ಗುರುವಾರ , ನವೆಂಬರ್ 14, 2019
18 °C

ಯುಗಾದಿ: ಚಂದ್ರ ದರ್ಶನ, ನಮನ ಸಲ್ಲಿಕೆ

Published:
Updated:

ಚಿಕ್ಕಜಾಜೂರು: ಶುಕ್ರವಾರ ಸಂಜೆ ಸೂರ್ಯಾಸ್ತದ ಜತೆ ಚಂದ್ರದರ್ಶನ ಮಾಡಿ, ಜನರು ಸಂಭ್ರಮದ ಯುಗಾದಿ ಹಬ್ಬದ ಆಚರಣೆ ಮಾಡಿದರು.ಗುರುವಾರ ಮೋಡ ಮುಸುಕಿದ ವಾತಾವರಣದಿಂದ ಚಂದ್ರ ದರ್ಶನವಾಗದೆ ನಿರಾಶರಾಗಿದ್ದ ಜನರು ಶುಕ್ರವಾರ ಸಂಜೆ ಸೂರ್ಯಾಸ್ತದ ಜತೆಗೆ ಚಂದ್ರನ ದರ್ಶನ ಮಾಡಿ ಪುನೀತ ಭಾವದಿಂದ ನಮನ ಸಲ್ಲಿಸಿ ಪರಸ್ಪರ ಶುಭಾಶಯಗಳ ವಿನಿಮಯ ಮಾಡುತ್ತಿದ್ದ ದೃಶ್ಯ ಸಾಮಾನ್ಯ.ಚಂದ್ರ ದರ್ಶನವಾಗುತ್ತಲೇ ಮಹಿಳೆಯರು ಮನೆಯ ಅಂಗಳದಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ, ಬಂದವರಿಗೆ ಬೇವು-ಬೆಲ್ಲ ಹಂಚುವುದು ಸಾಮಾನ್ಯ ದೃಶ್ಯವಾಗಿತ್ತು. ದೇವಸ್ಥಾನಗಳಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ರಸ್ತೆಯಲ್ಲಿ ಎದುರಾದ ಗೆಳೆಯರಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಹಿರಿಯರಿಗೆ ನಮಸ್ಕರಿಸುವುದು ಕಂಡುಬಂದಿತು.ಯುಗಾದಿ ಆಚರಣೆ

ಹೊಸದುರ್ಗ:
ತಾಲ್ಲೂಕಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಸಕಾಲಕ್ಕೆ ಮಳೆ ಬರದೇ ಬರಗಾಲ ಕವಿದಿದ್ದರೂ ಸಹ ನವೀಕರಣಗೊಂಡ ಋತುವಿನ ಆರಂಭದ ಯುಗಾದಿ ಹಬ್ಬಕ್ಕೆ ರೈತರು ಹೊಸಹೊಸ ಬಟ್ಟೆ ಹಾಗೂ ವಿವಿಧ ದಿನಸಿ ಸಾಮಗ್ರಿ ಖರೀದಿಸಿ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು.ತಾಲ್ಲೂಕಿನಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಪ್ರಾತಿನಿಧ್ಯವಿದೆ. ಹಬ್ಬ ಬಂತ್ತೆಂದರೆ ಮನೆಯನ್ನು ಸುಣ್ಣ- ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಮನೆ ಬಾಗಿಲುಗಳನ್ನು ಬೇವು-ಮಾವಿನ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಅರಿಶಿಣ ಎಣ್ಣೆಯನ್ನ ಸ್ತ್ರೀ-ಪುರುಷರು ಲೇಪಿಸಿಕೊಂಡು ಈ ಹಬ್ಬದಲ್ಲಿ ತಮ್ಮ ದೇಹವನ್ನು ತಂಪುಗೊಳಿಸಿಕೊಳ್ಳುತ್ತಾರೆ.ಪುರುಷರು ಹೊಸ ಉಡುದಾರವನ್ನು ದರಿಸುವ ಪದ್ಧತಿ ಹಿಂದಿನಿಂದಲೂ ಸಾಗಿ ಬರುತ್ತಿದೆ. ಮನೆಯಲ್ಲಿನ ಎಲ್ಲರೂ ಈ ಹಬ್ಬಕ್ಕೆ ಹೊಸ ಉಡುಪುಗಳನ್ನು ಧರಿಸುವುದು ವಾಡಿಕೆ.ಸುಡು ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೆಳಿಗ್ಗೆಯ ತಂಪಿನಲ್ಲಿಯೇ ಸಿಹಿ ಅಡುಗೆಯ ತಯಾರಿ ನಡೆಯಿತು. ನಂತರ, ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಹಿಂದೆ ನಡೆದ ಕಹಿ ಘಟನೆಗಳು ಮರುಕಳಿಸದೇ, ಮುಂದಿನ ಜೀವನ ಸುಖವಾಗಿರಲಿ ಎಂದು ತಮ್ಮ ಇಷ್ಟ ದೇವರಲ್ಲಿ ಬೇಡಿಕೊಂಡರು. ಸಿಹಿ ಉಡುಗೆ ಊಟ ಮಾಡಿ, ಮಧ್ಯಾಹ್ನ ಚೌಕಾಬಾರಾ, ಚೆಂಡು, ರಂಗೋಲಿ, ಚೆಸ್, ಕೇರಂ ಇತ್ಯಾದಿ ಆಟಗಳನ್ನು ಮನದುಂಬಿ ಆಡಿದರು.ಸಂಜೆ 6.30ರಲ್ಲಿ ಹೊಸ ವರ್ಷದ ಯುಗಾದಿ ಅಮಾವಾಸ್ಯೆ ಚಂದ್ರೋದಯದ ವೀಕ್ಷಣೆಯನ್ನು ಮಾಡಿದರು. ಈ ಭಾಗದಲ್ಲಿ ಚಂದ್ರನನ್ನು ವೀಕ್ಷಣೆ ಮಾಡಿದ ನಂತರ ಈ ವರ್ಷದ ಮಳೆ ಬೆಳೆ ಹೇಗೆ ಆಗುತ್ತದೆ ಎಂಬುದನ್ನು ಹಿರಿಯ ರೈತರು ನಿಖರವಾಗಿ ಹೇಳುತ್ತಾರೆ.ಈ ವರ್ಷದ ಹಬ್ಬದ ವಿಶೇಷವೆಂದರೆ ಮೇ 5ರ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತರಲ್ಲಿ ಹಬ್ಬದ ಸಂಭ್ರಮಕ್ಕಿಂತ ಮತದಾರರಿಂದ ಮತವನ್ನು ಹೇಗೆ ಗಿಟ್ಟಿಸಿಕೊಳ್ಳಬೇಕು ಎಂಬ ಸಂಭ್ರಮವೇ ಹೆಚ್ಚಿನದಾಗಿತು ಎಂಬುದು ನಾಗರಿಕರೊಬ್ಬರ ಅಭಿಪ್ರಾಯ.

 

ಪ್ರತಿಕ್ರಿಯಿಸಿ (+)