ಗುರುವಾರ , ಫೆಬ್ರವರಿ 25, 2021
29 °C
ರಾಜಭವನದಲ್ಲಿ ಮನೆಮಾಡಿದ ಹಬ್ಬದ ಸಂಭ್ರಮ

ಯುಗಾದಿಗೆ ಸಂಗೀತ, ನೃತ್ಯ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಗಾದಿಗೆ ಸಂಗೀತ, ನೃತ್ಯ ಸ್ವಾಗತ

ಬೆಂಗಳೂರು: ‘ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವ ಜಾತಕೆ

ಒಂದೆ ಒಂದು ಜನ್ಮದಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೊ...’ಯುಗಾದಿಯ ಮುನ್ನಾದಿನವಾದ ಭಾನುವಾರ ರಾಜಭವನದ ಗಾಜಿನ ಮನೆಯಲ್ಲಿ ಸಂಗೀತ ನೃತ್ಯದ ಮೂಲಕ ಯುಗಾದಿಯನ್ನು ಬರ ಮಾಡಿಕೊಳ್ಳುವ ಸಂಭ್ರಮ ಮನೆ ಮಾಡಿತ್ತು.ವರಕವಿ ದ.ರಾ. ಬೇಂದ್ರೆಯವರ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಗೀತೆಗೆ ಗಾಯಕಿ ವಸುಧಾ ಪ್ರಹ್ಲಾದ್‌ ದನಿಯಾದಾಗ ನೆರೆದ ಪ್ರೇಕ್ಷಕರ ಮನದಲ್ಲಿ ‘ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ’ ಕೇಳಿದ ಅನುಭವ.ಬೆಂಗಳೂರು ದೂರದರ್ಶನ ಕೇಂದ್ರ, ಭಾರತೀಯ ಸ್ಟೇಟ್‌ ಬ್ಯಾಂಕ್‌, ರಾಜಭವನದ ಸಹಭಾಗಿತ್ವದಲ್ಲಿ ನಡೆದ ‘ಚೈತ್ರದ ಕುಸುಮಾಂಜಲಿ’ ಸಂಗೀತ ನೃತ್ಯ ಕಾರ್ಯಕ್ರಮದಲ್ಲಿ ವಿವಿಧ  ಕಲಾವಿದರು ಯುಗಾದಿಯನ್ನು ಕಲೆಯ ಮೂಲಕ ಸ್ವಾಗತಿಸಿದರು.ಕಲಾಂಶು ನೃತ್ಯ ಶಾಲೆಯ ಸುಪ್ರಿಯಾ ಹರಿಪ್ರಸಾದ್‌ ಮತ್ತು ತಂಡದ ಕಲಾವಿದರು ‘ಆನಂದ ಭೈರವಿ’ ಚಲನಚಿತ್ರದ ‘ಚೈತ್ರದ ಕುಸು ಮಾಂಜಲಿ’ ಗೀತೆಗೆ ಹೆಜ್ಜೆ ಯಾದರು.ಆನೂರು ಅನಂತಕೃಷ್ಣ ಶರ್ಮಾ ಮತ್ತು ತಂಡದ ಕಲಾವಿದರು  ಪ್ರಸ್ತುತಪಡಿಸಿದ ತಾಳವಾದ್ಯಗಳ ರಾಗ ಮಾಲಿಕೆಯು ಮನಸೂರೆ ಗೊಂಡಿತು. ಮೃದಂಗ, ತಬಲಾ, ಡ್ರಮ್‌, ಕೊಳಲು ಹಾಗೂ ವಯೊ ಲಿನ್‌ ವಾದ್ಯಗಳ ತನಿ ಆವರ್ತದ ಬಿಡುವಿನಲ್ಲಿ ವಸುಧಾ ಪ್ರಹ್ಲಾದ್‌, ‘ಯುಗಯುಗಾದಿ ಬಂದಿದೆ, ಹೊಸತನವನು ತಂದಿದೆ’ ಗೀತೆಯ ಮೂಲಕ ಯುಗಾದಿಗೆ ಸ್ವಾಗತ ಕೋರಿದರು.ಕಲಾವಿದೆ ಲಾವಣ್ಯ ವಿಜಯ್‌ ಕುಮಾರ್‌ ಮತ್ತು ತಂಡದವರು ‘ಪಂಚಾಂಗ ಶ್ರವಣ ಮಾಡಿರೊ’ ಗೀತೆಗೆ ಜನಪದ ಶೈಲಿಯಲ್ಲಿ ನೃತ್ಯ ಪ್ರದರ್ಶಿಸಿದರು.ಕಥಕ್‌ ನೃತ್ಯಪಟುಗಳಾದ ತುಷಾರ್‌ ಭಟ್‌, ಪೂಜಾ ಭಟ್‌ ಮತ್ತು ತಂಡದವರು ಪ್ರಸ್ತುತ ಪಡಿಸಿದ ‘ಬಸಂತ್‌ ರಾಸ್‌’ ನೃತ್ಯರೂಪಕ ಗತ್‌ನ ಲಯದೊಂದಿಗೆ ಗಮನ ಸೆಳೆಯಿತು.

ಉದಯ ಕುಮಾರ್‌ ಶೆಟ್ಟಿ, ತಂಡದವರು ಒಡಿಸ್ಸಿ ನೃತ್ಯ ಪ್ರಕಾರದ ಮೂಲಕ ‘ವಸಂತ ಪಲ್ಲವ’ ನೃತ್ಯರೂಪಕ ಪ್ರಸ್ತುತಪಡಿಸಿದರು. ಗಾನಪ್ರಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ದೊಡ್ಡ ರಂಗೇಗೌಡರ ‘ಬೀಸುವ ಗಾಳಿ ಹೇಳಿದೆ, ಹರಿಯುವ ನದಿಯು ಹೇಳಿದೆ’ ಗೀತೆ ಹಾಡಿದರು.ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರ ‘ಬಾರೋ ವಸಂತ ಬಾರೋ’ ಗೀತೆಗೆ ಒಡಿಸ್ಸಿ, ಭರತನಾಟ್ಯ, ಮಣಿಪುರಿ, ಕಥಕ್‌  ಕಲಾವಿದರು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು.ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಮಾತನಾಡಿ, ‘ಜೂನ್‌ ತಿಂಗಳಿಗೆ ರಾಜ್ಯಪಾಲನಾಗಿ ನನ್ನ ಅವಧಿ ಕೊನೆಗೊಳ್ಳಲಿದೆ. ನಾನು ರಾಜ್ಯದಲ್ಲಿ ಕಳೆದ ದಿನಗಳನ್ನು ಮರೆಯಲಾಗದು. ಸಂಸ್ಕೃತ ಭಾಷೆಯ ಬೆಳವಣಿಗೆಗೆ ಶೃಂಗೇರಿ, ಮೇಲುಕೋಟೆ ಹಾಗೂ ಉಡುಪಿಯ ಕೊಡುಗೆ ಹೆಚ್ಚಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.