ಶುಕ್ರವಾರ, ಏಪ್ರಿಲ್ 16, 2021
22 °C

ಯುಜಿಸಿ ಅನುದಾನ ದುರ್ಬಳಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರು ಪ್ರಾಯೋಗಿಕ ಸಲಕರಣೆಗಳ ಖರೀದಿ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನೀಡಿರುವ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ~ ಎಂದು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಕೆ.ಎಚ್. ರಾಮಲಿಂಗಾರೆಡ್ಡಿ ಆರೋಪಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾಲೇಜಿಗೆ ಸುಮಾರು 92 ವರ್ಷ ಇತಿಹಾಸ ಇದ್ದು, ಇಲ್ಲಿ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಧಾರ್ಮಿಕ ನಾಯಕರು ಶಿಕ್ಷಣ ಪಡೆದಿದ್ದಾರೆ. ಇತ್ತೀಚೆಗೆ ಬಂದಿರುವ ಪ್ರಾಚಾರ್ಯರು ಶಿಕ್ಷಣ ಸಂಸ್ಥೆಯನ್ನು ಲೂಟಿ ಮಾಡಿ ಶೈಕ್ಷಣಿಕ ವಾತಾವರಣವನ್ನು ಹದಗೆಡೆಸಿ ಸಂಶೋಧನಾ ಚಟುವಟಿಕೆಗಳನ್ನು ಕುಂಠಿತ ಗೊಳಿಸಿದ್ದಾರೆ. ಸರ್ಕಾರ ನೀಡಿರುವ ಹಣವನ್ನು ದುರ್ಬಳಕೆ ಮಾಡಿದ್ದು,  ಭೌತಶಾಸ್ತ್ರ ವಿಭಾಗಕ್ಕೆ ಬೇಕಾಗಿರುವ ಪ್ರಾಯೋಗಿಕ ಸಲಕರಣೆಗಳ ಖರೀದಿ ದರ ಪಟ್ಟಿಯಲ್ಲಿ ಕೆಟಿಟಿಪಿ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.  `ಕೇವಲ 1ಲಕ್ಷ 40 ಸಾವಿರ ರೂಪಾಯಿಗಳ ಉಪಕರಣಗಳನ್ನು 2 ಲಕ್ಷ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ನೀಡಿ ಸಾರ್ವಜನಿಕ ಹಣ ದೂರುಪಯೋಗ ಮಾಡಿರುವ ಬಗ್ಗೆ ದೂರು ನೀಡಿದ್ದು, ಕೇವಲ ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿ ನಡೆದಿರುವ ಅಕ್ರಮ ಖರೀದಿ ಪ್ರಕರಣವಾಗಿದೆ. ಇದೇ ರೀತಿ ಅಕ್ರಮ ಖರೀದಿ ಪ್ರಕ್ರಿಯೆ ನಡೆಸಿದ ಹಿಂದಿನ ಪ್ರಾಚಾರ್ಯರಿಗೆ ವರ್ಗಾವಣೆ ಶಿಕ್ಷೆ ನೀಡಿರುವುದು ಈಗಿನ ಪ್ರಾಚಾರ್ಯರಿಗೆ ಅಕ್ರಮ ಎಸಗಲು ಪ್ರೋತ್ಸಾಹ ನೀಡಿದಂತಾಗಿದೆ~ ಎಂದು ಹೇಳಿದರು. `ಹಣ ದುರುಪಯೋಗ ಮಾಡಿರುವ ಪ್ರಾಚಾರ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಇವರು ನೀಡಿರುವ ಎಲ್ಲ ಅಕ್ರಮ ಖರೀದಿ ಆದೇಶಗಳನ್ನು ಸರ್ಕಾರ ರದ್ದು ಪಡಿಸಿ ಸಾರ್ವಜನಿಕ ಹಣವನ್ನು ರಕ್ಷಿಸಬೇಕಾಗಿದೆ~ ಎಂದು ಸರ್ಕಾರವನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಉಪಾಧ್ಯಕ್ಷ  ಬಸವರಾಜ್ ಗೌಡ, ವೇದಿಕೆಯ  ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.