ಭಾನುವಾರ, ಮೇ 29, 2022
23 °C

ಯುಜಿಡಿ ಕಾಮಗಾರಿ ಕಳಪೆ: ಸಜ್ಜನ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಪುರಸಭೆ ವ್ಯಾಪ್ತಿಯಲ್ಲಿ  ಅಂದಾಜು 22 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಸಜ್ಜನ್ ಆರೋಪಿಸಿದರು.ಈ ಬಗ್ಗೆ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಮಗಾರಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೌನ ವಹಿಸಿದ್ದು ಆಕ್ಷೇಪಾರ್ಹ ಎಂದು ತಿಳಿಸಿದರು.ನಾಗರಿಕರ ಅನುಕೂಲಕ್ಕಾಗಿ ಸಚಿವ ರಾಜೂಗೌಡ ಕೋಟ್ಯಂತರ ರೂಪಾಯಿ ಅನುದಾನ ತಂದು ಯೋಜನೆಯನ್ನು ಮಂಜೂರು ಮಾಡಿಸಿದ್ದಾರೆ. ಆದರೆ ಗುತ್ತೇದಾರರು ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೆ ಹಣವನ್ನು ಲಪಟಾಯಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.ಐ.ಎಸ್.ಐ. ಮಾರ್ಕ್ ಇರುವ ಪೈಪ್‌ಗಳನ್ನು ಹಾಕುತ್ತಿಲ್ಲ. ಅವು ಕಳಪೆ ಗುಣಮಟ್ಟದ್ದಾಗಿವೆ. ಉಸುಕು ಹಾಕದೆ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಮಣ್ಣು ಹಾಕಿ ಮುಚ್ಚುವುದರಿಂದ ಪೈಪ್‌ಗಳು ಸರಿಯಾಗಿ ಕೂಡುವುದಿಲ್ಲ.ಇದರಿಂದ ಸೋರಿಕೆ ಉಂಟಾಗುತ್ತದೆ. ಚೇಂಬರ್‌ಗಳು ಕಳಪೆಯಾಗಿವೆ. ಪ್ಲಾಸ್ಟರ್ ಮತ್ತು ಕ್ಯೂರಿಂಗ್ ಮಾಡುತ್ತಿಲ್ಲ ಎಂದು ವಿವರಿಸಿದರು.ಕಾಮಗಾರಿಗಾಗಿ ನೆಲ ತೋಡುವುದರಿಂದ ನಲ್ಲಿ ಸಂಪರ್ಕ ಕಡಿದುಹೋಗುತ್ತಿದೆ. ಅನೇಕ ಜನರು ನೀರಿಲ್ಲದೆ ಪರದಾಡುವಂತಾಗಿದೆ. ಸಿ.ಸಿ. ರಸ್ತೆಗಳು ಹಾಳಾಗಿವೆ. ನಾಗರಿಕರು ತಿರುಗಾಡಲು ತೊಂದರೆಯಾಗಿದೆ. ತೆಗ್ಗು ದಿನ್ನೆಗಳು ಉಂಟಾಗಿ ಜನರು ಬಿದ್ದು ಕೈ-ಕಾಲು ಮುರಿದುಕೊಂಡ ಘಟನೆಗಳು ನಡೆದಿವೆ ಎಂದರು.ಸಚಿವ ರಾಜೂಗೌಡ ಈ ಹಿಂದೆ ಗುತ್ತಿಗೆದಾರರಿಗೆ ಸಮರ್ಪಕ ಕಾಮಗಾರಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಗುತ್ತಿಗೆದಾರ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಕಾರಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಗುತ್ತಿಗೆದಾರನ ಬಿಲ್ ಪಾವತಿಸಬಾರದು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಜ್ಜನ್ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.