗ, ದ್ವಾಪರಯುಗ ಹಾಗೂ ಕಲಿಯುಗ. ಈಗಿನದ್ದು ಕಲಿಯುಗ. ಮಹಾಭಾರತ ನಡೆದ ದ್ವಾಪರಯುಗದ್ಲ್ಲಲಿಯು ತುರುವೇಕೆರೆ ಪಟ್ಟಣವಾಗಿಯೇ ಇತ್ತು ಎನ್ನುತ್ತದೆ ಐತಿಹ್ಯ. ಅದೇನೇ ಇರಲಿ ತುರುವೇಕೆರೆ ಎಂಬುದು ಮಾತ್ರ ಕಲೆಯ ಬೀಡು. ತುರುವೇಕೆರೆಗೆ ವಿಜಯನಾರಸಿಂಹಪುರಿ ಎಂಬುದು ಹಳೆ ಹೆಸರು.ಜಗತ್ತಿನ ಅತಿಶ್ರೇಷ್ಠ ವಾಸ್ತುಶಿಲ್ಪ ತುರುವೇಕೆರೆ ಸುತ್ತಮುತ್ತ ಹರಡಿ ನಿಂತಿದೆ. ತುರುವೇಕೆರೆ ಹೊಯ್ಸಳರ ಕಾಲದ ಕಲಾಕೃತಿಗಳಿಗೆ ಪ್ರಸಿದ್ಧಿ ಪಡೆದಿದೆ. ಹೊಯ್ಸಳರು ಕಲ್ಲನ್ನೇ ಮೇಣ ಮಾಡಿಕೊಂಡಂತೆ ಕಡೆದಿದ್ದಾರೆ ಎಂಬ ಬಣ್ಣನೆಗೆ ಇಲ್ಲಿನ ಅರಳುಗುಪ್ಪೆಯ ದೇವಸ್ಥಾನವೇ ಸಾಕ್ಷಿ.ತುರುವೇಕೆರೆ ಪಟ್ಟಣದಲ್ಲೇ ಇರುವ ಗಂಗಾಧರೇಶ್ವರ ದೇವಾಲಯವನ್ನು ಒಮ್ಮೆ ನೋಡಬೇಕು. ಕಲ್ಲಿನ ಗಂಟೆ ಇದೆ! ಕಲ್ಲಿನ ಬೃಹತ್ ನಂದಿಯೂ ಇದೆ. ಮೂಲೆಶಂಕರ, ಅಘೋರೇಶ್ವರ, ಚನ್ನಕೇಶವ, ಬೇಟೆ ರಂಗನಾಥ ದೇವಸ್ಥಾನಗಳ ಸೌಂದರ್ಯ ಅದ್ವೀತಿಯ.ಮೃಖಂಡ ಮುನಿಗಳಾದ ಚಂದ್ರಚೂಡ ಮುನಿಗಳು ಬದರೀನಾಥದಿಂದ ತುರುವೇಕೆರೆಗೆ ಬಂದು ತಪಸ್ಸು ಮಾಡುತ್ತಿದ್ದಾಗ ಇಲ್ಲಿದ್ದ ರಾಕ್ಷಸರು ಮೃಗದ ರೂಪ ಧರಿಸಿ ತೊಂದರೆ ಕೊಟ್ಟರು. ಆಗ ಮುನಿಗಳು ಪ್ರಾರ್ಥನೆ ಮಾಡಿಕೊಂಡರು. ಆ ಪ್ರಾರ್ಥನೆಗೆ ತಲೆಬಾಗಿದ ದೇವರು ಕುದುರೆ ಏರಿ ಬಂದು ರಾಕ್ಷಸರರನ್ನು ಭೇಟಿಯಾಡಿ ಕೊಂದರು ಎನ್ನುತ್ತದೆ ಐತಿಹ್ಯ. ಇಲ್ಲಿನ ಬೇಟೆರಾಯನ ದೇವರಿಗೆ ಬೇಟೆ ರಾಯ ಹೆಸರು ಬರಲು ಇದೇ ಕಾರಣ ಎಂಬುದು ನಂಬಿಕೆ.