ಗುರುವಾರ , ಮಾರ್ಚ್ 4, 2021
18 °C
ಚಿತ್ರದುರ್ಗ ನಗರದ ಮನೆಗೆ – ಮ್ಯಾನ್‌ಹೋಲ್‌ ಕೊಳವೆ ಅಳವಡಿಕೆ ಕಾಮಗಾರಿ

ಯುಜಿಡಿ ಕೆಲಸ ಪೂರ್ಣಕ್ಕೆ ವರ್ಷಗಳೇ ಬೇಕಾ?

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಯುಜಿಡಿ ಕೆಲಸ ಪೂರ್ಣಕ್ಕೆ ವರ್ಷಗಳೇ ಬೇಕಾ?

ಚಿತ್ರದುರ್ಗ: ನಗರದಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪ್ರಮುಖ ಘಟ್ಟಕ್ಕೆ ತಲುಪಿದ್ದು, ಮ್ಯಾನ್‌ಹೋಲ್‌ ಹಾಗೂ ಮನೆಗಳ ನಡುವೆ ಕೊಳವೆ ಮತ್ತು ಛೇಂಬರ್ ಅಳವಡಿಸುವ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.ಒಂದೂವರೆ ತಿಂಗಳಿನಿಂದ ಈ ಕಾಮಗಾರಿ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಪಿಳ್ಳೆಕಾರನ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ಮುಗಿದ ಮೇಲೆ ಮನೆಗಳು ಮತ್ತು ಛೇಂಬರ್‌ಗಳಿಗೆ ಸಂಪರ್ಕ ನೀಡಲಾಗುತ್ತದೆ.ಕಾಮಗಾರಿ ಪ್ರಕ್ರಿಯೆ ಹೀಗಿದೆ: ಮ್ಯಾನ್‌ಹೋಲ್‌ ಮತ್ತು ಮನೆ ನಡುವೆ, ಅಡ್ಡ ಕೊಳವೆ ಅಳವಡಿಸುತ್ತಿದ್ದಾರೆ. ಮನೆ ಮತ್ತು ಕೊಳವೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಸಿಮೆಂಟ್ ಛೇಂಬರ್ ಜೋಡಿಸಲಾಗುತ್ತಿದೆ. ಛೇಂಬರ್ ಮೇಲ್ಭಾಗದಲ್ಲಿ ಮಚ್ಚಳ ಅಳವಡಿಸಿದ್ದಾರೆ.ಮೊದಲೇ ಚೌಕಾಕಾರದ ಸಿಮೆಂಟ್ ಮೌಲ್ಡೆಡ್ ಛೇಂಬರ್‌ಗಳನ್ನು ಸಿದ್ಧಮಾಡಿಕೊಳ್ಳಲಾಗಿರುತ್ತದೆ. ಒಂದು ದಿನ ಕೊಳವೆ ಜೋಡಣೆ, ಮರುದಿನ ಛೇಂಬರ್‌ಗಳನ್ನು ಜೋಡಿಸಲಾಗುತ್ತಿದೆ. ಕೊಳವೆ ಅಳವಡಿ­ಕೆಗೆ ಪುನಃ ರಸ್ತೆ ಅಗೆದು ಮುಚ್ಚುತ್ತಿದ್ದು, ನಗರದ ರಸ್ತೆಗಳಿಗೆ ಪುನಃ ‘ಗುಂಡಿ ಭಾಗ್ಯ’ ಪ್ರಾಪ್ತವಾಗಿದೆ ಎಲ್ಲೆಲ್ಲಿ ಕಾಮಗಾರಿ?

ಒಂದೂವರೆ ತಿಂಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ. ಬೆಂಗಳೂರಿನ ಏಜೆನ್ಸಿಯೊಂದಕ್ಕೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಈಗಾಗಲೇ ನಗರದ ಕೆಳಗೋಟೆ, ಧವಳಗಿರಿ ಬಡಾವಣೆ, ಐಯುಡಿಪಿ ಲೇಔಟ್, ಜೆಸಿಆರ್ ಬಡಾವಣೆಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ಎರಡು ತಿಂಗಳ ಕಾಲ ಈ ಕೆಲಸ ಮುಂದುವರಿಯಲಿದೆ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

