ಮಂಗಳವಾರ, ನವೆಂಬರ್ 19, 2019
23 °C
ನೇಗಿಲು ಹೊಡೆಯುವ ಮೂಲಕ ಕೃಷಿ ಕಾರ್ಯ ಚಟುವಟಿಕೆಗೆ ಚಾಲನೆ

ಯುಗಾದಿ ಹಬ್ಬ:ಮೊದಲ ಬೇಸಾಯ ಆರಂಭ

Published:
Updated:

ಚನ್ನಗಿರಿ: `ಯುಗಾದಿ' ಹಬ್ಬ ಅತ್ಯಂತ ಪವಿತ್ರವಾದ ಹಬ್ಬ. ಹಿಂದುಗಳಿಗೆ ಹೊಸ ವರ್ಷ ಈ ದಿನದಿಂದ ಆರಂಭವಾಗುತ್ತದೆ. ಆದ್ದರಿಂದ, ಹೊಸ ವರ್ಷದ ಮೊದಲ ದಿನ ಏನೇ ಕಾರ್ಯ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದುಕೊಂಡು ಶುಕ್ರವಾರ ಪ್ರಥಮವಾಗಿ ರೈತರು ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಮೂಲಕ ಮುಂದಿನ ಕೃಷಿ ಕಾರ್ಯ ಚಟುವಟಿಕೆಗಳಿಗೆ ಹೆಜ್ಜೆಯಿಡುತ್ತಾರೆ.ಯುಗಾದಿ ಹಬ್ಬಕ್ಕೆ ಎಲ್ಲರ ಮನೆಗಳನ್ನು ಹೊಸದಾಗಿ ಸುಣ್ಣಬಣ್ಣಗಳಿಂದ ಅಲಂಕಾರ ಮಾಡಲಾಗಿರುತ್ತದೆ. ಅಷ್ಟೇ ಅಲ್ಲದೇ, ಎಲ್ಲಾ ಆಹಾರ ಪದಾರ್ಥಗಳನ್ನು ಹೊಸದಾಗಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅಂದರೆ ಹಪ್ಪಳ, ಸಂಡಿಗೆ, ಶ್ಯಾವಿಗೆ, ಉಪ್ಪಿನಕಾಯಿ ಮುಂತಾದವುಗಳನ್ನು ಹೊಸದಾಗಿ ತಯಾರು ಮಾಡಿರುತ್ತಾರೆ. ಜತೆಗೆ ಹೊಸ ಬಟ್ಟೆಗಳನ್ನು ಎಲ್ಲರ ಮನೆಗಳಲ್ಲೂ ಕಡ್ಡಾಯವಾಗಿ ಹಬ್ಬದ ದಿನ ಧರಿಸಿ ಹಬ್ಬ ಆಚರಿಸುವುದು ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ.ಅದೇ ರೀತಿ ಹೊಸ ವರ್ಷದ ಮೊದಲ ದಿನ ತಮ್ಮ ಹೊಲಗಳಲ್ಲಿ ಉಳುಮೆ ಕಾರ್ಯ ಮಾಡಿದರೆ ವರ್ಷಪೂರ್ತಿ ಉತ್ತಮವಾದ ಮಳೆಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ರೈತರು ಹೊಲಗಳಿಗೆ ಹೋಗಿ ಹಣ್ಣುಕಾಯಿ ಹೊಡೆದು ಪೂಜೆ ಸಲ್ಲಿಸಿ ನೇಗಿಲು ಹೊಡೆಯುತ್ತಾರೆ. ತಾಲ್ಲೂಕಿನಾದ್ಯಂತ ಎಲ್ಲಾ ರೈತರು ಈ ಕಾರ್ಯವನ್ನು ಗುರುವಾರ, ಶುಕ್ರವಾರ ಎರಡು ದಿನ ನಡೆಸಿದರು.ಗುರುವಾರ ಮನೆಗಳಲ್ಲಿ ಎಲ್ಲರೂ ಇಡೀ ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಬೇವಿನಸೊಪ್ಪು ಹಾಕಿ ಕುದಿಸಿದ ನೀರಿನಲ್ಲಿ ಅಭ್ಯಂಜನ ಸ್ನಾನ ಮಾಡಿದರು. ಶುಕ್ರವಾರ ಹೋಳಿಗೆ ಹಬ್ಬ. ಈ ದಿನ ಹೋಳಿಗೆ ಮುಂತಾದ ಮೃಷ್ಟಾನ್ನ ಭೋಜನವನ್ನು ತಯಾರಿಸಿ ಸಾಮೂಹಿಕವಾಗಿ ಮನೆಗಳಲ್ಲಿ ಕುಳಿತು ಸವಿಯುವುದು ವಿಶೇಷ.ಹೊಸ ಬಟ್ಟೆಗಳನ್ನು ಧರಿಸಿ ಸಂಜೆ ಚಂದ್ರದರ್ಶನ ಮಾಡಿ ಕಿರಿಯರು ಹಿರಿಯ ಕಾಲಿಗೆ ಬಿದ್ದು ಬಾಳು ಸಿಹಿಯಾಗಿರಲಿ ಎಂದು ಬೇವು-ಬೆಲ್ಲ ಹಂಚಿ ಆಶೀರ್ವಾದ ಪಡೆದರು. ಒಟ್ಟಾರೆ ಎರಡು ದಿನಗಳ ಕಾಲ ತಾಲ್ಲೂಕಿನಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ತೀವ್ರ ಬಿಸಿಲಿನ ತಾಪದ ನಡುವೆಯೂ ಅತ್ಯಂತ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಿದರು.

 

ಪ್ರತಿಕ್ರಿಯಿಸಿ (+)