ಶಾಲಿವಾಹನ ಶಕೆ ಆರಂಭಿಸಿದ ಶಕಪುರುಷ ಈ ತಾಲ್ಲೂಕಿನ ತಂಡಗದಲ್ಲಿ ಜನಿಸಿದ ಎಂಬುದಕ್ಕೆ ಸುರುಳಿ ದಾಖಲೆಗಳಿವೆ ಎನ್ನಲಾಗಿದೆ. ಇಲ್ಲಿರುವ ಸಂಪಿಗೆ ಊರಿನ ಕತೆ ಮತ್ತೂ ವಿಭಿನ್ನವಾಗಿದೆ. ಸಂಪಿಗೆಗೆ ಹಿಂದೆ ಚಂಪಕಪುರಿ ಎಂದೇ ಕರೆಯುತ್ತಿದ್ದರಂತೆ. ಈ ಊರು ಹೊಸಗನ್ನಡದ ಕಣ್ವ ಬಿಎಂಶ್ರೀ ಅವರ ತಾಯಿಯ ಊರು. ಬಿಎಂಶ್ರೀ ಜನಿಸಿದ ಊರು ಕೂಡ ಇದುವೇ.ತುರುವೇಕೆರೆ ತಾಲ್ಲೂಕಿನಲ್ಲಿ ವಿಠಲಾಪುರ, ಭೈತರಹೊಸಹಳ್ಳಿ, ರಾಮಸಾಗರ, ಕಡೇಹಳ್ಳಿಗುಡ್ಡ ಎಂಬ ಸುಂದರ ಬೆಟ್ಟಗಳಿವೆ. ಕಡೇಹಳ್ಳಿ ಗುಡ್ಡದಿಂದ ಕೊಂಡೊಯ್ದ ಕಲ್ಲುಗಳನ್ನೇ ಬೇಲೂರು, ಹಳೆಬೀಡು ಶಿಲ್ಪಗಳಿಗೆ ಬಳಸಲಾಗಿದೆ. ತುರುವೇಕೆರೆಯಲ್ಲಿ ಶಿಂಷಾ ನದಿಯ ಝುಳುಝುಳು ನಿನಾದವನ್ನು ಮಳೆಗಾಲದಲ್ಲಿ ಈಗಲೂ ಕೇಳಬಹುದು ಎಂಬುದೇ ನೆಮ್ಮದಿ ತರುವ ವಿಷಯ.ತುರುವೇಕೆರೆಯ ಉಡಿಸಲಮ್ಮನ ಸಿಡಿ ರಾಜ್ಯದಾದ್ಯಂತ ಪ್ರಸಿದ್ಧಿಯಾಗಿದೆ. ಆದಿತ್ಯಪಟ್ಟಣ ಎಂದೇ ಕರೆಯಲಾಗುತ್ತಿದ್ದ ಅಮ್ಮಸಂದ್ರದಲ್ಲಿ ಬಿರ್ಲಾ ಒಡೆತನದ ಸಿಮೆಂಟ್ ಕಾರ್ಖಾನೆ ಇದೆ. ಇದನ್ನು ಟಾಟಾ ಸಂಸ್ಥೆಯವರು ಆರಂಭಿಸಿದ್ದರು. ಕಾರ್ಖಾನೆಗೆ ವಜ್ರ ಎಂಬಲ್ಲಿಂದ ಸುಣ್ಣದ ಕಲ್ಲು ಬಳಸುವುದರಿಂದ ಕಾರ್ಖಾನೆ ಉತ್ಪಾದಿಸುವ ಸಿಮೆಂಟ್‌ಗೆ ಡೈಮಂಡ್ ಎಂದೇ ಹೆಸರಿಸಲಾಯಿತು. ಈ ಕಾರ್ಖಾನೆ ಉದ್ಘಾಟನೆಗೆ ಮಾಜಿ ಪ್ರಧಾನಿ ದಿವಂಗತ ಲಾಲ್‌ಬಹುದ್ದೂರ್ ಶಾಸ್ತ್ರಿ ಬಂದಿದ್ದರು.ಬಯಲುಸೀಮೆಯ ಅಗ್ಗಳಿಕೆಯಾದ ಮೂಡಲಪಾಯ ಯಕ್ಷಗಾನ ತಾಲ್ಲೂಕಿನಲ್ಲಿ ಈಗಲೂ ಜೀವಂತವಾಗಿದೆ. ಮುನಿಯೂರು ಗ್ರಾಮಕ್ಕೆ ಕಾಲಿಟ್ಟರೆ ಮೂಡಲಪಾಯದ ಮಾಧುರ್ಯ ಕೇಳಿಬರುತ್ತದೆ. ಬಾಣಸಂದ್ರದ ಹುಚ್ಚೇಗೌಡರು ಹೋರಾಟಗಾರ ಮಾತ್ರವಲ್ಲ ಅತಿದೊಡ್ಡ ದಾನಿಯೂ ಆಗಿದ್ದರು.