ಸೋಮವಾರ, ನವೆಂಬರ್ 18, 2019
26 °C

ಯುಗಾದಿ: ಮುಡುಕುತೊರೆಯಲ್ಲಿ ಭಕ್ತರ ದಂಡು

Published:
Updated:

ತಿ.ನರಸೀಪುರ: ಯುಗಾದಿ ಮುನ್ನಾ ದಿನವಾದ ಬುಧವಾರ ತಾಲ್ಲೂಕಿನ ತಲಕಾಡು ಸಮೀಪದ ಸರಗೂರು ಹಾಗೂ ಬೊಪ್ಪೇಗೌಡನಪುರದಲ್ಲಿ ವಿಜೃಂಭಣೆಯ ಜಾತ್ರಾ ಮಹೋತ್ಸವಗಳು ಜರುಗಿದವು.ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿಯಲ್ಲಿ ನಡೆಯುವ ಜಾತ್ರೆಯಲ್ಲಿ ಮೈಸೂರು, ಬೆಂಗಳೂರು  ಮತ್ತು ಚಾಮರಾಜನಗರ ಜಿಲ್ಲೆಗಳ ಸುತ್ತಮುತ್ತಲ ಗ್ರಾಮಗಳ ಜನರು ಭಾಗವಹಿಸುತ್ತಾರೆ. ಅದರಲ್ಲಿ ತಾಲ್ಲೂಕಿನ ಹಾಗೂ ಸಮೀಪದ ತಾಲ್ಲೂಕಿನ ಭಕ್ತರು ಜಾತ್ರೆ ಮುಗಿಸಿ ನೇರವಾಗಿ ತಮ್ಮ ಗ್ರಾಮಗಳಿಗೆ ಹೋಗದೇ ಯುಗಾದಿ ಹಬ್ಬದ ಹಿಂದಿನ ದಿನದಂದು ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರ ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಹಾಗೂ ಸಿದ್ದಪ್ಪಾಜಿ ಮಠಕ್ಕೆ ಭೇಟಿ ನೀಡಿ ನಂತರ ತಿ.ನರಸೀಪುರಕ್ಕೆ ಆಗಮಿಸಿ ಮರುದಿನ, ಯುಗಾದಿಯ ದಿನದಂದು ಇಲ್ಲಿನ ಸಂಗಮದಲ್ಲಿ ಸ್ನಾನಮಾಡಿ ನಂತರ ಊರಿಗೆ ತೆರಳುವುದು ಅನೇಕ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.ಅದರಂತೆ ಬುಧವಾರ ಸಹಸ್ರಾರು ಜನರು ಬೊಪ್ಪೇಗೌಡನ ಪುರದ ಮಠಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ಅಲ್ಲಿನ ದೊಡ್ಡಮ್ಮ ತಾಯಿ ದೇವಾಲಯ ಹಾಗೂ ಸಿದ್ಧಪ್ಪಾಜಿಸ್ವಾಮಿಯವರ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಅದೇ ಮಾರ್ಗವಾಗಿ ಸರಗೂರಿನ ಶ್ರೀಮಹಾದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಪಂಜಿನ ಸೇವೆ ನೆರವೇರಿಸುವುದು ಇಲ್ಲಿನ ಮತ್ತೊಂದು ವೈಶಿಷ್ಟ. ಈ ಎಲ್ಲ ಪೂಜಾ ಕೈಂಕರ್ಯಗಳನ್ನು ಭಕ್ತರು ಬುಧವಾರ ನೆರವೇರಿಸಿದರು. ಬಿಸಿಲಿನ ಝಳದ ನಡುವೆಯೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬೊಪ್ಪೇಗೌಡನಪುರದಲ್ಲಿ ಸಾಕಷ್ಟು ಬಂದೋಬಸ್ತ್ ಮಾಡಲಾಗಿತ್ತು.   ತಾಲ್ಲೂಕಿನ ಗಡಿಯಂಚಿನ ಸರಗೂರಿಗೆ ತೆರಳಿದ ಭಕ್ತರು, ನಂತರ ತಲಕಾಡಿನ ಮುಡುಕುತೊರೆ ಭ್ರಮರಾಂಭಸಮೇತ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುವುದು ವಾಡಿಕೆ.ಕಲುಷಿತಗೊಂಡಿರುವ ತ್ರಿವೇಣಿ ಸಂಗಮ: ಯುಗಾದಿಯ ದಿನದಂದು ಕಪ್ಪಡಿ ಜಾತ್ರೆ ಮುಗಿಸಿ ಮಠಕ್ಕೆ ತೆರಳಿ ವಾಪಸ್ಸಾಗುವ ಭಕ್ತರು, ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಈ ಬಾರಿ ಪುಣ್ಯ ಸ್ನಾನ ಕೈಗೊಳ್ಳಲು ಬಹಳ ತೊಂದರೆಯಾಗಿದೆ. ಸಂಗಮದ ಕಪಿಲಾ ನದಿ ಈಗಾಗಲೇ ಬತ್ತುವ ಹಂತ ತಲುಪಿದ್ದು, ಇರುವ ನೀರು ಕೊಳಚೆ ಗುಂಡಿಯಂತಾಗಿದೆ. ನದಿಯ ಗುಂಡಿಯಲ್ಲಿ ಜೊಂಡು ಬೆಳೆದಿದ್ದು, ಪಟ್ಟಣದ ತ್ಯಾಜ್ಯ ಮಲಿನಗಳು ಇಲ್ಲೇ ಬಿದ್ದಿವೆ. ಇದರಿಂದ ಈ ಬಾರಿ ಸಂಗಮಕ್ಕೆ ಸ್ನಾನ ಮಾಡಲು ಬರುವ ಹೊರಗಿನ ಭಕ್ತರು ಅಸಹ್ಯ ಪಡುವಂತಾಗಿದೆ.

ಪ್ರತಿಕ್ರಿಯಿಸಿ (+)