ಶುಕ್ರವಾರ, ನವೆಂಬರ್ 22, 2019
25 °C

ಯುಗಾದಿ: ವನ್ಯಜೀವಿ ಬೇಟೆ ನಿಷೇಧ

Published:
Updated:

ಬಳ್ಳಾರಿ: ಯಾವುದೇ ವನ್ಯಜೀವಿ ಹತ್ಯೆ ಮಾಡದೆ ಶಾಂತಿಯುತವಾಗಿ ಯುಗಾದಿಯನ್ನು ಆಚರಿಸುವ ಸಲುವಾಗಿ ಜಿಲ್ಲೆಯಾದ್ಯಂತ ವನ್ಯಜೀವಿ ಬೇಟೆ ನಿಷೇಧಿಸಿ ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಅರಣ್ಯ ಮತ್ತು ವನ್ಯಜೀವಿ ವಲಯಗಳಲ್ಲಿ ವನ್ಯಜೀವಿ ಬೇಟೆ ಆಡುವ ಸಂಭವ ಇರುವುದರಿಂದ ಈ ನಿಷೇಧಾಜ್ಞೆ ಹೊರಡಿಸಲಾಗಿದೆ.



ದಿನಾಂಕ ಏಪ್ರಿಲ್ 8ರಿಂದ 15ರವರೆಗೂ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅರಣ್ಯ ಮತ್ತು ವನ್ಯಜೀವಿ ವಲಯದಲ್ಲಿ ಜನ ಸಂಚಾರ ಹಾಗೂ ಗುಂಪುಗೂಡಿ ತಿರುಗಾಡುವುದನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ.



ಈ ಆದೇಶದ ಪ್ರಕಾರ ಯಾವುದೇ ವ್ಯಕ್ತಿ ಶಸ್ತ್ರ, ಬಡಿಗೆ, ಭರ್ಚಿ, ಬಂದೂಕು ಅಥವಾ ಇತರ ಶಸ್ತ್ರಾಸ್ತ್ರಗಳನ್ನು, ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುದವುನ್ನು ನಿಷೇಧಿಸಿದೆ.  ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ ಹಾಗೂ ಪ್ರಾಣಿಗಳ ಮೃತ ದೇಹ ಅಥವಾ ಅವುಗಳ ಆಕೃತಿಯನ್ನು ಪ್ರದರ್ಶನ ಮಾಡುವಂತಿಲ್ಲ. ಬಹಿರಂಗ ಘೋಷಣೆ, ವಾದ್ಯ ಭಾರಿಸುವುದು, ಅಸಭ್ಯವಾಗಿ ವರ್ತಿಸುವುದನ್ನು ಪ್ರತಿಬಂಧಿಸಿದೆ. 



ಕರಡಿ ಗ್ರಾಮದ ಸರಹದ್ದಿನಿಂದ ಸುಮಾರು 2 ಕಿಮೀ ದೂರದವರೆಗಿನ ಹಳ್ಳಿಗಳಲ್ಲಿ ಬೇಟೆ ಆಡುವುದನ್ನು ಏಪ್ರಿಲ್ 8ರಿಂದ 15ರವರೆಗೆ ನಿಷೇಧಿಸಲಾಗಿದೆ.  ವನ್ಯಜೀವಿಗಳಿಗೆ ಅಪಾಯ ಮಾಡುವ ಯಾವುದೇ ವಸ್ತುಗಳನ್ನು ಇಟ್ಟುಕೊಂಡು ತಿರುಗಾಡಿದರೆ   ಕೂಡಲೇ ಆ ವಸ್ತುವನ್ನು ಸರ್ಕಾರ ವಶಪಡಿಸಿಕೊಳ್ಳಲಾಗುವುದು  ಎಂದು ಅವರು ತಿಳಿಸಿದ್ದಾರೆ.



ಹುಸೇನಪ್ಪ ತಾತನವರ ಉರುಸ್

ಕುರುಗೋಡು:
ಇಲ್ಲಿಗೆ ಸಮೀಪದ ಎಚ್.ವೀರಾಪುರ ಗ್ರಾಮದಲ್ಲಿ ಶುಕ್ರವಾರ ಹಜರತ್ ಹುಸೇನಪ್ಪ ತಾತನವರ ಉರುಸ್ ಜರುಗಿತು.

ಈ ಕಾರ್ಯಕ್ರಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದವರು ಒಟ್ಟಾಗಿ ಭಾಗವಹಿಸುವುದರಿಂದ ಭಾವೈಕ್ಯದ ಹಬ್ಬವಾಗಿ ರೂಪುಗೊಂಡಿದೆ.



ಉರುಸ್ ಅಂಗವಾಗಿ ಬೆಳಿಗ್ಗೆ ಭಕ್ತರು ದೇವರಮನೆಯಿಂದ ಮೆರವಣಿಗೆಯಲ್ಲಿ ಗಂಧದೊಂದಿಗೆ ತೆರಳಿ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಜನೆ ಮತ್ತು ಕವ್ವಾಲಿ ಕಾರ್ಯಕ್ರಮ ನಡೆಯಿತು.



ಸುತ್ತಮುತ್ತಲಿನ ಸೋಮಲಾಪುರ, ಕೆರೆಕೆರೆ, ದಾಸಾಪುರ, ಕೊಂಚಿಗೇರಿ, ಓರ‌್ವಾಯಿ, ಗುತ್ತಿಗನೂರು ಮತ್ತು ಮುದ್ದಟನೂರು ಗ್ರಾಮದ ಭಕ್ತರು ಭಾಗವಹಿಸಿದ್ದರು.  



ಮೌಲ್ಯಮಾಪನ: ಕಡ್ಡಾಯ ಹಾಜರಾತಿಗೆ ಸೂಚನೆ

ಬಳ್ಳಾರಿ:
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಇದೇ 15ರಂದು ಪ್ರಾರಂಭವಾಗಲಿದ್ದು, ಪರೀಕ್ಷಾ ಮಂಡಳಿಯಿಂದ ಮೌಲ್ಯಮಾಪನ ಕಾರ್ಯಕ್ಕೆ ನಿಯುಕ್ತಿಗೊಂಡಿರುವ ಜಿಲ್ಲೆಯ ಆಯಾ ವಿಷಯದ ಶಿಕ್ಷಕರು ತಪ್ಪದೇ ಮೌಲ್ಯಮಾಪನ ಕೇಂದ್ರಕ್ಕೆ ಹಾಜರಾಗಬೇಕು.



ಗೈರು ಹಾಜರಾಗುವ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ನಾರಾಯಣಗೌಡ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)