ಮಾದಿಹಳ್ಳಿಯ ಬದರಿಕಾಶ್ರಮವನ್ನು ನೋಡಲು ಚಂದ. ಮಾಯಸಂದ್ರದಲ್ಲಿ ಆದಿಚುಂನಗಿರಿ ಮಠದ ಕಲ್ಪತರು ಆಶ್ರಮವಿದೆ. ಕನ್ನಡ ರಂಗಭೂಮಿಯ ಹಿರಣಯ್ಯ, ಮಾಸ್ಟರ್ ಹಿರಣಯ್ಯ ಹುಟ್ಟಿದ ಊರು ಇಲ್ಲಿನ ಕಣತೂರು. `ಮಿತ್ರ ಮಂಡಳಿ~ ಮೂಲಕ ಭ್ರಷ್ಟಾಚಾರ, ಲಂಚದ ವಿರುದ್ಧ ಮಾಸ್ಟರ್ ಹಿರಣಯ್ಯ ಎತ್ತಿದ ಧ್ವನಿ ರಾಜ್ಯದ ಮೂಲೆಮೂಲೆಗಳನ್ನೂ ಮುಟ್ಟಿದೆ.ನಾಗಾಲಾಪುರ, ಸಂಪಿಗೆ ಗ್ರಾಮಗಳು ಶಿಲಾಯುಗ ಕಾಲದ ಗ್ರಾಮಗಳು. ಹೊಯ್ಸಳರ ಕಾಲದ ಗೋಣಿ ತುಮಕೂರಿನ ಈಶ್ವರ ದೇವಾಲಯ, ಹುಲಿಕಲ್‌ನ ಮಲ್ಲೇಶ್ವರ, ನಾಗಲಾಪುರದ ಕೇದಾರೇಶ್ವರ, ಸೂಳೆಕೆರೆಯ ಈಶ್ವರ ದೇವಾಲಯಗಳು ಕಲೆಯ ಪ್ರಖರತೆಗೆ ಸಾಕ್ಷಿಗಳಾಗಿವೆ.ಹದಿಮೂರನೇ ಶತಮಾನದಲ್ಲೇ ಮನೆ, ಕೆರೆ ಕಟ್ಟೆ ನಿರ್ಮಾಣಕ್ಕೆ ಕಲ್ಲು ಸಾಗಿಸುವಾಗ ದಾರಿಯಲ್ಲಿ ಬರುವ ಯಾವ ಹೊಲದವರು ತಡೆಯಬಾರದು ಎಂಬ ಶಾಸನ ಹೊರಡಿಸಿ ಸೌಹಾರ್ದತೆ, ಅಭಿವೃದ್ಧಿ ಕೆಲಸಗಳಿಗೆ ತಡೆ ಹಾಕಬಾರದೆಂಬ ಕಟ್ಟಳೆ ವಿಧಿಸಿದ ಊರು ರಾಜ್ಯದಲ್ಲಿ ಇದೊಂದೇ ಇರಬೇಕು ಎನ್ನುತ್ತಾರೆ ಸಾಹಿತಿ ಎಚ್.ಕೆ.ನರಸಿಂಹಮೂರ್ತಿ.ಬೆನಕನಕೆರೆ ಚನ್ನಕೇಶವ ದೇವಾಲಯದಲ್ಲಿ ರಾಮಾಯಣ ಕುರಿತು ಭಿತ್ತಿಚಿತ್ರಗಳಿರುವುದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ! ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಇಡೀ ರಾಮಾಯಣವೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ರಾಮನ ಕಾಲದಲ್ಲಿ ಸುತ್ತಾಡಿ ಬಂದಂತೆ ಮನಸ್ಸು ಮುದಗೊಳ್ಳುತ್ತದೆ. ವಿಜ್ಞಸಂತೆಯಲ್ಲಿ ಹೊಯ್ಸಳರ ಕಾಲದ ಲಕ್ಷ್ಮೀನರಸಿಂಹ ದೇವಸ್ಥಾನ ನೋಡದೇ ಇದ್ದವರು ಒಮ್ಮೆಯಾದರೂ ನೋಡಲೇಬೇಕು ಎನ್ನುವಂತಿದೆ.