16 ಸಾವಿರ ಮನೆಗೆ ಸಂಪರ್ಕ: ಯೋಜನೆ ಪ್ರಕಾರ ಚಿತ್ರದುರ್ಗ ನಗರದ 16 ಸಾವಿರ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೂ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಪೂರ್ಣಗೊಳ್ಳುವ­ವರೆಗೂ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಎಇಇ ರವೀಂದ್ರ ಸ್ಪಷ್ಟಪಡಿಸಿದ್ದಾರೆ.‘ಪಿಳ್ಳೇಕಾರನಹಳ್ಳಿ ಬಳಿ 20 ಕೋಟಿ ಲೀಟರ್  (ಎಂಎಲ್‌ಡಿ)  ಸಾಮರ್ಥ್ಯದ ಎಸ್‌ಪಿಆರ್‌ ತಂತ್ರಜ್ಞಾನ ಆಧಾರಿತ ಟ್ರೀಟ್‌ಮೆಂಟ್‌ ಪ್ಲಾಂಟ್ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಅದನ್ನು ಬೆಂಗಳೂರಿನ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಅದು ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ಬೇಕಾಗಿದೆ. ಅದು ಪೂರ್ಣಗೊಂಡ ಮೇಲೆ ಒಳಚರಂಡಿ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ’ ಎಂದು ಅವರು ಮಾಹಿತಿ

ನೀಡಿದರು.ಪುನಃ ರಸ್ತೆ ಹಾಳಾಗಿದೆ: ಮೂರು ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ತುಂಬಾ ಹಾಳಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜನರು ಪ್ರತಿಭಟನೆ ನಡೆಸಿದ್ದರು. ಎಲ್ಲ ಜನಪ್ರತಿನಿಧಿಗಳ ಎದುರು ಸಾರ್ವಜನಿಕರು ರಸ್ತೆ ಸಮಸ್ಯೆ ಹೇಳಿಕೊಂಡಿದ್ದರು.ಕೆಲವೊಮ್ಮೆ ಪ್ರತಿಭಟನೆಗಳು ನಡೆದಿದ್ದವು. ಒತ್ತಾಯಕ್ಕೆ ಮಣಿದ ನಗರಸಭೆಯವರು ಅಲ್ಲಲ್ಲಿ ರಸ್ತೆಗೆ ತೇಪೆ ಹಚ್ಚಿದ್ದರು. ಈಗ ಕೊಳವೆ ಜೋಡಣೆ ಕಾಮಗಾರಿಗೆ ಪುನಃ ರಸ್ತೆ ಅಗೆಯಲಾಗಿದೆ. ಮೊದಲಿಗಿಂತ ಹೆಚ್ಚು ಹಾಳಾಗಿದೆ.  ತಕ್ಷಣದಲ್ಲಿ ರಸ್ತೆ ದುರಸ್ತಿಯಾಗದಿದ್ದರೆ, ಮಳೆಗಾಲದಲ್ಲಿ ಇನ್ನೆಷ್ಟು ಅಪಘಾತಗಳಾಗುತ್ತವೋ ಎಂಬುದು ನಾಗರಿಕರ ಆತಂಕವಾಗಿದೆ.ರಸ್ತೆ ನಿರ್ಮಿಸಬಹುದು: ‘ಒಳರಂಡಿ ಕಾಮಗಾರಿ ಪೂರ್ಣಗೊಂಡರೆ ರಸ್ತೆ ನಿರ್ಮಾಣ ಮಾಡುತ್ತೇವೆ’ ಎಂದು ನಗರಸಭೆಯವರು ಭರವಸೆ ನೀಡಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳನ್ನು ಸರಿಪಡಿಸಬಹುದು. ‘ಇನ್ನು ಈ ರಸ್ತೆಗಳನ್ನು ಒಳಚರಂಡಿಯವರು ಪುನಃ ಅಗೆಯುವುದಿಲ್ಲ. ಹಾಗಾಗಿ ರಸ್ತೆ ರಿಪೇರಿ ಮಾಡಿಕೊಳ್ಳಬಹುದು’ ಎಂದು ರವೀಂದ್ರ ಸ್ಪಷ್ಟಪಡಿಸಿದ್ದಾರೆ.

*

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ₹30 ಕೋಟಿ ಪ್ರಸ್ತಾವನೆಯನ್ನು ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಹಣ ಬಂದ ನಂತರ ರಸ್ತೆ ಕೆಲಸ ಪ್ರಾರಂಭವಾಗುತ್ತದೆ.

– ಗೊಪ್ಪೆ ಮಂಜುನಾಥ್, ಅಧ್ಯಕ್ಷ, ನಗರಸಭೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.