ಶೈವರ ಪ್ರಾಬಲ್ಯವಿದ್ದ ದಿನಗಳಲ್ಲಿ ರಾಮನುಜಚಾರ್ಯರು ಕರ್ನಾಟಕಕ್ಕೆ ಬಂದು ಆಶ್ರಯ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಹೊಯ್ಸಳ ದೊರೆ ಬಿಟ್ಟಿದೇವನ ಹೆಸರನ್ನು ವಿಷ್ಣುವರ್ಧನನ್ನಾಗಿ ಬದಲಾಯಿಸಿದ್ದು ಇದೇ ರಾಮಾನುಚಾರ್ಯರು. ರಾಮಾನುಜಾಚಾರ್ಯರು ರಾಜ್ಯದಲ್ಲಿ ಪಂಚ (ಐದು) ವೈಷ್ಣವ ಗ್ರಾಮಗಳನ್ನು  ಸ್ಥಾಪಿಸಿದರು. ಅವುಗಳಲ್ಲಿ ಎರಡು ಗ್ರಾಮಗಳು ತುರುವೇಕೆರೆ ತಾಲ್ಲೂಕಿನಲ್ಲಿವೆ. ಮಾಯಸಂದ್ರ, ಸಂಪಿಗೆ ಗ್ರಾಮ ವೈಷ್ಣವ ಗ್ರಾಮಗಳು.ಸಂಪಿಗೆಗೆ ಚಂಪಕಪುರಿ ಎಂಬ ಹೆಸರೂ ಇತ್ತಂತೆ. ಹಂಸಧ್ವಜನ ಮಗ ಸುಧನ್ವನು ಸಂಪಿಗೆಯನ್ನು ರಾಜಧಾನಿ ಮಾಡಿಕೊಂಡಿದ್ದನು ಎಂದೇ ನಂಬಿಕೆ.ದಂಡಿನಶಿವರದಲ್ಲಿ ಪ್ರತಿ ವರ್ಷ ನಡೆಯುವ ಹೊನ್ನಾದೇವಿ ಜಾತ್ರೆಯ ಮಡೆ ಪ್ರಸಿದ್ಧವಾಗಿದೆ. ಸಂಪಿಗೆಯಲ್ಲಿ ಬಿಟ್ಟರೆ ಅರಸೀಕೆರೆ ತಾಲ್ಲೂಕಿನ ಮಾಡಾಲು ಗ್ರಾಮದಲ್ಲಿ ಮಾತ್ರವೇ ಸ್ವರ್ಣಗೌರಿ ಪೂಜೆ ನಡೆಯುವುದು ಎಂಬುದು ಮತ್ತೂ ವಿಶೇಷ. ದಂಡಿನಶಿವರ ಗ್ರಾಮದ ಸ್ವಾಮನ ಕುಣಿತ ಈಗಲೂ ಜನ ಎದ್ದುನಿಂತು ನೋಡುವಂತೆ ಮಾಡುತ್ತದೆ.ಕಾಯಿಸೀಮೆ ಸುತ್ತ

ತುರುವೇಕೆರೆಯಲ್ಲಿ ಶಿಂಷಾ ನದಿ ಹರಿಯುತ್ತಿತ್ತು. ತೆಂಗಿಗೆ ಪ್ರಸಿದ್ಧಿಯಾಗಿದೆ. ತುರುವೇಕೆರೆ ಆಚೆಗಿನ ತಾಲ್ಲೂಕುಗಳ ಜನರು ಕಾಯಿಸೀಮೆ ಎಂದೇ ಕರೆಯುತ್ತಾರೆ. ಕಾಯಿಸೀಮೆಯ ಹೆಣ್ಣು ತಂದರೆ ಮನೆಯಲೆಲ್ಲ ಸಂಪತ್ತು ಎಂಬ ಮಾತು ಜನಜನಿತವಾಗಿತ್ತು. ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಪ್ರೀತಿಯನ್ನು ಇಲ್ಲಿನ ಜನರು ತೋರುತ್ತಾರೆ. ಹೀಗಾಗಿ ಇಲ್ಲಿ ಮದುವೆಯಾದರೆ ಅಳಿಯನ ಮನೆ ಬಂಗಾರವಾಗಲಿದೆ ಎಂಬ ಮಾತುಗಳು ಜೋರು.ಅಗ್ರಹಾರದ ಊರು

13ನೇ ಶತಮಾನದಲ್ಲಿ ತುರುವೇಕೆರೆ ಒಂದು ಸಣ್ಣ ಅಗ್ರಹಾರವಾಗಿತ್ತು. ಕಂದಾಯ ರಹಿತ ಗ್ರಾಮವಾಗಿ ಇದನ್ನು ಬ್ರಾಹ್ಮಣರಿಗೆ ನೀಡಲಾಗಿತ್ತು. ಕಡಬಾ ತಾಲ್ಲೂಕಿಗೆ ಸೇರಿದ ತುರುವೇಕೆರೆ ಈಗ ತಾಲ್ಲೂಕು ಕೇಂದ್ರವಾಗಿದೆ. ಈ ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ಕಡಬ ಈಗ ಗುಬ್ಬಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿದೆ.ಬಂಗಾರದ ಮನುಷ್ಯ

ಕನ್ನಡ ಸಿನಿಮಾ ರಂಗದ ದಾಖಲೆಗಳಾದ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಚಲನಚಿತ್ರ ನಿರ್ಮಿಸಿದ್ದು ತುರುವೇಕೆರೆ ಗೋಪಾಲ್ ಎಂಬುದು ಮತ್ತೊಂದು ಹೆಮ್ಮೆಯ ದ್ಯೋತಕ.ಹೇಮಾವತಿ ಆಸೆ

ಹೇಮಾವತಿ ನಾಲೆಯೇ ಈಗ ತುರುವೇಕೆರೆಯ ಜೀವನಾಡಿ. ಹೇಮಾವತಿಯಿಂದ ತಾಲ್ಲೂಕಿಗೆ ಅನುಕೂಲವಾಗಿರುವಂತೆ ಅನಾನುಕೂಲವು ಆಗಿದೆ. ಕಾಲುವೆಗಳು ಸರಿ ಇಲ್ಲದೆ ವಿಪರೀತ ನೀರು ಬೆಳೆಗೆ ಮಾರಕವಾಗಿದೆ. ಸುಮಾರು 1 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಇಲ್ಲಿ ಭೂಮಿ ಸೇರುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಯೋಜನೆ ಪೂರ್ಣಗೊಂಡರೆ ತುರುವೇಕೆರೆಯ ಸಾವಿರಾರು ಎಕರೆ ಬರಡು ಪ್ರದೇಶ ನೀರಾವರಿಗೆ ಒಳಪಡಲಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry